ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾತ್ರದಲ್ಲಿ ಇಲ್ಲ ನೆಮ್ಮದಿಯ ಗುಣ

ಅಕ್ಷರ ಗಾತ್ರ

ಪಂಚತಂತ್ರದ ಶ್ಲೋಕವೊಂದು ಹೀಗಿದೆ:
ಹಸ್ತೇ ಸ್ಥೂಲತರಃ ಸ ಚಾಂಕುಶವಶಃ ಕಿಂ ಹಸ್ತಿಮಾತ್ರೋsಂಕುಶಃ
ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ ಕಿಂ ದೀಪಮಾತ್ರಂ ತಮಃ
ವಜ್ರೇಣಾಪಿ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಃ
ತೇಜೋ ಯಸ್ಯ ವಿರಾಜತೇ ಸ ಬಲವಾನ್‌ ಸ್ಥೂಲೇಷು ಕಃ ಪ್ರತ್ಯಯಃ

ಇದರ ತಾತ್ಪರ್ಯ ಹೀಗೆ: ‘ಆನೆ ಬಹಳ ದೊಡ್ಡದು. ಅದು ಅಂಕುಶಕ್ಕೆ ವಶವಾಗುವುದು. ಆ ಅಂಕುಶವೂ ಆನೆಯಷ್ಟೇ ದೊಡ್ಡ ಗಾತ್ರವಾಗಿರುವುದೇ? ದೀಪ ಬೆಳಗಿದಾಗ ಕತ್ತಲೆ ಮರೆಯಾಗುವುದು. ಕತ್ತಲೆ ದೀಪದಷ್ಟೇ ಇದೆಯೇನು?

ವಜ್ರಾಯುಧದ ಹೊಡೆತಕ್ಕೆ ಬೆಟ್ಟಗಳು ಪುಡಿಪುಡಿಯಾಗುತ್ತವೆ. ಬೆಟ್ಟವೇನು ವಜ್ರಾಯುಧದಷ್ಟೇ ಇದೆಯೆ? ಯಾವನು ತೇಜಸ್ಸಿನಿಂದ ಬೆಳಗುವನೋ ಅವನೇ ಬಲಯುತ. ಗಾತ್ರದಲ್ಲಿ ದೊಡ್ಡದಾಗಿರುವುದರಲ್ಲಿ ಏನು ಹೆಚ್ಚುಗಾರಿಕೆಯಿದೆ?’

ನಮ್ಮ ಕಾಲದ ಮನೋಧರ್ಮವನ್ನು ಕುರಿತು ಈ ಪದ್ಯ ತುಂಬ ಸೊಗಸಾಗಿ ಹೇಳುವಂತಿದೆ. ‘ಕ್ವಾಲಿಟಿ’ ಮತ್ತು ‘ಕ್ವಾಂಟಿಟಿ’– ಇವೆರಡರ ನಡುವೆ ಸಂಘರ್ಷ ಎನ್ನುವುದು ನಡೆದೇ ಇರುವಂಥದ್ದು. ಕ್ವಾಲಿಟಿಯು ಗುಣದ ಹೆಚ್ಚುಗಾರಿಕೆಯನ್ನು ಎತ್ತಿಹಿಡಿದರೆ, ಕ್ವಾಂಟಿಟಿಯು ಗಾತ್ರವನ್ನೂ ಸಂಖ್ಯೆಯನ್ನೂ ಎತ್ತಿಹಿಡಿಯುತ್ತದೆ.

ಇಂದಿನ ನಮ್ಮ ಮನಸ್ಸು ಹೊರಮುಖವಾಗಿಯೇ ಕ್ರಿಯಾಶೀಲವಾಗಿದೆ. ಹೀಗಾಗಿ ಹೊರಜಗತ್ತಿಗೆ ಸೇರಿದ ವಿವರಗಳ ಕಡೆಗೇ ನಮ್ಮ ಲಕ್ಷ್ಯ. ಎಷ್ಟು ಹಣವನ್ನು ನಮ್ಮ ಅಕೌಂಟಿನಲ್ಲಿ ಪೇರಿಸಿದ್ದೇವೆ; ಎಷ್ಟು ಸೈಟುಗಳು ನಮ್ಮ ಹೆಸರಿನಲ್ಲಿವೆ; ಎಷ್ಟು ಮನೆಗಳ ಮಾಲೀಕರು ನಾವು; ಎಷ್ಟು ಪದವಿಗಳ ಧೀರರು ನಾವಾಗಿದ್ದೇವೆ. ಇಂಥ ಎಣಿಕೆಗಳೇ ನಮ್ಮ ಬದುಕನ್ನು ನಿರ್ಧರಿಸುವ ಮಾನದಂಡಗಳಾಗಿವೆ.

ಆದರೆ ಎಷ್ಟು ದುಡ್ಡಿದ್ದರೂ ನೆಮ್ಮದಿ ಇಲ್ಲದಿದ್ದರೆ ಅಂಥ ದುಡ್ಡಿನಿಂದ ಪ್ರಯೋಜನವೇನು? ಹತ್ತಾರು ಡಿಗ್ರಿಗಳನ್ನು ತಲೆಗೆ ಏರಿಸಿಕೊಂಡಿದ್ದರೂ ವಿವೇಕ ಎನ್ನುವುದು ನಮ್ಮಿಂದ ದೂರವಾದರೆ ಡಿಗ್ರಿ ಸರ್ಟಿಫಿಕೇಟುಗಳನ್ನು ಕಟ್ಟಿಕೊಂಡು ಏನು ಮಾಡುವುದು? ನೆಮ್ಮದಿ ಎನ್ನುವುದು ನಮ್ಮ ಅಂತರಂಗದಲ್ಲಿ ಅರಳಬೇಕಾದ ಸಂಸ್ಕಾರ. ಅದಕ್ಕೂ ನಮ್ಮ ಹೊರಗಿನ ದುಡ್ಡಿಗೂ ಪದವಿಗೂ ಆಸ್ತಿಗೂ ಐಶ್ವರ್ಯಕ್ಕೂ ಏನೇನೂ ಸಂಬಂಧವಿರದು.

ಹೀಗಾಗಿ ನಾವು ಮೊದಲಿಗೆ ನಮ್ಮ ಭಾವವನ್ನೂ ಬುದ್ಧಿಯನ್ನೂ ಮನಸ್ಸನ್ನೂ ಶ್ರೀಮಂತಗೊಳಿಸಿಕೊಳ್ಳಬೇಕು; ವಿವೇಕಶೀಲವಾಗಿಸಿಕೊಳ್ಳಬೇಕು. ಆಗ ಇಡಿಯ ಜಗತ್ತೇ ನಮ್ಮ ಪಾಲಿಗೆ ಸುಂದರವಾಗಿಯೂ ಕಾಣುತ್ತದೆ. ಅದು ನಮ್ಮದೆಂಬ ಭಾವವೂ ಎಚ್ಚರವಾಗುತ್ತದೆ; ವಿಶ್ವವೇ ನಮ್ಮ ಪರವಾಗಿರುವ ಬಂಧುವಾಗಿ ಕಾಣುತ್ತದೆ. ಪಂಚತಂತ್ರದ ಈ ಪದ್ಯ ಇದನ್ನೇ ಬೇರೆ ಬೇರೆ ವಿವರಗಳಿಂದ ಮನದಟ್ಟು ಮಾಡಿಸುತ್ತಿದೆ.

ಆನೆ ಗಾತ್ರದಲ್ಲಿ ತುಂಬ ದೊಡ್ಡದು; ಆದರೆ ಅದನ್ನು ನಿಯಂತ್ರಿಸುತ್ತಿರುವ ಅಂಕುಶದ ಗಾತ್ರ ತುಂಬ ಚಿಕ್ಕದು. ವಿಸ್ತಾರವಾಗಿ ಹರಡಿರುವ ಕತ್ತಲೆಯನ್ನು ಒಂದು ಸಣ್ಣ ದೀಪ ಓಡಿಸುತ್ತದೆ. ಒಂದು ಸಣ್ಣ ಆಯುಧ ದೊಡ್ಡ ಪರ್ತವನ್ನೇ ಚೂರು ಚೂರು ಮಾಡುತ್ತದೆ. ಜಗತ್ತಿನ ಇಂಥ ವಿದ್ಯಮಾನಗಳಿಂದ ನಾವು ಕಲಿಯಬೇಕಾದದ್ದು ಏನನ್ನು? ಭೌತಿಕವಾದ ಗಾತ್ರಕ್ಕೂ ಅದರ ಪ್ರಯೋಜನ–ಸಾರ್ಥಕತೆಗಳಿಗೂ ಏನೇನೂ ಸಂಬಂಧವಿಲ್ಲ.

ಇದೇ ನಾವು ಕಲಿಯಬೇಕಾದ ಪಾಠ. ಆದರೆ ನಾವು ಮಾತ್ರ ಸದಾ ಸಂಖ್ಯೆ–ಗಾತ್ರಗಳ ಹಿಂದೆಯೇ ಓಡುತ್ತಿರುತ್ತವೆ. ದೊಡ್ಡ ಗಾತ್ರದ ವಸ್ತುಗಳಿಂದ ನಮಗೆ ಹೆಚ್ಚು ಸುಖ ಎಂಬ ಮೋಹಕ್ಕೆ ನಾವು ವಶರಾಗಿದ್ದೇವೆ. ಹೀಗಾಗಿ ನಾವು ವಸ್ತುಗಳನ್ನು ಹೆಚ್ಚೆಚ್ಚು ಸಂಗ್ರಹಿಸುವ ಚಟ್ಟಕ್ಕೂ ಅಂಟಿಕೊಂಡಿದ್ದೇವೆ. ನೂರು ಹಾಸಿಗೆಗಳನ್ನು ಕೊಳ್ಳಬಹುದು. ಆದರೆ ಪ್ರಶಾಂತವಾದ ನಿದ್ರೆಯನ್ನು ಕೊಳ್ಳಲಾದೀತೆ?

ತಿಂಗಳಿಗೆ ಲಕ್ಷ ರೂಪಾಯಿಗಳನ್ನು ಸಂಪಾದಿಸಬಹುದು; ಆದರೆ ಸುಖವನ್ನು ಅದರಿಂದ ಸಂಪಾದಿಸಬಹುದೆ? ಆದುದರಿಂದಲೇ ನಮ್ಮ ಬದುಕಿಗೆ ಸುಖವನ್ನೂ ನೆಮ್ಮದಿಯನ್ನೂ ಹಿತವನ್ನೂ ಒದಗಿಸಬಲ್ಲ ಸಣ್ಣ ಸಣ್ಣ ವಿವರಗಳು ಏನೆಂಬುದನ್ನು ತಿಳಿದು ಅವುಗಳನ್ನು ಸಂಪಾದಿಸಲು ತೊಡಗುವುದೇ ನಿಜವಾದ ವಿವೇಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT