ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಜಿಲ್ಲೆ ಪ್ರಥಮ

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳಿಂದ ಶೇ 60ರ ಆಸುಪಾಸಿನಲ್ಲಿದ್ದ ಪಿಯು  ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಈ ಬಾರಿ ಕುಸಿದಿದ್ದು, ಪರೀಕ್ಷೆ ಬರೆದವರಲ್ಲಿ ಶೇ 52.38ರಷ್ಟು ಮಂದಿ ಮಾತ್ರ ಪಾಸಾಗಿದ್ದಾರೆ.

ಕಳೆದ ವರ್ಷದ ಫಲಿತಾಂಶ ಶೇ 57.20 ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 4.82 ರಷ್ಟು ಕುಸಿತ ಕಂಡಿದೆ. ಖಾಸಗಿ ಕಾಲೇಜುಗಳ  ಶೇ 61.70 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಸರ್ಕಾರಿ ಕಾಲೇಜುಗಳ ಶೇ 41.78ರಷ್ಟು  ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.
ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪಾಸಾದವರ ಪ್ರಮಾಣ ಶೇ 60.28ರಷ್ಟಿದೆ. ಶೇ 44.74ರಷ್ಟು ಬಾಲಕರು ಮಾತ್ರ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶದವರು ಮುಂದಿದ್ದು, ಶೇ 52.88 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಉಡುಪಿಗೆ ಮೊದಲ ಸ್ಥಾನ: ಜಿಲ್ಲಾವಾರು ಫಲಿತಾಂಶದಲ್ಲಿ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಉಡುಪಿ (ಶೇ 90.01) ಈ ಬಾರಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ (ಶೇ 89.92) ಕುಸಿದಿದೆ. ಕೊಡಗು  (ಶೇ 75.83) ಮೂರನೇ ಸ್ಥಾನದಲ್ಲಿದ್ದರೆ, ಬೀದರ್‌ ಕೊನೆಯ ಸ್ಥಾನ (ಶೇ 42.05) ಪಡೆದಿದೆ.

ಯಾರಿಗೆ ಹೆಚ್ಚಿನ ಅಂಕ?: ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಎನ್. ಸೃಜನಾ (596) ಮತ್ತು ಉಡುಪಿ ಜಿಲ್ಲೆಯ ಎಸ್‌.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ರಾಧಿಕಾ ಪೈ (596) ಇಬ್ಬರೂ ಸಮಾನ ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಆರ್‌.ಎನ್.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪಿ.ಜಿ. ಶ್ರೀನಿಧಿ (595) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು ವಿದ್ಯಾರ್ಥಿ ಸಾಯಿ ಸಮರ್ಥ (595) ಸಮಾನ ಅಂಕ ಪಡೆದು ಮೊದಲಿಗರಾಗಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ  ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿನಿ ಬಿ.ಚೈತ್ರಾ 589 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷವೂ  ಇದೇ ಕಾಲೇಜಿನ ವಿದ್ಯಾರ್ಥಿನಿ ಅನಿತಾ ಬಸಪ್ಪ 585 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದರು.

ಫಲಿತಾಂಶ ಕುಸಿಯಲು ಪರೀಕ್ಷಾ ಸುಧಾರಣೆ ಕಾರಣ: ಫಲಿತಾಂಶ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ‘ಸೆಕ್ಯೂರ್ಡ್ ಎಕ್ಸಾಮಿನೇಷನ್‌ ಸಿಸ್ಟಂನಡಿ ಈ ಬಾರಿ ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿತ್ತು. ಅನೇಕ ರೀತಿಯಲ್ಲಿ ನಡೆಯುತ್ತಿದ್ದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಿರುವುದರಿಂದ ಫಲಿತಾಂಶ ಕುಸಿದಿದೆ. ಒಟ್ಟಿನಲ್ಲಿ ಇದು ನ್ಯಾಯಸಮ್ಮತವಾದ ಫಲಿತಾಂಶ’ ಎಂದು ಬಣ್ಣಿಸಿದರು.
‘132 ಪಿಯು ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅವರಿಗೆ ಕಾಲೇಜು ನಡೆಸುವ ಸಾಮರ್ಥ್ಯ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು. ಅಗತ್ಯ ಬಿದ್ದರೆ ಈಗ ಪ್ರಥಮ ಪಿಯು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸುವ ಬಗ್ಗೆಯೂ  ಆಲೋಚಿಸಲಾಗುವುದು’ ಎಂದು ಸಚಿವರು ಸ್ಪಷ್ಟಪಡಿಸಿದರು.

ಟಾಪ್‌ 10 ರೊಳಗೆ ಒಂದೇ ಕಾಲೇಜಿನ ಐವರು: ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಐವರು ವಿದ್ಯಾರ್ಥಿಗಳು ಸೇರಿದ್ದಾರೆ. ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಬಿ.ಚೈತ್ರಾ ಹಾಗೂ ಹಾದಿಮನಿ ಕವಿತಾ, ಕಂಕರಿ ಚನ್ನಕೇಶವ, ಎನ್. ದೇವರಾಜ ಮತ್ತು ಎ.ಶಾರದಾ  ಈ ಕಾಲೇಜು ವಿದ್ಯಾರ್ಥಿಗಳು.

‘ಹೆಚ್ಚು ಅಂಕ ಪಡೆದವರ ಪಟ್ಟಿ ಪ್ರಕಟಿಸುವುದಿಲ್ಲ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರನ್ನು ಈ ಬಾರಿ ಪ್ರಕಟಿಸುವುದಿಲ್ಲ ಎಂದು ಸಚಿವ ತನ್ವೀರ್‌ ಸೇಠ್ ಹೇಳಿದ್ದರು.

ಆದರೆ, ಮಾಧ್ಯಮಗೋಷ್ಠಿ ಮುಗಿದ ಬಳಿಕ ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ ಇಲಾಖೆ ನಿರ್ದೇಶಕರ ಕಚೇರಿಯಿಂದ ಲಭ್ಯವಾಯಿತು.
‘ರ‍್ಯಾಂಕ್‌ ಪ್ರಕಟಿಸಬಾರದು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಅದನ್ನು ಪಾಲಿಸಲಾಗುವುದು. ಕೆಲ ಕಾಲೇಜುಗಳು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಫೋಟೊಗಳನ್ನು ಬ್ಯಾನರ್‌ಗಳಲ್ಲಿ ಹಾಕಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾರೆ. ಬಳಿಕ ಅವರಿಂದ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಚಿವರು ಹೇಳಿದ್ದರು.

ಅನುತ್ತೀರ್ಣರಾದವರು ಎದೆಗುಂದಬೇಕಿಲ್ಲ. ಅವರಿಗೆ ವಿಶೇಷ ತರಬೇತಿ ನೀಡಿ ಮುಂದಿನ ಪರೀಕ್ಷೆಗೆ ಅಣಿಗೊಳಿಸಲಾಗುವುದು
ತನ್ವೀರ್ ಸೇಠ್‌,
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ಮರು ಮೌಲ್ಯಮಾಪನಕ್ಕೆ ಅವಕಾಶ

ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಇದೇ 24ರೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ವಿಷಯಕ್ಕೆ ₹1,260 ಶುಲ್ಕ ನಿಗದಿ ಮಾಡಲಾಗಿದೆ.

ಮರು ಎಣಿಕೆಗೆ ಯಾವುದೇ ಶುಲ್ಕವಿಲ್ಲ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ನಕಲು ಪಡೆಯಲು ಅವಕಾಶವಿದ್ದು, ಇದೇ 19ರೊಳಗೆ ಅರ್ಜಿ ಸಲ್ಲಿಸಬೇಕು. ಒಂದು ಪ್ರತಿಗೆ ₹400 ನಿಗದಿಪಡಿಸಲಾಗಿದೆ.
ಜೂ.28ರಿಂದ ಪೂರಕ ಪರೀಕ್ಷೆ: ದ್ವಿತೀಯ ಪಿಯು ಪೂರಕ ಪರೀಕ್ಷೆ ಜೂನ್ 28ರಿಂದ ಜುಲೈ8ರವರೆಗೆ ನಡೆಯಲಿದೆ. ಶುಲ್ಕ ಪಾವತಿಸಲು ಇದೇ 23 ಕೊನೆಯ ದಿನ. ಒಂದು ವಿಷಯಕ್ಕೆ ₹101, ಎರಡು ವಿಷಯಕ್ಕೆ ₹ 201, ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹ 302 ಶುಲ್ಕ ನಿಗದಿ ಮಾಡಲಾಗಿದೆ.
ಎಲ್ಲ ವಿದ್ಯಾರ್ಥಿಗಳು ಅಂಕಪಟ್ಟಿಗೆ  ಹೆಚ್ಚುವ ರಿಯಾಗಿ ₹36 ಶುಲ್ಕ ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT