ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಅಧಿಕಾರಿಗೆ ವಾರ್ಡ್ ಉಸ್ತುವಾರಿ

Last Updated 20 ಮೇ 2017, 5:27 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೇಂದ್ರವಾಗಿ 20 ವರ್ಷಗಳು ಸಮೀಪಿಸುತ್ತಿರುವ ‘ಹಾವೇರಿ ನಗರ’ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹಿಂದುಳಿದ ಹಾವೇರಿ ನಗರದ ಅಭಿವೃದ್ಧಿಗೆ ಜಿಲ್ಲಾಡಳಿತ ವಿನೂತನ ಯೋಜನೆ ರೂಪಿಸುತ್ತಿದೆ. ವಾರ್ಡ್‌ಗಳ  ಸಮಸ್ಯೆ, ನೀರು, ನೈರ್ಮಲ್ಯ ಸೇರಿದಂತೆ ಸಮಗ್ರ ಉಸ್ತುವಾರಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಹಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ಆ ಮೂಲಕ ‘ಜನಸ್ನೇಹಿ ಆಡಳಿತ’ ಹಾಗೂ ‘ಅಭಿವೃದ್ಧಿಗೆ ವೇಗ’ಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ.

24 ಆಗಸ್ಟ್ 1997ರಲ್ಲಿ ಹಾವೇರಿಯು ಜಿಲ್ಲಾ ಕೇಂದ್ರದ ಸ್ಥಾನಕ್ಕೇರಿತು. ಅಂದು ‘ಪುರಸಭೆ’ ಆಗಿದ್ದ ಹಾವೇರಿ ನಗರವು  5 ಡಿಸೆಂಬರ್ 2003ರಲ್ಲಿ ‘ನಗರಸಭೆ’ಯ ದರ್ಜೆಗೆ ಏರಿತು. ಆದರೆ, ಅಭಿವೃದ್ಧಿ ಇನ್ನೂ ಕುಂಠಿತ.

ಬೇಸತ್ತ ಜನತೆ:  ‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತಿನಂತೆ ನಗರಸಭೆಯ ಆಂತರಿಕ ಗುದ್ದಾಟದಲ್ಲಿ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ವೈಯಕ್ತಿಕ ಹಿತಾಸಕ್ತಿಗಳು, ಹಳೇ ಕಡತಗಳು, ಬೆಂಬಲಿಗರ ಕೆಲಸಗಳ ಕುರಿತ ‘ಹಗ್ಗ–ಜಗ್ಗಾಟ’ದಲ್ಲಿ ಜನತೆಗೆ ನೀರು, ಸ್ವಚ್ಛತೆ ಕುರಿತು ಸ್ಪಂದಿಸುವವರೇ ಇಲ್ಲದಾಗಿದೆ’ ಎಂದು ಜನತೆ ಶಪಿಸುತ್ತಿದ್ದಾರೆ.

‘ಜಿಲ್ಲೆಯ ಇತರ ನಗರ, ಪಟ್ಟಣಗಳು ತಕ್ಕಮಟ್ಟಿನ ಅಭಿವೃದ್ಧಿ ಕಂಡರೂ, ಜಿಲ್ಲಾ ಕೇಂದ್ರ ಮಾತ್ರ ಹಿಂದುಳಿದಿದೆ. ‘ಹಾವೇರಿಯಲ್ಲಿ ಹಾಯ್‌ ಬಾರ್‍ದು...’ ಎಂಬ ರೂಢಿ ಮಾತು ಇನ್ನೂ ಜೀವಂತವಾಗಿದೆ’ ಎನ್ನುತ್ತಾರೆ ನಗರ ನಿವಾಸಿ ಶಿವಯೋಗಿ ಬೆನ್ನೂರ ಮತ್ತಿತರರು.

‘ಈ ಬಗ್ಗೆ ದಶಕಗಳಿಂದಲೇ ನಾವು ಹೇಳುತ್ತಾ ಬಂದಿದ್ದೇವೆ. ಆದರೆ, ಯಾರೂ ಸ್ಪಂದಿಸುತ್ತಿರಲಿಲ್ಲ. ಸಚಿವರು ಹಾಗೂ ಜಿಲ್ಲಾಡಳಿತ ಹೆಜ್ಜೆ ಇಟ್ಟರೆ, ಸಂಘ ಸಂಸ್ಥೆಗಳು, ಬಳಗಗಳು, ಜನತೆ ಸಹಕರಿ ಸುತ್ತೇವೆ’ ಎನ್ನುತ್ತಾರೆ ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಮತ್ತಿತರರು.    

ಅಧಿಕಾರಿಗಳ ನೇಮಕ: ಜಿಲ್ಲಾ ಕೇಂದ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತಿ ವಾರ್ಡ್‌ಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಆದೇಶ ಹೊರಡಿಸಿದ್ದಾರೆ.

‘ನಗರದ ಸ್ಥಳೀಯ ಸಂಸ್ಥೆಯ ವಿವಿಧ ಕಾಮಗಾರಿ, ಸ್ವಚ್ಛತೆ, ಶೌಚಾಲಯಗಳ ನಿರ್ಮಾಣ ಹಾಗೂ ವಿವಿಧ ಪ್ರಗತಿಪರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅವಶ್ಯವಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

ಅಭಿವೃದ್ಧಿಗೆ ಬದ್ಧ: ‘ನನ್ನ ಅವಧಿಯಲ್ಲಿ ಸರ್ಕಾರದಿಂದ ಹಲವಾರು ಯೋಜನೆ ಹಾಗೂ ಕಾಮಗಾರಿಗಳನ್ನು ನಗರ ಕೇಂದ್ರಕ್ಕೆ ತಂದಿದ್ದೇನೆ. ಸಾಕಷ್ಟು ಕಾಮಗಾರಿ ನಡೆದಿವೆ. ಆದರೆ, ಕೆಲವು ಅನುಷ್ಠಾನ ಹಂತದಲ್ಲಿ ಯಶಸ್ಸು ಕಾಣದ ನೋವಿದೆ.

ಹೀಗಾಗಿ, ಅಭಿವೃದ್ಧಿ ಕಾಮಗಾರಿ ವೇಗಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದೇನೆ. ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ನಾಗರಿಕರ ಸಹಕಾರ ಸಿಗುವ ವಿಶ್ವಾಸ ಇದೆ. ಮುಂದಿನ ಆರರಿಂದ ಏಳು ತಿಂಗಳಲ್ಲಿ ಬದಲಾವಣೆ ಕಾಣಲಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT