ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಬಾಹ್ಯಾಕಾಶ ಸಂಶೋಧನಾ ಕೇಂದ್ರ

Last Updated 16 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನದ ಪ್ರಾಯೋಗಿಕ ಕಲಿಕೆಗೆ ಅನುಕೂಲ ಕಲ್ಪಿಸಲು ನಗರದ ಪಿಇಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭಿಸಲಾಗಿರುವ ‘ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ’ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಈ ಕೇಂದ್ರವನ್ನು ಹೊಂದಿರುವ ದೇಶದ ಏಕೈಕ ಖಾಸಗಿ ವಿಶ್ವವಿದ್ಯಾಲಯ ಇದಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಅಮೆರಿಕದ ನಾಸಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದ ‘ಕ್ಲೀನ್ ರೂಂ’ ವ್ಯವಸ್ಥೆಯನ್ನೂ ಈ ಕೇಂದ್ರದಲ್ಲಿ ಒದಗಿಸಲಾಗಿದೆ.

ಏನಿದು ‘ಕ್ಲೀನ್ ರೂಂ’?: ಶುದ್ಧಗಾಳಿಯನ್ನು ಹೊಂದಿರುವ ಕೊಠಡಿಗೆ ‘ಕ್ಲೀನ್‌ ರೂಂ’ ಎನ್ನಲಾಗುತ್ತದೆ. ‘ಉಪಗ್ರಹಕ್ಕೆ ಬಳಸುವ ಯಾವುದೇ ಯಂತ್ರದ ಮೇಲೆ ದೂಳಿನ ಸಣ್ಣ ಕಣವಿದ್ದರೂ ಇಡೀ ಯೋಜನೆ ವಿಫಲವಾಗುತ್ತದೆ. ಹಾಗಾಗಿ ದೂಳು ಇಲ್ಲದ ಕ್ಲೀನ್‌ ರೂಂನಲ್ಲಿ ಉಪಗ್ರಹ ಜೋಡಣೆ ಮಾಡಲಾಗುತ್ತದೆ’ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿ.ಸಾಂಬಶಿವ ರಾವ್ ವಿವರಿಸಿದರು.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ)ಇಮಾರತ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ.ಎಚ್‌.ವಿ.ಎಸ್. ನಾರಾಯಣ ಮೂರ್ತಿ ಅವರು ನೂತನ ಕೇಂದ್ರಕ್ಕೆ ಚಾಲನೆ ನೀಡಿದರು.

ಕರಾವಳಿ ಕಾವಲಿಗೆ ‘ಆರ್-ಸ್ಯಾಟ್’: ಕರಾವಳಿಯ ಭದ್ರತೆ ಮತ್ತು ಸುರಕ್ಷತೆಗಾಗಿ ‘ಆರ್-ಸ್ಯಾಟ್’ ಹೆಸರಿನ ನ್ಯಾನೊ ಉಪಗ್ರಹ ನಿರ್ಮಿಸಿಕೊಡಲು ಪಿಇಎಸ್‌ ವಿಶ್ವವಿದ್ಯಾಲಯದೊಂದಿಗೆ ಡಿಆರ್‌ಡಿಒ ಒಪ್ಪಂದ ಮಾಡಿಕೊಂಡಿದೆ. ಸದ್ಯ ಕೇಂದ್ರದಲ್ಲಿ ಈ ಉಪಗ್ರಹ ತಯಾರಾಗುತ್ತಿದೆ.

ನ್ಯಾನೊ ಉಪಗ್ರಹ ಆರ್-ಸ್ಯಾಟ್ 10 ಕೆ.ಜಿ. ತೂಕವಿದ್ದು, 45 ವಾಟ್ ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರದಲ್ಲಿ ಸಾಗುವ ನೌಕೆಗಳ ಮೇಲೆ ಈ ಉಪಗ್ರಹ ನಿಗಾ ಇರಿಸಲಿದೆ. ನೌಕೆಗಳಲ್ಲಿರುವ ‘ಸ್ವಯಂ ಪತ್ತೆ ಸಾಧನ’ದ ತರಂಗ ಗ್ರಹಿಸಿ ಕೇಂದ್ರಕ್ಕೆ ರವಾನಿಸುತ್ತದೆ.

ವಿಜ್ಞಾನಿ ಸಾಂಬಶಿವರಾವ್‌ ಮಾರ್ಗದರ್ಶನದಲ್ಲಿ 18 ತಿಂಗಳಲ್ಲಿ  ಈ ಉಪಗ್ರಹ ಸಿದ್ಧಗೊಳ್ಳಲಿದೆ. ಇದರ ನಿರ್ಮಾಣಕ್ಕೆ ₹5.8 ಕೋಟಿ ವೆಚ್ಚವಾಗಲಿದ್ದು, ಈ ಮೊತ್ತವನ್ನು ಡಿಆರ್‌ಡಿಒ ಭರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT