ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಡ್ಯಾಮ್‌ ಒಡೆದು ನೀರು ಪೋಲು

Last Updated 20 ಮೇ 2017, 5:33 IST
ಅಕ್ಷರ ಗಾತ್ರ

ಕನಕಪುರ: ನೀರು ಸಂಗ್ರಹಣೆ ಸಲುವಾಗಿ ನರೇಗಾ ಅಡಿ ನಿರ್ಮಾಣವಾಗಿದ್ದ ನಾಲ್ಕು ಚೆಕ್‌ ಡ್ಯಾಂಗಳು ಒಡೆದು ಹಾನಿಗೀಡಾದ ಘಟನೆ ತಾಲ್ಲೂಕಿನ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹಳ್ಳದಲ್ಲಿ ಗುರುವಾರ ರಾತ್ರಿ ನಡೆದಿದೆ.

ಅದರಂತೆ ಎನ್‌.ಎಚ್‌. 209 ರಸ್ತೆಗೆ ಹೊಂದಿಕೊಂಡಂತೆ ಸಾತನೂರು ಗ್ರಾಮದವರೆಗೂ ಹರಿದು ಹೋಗುವ ದೊಡ್ಡ ಹಳ್ಳಕ್ಕೆ ಸಾಲಾಗಿ ಸುಮಾರು ₨  60 ಲಕ್ಷ ವೆಚ್ಚದಲ್ಲಿ ಐದಕ್ಕೂ ಹೆಚ್ಚು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ನಾಲ್ಕು ಡ್ಯಾಂ ಒಡೆದು ತುಂಬಿದ್ದ ಎಲ್ಲಾ ನೀರು ವ್ಯರ್ಥವಾಗಿ ಹರಿದು ಹೋಗಿದೆ, ಮತ್ತೊಂದು ಚೆಕ್‌ ಡ್ಯಾಂ ನಿರ್ಮಾಣ ಕಾರ್ಯ ಈಗಷ್ಟೇ ಪ್ರಾರಂಭವಾಗಿದೆ.

ಅಂತರ್ಜಲ ಮಟ್ಟ ಸುಧಾರಣೆಯ ಸಲುವಾಗಿ ಕನಕಪುರ ತಾಲ್ಲೂಕಿನಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಸದ ಡಿ.ಕೆ.ಸುರೇಶ್‌ ನೇತೃತ್ವದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕನಿಷ್ಠ 50 ಚೆಕ್‌ ಡ್ಯಾಂ ನಿರ್ಮಾಣಕ್ಕೆ ಯೋಜನೆ ಹಾಕಿ ಕೊಳ್ಳಲಾಗಿದೆ.

ಆದರೆ ಕಳಪೆ ಕಾಮಗಾರಿ ಹಾಗೂ ಕ್ರಮಬದ್ಧವಾಗಿ ನಿರ್ಮಾಣ ಮಾಡದಿ ಕಾರಣ ನಾಲ್ಕೂ ಚೆಕ್‌ಡ್ಯಾಂಗಳು ಒಡೆದು ಹಾಳಾಗಿವೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

‘ಕಾಮಗಾರಿ ಪೂರ್ಣಗೊಂಡು ಮೊದಲ ಸಾರಿ ಬಂದ ಮಳೆಯ ನೀರಿಗೆ ಚೆಕ್‌ ಡ್ಯಾಂ ಒಡೆದು ಹೋಗುತ್ತದೆ ಎಂದರೆ ಯಾವ ಗುಣಮಟ್ಟದಲ್ಲಿ ಕಾಮ ಗಾರಿ ನಿರ್ಮಾಣ ಮಾಡಿರಬೇಕು. ಎಂಜಿನಿಯರ್‌  ಯಾವ ರೀತಿಯಲ್ಲಿ ಯೋಜನೆ ಸಿದ್ಧಪಡಿಸಿ ಕೊಟ್ಟಿರಬೇಕು’ ಎಂದು ಸ್ಥಳೀಯರು ಪ್ರಶ್ನಿಸಿದರು.

ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದವರಿಂದ ಹಣ ವಸೂಲಿ ಮಾಡಿ ಚೆಕ್‌ ಡ್ಯಾಂ ಮರು ನಿರ್ಮಾಣ ಮಾಡಬೇಕು, ಯೋಜನೆಯ ವೈಫಲ್ಯಕ್ಕೆ ಕಾರಣರಾದ ಅಭಿವೃದ್ಧಿ ಅಧಿಕಾರಿ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೋಡಿ ಹರಿದ ಕೆರೆ
ಚನ್ನಪಟ್ಟಣ: ಗುರುವಾರ ರಾತ್ರಿ ಬಿದ್ದ ಭಾರೀ ಮಳೆಗೆ ತಾಲ್ಲೂಕಿನ ಸಿಂಗರಾಜ ಪುರ ಕೆರೆ ತುಂಬಿ ಕೋಡಿ ಹರಿದಿದೆ.

ಮೂರು ದಿನಗಳ ಹಿಂದೆ ಬಿದ್ದಿದ್ದ ಮಳೆಗೆ ಕೆರೆಗೆ ಸ್ವಲ್ಪ ನೀರು ಬಂದಿತ್ತು. ರಾತ್ರಿ ಬಿದ್ದ ಭಾರಿ ಮಳೆಗೆ ಒಂದೇ ರಾತ್ರಿಯಲ್ಲಿ ಕೆರೆ ಕೋಡಿ ಹರಿದಿರುವುದು ದಾಖಲೆಯಾಗಿದೆ. ಕೋಡಿ ಹರಿದಿರುವ ನೀರು ತಾಲ್ಲೂಕಿನ ಬಂಡೂರು ಕೆರೆಗೆ ಹರಿದಿದೆ.

ಕಳೆದ ವರ್ಷ  ಈ ಕೆರೆಗೆ ಕಣ್ವ ಏತ ನೀರಾವರಿ ಯೋಜನೆಯಡಿ ನೀರು ಹರಿಸಲಾಗಿತ್ತು. ಒಂದು ಬಾರಿ ನೀರು ಹರಿದು ಕೆರೆ ತುಂಬಿತ್ತು. ಆದರೆ ಬೇಸಿಗೆ ಕಾಲವಾದ್ದರಿಂದ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿತ್ತು. ಈಗ ಮಳೆಯಿಂದ ಒಂದೇ ರಾತ್ರಿಯಲ್ಲಿ ಕೆರೆ ಕೋಡಿ ಹರಿದಿದೆ.

ಈ ಭಾಗದಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಸಣ್ಣಪುಟ್ಟ ಕಟ್ಟೆಗಳು ತುಂಬಿವೆ. ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದೇ ವೇಳೆ ಬೀಸಿದ ಗಾಳಿಗೆ ತೆಂಗಿನ ಮರ ಸೇರಿದಂತೆ ಇತರ ಮರಗಳು ಸಹ ಧರೆಗೆ ಉರುಳಿವೆ.

ಉತ್ತಮ ಮಳೆ: ಗುರುವಾರ ರಾತ್ರಿ ಚನ್ನಪಟ್ಟಣ ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆಯಾಗಿದೆ. ಸುಮಾರು 44 ಮಿ.ಮೀ. ಮಳೆಯಾಗಿ ರುವುದಾಗಿ ಹವಾಮಾನ ಇಲಾಖೆ ವರದಿ ತಿಳಿಸಿದೆ.

ತಾಲ್ಲೂಕಿನ ಸಿಂಗರಾಜಪುರ, ಮೆಣಸಿಗನಹಳ್ಳಿ, ಬಿ.ವಿ.ಹಳ್ಳಿ, ಕೋಡಂಬಹಳ್ಳಿ, ಎಲೆತೋಟದಹಳ್ಳಿ, ಮತ್ತೀಕೆರೆ, ಬೈರಾಪಟ್ಟಣ, ಮುದುಗೆರೆ, ಚಕ್ಕೆರೆ, ಬೇವೂರು, ನಾಗವಾರ, ದಶವಾರ, ಅಕ್ಕೂರು ಹೊಸಹಳ್ಳಿ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಉತ್ತಮ ಮಳೆಯಾಗಿದೆ. ಉತ್ತಮ ಮಳೆ ಯಾದರೂ ಸಿಂಗರಾಜಪುರ ಉಳಿದಂತೆ ಬೇರೆಲ್ಲೂ ಕೆರೆ ಕಟ್ಟೆಗಳಿಗೆ ನೀರು ಬಂದಿಲ್ಲ.

ಕೆಲವು ಸಣ್ಣಪುಟ್ಟ ಕಟ್ಟೆಗಳಿಗೆ ನೀರು ಬಂದಿವೆ. ಹಳ್ಳ ಕಾಲುವೆಗಳಲ್ಲಿ ನೀರು ಹರಿದಿದೆ. ಕೆಲವೆಡೆ ಮರಗಳು ಧರೆಗೆ ಉರುಳಿವೆ.

ಮೇ 16 ರಂದು ರಾತ್ರಿಯೂ ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆ ಯಾಗಿತ್ತು. ಅಂದು ಚಕ್ಕೆರೆಯಲ್ಲಿ 67.8 ಮಿ.ಮೀ. ಹಾಗೂ ಸಿಂಗರಾಜಿಪುರದಲ್ಲಿ 66 ಮಿ.ಮೀ. ಮಳೆಯಾಗಿತ್ತು. ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭೂಮಿ ಹದಗೊಳಿಸುವ ಕಾರ್ಯಕ್ಕೆ ರೈತರು ಹರ್ಷಚಿತ್ತರಾಗಿದ್ದಾರೆ.

ಮುಂಗಾರು ಪೂರ್ವ ಮಳೆಯ ಅಬ್ಬರ
ರಾಮನಗರ:
ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆಯ ಅಬ್ಬರ ಹೆಚ್ಚಾಗಿದೆ. ನಾಲ್ಕೂ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಇದರಿಂದ ತಕ್ಕಮಟ್ಟಿನ ಹಾನಿಯೂ ಆಗಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 34.8 ಮಿಲಿಮೀಟರ್‌ನಷ್ಟು ಮಳೆ ಸುರಿದಿದೆ. ಈ ತಿಂಗಳಿನಲ್ಲಿ ವಾಡಿಕೆ ಮಳೆ 88.2 ಮಿ.ಮೀಗೆ ಪ್ರತಿಯಾಗಿ ಈವರೆಗೆ ಒಟ್ಟು 123 ಮಿ.ಮೀನಷ್ಟು ದಾಖಲೆ ಮಳೆಯಾಗಿದೆ.

ಕನಕಪುರ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಮಳೆಯಾಗುತ್ತಿದೆ.

ಗುರುವಾರ ರಾತ್ರಿ ಕನಕಪುರ ಹೋಬಳಿಯಲ್ಲಿ 50 ಮಿ.ಮೀ, ದೊಡ್ಡ ಮರಳವಾಡಿ–27, ಹಾರೋಹಳ್ಳಿ–22, ಕೋಡಿಹಳ್ಳಿ–18, ಸಾತನೂರು–43 ಹಾಗೂ ಉಯ್ಯಂಬಳ್ಳಿ ಸುತ್ತಮುತ್ತ 23 ಮಿ.ಮೀ ನಷ್ಟು ಮಳೆಯಾಗಿದೆ.

ಚನ್ನಪಟ್ಟಣ ಹೋಬಳಿಯಲ್ಲಿ 44 ಮಿ.ಮೀ., ಮುದುಗೆರೆ–31 ಹಾಗೂ ಅಕ್ಕೂರು–ಹೊಸಹಳ್ಳಿ ಸುತ್ತಮುತ್ತ 65 ಮಿ.ಮೀ. ಮಳೆಯಾಗಿದೆ.

ಮಾಗಡಿ ತಾಲ್ಲೂಕಿನಲ್ಲೂ ವರುಣ ಅಬ್ಬರಿಸಿದ್ದಾನೆ. ಮಾಗಡಿ–19, ಕುದೂರು–40, ಚಂದುರಾಯನಹಳ್ಳಿ–29, ಸೋಲೂರು–23 ಹಾಗೂ ತಿಪ್ಪಸಂದ್ರದಲ್ಲಿ  62 ಮಿಲಿಮೀಟರ್‌ನಷ್ಟು ಮಳೆಯಾಗಿದೆ.

ರಾಮನಗರ ತಾಲ್ಲೂಕಿನ ರಾಮನಗರ ಹೋಬಳಿಯಲ್ಲಿ 45 ಮಿ.ಮೀ, ಬಿಡದಿ–55, ಕೈಲಾಂಚ–50 ಹಾಗೂ ಕೂಟಗಲ್‌ ಹೋಬಳಿಯಲ್ಲಿ 33 ಮಿಲಿಮೀಟರ್‌ನಷ್ಟು ಮಳೆ ಆಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ–ಅಂಶಗಳು ತಿಳಿಸಿವೆ.

50 ಚೆಕ್‌ಡ್ಯಾಂ ನಿರ್ಮಾಣ
ಸಾತನೂರು ಗ್ರಾಮ ಪಂಚಾಯಿತಿಯಲ್ಲಿ 2016ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಬಹುತೇಕ ಜಾಬ್‌ ಕಾರ್ಡ್‌ಗಳನ್ನು ಬಳಸಿ 50 ಚೆಕ್‌ ಡ್ಯಾಂ ನಿರ್ಮಾಣ ಮಾಡಲಾಗಿದೆ. ಸುಮಾರು ₹1.5 ಕೋಟಿಯಷ್ಟು ನರೇಗಾ ಹಣ ಚೆಕ್‌ ಡ್ಯಾಂ ನಿರ್ಮಾಣಕ್ಕೆ ವಿನಿಯೋಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT