ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಕಳಪೆ ಫಲಿತಾಂಶ 

Last Updated 13 ಮೇ 2017, 8:28 IST
ಅಕ್ಷರ ಗಾತ್ರ

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  ತುಮಕೂರು ಶೈಕ್ಷಣಿಕ ಜಿಲ್ಲೆ ಕಳಪೆ ಸಾಧನೆ ಮಾಡುವ ಮೂಲಕ ಜನರು ತಲೆತಗ್ಗಿಸುವಂತೆ ಮಾಡಿದೆ. ಶೇ  68.15ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 32ನೇ ಸ್ಥಾನಕ್ಕೆ  ಕುಸಿದಿದೆ. ಇಂಥ ಫಲಿತಾಂಶ ಯಾರೂ ಸಹ  ನಿರೀಕ್ಷೆ ಮಾಡಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

‘ಏತಕ್ಕಾಗಿ ಈ ರೀತಿ ಆಗಿದೆ ಎಂಬುದು ಗೊತ್ತಾಗುತ್ತಿಲ್ಲ. ಬೆಂಗಳೂರಿಗೆ ಸಮೀಪವಿದ್ದರೂ  ಇಷ್ಟು ಕಡಿಮೆ ಫಲಿತಾಂಶ ಬಂದಿರುವುದು ನಾಚಿಕೆಗೇಡು. ಏನು ಉತ್ತರ ಹೇಳಬೇಕೆಂದೇ ತೋಚುತ್ತಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲದೇ ಇರುವುದು. ಕಟ್ಟುನಿಟ್ಟಿನ ಪರೀಕ್ಷೆ, ಶಿಕ್ಷಕರ ಮೇಲೆ ಇಲಾಖೆ ಮೇಲ್ವಿಚಾರಣೆ ಇಲ್ಲ ಎಂಬ ಮೂರು ಕಾರಣ ಬಿಟ್ಟರೆ ಇನ್ನೇನು ಹೇಳಲು ಸಾಧ್ಯ. ಒಟ್ಟಾರೆ ಇದು ಅರಗಿಸಿಕೊಳ್ಳಲಾಗದಂಥ ಫಲಿತಾಂಶ’ ಎಂದು ಅವರು ತಿಳಿಸಿದರು.

‘2012ನೇ ಇಸವಿಯಲ್ಲಿ ಶೇ 85.84 ಫಲಿತಾಂಶ ಪಡೆದು ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದ  ಜಿಲ್ಲೆ ಅಲ್ಲಿಂದ ಈಚೆಗೆ ಕುಸಿಯುತ್ತಾ ಬಂದಿದೆ. 2013ರಲ್ಲಿ ಶೇ 83.98 ರಷ್ಟುಫಲಿತಾಂಶ ಪಡೆಯುವ ಮೂಲಕ 12 ನೇ ಸ್ಥಾನದಲ್ಲಿತ್ತು. ಕಳೆದ ವರ್ಷ  ಶೇ 76.56ರಷ್ಟು ಫಲಿತಾಂಶ ಪಡೆಯುವ ಮೂಲಕ 26ನೇ ಸ್ಥಾನಕ್ಕೆ ಕುಸಿತ ಕಂಡಿತು. ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗಿದ ಫಲಿತಾಂಶವನ್ನು ಇಲಾಖೆ ಸರಿಯಾಗಿ ಗುರುತಿಸಲಿಲ್ಲ. ಈಗ ಅದರ ಪರಿಣಾಮ ಎದುರಿಸಬೇಕಾಗಿದೆ’ ಎಂಬ ಮಾತುಗಳು ಕೇಳಿಬಂದಿವೆ.

ಫಲಿತಾಂಶ ಸುಧಾರಣೆಗೆ ಮಕ್ಕಳ ದತ್ತು, ರಾತ್ರಿ ಶಾಲೆ, ಶೇ 40ಕ್ಕಿಂತ ಕಡಿಮೆ ಅಂಕ ಪಡೆದ ಮಕ್ಕಳಿಗೆ ವಿಶೇಷ ತರಗತಿ ಹಾಗೂ ವಿಷಯವಾರು ಶಿಕ್ಷಕರಿಗೆ ತರಬೇತಿ  ನೀಡಲಾಗಿತ್ತು. ಈ ಎಲ್ಲವೂ ‘ನೀರಿನಲ್ಲಿ ಹೋಮ ಮಾಡಿದಂತೆ’ ಆಗಿದೆ ಎಂದು ಹೇಳಲಾಗುತ್ತಿದೆ.

‘ಕ್ಲಸ್ಟರ್‌ ಮಾದರಿಯ ಪರೀಕ್ಷಾ ಕೇಂದ್ರಗಳಿಂದಲೂ ಹೆಚ್ಚು ಮಕ್ಕಳು ಅನುತ್ತೀರ್ಣವಾಗಲು ಕಾರಣವಾಗಿದೆ. ಒಂದೇ ಶಾಲೆಯ ಮಕ್ಕಳು ಎರಡು– ಮೂರು ಪರೀಕ್ಷಾ ಕೇಂದ್ರಗಳಿಗೆ ಹಂಚಿ ಹೋಗಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪರೀಕ್ಷಾ ಕೇಂದ್ರ ಅತಿ ದೂರದಲ್ಲಿದ್ದ  ಕಾರಣ ಅವರು ಓಡಾಡಿಕೊಂಡು ಪರೀಕ್ಷೆ ಬರೆಯಬೇಕಾಯಿತು. ಈ ಎಲ್ಲ ಅಂಶಗಳು ಪರಿಣಾಮ ಬೀರಿರಬಹುದು’ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿಕ್ಷಕರ ಸಮಸ್ಯೆಯೂ ಕಾರಣ!: ಜಿಲ್ಲೆಯಲ್ಲಿ ಕಾಡುತ್ತಿರುವ ಶಿಕ್ಷಕರ ಸಮಸ್ಯೆಯೂ ಕಳಪೆ ಫಲಿತಾಂಶಕ್ಕೆ ಕಾರಣ ಎಂದು ಕೆಲವು ಶಿಕ್ಷಕರು ಹೇಳುತ್ತಿದ್ದಾರೆ.‘ಕುಣಿಗಲ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆ ಇದೆ. 80 ಹುದ್ದೆಗಳು ಖಾಲಿ ಇದ್ದವು. ಜಿಲ್ಲೆಯಲ್ಲಿ 119 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆಯಾಗಿದೆ’ ಎಂದು ಹೇಳುತ್ತಿದ್ದಾರೆ.

‘ಮಾಧ್ಯಮ ಶಿಕ್ಷಣ ಅಭಿಯಾನದಡಿ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲು ಡಿಸೆಂಬರ್‌ ತಿಂಗಳಿಂದ ಮಾರ್ಚ್‌ವರೆಗೆ ವಿಷಯವಾರು ಶಿಕ್ಷಕರನ್ನು ಹದಿನೈದು ದಿನಗಳ ಕಾಲ ತರಬೇತಿ ನೀಡಲು ಬಳಸಿಕೊಳ್ಳಲಾಯಿತು. ಆಗ ಪಾಠ ಹಿಂದುಳಿದಿದ್ದು ಸಹ ಫಲಿತಾಂಶ ಕಳಪೆಯಾಗಲು ಕಾರಣ ಇರಬಹುದು’ ಎಂದೂ ವಾದಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT