ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನ ಕಾಣಲ್ಲ, ಸಿಬ್ಬಂದಿಯೂ ಇಲ್ಲ

Last Updated 20 ಮೇ 2017, 5:19 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನಲ್ಲಿ ಮೂರು ಸರ್ಕಾರಿ ಮತ್ತು ಎರಡು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇವುಗಳ ಪೈಕಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ದೊಡ್ಡ ಕಾಲೇಜು ಎಂಬ ಹೆಗ್ಗಳಿಕೆ ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನದು. ಆದರೆ, ಇಲ್ಲಿನ ಸಮಸ್ಯೆಗಳ ಸಂಖ್ಯೆಯೂ ದೊಡ್ಡದೇ.

ಆಟದ ಮೈದಾನವೇ ಇಲ್ಲ: 777 ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಸ್ವಂತ ಆಟದ ಮೈದಾನವೇ ಇಲ್ಲ. ‘ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಸಾಕಷ್ಟಿದೆ. ಆದರೆ, ಅದಕ್ಕನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳೇ ಇಲ್ಲ. ಕಾಲೇಜಿನ ವಾರ್ಷಿಕ ಕ್ರೀಡಾ ಚಟುವಟಿಕೆಗಳನ್ನು ದೂರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ.

ಅದೂ ಕಾಟಾಚಾರಕ್ಕೆ ಎಂಬಂತೆ ನಡೆಸಲಾಗುತ್ತದೆ’ ಎಂಬುದು ವಿದ್ಯಾರ್ಥಿಗಳಾದ ಅಶೋಕಕುಮಾರ ಕೆರೂರ, ನವೀನ ಹೊಂಡದ, ಭರಮಪ್ಪ ತಳವಾರ, ಗಿರೀಶ ಬಂಗಾರಿ ಅಳಲು.ಜಾಗವಿದೆ, ಆದರೆ...: 10 ವರ್ಷ ತಾತ್ಕಾಲಿಕ ಕಟ್ಟಡದಲ್ಲಿ ನಡೆದ ಈ ಕಾಲೇಜು 2012 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಹಾನಗಲ್‌–ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡ ಗುಡ್ಡವನ್ನು ನೆಲಸಮ ಮಾಡಿ ಒಟ್ಟು 5 ಎಕರೆ ಜಾಗ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಸದ್ಯ ಎರಡು ಎಕರೆ ಜಾಗದಲ್ಲಿ ಬೃಹತ್‌ ಕಾಲೇಜು ಕಟ್ಟಡ, ಪ್ರತ್ಯೇಕವಾಗಿ ಕಲಾ ಮಂದಿರ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಾಗಿ ವಸತಿ ಗೃಹಗಳು ಅದರಲ್ಲಿ ನಿರ್ಮಾಣಗೊಂಡಿವೆ. ಇನ್ನುಳಿದ ಮೂರು ಎಕರೆ ಜಾಗದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದೆ.

ಆಟದ ಮೈದಾನಕ್ಕಾಗಿ ಜಾಗ ಮೀಸಲಿಡಲಾಗಿದೆ. ಆದರೆ ಅದು ತಗ್ಗು–ಉಬ್ಬು ಮತ್ತು ಕಲ್ಲು–ಪೊದೆಗಳಿಂದ ಆವೃತವಾಗಿದೆ.‘ಕಾಲೇಜಿನಲ್ಲಿ ಪ್ರತ್ಯೇಕವಾಗಿ ಆಟದ ಸಾಮಗ್ರಿಗಳ ಕೊಠಡಿ ಮತ್ತು ಯೋಗ, ಮೆಡಿಟೇಷನ್‌ ಕೊಠಡಿಗಳು ಇಲ್ಲಿವೆ. ಆದರೆ ಬಳಕೆಯಿಲ್ಲದಂತಾಗಿ ಹಾಳು ಬಿದ್ದಂತಾಗಿವೆ. ಇದ್ದ ಜಾಗದಲ್ಲಿಯೇ ವಾಲಿಬಾಲ್‌, ಕಬಡ್ಡಿ, ಕೊಕ್ಕೊ ಅಂಗಣ ಮಾಡಿಕೊಳ್ಳಲಾಗಿದೆ’ ಎಂದು ಪ್ರಾಚಾರ್ಯ ಮಹ್ಮದ್‌ಶರೀಫ್‌ ಹಾನಗಲ್‌ ಹೇಳುತ್ತಾರೆ.

ಮತ್ತೊಂದೆಡೆ, ಕೆಶೀಫ್ ಅಡಿಯಲ್ಲಿ ಸುಧಾರಣೆಗೊಂಡ ಹಾನಗಲ್‌–ತಡಸ್‌ ರಸ್ತೆಗೆ ಮೈದಾನಕ್ಕೆ ಮೀಸಲಿಟ್ಟ ಜಾಗದಿಂದಲೇ ಕಲ್ಲು–ಮಣ್ಣು ಸಾಗಿಸಲಾಗಿತ್ತು. ಆಗ ರಸ್ತೆ ಕಾಮಗಾರಿಯ ಗುತ್ತಿಗೆದಾರ ಕಂಪೆನಿಯು ಈ ಸಹಕಾರಕ್ಕೆ ಪ್ರತಿಯಾಗಿ ಆಟದ ಮೈದಾನ ಸಿದ್ಧಪಡಿಸುವ ವಾಗ್ದಾನ ನೀಡಿತ್ತಂತೆ.

‘ಹೀಗೊಂದು ಒಪ್ಪಂದವಾಗಿತ್ತು. ಭರವಸೆಯಂತೆ ಗುತ್ತಿಗೆದಾರ ಕಂಪೆನಿಯವರು ಮೈದಾನ ಸುಧಾರಣೆಗೆ ಪ್ರಯತ್ನಪಟ್ಟರು. ಆದರೆ ಈ ಜಾಗದಲ್ಲಿ ಬೃಹತ್‌ ಕಲ್ಲು–ಬಂಡೆಗಳಿದ್ದರಿಂದ ಹೆಚ್ಚಿನ ಶ್ರಮ ಹಾಕಲು ಕಂಪೆನಿ ಹಿಂದೇಟು ಹಾಕಿತು’ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರು ತಿಳಿಸಿದರು.

ಬೋಧಕ, ಬೋಧಕೇತರ ಸಿಬ್ಬಂದಿಯೂ ಇಲ್ಲ: ತಾಲ್ಲೂಕಿನ ಇತರ ಪದವಿ ಕಾಲೇಜುಗಳಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಮೈದಾನದ ಜೊತೆಗೆ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ.16 ಬೋಧಕ ಸಿಬ್ಬಂದಿ ಪೈಕಿ 6 ಬೋಧಕರಿದ್ದಾರೆ. 10 ಬೋಧಕೇತರ ಸಿಬ್ಬಂದಿ ಪೈಕಿ ಇಲ್ಲಿ ಇರುವುದು ಇಬ್ಬರೇ. ಪ್ರಾಚಾರ್ಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಗಳು ಎರಡು ವರ್ಷದಿಂದ ಖಾಲಿ ಇವೆ.

ನೂರಾರು ವಿದ್ಯಾರ್ಥಿಗಳನ್ನು ನಿಭಾಯಿಸಲು ಇಲ್ಲಿ ಅತಿಥಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸುಮಾರು 32 ಅತಿಥಿ ಶಿಕ್ಷಕರು ಈ ಕಾಲೇಜಿನಲ್ಲಿ ಪಾಠಮಾಡುತ್ತಿದ್ದಾರೆ.
ಮಾರುತಿ ಪೇಟಕರ

* *

ಆಟದ ಮೈದಾನದ ಸಮಸ್ಯೆ ಗಮನದಲ್ಲಿದೆ. ಶೀಘ್ರವೇ ಅಂದಾಜು ತಯಾರಿಸಿ ಕ್ರೀಡಾ ಸಚಿವರ ಗಮನ ಸೆಳೆದು ಯೋಜನೆ ರೂಪಿಸಲಾಗುವುದು
ಮನೋಹರ ತಹಸೀಲ್ದಾರ್‌
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT