ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಕ್ತ ಮುಂಗಾರು ‘ಸಿರಿಧಾನ್ಯಗಳ ವರ್ಷ’

Last Updated 20 ಮೇ 2017, 6:00 IST
ಅಕ್ಷರ ಗಾತ್ರ

ಕುಷ್ಟಗಿ: ಸಿರಿಧಾನ್ಯಗಳನ್ನು ಪುನಃ ಬಿತ್ತಿ ಬೆಳೆಯುವ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸಲು ಮುಂದಾಗಿರುವ ಕೃಷಿ ಇಲಾಖೆ ಮುಂಗಾರಿನಲ್ಲಿ ಆಸಕ್ತ ರೈತರನ್ನು ಗುರುತಿಸಿ 125 ಎಕರೆ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ಸಜ್ಜಾಗಿದೆ.

ಕಳೆದ ವರ್ಷ ರಾಷ್ಟ್ರೀಯ ಬೆಳೆಕಾಳು ವರ್ಷ ಎಂಬ ಘೋಷ ವಾಕ್ಯದೊಂದಿಗೆ ತೊಗರಿ ಬೆಳೆಯನ್ನು ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗಿತ್ತು. ಅದೇ ರೀತಿ ಈ ವರ್ಷ  ‘ಸಿರಿಧಾನ್ಯಗಳ ವರ್ಷ’ ಎಂಬ ಘೋಷವಾಕ್ಯದೊಂದಿಗೆ  ಕೃಷಿ ಇಲಾಖೆ ರೈತರಿಗೆ ಸಣ್ಣ ಪ್ರಮಾಣದಲ್ಲಿ ಸಿರಿಧಾನ್ಯಗಳ ಬೀಜಗಳನ್ನು ವಿತರಿಸಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾಹಿತಿ ನೀಡಿದರು.

ಸಿರಿಧಾನ್ಯಗಳಾದ ಸಾವೆ, ಬರಗು, ಹಾರಕ ಮತ್ತು ಕೊರಲೆ ಬೀಜಗಳನ್ನು ಸಂಗ್ರಹಿಸಲಾಗಿದೆ. ಪ್ರಾಯೋಗಿಕವಾಗಿ ಸಿರಿಧಾನ್ಯಗಳನ್ನು ಬೆಳೆಯುವ ಆಸಕ್ತಿ ಹೊಂದಿರುವ ರೈತರನ್ನು ಗುರುತಿಸಿ ಬೀಜಗಳ ಉತ್ಪಾದನೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಉಂಟಾಗುವ ಪ್ರಯೋಜನ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ. ಬೆಳೆದ ಬೀಜಗಳನ್ನು ರೈತರು ತಮ್ಮಲ್ಲಿಯೇ ಪರಸ್ಪರ ವಿನಿಮಯ ಮಾಡಿಕೊಳ್ಳುವುದಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಮೆಕ್ಕೆಜೋಳದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಧಿಕ ಪೌಷ್ಠಿಕಾಂಶ, ನಾರಿನ ಅಂಶ ಹೊಂದಿರುವ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳು ಅಪರೂಪವಾಗುತ್ತಿವೆ. ಸಿರಿಧಾನ್ಯಗಳ ಅಕ್ಕಿ ಮತ್ತಿತರೆ ಮೌಲ್ಯವರ್ಧಿತ ಆಹಾರ ವಸ್ತುಗಳಿಗೆ ಬಹಳಷ್ಟು ಬೇಡಿಕೆ ಇದೆ. ಆದರೆ, ಬೆಳೆಯುವವರೇ ಇಲ್ಲದಂತಾಗಿದೆ. ಹಾಗಾಗಿ ಕೃಷಿ ಇಲಾಖೆ ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಮುಂದಾಗಿದೆ ಎಂದು ಹೇಳಿದರು.

ವಿವಿಧ ಗ್ರಾಮಗಳ ರೈತರು, ಕೃಷಿ ಇಲಾಖೆ ತಾಂತ್ರಿಕ ಶಾಖೆಯ ಅಧಿಕಾರಿ ಮೋಹನ್‌ಸಿಂಗ್‌, ನಾಗನಗೌಡ ಪಾಟೀಲ, ಪ್ರಕಾಶ್‌ ತಾರಿವಾಳ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT