ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಪ್ರಿಯ ಶಿವ

Last Updated 18 ಮೇ 2017, 19:30 IST
ಅಕ್ಷರ ಗಾತ್ರ
* ಬಂಗಾರ s/o ಬಂಗಾರದ ಮನುಷ್ಯ’ ಒಪ್ಪಿಕೊಳ್ಳಲು ಮುಖ್ಯ ಕಾರಣ ಏನು?
ಪ್ರತಿ ಸಿನಿಮಾವನ್ನು ಒಪ್ಪಿಕೊಳ್ಳುವಾಗಲೂ ಅದರ ಯಾವುದಾದರೂ ಒಂದು ಅಂಶ ನನಗೆ ಇಷ್ಟವಾಗಿರುತ್ತದೆ. ಆದರೆ ಕೆಲವು ಸಿನಿಮಾಗಳು ಹೃದಯಕ್ಕೆ ತುಂಬ ಹತ್ತಿರವಾಗುತ್ತವೆ. ‘ಬಂಗಾರ s/o ಬಂಗಾರದ ಮನುಷ್ಯ’ ನನಗೆ ಈ ರೀತಿ ಹೃದಯಕ್ಕೆ ಹತ್ತಿರವಾದ ಸಿನಿಮಾ. 
 
ಈ ಸಿನಿಮಾದ ಕಥೆಯ ಹುಡುಕಾಟವೇ ತುಂಬ ವಿಶಿಷ್ಟವಾಗಿದೆ. ನಾವು–ನಮ್ಮತನ, ನಮ್ಮ ಕಥೆ ಹೀಗೆ ನಮ್ಮದು ಅಂತ ಹೋಗುವುದು ಸ್ವಾರ್ಥ ಆಗುತ್ತದೆ. ಆದರೆ ಬೇರೆಯವರ ಕಥೆ, ಬೇರೆಯವರಿಗೋಸ್ಕರ ಮಾಡಿದ ಕಥೆಗೂ ನನ್ನ ಕಥೆಗೂ ಏನು ವ್ಯತ್ಯಾಸ ಇರುತ್ತದೆ ಎನ್ನುವುದನ್ನು ಹುಡುಕುವ ಸಿನಿಮಾ ಇದು. ಇದು ಒಬ್ಬನ ಕಥೆಯಲ್ಲ, ಹಲವಾರು ಕಥೆಗಳು, ಹಲವರ ಕಥೆಗಳು, ಬೇರೆ ಬೇರೆಯವರ ಕಥೆಗಳು ಸೇರಿ ಆದ ಸಿನಿಮಾ. 
 
* ಹಳ್ಳಿ ಕಥೆಗಳು ಇಂದಿನ ಪ್ರೇಕ್ಷಕರಿಗೆ ರುಚಿಸುವುದಿಲ್ಲ ಎಂಬ ಮಾತಿದೆ. ಅಂಥದ್ದರಲ್ಲಿ ‘ಬಂಗಾರ s/o ಬಂಗಾರದ ಮನುಷ್ಯ’ವನ್ನು ಜನರು ಹೇಗೆ ಸ್ವೀಕರಿಸಬಹುದು?
ಇದು ಹಳ್ಳಿ ಕಥೆಯೇ ಎಂಬುದು ಸಿನಿಮಾ ನೋಡಿದಾಗಲೇ ತಿಳಿಯುತ್ತದೆ. ಹಳ್ಳಿ ಕಥೆಯನ್ನು ಜನರು ನೋಡುವುದಿಲ್ಲ ಎನ್ನುವುದು ಸುಳ್ಳು. ಆ ಕುರಿತು ಜನರಲ್ಲಿ ಆಸಕ್ತಿಯನ್ನು ಹುಟ್ಟಿಸಬೇಕು. ಹಾಗೆ ನೋಡಿದರೆ ಸಿಟಿ ಕಥೆಗಳಿರುವ ಸಿನಿಮಾಗಳು ಎಷ್ಟು ಗೆಲ್ಲುತ್ತಿವೆ? ಅದನ್ನು ಹೀಗೆಯೇ ಎಂದು ನಿರ್ಧರಿಸಲು ಸಾಧ್ಯವೇ ಇಲ್ಲ. ಹಾಗೆಯೇ ಹಳ್ಳಿ ಕಥೆ ಎಂದರೆ ಸುಮ್ಮನೇ ಭಾವುಕತೆಯನ್ನೇ ಚಿತ್ರಿಸುವುದಲ್ಲ. ಹಳ್ಳಿಗಳ ಸಮಸ್ಯೆಯನ್ನು ಚಿತ್ರಿಸಬೇಕು.
 
ಅದರ ಗಂಭೀರತೆಯ ಬಗ್ಗೆ ಸಿಟಿಯಲ್ಲಿರುವವರಿಗೂ ತಿಳಿಯಬೇಕು. ಅದನ್ನೇ ನಿರ್ದೇಶಕ ಯೋಗಿ ಜಿ. ರಾಜ್‌ ಅವರು ಈ ಸಿನಿಮಾದಲ್ಲಿ ಪ್ರಯತ್ನಿಸಿದ್ದಾರೆ. ಹಳ್ಳಿಯ ಸಮಸ್ಯೆಗಳಿಗೆ ಇಂದಿನ ನಗರದ ತಂತ್ರಜ್ಞಾನದ ಮೂಲಕ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಹುಡುಕಲು ಹೊರಟಿದ್ದಾರೆ. ಆದರೆ ಈ ಸಿನಿಮಾ ಬರೀ ಹಳ್ಳಿ ಕಥೆ ಎಂದು ಹೇಳುವುದೂ ಸರಿಯಲ್ಲ. ಬದಲಿಗೆ ಇದು ಒಂದು ವರ್ಗದ ಕಥೆ. 
 
* ಅಂದರೆ ನಗರದ ಜನರು ಹಳ್ಳಿಗಳತ್ತ ದೃಷ್ಟಿ ಬೀರುವಂತೆ ಮಾಡುವ ಸಿನಿಮಾ ಇದು?
ಹೌದು. ನಮಗಿಂದು “ಹಳ್ಳಿಗಳ ಸಮಸ್ಯೆ’ ಸಮಸ್ಯೆ ಎಂದೇ ಅನಿಸುತ್ತಿಲ್ಲ. ಸಂಪೂರ್ಣ ಮರೆತುಬಿಡುತ್ತಿದ್ದೇವೆ. ಆದರೆ ಎಲ್ಲದಕ್ಕೂ ಹಳ್ಳಿಯೇ ಬೇಕು ನಮಗೆ. ಇಂದು ಏನಾದರೂ ಸ್ವಲ್ಪ ಮರಗಳು, ನೆರಳು ಉಳಿದುಕೊಂಡಿವೆ  ಅಂದರೆ ಅವು ಹಳ್ಳಿಗಳಲ್ಲಿ ಮಾತ್ರ. ಶುದ್ಧ ಗಾಳಿ ಬೇಕು ಅಂದರೆ ಸಿಗುವುದು ಹಳ್ಳಿಗಳಲ್ಲಿಯೇ. ನಾನು ಮೊದಲಿನಿಂದಲೂ ಆಗಾಗ ಅಪ್ಪಾಜಿಯವರ ಹಳ್ಳಿಗೆ ಹೋಗಿ ಬರುತ್ತಿದ್ದೆ. ಅಲ್ಲಿನ ಸೊಗಡು, ನೆನಪು ಎಲ್ಲವನ್ನೂ ಈ ಸಿನಿಮಾದ ಮೂಲಕ ಮತ್ತೆ ಅನುಭವಿಸಿದ್ದೇನೆ. 
 
* ಈ ಚಿತ್ರದಲ್ಲಿ ನಿಮಗೆ ತುಂಬ ಇಷ್ಟವಾದ ಅಂಶ ಯಾವುದು?
ಈ ಸಿನಿಮಾದಲ್ಲಿ ಒಂದು ಸಣ್ಣ ಭಾವನಾತ್ಮಕತೆಯ ಅಂತರ್‌ಹರಿವು ಇದೆ. ಅದು ಜನರನ್ನು ತಟ್ಟುತ್ತದೆ. ಅಪ್ಪಾಜಿ ಅವರ ‘ಬಂಗಾರದ ಮನುಷ್ಯ’ ಜನರನ್ನು ಮುಟ್ಟಿತ್ತು. ಆ ಸಿನಿಮಾದಲ್ಲಿನ ಮೌಲ್ಯಗಳು ಇಲ್ಲಿ ಯಾವ ರೀತಿ ಚಿತ್ರಿತವಾಗುತ್ತವೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು. ಆ ಸಿನಿಮಾದ ಮಟ್ಟವನ್ನು ನಾವು ಮುಟ್ಟುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಅದರ ಒಂದು ಅಂಶದಷ್ಟಾದರೂ ಮುಟ್ಟುತ್ತೇವೆ ಎಂಬ ವಿಶ್ವಾಸ ಇದೆ.

ಅಪ್ಪಾಜಿ ಅವರ ಜತೆಯಲ್ಲಿ ನಟಿಸಿದ ಹಲವು ನಟರು ಇದರಲ್ಲಿಯೂ ಇದ್ದಾರೆ. ಶಿವರಾಮ್‌, ಜಯಮ್ಮ, ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸಮೂರ್ತಿ, ಬ್ರಹ್ಮಾವರ, ಅಶ್ವತ್ಥ್‌ನಾರಾಯಣ ಎಲ್ಲರೂ ಇದ್ದಾರೆ. ಅವರ ಜತೆಯಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ಸುಧಾ ಬೆಳವಾಡಿ ಎಲ್ಲರೂ ಇದ್ದಾರೆ. ನಾಯಕಿ ವಿದ್ಯಾ ಪ್ರದೀಪ್‌ ಅವರೂ ಹೊಸಬರು. ಹೀಗೆ ಹಳೆ–ಹೊಸ ಕಲಾವಿದರ ಸಂಗಮ ಇಲ್ಲಿದೆ. ಭಾವುಕತೆಯ ಜತೆಗೆ ರಂಜನಾತ್ಮಕ ಅಂಶಗಳೂ ಸಾಕಷ್ಟಿವೆ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನ್ನು ಚಿತ್ರ ಖಂಡಿತ ನಿರಾಸೆಗೊಳಿಸುವುದಿಲ್ಲ.

*‘ಬಂಗಾರದ ಮನುಷ್ಯ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಚಿತ್ರ. ಸಾಮಾಜಿಕ ಬದಲಾವಣೆಗೂ ಕಾರಣವಾದ ಚಿತ್ರ. ರಾಜಕುಮಾರ್‌ ಅಭಿನಯದ ಆ ಶೀರ್ಷಿಕೆಯನ್ನು ಬಳಸಿಕೊಳ್ಳುವುದು ಭಾರ ಎಂದು ಅನಿಸಲಿಲ್ಲವೇ?
ಭಾರ ಅನಿಸಲಿಲ್ಲ. ಆದರೆ ಒಪ್ಪಿಕೊಳ್ಳುವಾಗ ಕೊಂಚ ಆತಂಕವಂತೂ ಇತ್ತು. ಆದರೂ ಆ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಲೇಬೇಕು. ಏನಾದರೂ ಹೊಸತನ್ನು ಮಾಡಬೇಕು ಮತ್ತು ಮಾಡುತ್ತಲೇ ಇರಬೇಕು. ನನ್ನ ಸಿನಿಮಾಗಳನ್ನು ನೋಡಿದರೆ ನಿಮಗೇ ಗೊತ್ತಾಗುತ್ತದೆ. ನಾನು ಸಾಕಷ್ಟು ಹೊಸ ರೀತಿಯ ಪ್ರಯೋಗಗಳಿಗೆ ನನ್ನನ್ನು ಒಡ್ಡಿಕೊಂಡಿದ್ದೇನೆ.
 
ಕಲಾತ್ಮಕ ಚಿತ್ರಗಳು, ಕಾದಂಬರಿ ಆಧಾರಿತ ಚಿತ್ರಗಳು, ರೌಡಿಸಂ ಚಿತ್ರಗಳು – ಹೀಗೆ ಎಲ್ಲ ರೀತಿಯ ಸಿನಿಮಾಗಳಲ್ಲಿಯೂ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಒಂದು ಚೌಕಟ್ಟಿಗೆ ನನ್ನನ್ನು ಸೀಮಿತಗೊಳಿಸಿಕೊಂಡಿಲ್ಲ.
 
ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇದ್ದೇನೆ.  ಈ ಸಿನಿಮಾ ಅಂಥ ಪ್ರಯೋಗಗಳಲ್ಲಿ ಒಂದು. ‘ಬಂಗಾರದ ಮನುಷ್ಯ’ ಸಿನಿಮಾದ ಹಾಗೆಯೇ ‘ಬಂಗಾರ s/o ಬಂಗಾರದ ಮನುಷ್ಯ’ ಕೂಡ ಒಂದು ರೀತಿಯ ಸಾಮಾಜಿಕ ಬದಲಾವಣೆಗೆ ಕಾರಣ ಆಗಬಲ್ಲದು ಎಂಬ ಭರವಸೆ ಇದೆ.

* ಈ ರೀತಿಯ ಪ್ರಯೋಗಾತ್ಮಕತೆ ನೀವೇ ಉದ್ದೇಶಪೂರ್ವಕವಾಗಿ ಆಯ್ದುಕೊಳ್ಳುವುದೇ?
ಇಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಅನ್ನುವ ರೀತಿಯಲ್ಲಿ ಸ್ವೀಕರಿಸುತ್ತಿದ್ದೇನೆ ಅಷ್ಟೆ. ನಾವು ಬೇರೆ ಭಾಷೆಗಳಲ್ಲಿ ವಿಶಿಷ್ಟ ಸಿನಿಮಾಗಳು ಬಂದಾಗ ನೋಡಿ ಖುಷಿಪಡುತ್ತೇವೆ. ಆದರೆ ನಮ್ಮದೇ ಭಾಷೆಯಲ್ಲಿ ಅಂಥ ಸಿನಿಮಾಗಳನ್ನು ಯಾಕೆ ಮಾಡಬಾರದು? ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು ಎನ್ನುವವನು ನಾನು. 
****
ಎಲ್ಲರ ನೋವನು ಬಲ್ಲವನಾದರೆ...
ಸಾಮಾನ್ಯವಾಗಿ ನಾವು ಏನಾದರೂ ಸಮಸ್ಯೆ ಬಂದಾಗ ಅದರ ಒಂದು ಮುಖವನ್ನು ಮಾತ್ರ ನೋಡಿ ಅರ್ಥಮಾಡಿಕೊಳ್ಳುತ್ತಿರುತ್ತೇವೆ. ಆದರೆ ಎಲ್ಲರ ಸಮಸ್ಯೆಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು.
 
ನಾವು ನಮ್ಮ ಜನರ ಸಮಸ್ಯೆ, ನಮ್ಮ ವರ್ಗದವರ ಸಮಸ್ಯೆ ಎಂದೆಲ್ಲ ವರ್ಗೀಕರಿಸಿಕೊಂಡು ಬಿಟ್ಟದ್ದೇವೆ. ಅದರ ಬದಲು ಎಲ್ಲರೂ ಸೇರಿ ಪ್ರಯತ್ನಸಿದಾಗ ದೊಡ್ಡ ಗುರಿಯೊಂದನ್ನು ತಲುಪಬಹುದು. ‘ಬಂಗಾರ s/o ಬಂಗಾರದ ಮನುಷ್ಯ’ ಜೀವ ಜೀವಗಳ ನಡುವೆ ಬಾಂಧವ್ಯ ಬೆಸೆಯುವಂಥ ಸಿನಿಮಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT