ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಸಾಹಿತಿಗಳ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ’

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳಾ ಸಾಹಿತಿಗಳಾದ  ತ್ರಿವೇಣಿ, ಎಂ.ಕೆ.ಇಂದಿರಾ, ಶ್ಯಾಮದೇವಿ ಬೆಳಗಾಂವಕರ, ಶಾಂತಾದೇವಿ ಮಾಳವಾಡ ಅವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಬೇಕು’ ಎಂದು ಸಾಹಿತಿ ಡಾ.ವೀಣಾ ಶಾಂತೇಶ್ವರ ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಂ.ಕೆ.ಇಂದಿರಾ ಮತ್ತು ವಾಣಿ ಜನ್ಮಶತಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಅನೇಕ ಮಹನೀಯರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿದೆ. ಅದೇ ರೀತಿ ಈ ನಾಲ್ವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ, ಅವರ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘1960ರ ದಶಕದಲ್ಲಿ ಇಂದಿರಾ ಹಾಗೂ ವಾಣಿ ಜನಪ್ರಿಯ ಲೇಖಕಿ ಯರಾಗಿದ್ದರು.  ಜನಸಾಮಾನ್ಯರು ಇವರ ಕೃತಿಗಳನ್ನು ಓದಿ ಖುಷಿ ಪಡುತ್ತಿದ್ದರು. ಆದರೆ, ಮುಖ್ಯವಾಹಿನಿಯ ವಿಮರ್ಶಕ ರಿಂದ ಇವರಿಗೆ ಸಿಗಬೇಕಿದ್ದ ಮನ್ನಣೆ ಸಿಗಲಿಲ್ಲ. ವಿಶ್ವವಿದ್ಯಾಲಯಗಳು ಹೊರ ತಂದಿರುವ ಮಹಿಳಾ ಸಾಹಿತ್ಯ ಚರಿತ್ರೆಯ ಪುನರ್‌ ಮೌಲ್ಯಮಾಪನದಲ್ಲೂ ಈ ಲೇಖಕಿಯರಿಗೆ ಅನ್ಯಾಯ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಸಬಿಹಾ ಭೂಮಿಗೌಡ ಮಾತನಾಡಿ, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿರುವ ಸಾಲುದೀಪಗಳು ಸಂಪುಟದಲ್ಲಿ ಇಂದಿರಾ, ವಾಣಿ ಅವರ ಕುರಿತ ವಿಮರ್ಶಾ ಲೇಖನಗಳಿಲ್ಲ. ಇಬ್ಬರ ಬಗ್ಗೆ ಇಂದಿನ ತಲೆಮಾರಿನ ಓದುಗರಿಗೆ ಪರಿಚಯಿಸುವ ಅಗತ್ಯವಿದೆ’ ಎಂದರು.

ವರ್ಷವಿಡೀ ಕಾರ್ಯಕ್ರಮ: ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತ್ಯ ಪರಿಷತ್ತು ಹಾಗೂ ಲೇಖಕಿಯರ ಸಂಘದಿಂದ ವರ್ಷವಿಡೀ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತದೆ’ ಎಂದರು.

‘ಎಂ.ಕೆ. ಇಂದಿರಾ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ  ವಿಮರ್ಶಕಿಯರಾದ ಎಚ್‌.ಎಲ್‌.ಪುಷ್ಪಾ, ವೈ.ಕೆ. ಸಂಧ್ಯಾಶರ್ಮಾ, ಆರತಿ ಆನಂದ ಮಾತನಾಡಿದರು.

**

‘ಆತ್ಮಕಥೆ ಬರೆಯುವ ಆಸೆ ಈಡೇರಲಿಲ್ಲ’
ಎಂ.ಕೆ.ಇಂದಿರಾ ಅವರ ಮಗ ಎಂ.ಕೆ. ಮಂಜುನಾಥ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಸಿಂಧುವಿನಲ್ಲಿ ಬಿಂದು ನಾನು ಎಂಬ ಶೀರ್ಷಿಕೆಯಡಿ ಆತ್ಮಕಥೆ ಹಾಗೂ ಸೀತೆ ಬಗ್ಗೆ ಕೃತಿಯನ್ನು ಬರೆಯುವ ಆಸೆ ಅಮ್ಮನಿಗೆ ಇತ್ತು. ಆತ್ಮಕಥೆಯ 212 ಪುಟಗಳ ಹಸ್ತಪ್ರತಿ ಈಗಲೂ ಮನೆಯಲ್ಲಿದೆ. ಅದನ್ನು ಪೂರ್ಣಗೊಳಿಸುವ ಮುನ್ನವೇ ಅವರು ನಿಧನರಾದರು’ ಎಂದರು.

**

ಆಯ್ದ ಕೃತಿಗಳ ಮರುಮುದ್ರಣ
ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ‘ಇಂದಿರಾ ಹಾಗೂ ವಾಣಿ ಅವರ ಆಯ್ದ ಎರಡು ಕೃತಿಗಳನ್ನು ಮುಂದಿನ ವರ್ಷ ಮರುಮುದ್ರಣ ಮಾಡಲು ಕ್ರಮ ಕೈಗೊಳ್ಳುತ್ತೇನೆ. ನಾಲ್ವರ ಲೇಖಕಿಯರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸುವಂತೆ ಒತ್ತಾಯಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT