ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಬೀಜದ ಲಕ್ಷ ಉಂಡೆ ಹೂಳಲು ಸಜ್ಜು

Last Updated 19 ಮೇ 2017, 5:02 IST
ಅಕ್ಷರ ಗಾತ್ರ

ಜಗಳೂರು: ಅರಣ್ಯ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಬರಗಾಲ ಸಾಮಾನ್ಯವಾಗಿದೆ. ಶಾಶ್ವತ ಬರಪೀಡಿತ ಪ್ರದೇಶ ಎಂದೇ ಹೆಸರಾದ  ಈ ತಾಲ್ಲೂಕು ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವೆನಿಸಿದೆ. 

ಮರಗಿಡಗಳನ್ನು ವ್ಯಾಪಕವಾಗಿ ಬೆಳೆಸುವ ಮೂಲಕ ಬರವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪಟ್ಟಣದ ಯೂತ್ ಫಾರ್‌ ಸೇವಾ ಹಾಗೂ ಆಕ್ಷಸ್‌ ಅಕಾಡೆಮಿ ಸಂಸ್ಥೆ ವಿಭಿನ್ನ ಪ್ರಯೋಗಕ್ಕೆ ಸಿದ್ಧವಾಗಿದೆ. 

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಕರ ನೆರವಿನಿಂದ ವಿವಿಧ ಜಾತಿಯ ಒಂದು ಲಕ್ಷಕ್ಕೂ ಹೆಚ್ಚು ಮರದ ಬೀಜಗಳನ್ನು ಅರಣ್ಯ ಪ್ರದೇಶದಲ್ಲಿ ಸಾಮೂಹಿಕವಾಗಿ ಹೂಳುವ ವಿಶಿಷ್ಟ ಕಾರ್ಯಕ್ರಮ ಸಂಸ್ಥೆಯ ನೇತೃತ್ವದಲ್ಲಿ ಸದ್ದುಗದ್ದಲ ಇಲ್ಲದೇ ನಡೆಯುತ್ತಿದೆ.

ವಾಟ್ಸ್ ಆ್ಯಪ್‌, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪರಿಸರ ಆಸಕ್ತ ಯುವ ಸಮೂಹವನ್ನು ಪರಿಸರ ಪೂರಕ ಚಟುವಟಿಕೆಗಳಿಗೆ ಅಣಿಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಸಾರ್ವಜನಿಕರಿಂದ ವಿವಿಧ ಮರಗಳ ಹಣ್ಣುಗಳಿಂದ ಬೀಜಗಳನ್ನು ಸಂಗ್ರಹಿಸಲಾಗಿದೆ. ಬೀಜದ ಉಂಡೆಗಳನ್ನು ತಯಾರಿಸಿ ಒಂದೆರೆಡು ಮಳೆ ಬಿದ್ದ ನಂತರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹೂಳುವ ಮಹತ್ವದ ಕಾರ್ಯವನ್ನು ಯೂತ್‌ ಫಾರ್‌ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ನೇರಳೆ, ಮಾವು, ಹುಣಸೆ, ಬೇವು, ಹಲಸು ಮುಂತಾದ ಮರಗಳ ಒಂದು ಲಕ್ಷಕ್ಕೂ ಹೆಚ್ಚು ಬೀಜಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸಲಾಗಿದೆ.ಇದೇ ಮೇ 21ರಂದು ಪಟ್ಟಣ ಸಮೀಪದ ಬಿದರಕೆರೆ ರಸ್ತೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ 300 ಸ್ವಯಂಸೇವಕರು ಸಾಮೂಹಿಕವಾಗಿ ಬೀಜದುಂಡೆ ಹೂಳುವ  ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

‘ಹೆಚ್ಚುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ಅಂತರ್ಜಲಕ್ಕೆ ಪ್ರಮುಖ ಕಾರಣ ಕಾಡಿನ ನಾಶವಾಗಿದೆ. ವ್ಯಾಪಕವಾಗಿ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಬೀಜದುಂಡೆ ಪ್ರಯೋಗ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಆಗಿದೆ.

ಈಗಾಗಲೇ ತಾಲ್ಲೂಕಿನಲ್ಲಿ ಒಂದೆರಡು ಬಾರಿ ಉತ್ತಮ ಮಳೆಯಾಗಿದೆ. ಬೀಜ ಹಾಕಲು ಇದು ಸೂಕ್ತ ಸಮಯವಾಗಿದೆ. ಕಳೆದ ವರ್ಷ ಅಣಬೂರು ಅರಣ್ಯದಲ್ಲಿ ಸಾಮೂಹಿಕವಾಗಿ ಬೀಜದುಂಡೆಗಳನ್ನು ಹೂಳಲಾಗಿತ್ತು’ ಎಂದು ಯೂತ್‌ ಫಾರ್‌ ಸೇವಾ ಸಂಸ್ಥೆಯ ಮುಖ್ಯಸ್ಥ ಡಿ.ಎಸ್‌.ಪ್ರಶಾಂತ್‌ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಮರಗಳನ್ನು ಬೆಳೆಸುವುದು ಹಾಗೂ ಅರಣ್ಯೀಕರಣ ಕಾರ್ಯ ಅರಣ್ಯ ಇಲಾಖೆಯ ಕೆಲಸ ಎಂದು ಕೈಕಟ್ಟಿ ಕೂರುವ  ಕಾಲ ಇದಲ್ಲ. ಅರಣ್ಯದ ನಾಶದ ಪರಿಣಾಮ ಇಂದು ಎಲ್ಲರೂ ಅನುಭವಿಸುತ್ತಿದ್ದಾರೆ.

ಈ ವರ್ಷ ಭೀಕರ ಬರದಿಂದ ಗ್ರಾಮೀಣ ಪ್ರದೇಶದಲ್ಲಿ ಜನ, ಜಾನುವಾರು ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಮರಗಿಡ ಬೆಳೆಸುವದು ಮಾತ್ರ ಏಕೈಕ ಪರಿಹಾರವಾಗಿದೆ. ಇದನ್ನು ಅರಿತು ಎಲ್ಲರೂ ಬೀಜ ನೆಡುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡುತ್ತಾರೆ.

ಬೀಜದುಂಡೆ ತಯಾರಿ ಹೇಗೆ?

ಬೀಜಗಳನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ. ನಂತರ ಕೆಂಪು ಮಣ್ಣು, ಕಪ್ಪು ಮಣ್ಣು, ಮರಳು ಹಾಗೂ ಸೆಗಣಿ ಮತ್ತು ಗಂಜಲವನ್ನು  ಸಮಪ್ರಮಾಣದಲ್ಲಿ ಮಿಶ್ರಣ ಮಾಡಲಾಗುತ್ತದೆ.

ಅಂಗೈಯಿಂದ ಮಣ್ಣಿನ ಉಂಡೆ ಕಟ್ಟಿ ಅದರ ಮಧ್ಯ ಭಾಗದಲ್ಲಿ ಬೀಜವನ್ನು ಇಟ್ಟು ಒಣಗಿಸಲಾಗುತ್ತದೆ.  ಈಗಾಗಲೇ 300ಕ್ಕೂ ಹೆಚ್ಚು ವಿದ್ಯಾರ್ಥಿ, ಯುವಕರು ಎರಡು ಹಂತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ತಯಾರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT