ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ನಡೆಗೆ ಕನ್ನಡ ಸಂಘಟನೆಗಳು ಕೆಂಡಾಮಂಡಲ

Last Updated 12 ಮೇ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಐಷಾರಾಮಿ ಬಸ್‌ಗಳಲ್ಲಿ ಇಂಗ್ಲಿಷ್‌ ಪತ್ರಿಕೆಗಳನ್ನು ನೀಡುತ್ತಿರುವ ಕ್ರಮಕ್ಕೆ ಕನ್ನಡಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ವಿರೋಧಿ ನಿಲುವನ್ನು ತಳೆದಿರುವ ನಿಗಮಕ್ಕೆ ನೋಟಿಸ್‌ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

‘ಇಂಗ್ಲಿಷ್‌ ಪತ್ರಿಕೆಗಳನ್ನು ನೀಡುತ್ತಿರುವುದು ಖಂಡನೀಯ.  ರಾಜ್ಯದಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಸರ್ಕಾರಿ ಸಂಸ್ಥೆಗಳೇ ಈ ರೀತಿ ಮಾಡುವುದು ಸರಿಯಲ್ಲ. ಮೊದಲು ಬಸ್‌ಗಳಲ್ಲಿ ಕನ್ನಡ ಪತ್ರಿಕೆಗಳನ್ನು ನೀಡಲಿ. ಬಸ್‌ನಲ್ಲಿ ನಾಲ್ವರು ಇಂಗ್ಲಿಷ್‌ ಓದುವವರು ಇದ್ದರೆ, 45 ಮಂದಿ ಕನ್ನಡ ಪತ್ರಿಕೆ ಓದುವವರು ಇರುತ್ತಾರೆ. ಇದನ್ನು ನಿಗಮ ಅರ್ಥಮಾಡಿಕೊಳ್ಳಬೇಕು’ ಎಂದು  ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕಟುವಾಗಿ ಹೇಳಿದರು.

‘ಈ ಬಗ್ಗೆ ಸಾರಿಗೆ ಸಚಿವರ ಜತೆಗೆ ಸಮಾಲೋಚನೆ ನಡೆಸುತ್ತೇನೆ. ಈ ನಿರ್ಧಾರ ಕೈಬಿಡುವಂತೆ ತಿಳಿಸುತ್ತೇನೆ.  ವಿವರಣೆ ಕೇಳಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ನೀಡುತ್ತೇನೆ’ ಎಂದರು.

*

ಇಂಗ್ಲಿಷ್‌ ಪತ್ರಿಕೆಗಳನ್ನು  ಉಚಿತವಾಗಿ ನೀಡುತ್ತಿದ್ದಾರೆ. ಹಾಗಾಗಿ ಅದನ್ನು ಬಸ್‌ಗಳಲ್ಲಿ ಪ್ರಯಾಣಿಕರಿಗೆ ವಿತರಿಸುತ್ತಿದ್ದೇವೆ. ಇದು ಕನ್ನಡ ವಿರೋಧಿ ನಿಲುವು ಅಲ್ಲ.
-ರಾಮಲಿಂಗಾ ರೆಡ್ಡಿ,  ಸಾರಿಗೆ ಸಚಿವ

**

ಕನ್ನಡಕ್ಕೆ ಆದ್ಯತೆ ಸಿಗಲಿ

‘ನಿಗಮದ ನಿಲುವು ಒಪ್ಪತಕ್ಕದ್ದು ಅಲ್ಲ. ಇದರಿಂದ ಕನ್ನಡ ಭಾಷಾ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಬಸ್‌ಗಳಲ್ಲಿ ಕನ್ನಡ ಪತ್ರಿಕೆಗಳನ್ನು ನೀಡುವ ಪರಿಪಾಠ ಆರಂಭಿಸಲಿ. ಇದಕ್ಕೆ ಹೆಚ್ಚು ಖರ್ಚೇನೂ ಆಗುವುದಿಲ್ಲ. ನಂತರ ಬೇಕಿದ್ದರೆ ಉಚಿತವಾಗಿ ಇಂಗ್ಲಿಷ್‌ ಪತ್ರಿಕೆ ನೀಡಲಿ. ಕನ್ನಡ ನಾಡಿನಲ್ಲಿ ಕನ್ನಡವೇ ಮೊದಲು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

‘ರಾಜ್ಯ ಸರ್ಕಾರದ ಅಧೀನದ ಸಾರಿಗೆ ಸಂಸ್ಥೆ ಕನ್ನಡ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡಬೇಕಾಗಿತ್ತು. ಆದರೆ, ಇಂಗ್ಲಿಷ್ ದಿನಪತ್ರಿಕೆಗಳಿಗೆ ಪ್ರೋತ್ಸಾಹ ನೀಡಲು ಹೊರಟಿರುವುದು ದುರದೃಷ್ಟಕರ. ಸಂಸ್ಥೆಯ ವಾಹನಗಳಲ್ಲಿ ಕನ್ನಡ ಮಾತ್ರ ಗೊತ್ತಿರುವ ಪ್ರಯಾಣಿಕರೂ ಪ್ರಯಾಣಿಸುತ್ತಾರೆ. ಅಗತ್ಯವಿರುವವರು ಇಂಗ್ಲಿಷ್ ಪತ್ರಿಕೆಗಳನ್ನು ಕೊಂಡು ಓದಲಿ, ಉಚಿತವಾಗಿ ನೀಡುವ ಅಗತ್ಯವಿಲ್ಲ. ಇದು ಕನ್ನಡ ಭಾಷೆಗೆ ಮಾಡಿದ ಅಪಮಾನ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

‘ಕೂಡಲೇ ಈ ನಿರ್ಧಾರವನ್ನು ಕೈಬಿಟ್ಟು ಪತ್ರಿಕೆಗಳನ್ನು ನೀಡಲೇಬೇಕೆಂಬ ಅಪೇಕ್ಷೆಯಿದ್ದರೆ ಕನ್ನಡ ದಿನಪತ್ರಿಕೆಗಳನ್ನು ಮಾತ್ರ ಪ್ರಯಾಣಿಕರಿಗೆ ನೀಡಬೇಕು’ ಎಂದು ಸಮಿತಿಯ ಅಧ್ಯಕ್ಷ ವ.ಚ.ಚನ್ನೇಗೌಡ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT