ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: 30ನೇ ಸ್ಥಾನಕ್ಕೆ ಕುಸಿತ

Last Updated 13 ಮೇ 2017, 6:32 IST
ಅಕ್ಷರ ಗಾತ್ರ

ರಾಯಚೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಶುಕ್ರವಾರ ಪ್ರಕಟಿಸಿದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯ ಸ್ಥಾನವು 30ನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷಕ್ಕಿಂತ ಫಲಿತಾಂಶ ಭಾರಿ ಕುಸಿತವಾಗಿದೆ.

ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳು ಪಡೆದ ಸ್ಥಾನಗಳಿಗೆ ಹೋಲಿಸಿದರೂ ರಾಯಚೂರು ಜಿಲ್ಲೆ ಐದನೇ ಸ್ಥಾನದಲ್ಲಿದೆ. 2016ರಲ್ಲಿ ರಾಜ್ಯಕ್ಕೆ 11ನೇ ಸ್ಥಾನ ಮತ್ತು ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶ ಸಾಧನೆಯಾಗಿತ್ತು.

ಈ ವರ್ಷ ಇದ್ದಕ್ಕಿದ್ದಂತೆ 19 ಸ್ಥಾನ   ಕುಸಿದಿರುವುದು ಶೈಕ್ಷಣಿಕ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವು ಜಿಲ್ಲೆಯಲ್ಲಿ ಭಾರಿ ಚರ್ಚೆಗೀಡು ಮಾಡಿದೆ.
2015–16ನೇ ಸಾಲಿನಲ್ಲಿ ಒಟ್ಟು 24,030 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2016–17ನೇ ಸಾಲಿನಲ್ಲೂ 24,075 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಆದರೆ, ಫಲಿತಾಂಶ ಮಾತ್ರ ಭಾರಿ ವ್ಯತ್ಯಾಸವಾಗಿದೆ. 2016ರಲ್ಲಿ 18,933 (ಶೇ 82.97) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ 16,777 (ಶೇ 69.69) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರು ಮೈಲುಗೈ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿನಿಯರಿಗಿಂತ ವಿದ್ಯಾರ್ಥಿಗಳು ಅತಿಹೆಚ್ಚು ಹಾಜರಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೇ ಉತ್ತೀರ್ಣರಾಗಿರುವುದು ಗಮನಾರ್ಹ. 2016 ರಲ್ಲಿ 13,241 ವಿದ್ಯಾರ್ಥಿಗಳು 10,789 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಅದರಲ್ಲಿ 10,010 (ಶೇ 75.6) ವಿದ್ಯಾರ್ಥಿಗಳು ಹಾಗೂ 8,923 (ಶೇ 82.7) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು.

2017 ರಲ್ಲಿ ಪರೀಕ್ಷೆ ಬರೆದಿದ್ದ 12,942 ವಿದ್ಯಾರ್ಥಿಗಳು 11,133 ವಿದ್ಯಾರ್ಥಿನಿಯ ಪೈಕಿ ವಿದ್ಯಾರ್ಥಿಗಳು 8,664 (ಶೇ 66.94) ಹಾಗೂ ವಿದ್ಯಾರ್ಥಿನಿಯರು 8,113 (ಶೇ 72.87) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರೇ ಫಲಿತಾಂಶದಲ್ಲಿ ಮೈಲುಗೈ ಸಾಧಿಸುತ್ತಾ ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಐದು ಮಾಧ್ಯಮ: ಜಿಲ್ಲೆಯಲ್ಲಿ ಕನ್ನಡ, ಇಂಗ್ಲಿಷ್‌, ಉರ್ದು, ಹಿಂದಿ ಹಾಗೂ ತೆಲುಗು ಮಾಧ್ಯಮಗಳಲ್ಲಿ ಕಲಿಯುವ ಪ್ರೌಢಶಾಲಾ ವಿದ್ಯಾರ್ಥಿಗಳಿದ್ದಾರೆ. ತಮಿಳು ಮತ್ತು ಮರಾಠಿ ಮಾದ್ಯಮ ಕಲಿಯುವುದಕ್ಕೆ ಅವಕಾಶವಿದ್ದರೂ ರಾಯಚೂರು ಜಿಲ್ಲೆಯಲ್ಲಿ ಈ ಎರಡು ಭಾಷೆಗಳನ್ನು ಯಾವ ವಿದ್ಯಾರ್ಥಿಯೂ ಆಯ್ಕೆ ಮಾಡಿಕೊಂಡಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 24,075 ವಿದ್ಯಾರ್ಥಿಗಳ ಪೈಕಿ 18,363 ಕನ್ನಡ ಮಾದ್ಯಮದವರೆ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ 11,959 ಕನ್ನಡ ಮಾದ್ಯಮದವರು ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ ಮಾದ್ಯಮದಲ್ಲಿ ಪರೀಕ್ಷೆ ಬರೆದಿದ್ದ 5,070 ವಿದ್ಯಾರ್ಥಿಗಳ ಪೈಕಿ 4,455 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ತೆಲುಗು ಮಾದ್ಯಮದಲ್ಲಿ ಪರೀಕ್ಷೆ ಬರೆದಿದ್ದ 12 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಶಿಕ್ಷಕರಲ್ಲೂ ಗೊಂದಲ!
ಈ ಹಿಂದೆ ಬಹುಆಯ್ಕೆ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುತ್ತಿತ್ತು. ಈ ವರ್ಷ ಪ್ರಶ್ನೆಗೆ ಉತ್ತರ ಬರೆಯ ಬೇಕಾಗಿತ್ತು. ಎಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವ ಬಗ್ಗೆ ಶಿಕ್ಷಕರಲ್ಲೂ ಗೊಂದಲವಿತ್ತು ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳು ಅಧ್ಯಯನ ಮಾಡುವುದಕ್ಕೆ ಸಾಕಷ್ಟು ಪ್ರೋತ್ಸಾಹ, ಸಹಕಾರ ನೀಡಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಧಿಕಾರಿ ಗಳು ಕೂಡಾ ಶಾಲೆಗಳಿಗೆ ಭೇಟಿ ಕೊಟ್ಟಿದ್ದರು. ಹೊಸ ಪದ್ಧತಿಯ ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿಗಳು ಹೊಂದಿಕೊಂಡಿಲ್ಲ. ಇದರಿಂದ ಫಲಿತಾಂಶದಲ್ಲಿ ಕುಸಿತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT