ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶುಗಳಲ್ಲಿ ಹಾಲು!

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಈ ಹಾಲು ತಾಯಿಯ ಎದೆಹಾಲಿನಲ್ಲಿರುವ ಅಂಶಗಳನ್ನೇ ಒಳಗೊಂಡಿರುತ್ತದೆ. ಕೆಲವೊಮ್ಮೆ ಶಿಶುಗಳಲ್ಲಿ ಮೆಟಾಕ್ಲೋಪ್ರಮೈಡ್ ಎನ್ನುವ ಔಷಧವನ್ನು ಉಪಯೋಗಿಸಿದಾಗಲೂ ಈ ರೀತಿಯ ಎದೆಹಾಲು ಬರಬಹುದು.

ಸಾಕಮ್ಮ ಎಂಟು ದಿನದ ಹಿಂದಷ್ಟೇ ಸಹಜ ಹೆರಿಗೆಯಾಗಿ ಮನೆಗೆ ಹೋಗಿದ್ದಳು. ನಾಲ್ಕು ದಿನಬಿಟ್ಟು ಒಮ್ಮೆಲೇ ಒಂದು ದಿನ ರಾತ್ರೋರಾತ್ರಿ ಮಗುವನ್ನು ಎತ್ತಿಕೊಂಡು ಗಾಬರಿಯಿಂದ ಬಂದಿದ್ದರು. ಕಾರಣ ಇಷ್ಟೇ, ಮಗುವಿನ ಬಲಸ್ತನ ಊದಿ ಅಂಟಾದ ದ್ರವ ಬರುತ್ತಿತ್ತು. ಅದನ್ನು ಚೆನ್ನಾಗಿ ಉಜ್ಜಿ, ಬೆಂಕಿಯಿಂದ ಸುಟ್ಟಿದ್ದರಿಂದ ಅದು ಕೀವಿನ ಹಂತಕ್ಕೆ ಬಂದಿತ್ತು.

ಒಂದೇ ಸಮನೆ ಮಗು ಕಿರುಚುತ್ತಿತ್ತು. ಜೊತೆಯಲ್ಲಿ ಬಂದಿದ್ದ ಅಜ್ಜಿ ‘ಡಾಕ್ಟ್ರಮ್ಮ ಇಷ್ಟೇ ಅಲ್ಲ; ನೆನ್ನೆ ಬೆಳಿಗ್ಗೆ ಕೆಳಗಡೆಯಿಂದ ಮೂತ್ರಾ ಮಾಡೋ ಜಾಗದ ಕೆಳಗೆ (ಯೋನಿಯಿಂದ) ರಕ್ತಾನು ಸೋರ್ತಾ ಇದೆ. ಇನ್ನೇನು ಗ್ರಹಚಾರ ಕಾದಿದೆಯೋ? ಎಲ್ಲಾ ನಾರ್ಮಲ್ ಇದೆ ಅಂದ್ರಲ್ಲಾ ಯಾಕೆ ಹೀಗೆಲ್ಲಾ ಆಗ್ತಿದೆ?’ ಎಂದು ಒಮ್ಮೆಲೇ ಮೈಮೇಲೆ ಬಂದವರಂತೆ ಕಿರುಚಾಡಿ ರಂಪಾ ಮಾಡುತ್ತಿದ್ದಳು.

ನನ್ನ ನಿದ್ರೆಯ ಅಮಲೆಲ್ಲಾ ಜರ್ರನೆ ಇಳಿದು ಸಿಸ್ಟರನ್ನು ಕರೆದು ‘ಮಗುವಿಗೆ ಚಳಿಯಾಗ್ತಿದೆ; ಒಳಗೆ ವಾರ್ಮರ್‌ನಲ್ಲಿ ಇಡಿ’ ಎಂದು ತಿಳಿಸಿ ಅವರನ್ನೆಲ್ಲಾ ಕೂಡಿಸಿಕೊಂಡು ನಿಧಾನವಾಗಿ ಇವೆಲ್ಲಾ ಅಪಾಯರಹಿತ ಸ್ಥಿತಿಗಳೆಂದೂ ಅಪರೂಪಕ್ಕೆ ಹೀಗೆಲ್ಲಾ ಕೆಲವು ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳಬಹುದೆಂದೂ ತಿಳಿಸಿ, ನನ್ನ ಹತ್ತಿರ ಸಂಗ್ರಹವಿದ್ದ ಪುಸ್ತಕದಲ್ಲಿದ್ದ ಚಿತ್ರಪಟವನ್ನು ತೋರಿಸಿ ಸಮಾಧಾನ ಪಡಿಸುವ ಹೊತ್ತಿಗೆ ಸಂಪೂರ್ಣ ಎಚ್ಚರದ ಸ್ಥಿತಿ ನನ್ನದಾಯಿತು. ಅವರು ಸಮಾಧಾನಗೊಂಡು ‘ಹೌದಾ ಮೇಡಂ! ಇದನ್ನೇ ನೀವ್ಯಾಕೆ ಬರಿಯಬಾರದು?’ ಎಂದೂ ಸಲಹೆಕೊಟ್ಟರು.

ನವಜಾತ ಶಿಶುವಿಗೂ ಎದೆಬಾವೆ? ರಕ್ತಸ್ರಾವವೇ?
ಹೌದು. ಅಪರೂಪಕ್ಕೆ ಕೆಲವು ಸಂದರ್ಭಗಳಲ್ಲಿ ಹೆಣ್ಣುಶಿಶುವಿನಲ್ಲಿ ಯೋನಿಮಾರ್ಗದಿಂದ ರಕ್ತಸ್ರಾವವಾಗಬಹುದು. ಇದಕ್ಕೆ ಕಾರಣ ತಾಯಿಗರ್ಭದಲ್ಲಿ ಶಿಶುವಿದ್ದಾಗ ತಾಯಿಯ ರಕ್ತದಲ್ಲಿ ಹರಿಯುವ ಇಸ್ಟ್ರೋಜನ್ ಎಂಬ ಹೆಣ್ತನದ ಹಾರ್ಮೋನು ಹೊಕ್ಕಳ ಬಳ್ಳಿಯ ಮೂಲಕ ಮಗುವಿನ ರಕ್ತದಲ್ಲಿ ಹರಿಯುತ್ತಿದ್ದು ಮಗುವಿನ ಗರ್ಭಕೋಶದಲ್ಲೂ ಹರಿದಿರುತ್ತದೆ. ಮಗು ತಾಯಿಯ ಗರ್ಭದಿಂದ ಹೊರಬಂದಾಗ ಮಗುವಿನ ರಕ್ತದಲ್ಲಿ ಸಹಜವಾಗಿಯೇ ಕಡಿಮೆಯಾಗಿತ್ತದೆ.

ಹಾರ್ಮೋನು ಮಟ್ಟದ ತಗ್ಗುವಿಕೆಯಿಂದ ಗರ್ಭಕೋಶದಿಂದ ರಕ್ತಸ್ರಾವವಾಗುವುದು, ಮುಂದೆ ಋತುಮತಿಯಾಗಬೇಕಾದ ಸಂದರ್ಭದಲ್ಲಿಯೂ ಇದೇ ರೀತಿ ಹಾರ್ಮೋನುಗಳ ಪ್ರಕ್ರಿಯೆಯಿಂದಲೇ ಮುಟ್ಟಾಗುತ್ತದೆ. ಶಿಶುವಿಗೆ ಮುಂದೆ ಗರ್ಭಕೋಶವೆಲ್ಲಾ ಸರಿಯಾಗಿ ಕಾರ್ಯನಿರ್ವಹಿಸುವದೆಂದೂ ಇದರಿಂದ ತಿಳಿಯುವುದರಿಂದ ನಾವು ಇದನ್ನು ಸಂತೋಷಪಡುವ ಸಂಗತಿ ಎಂದೇ ತಿಳಿಯಬೇಕು.

ಈ ರಕ್ತಸ್ರಾವ ಒಂದೆರಡು ದಿನದಲ್ಲಿ ನಿಂತುಹೋಗುತ್ತದೆ. ಇನ್ನು ಕೆಲವು ನವಜಾತ ಶಿಶುಗಳಲ್ಲಿ ಬಿಳಿಮುಟ್ಟು ಕೂಡ ಸ್ವಲ್ಪ ದಿನ ಕಾಣಿಸಿಕೊಂಡು ತಾನೇ ತಾನಾಗಿ ಸರಿಹೋಗಿಬಿಡುತ್ತದೆ. ಯಾವುದೇ ಚಿಕಿತ್ಸೆ ಅಥವಾ ಪರೀಕ್ಷೆಗಳ ಅಗತ್ಯವಿಲ್ಲ.

ನವಜಾತ ಶಿಶುಗಳಿಗೂ ಹಾಲು ಬರುವುದೇ?
ಕೆಲವು ನವಜಾತ ಶಿಶುಗಳಲ್ಲಿ ಹೆಣ್ಣು-ಗಂಡೆಂಬ ಭೇದವಿಲ್ಲದೆ ಎದೆಹಾಲು ಉತ್ಪತ್ತಿಯಾಗಬಹುದು. ಇದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಇದು ಒಂದು ಸಹಜವಾದ ಸ್ಥಿತಿ. ಇಂತಹ ಸ್ಥಿತಿಗೆ ಕಾರಣ – ಇದು ತಾಯಂದಿರಲ್ಲಿ ಪ್ರೊಲಾಕ್ಟಿನ್ ಹಾರ್ಮೋನು ಮತ್ತು ಬೆಳವಣಿಗೆಯ ಹಾರ್ಮೋನು ಮಗುವಿಗೆ ಎದೆಹಾಲಿನ ಮೂಲಕ ಹರಿದುಬರುವುದರಿಂದ ಜೊತೆಗೆ ನವಜಾತ ಶಿಶುಗಳಲ್ಲಿ ಪಿಟ್ಯೂಟರಿ ಗ್ರಂಥಿಯಿಂದ ಬರುವ ಹಾರ್ಮೋನುಗಳ ಮಟ್ಟ ಒಂದೇ ಸಮನೆ ಹೆಚ್ಚಾಗುವುದರಿಂದ ಎಂದು ಅಂದಾಜು ಮಾಡಲಾಗಿದೆ.

ಈ ಎದೆಹಾಲನ್ನು ‘ವಿಚ್ಛಸ್ ಮಿಲ್ಕ್’ (Witch’s Milk) ಎಂದು ಕರೆಯುತ್ತಾರೆ. ಇದು ಸುಮಾರು ಎರಡು ತಿಂಗಳವರೆಗೂ ಹಾಲು ಬರಬಹುದು. ಈ ಹಾಲು ತಾಯಿಯ ಎದೆಹಾಲಿನಲ್ಲಿರುವ ಅಂಶಗಳನ್ನೇ ಒಳಗೊಂಡಿರುತ್ತದೆ. ಕೆಲವೊಮ್ಮೆ ಶಿಶುಗಳಲ್ಲಿ ಮೆಟಾಕ್ಲೋಪ್ರಮೈಡ್ ಎನ್ನುವ ಔಷಧವನ್ನು  ಉಪಯೋಗಿಸಿದಾಗಲೂ ಈ ರೀತಿಯ ಎದೆಹಾಲು ಬರಬಹುದು. ಸಾಮಾನ್ಯವಾಗಿ ಇದು ದಿನತುಂಬಿದ ಮಕ್ಕಳಲ್ಲಿ ಕಂಡುಬರುತ್ತದೆಯೇ ಹೊರತು ಅವಧಿಪೂರ್ವ ಹೆರಿಗೆಗಳಾದಾಗ ಅಂತಹ ನವಜಾತ ಶಿಶುಗಳಲ್ಲಿ ಇದು ಕಂಡುಬರುವುದಿಲ್ಲ.

ಇಂತಹ ಸಂದರ್ಭಗಳು ಎದುರಾದಾಗ ಮಗುವಿನ ಎದೆಯನ್ನು ಹಿಂಡಿ ಹಾಲನ್ನು ತೆಗೆಯುವುದು, ಬಿಸಿನೀರು ಸುರಿಯುವುದು ಇಂಥವೆಲ್ಲವನ್ನು ಮಾಡಿದಾಗ ಈ ಸ್ಥಿತಿ ಹೆಚ್ಚು ದಿನಗಳ ಕಾಲ ಮುಂದುವರೆಯುತ್ತದೆ. ಆದ್ದರಿಂದ ಏನನ್ನೂ ಮಾಡದೇ ಹಾಗೇ ಬಿಟ್ಟರೆ ತಾನೇ ತಾನಾಗಿ ಕೆಲವೇ ದಿನಗಳಲ್ಲಿ ಇದು ಕಡಿಮೆಯಾಗುತ್ತದೆ. ತಾಳ್ಮೆ, ಸಹನೆಗಳಿಂದ ಕಾಯ್ದು ನೋಡುವುದು ಮತ್ತು ಈ ಬಗ್ಗೆ ಹೆಚ್ಚಿನ ಅರಿವು ಹೊಂದುವುದು ಇಂಥ ಸಂದರ್ಭಗಳಲ್ಲಿ ಬಹಳ ಮುಖ್ಯವಾಗುತ್ತವೆ.

ಇನ್ನು ಹದಿವಯಸ್ಸಿನ ಆರಂಭದಲ್ಲಿ ಚಿಕ್ಕಮಕ್ಕಳಿಗಾಗುವ ಎದೆಬಾವಿನ ಬಗ್ಗೆ ಗಾಬರಿಯಾಗಿ ಹಲವು ಪೋಷಕರು ಮಕ್ಕಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಬರುವುದರಿಂದ ಇದರ ಬಗ್ಗೆಯೂ ಈ ಸಂದರ್ಭದಲ್ಲಿ ತಿಳಿಸುವುದು ಸೂಕ್ತವೆನಿಸುತ್ತದೆ.

ಹಲವು ಹೆಣ್ಣುಮಕ್ಕಳಲ್ಲಿ 8–12 ವರ್ಷದೊಳಗೆ ಮತ್ತು ಹುಡುಗರಲ್ಲಿ 14–18 ವರ್ಷದೊಳಗೆ ಸ್ತನಗಳು ಊದಿ ನೋವಾಗುತ್ತದೆಂದು ಪೋಷಕರು ಆತಂಕದಿಂದ ಚಿಕಿತ್ಸೆಗಾಗಿ ಬರುತ್ತಾರೆ. ಇದು ಕೂಡ ಅಪಾಯರಹಿತವಾದ ಸ್ಥಿತಿ ಮತ್ತು ಈ ಹದಿಹರೆಯದಲ್ಲಾಗುವ ಎದೆಬಾವು ಎದೆತೊಟ್ಟಿನ (ನಿಪ್ಪಲ್) ಹಿಂಬಾಗದಲ್ಲಿಯೇ ಬರುತ್ತದೆ ಎನ್ನುವುದು ಇದರ ವಿಶೇಷಲಕ್ಷಣ.

ಹಾರ್ಮೋನುಗಳ ಪ್ರಭಾವದಿಂದ ಆಗಬಹುದೆಂದು ಅಂದಾಜು ಮಾಡಲಾಗಿದೆ. ಜೊತೆಗೆ ಗಾಯಗಳಿಂದಲೂ ಆಗಬಹುದು. ಇದು ಕೆಲವೇ ದಿನ ಅಥವಾ ತಿಂಗಳಲ್ಲಿ ತನ್ನಿಂದ ತಾನೇ ಮಾಯವಾಗುವುದು. ಹೀಗಾಗಿ ಇದಕ್ಕೆ ಯಾವುದೇ ರೀತಿಯ ವಿಶೇಷಚಿಕಿತ್ಸೆಯ ಅಗತ್ಯವಿಲ್ಲ.

ಅತಿಯಾಗಿ ನೋವಿದ್ದರೆ ಮಾತ್ರ ನೋವುನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೆ ಕೆಲವೇ ದಿನಗಳ ಕಾಲ ಸೇವಿಸಬಹುದು. ಹೀಗಲ್ಲದೆ ಎದೆಯನ್ನು ಹಿಂಡುವುದು, ಮಸಾಜ್ ಮಾಡುವುದು – ಇಂಥವುಗಳನ್ನು ಏನನ್ನೂ ಮಾಡಬಾರದು.

ಈ ಮೇಲಿನ ಎಲ್ಲ ಸ್ಥಿತಿಗಳಲ್ಲಿ ರೋಗಿಗಳಿಗೆ ಹಾಗೂ ಕುಟುಂಬದವರಿಗೆ ಕಾಯಿಲೆ ಇದೆ ಎನಿಸಿದರೂ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ. ಕೆಲವೇ ದಿನ ಅಥವಾ ತಿಂಗಳಲ್ಲಿ ಇದು ಸಹಜವಾಗಿಯೇ ಸರಿಹೋಗುವಂತಹ ಸ್ಥಿತಿ ಎಂದು ರೋಗಿ ಹಾಗೂ ಕುಟುಂಬದವರಿಗೆ ಧೈರ್ಯ ಹಾಗೂ ಸಾಂತ್ವನ ಕೊಡುವುದು ಮತ್ತು ಈ ಬಗ್ಗೆ ವಿವರಿಸಿ ಹೇಳುವುದು ಅತಿ ಮುಖ್ಯವಾದ ಸಂಗತಿ. ಹೀಗೆ ಅರಿವನ್ನು ಮೂಡಿಸುವುದು ವೈದ್ಯರ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT