ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಸರ್ವಜ್ಞನಲ್ಲ: ಎಸ್‌.ದಿವಾಕರ

Last Updated 20 ಮೇ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತಿ ಸರ್ವಜ್ಞ, ಮಹಾ ಧೀಮಂತ ಎನ್ನುವುದು ಬೋಗಸ್‌ ಕಲ್ಪನೆ.’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಕಥೆಗಾರ ಎಸ್‌.ದಿವಾಕರ ಅವರು ಸಭಿಕರೊಬ್ಬರ  ಪ್ರಶ್ನೆಗೆ ಹೀಗೆ ಉತ್ತರಿಸಿದರು.

‘ಎಲ್ಲ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ, ಅಗತ್ಯ ಬಿದ್ದರೆ ಸಲಹೆ, ಸೂಚನೆ ನೀಡುವ ಸಾಮರ್ಥ್ಯ ಸಾಹಿತಿಗಳಿಗಿದೆ ಎನ್ನುವ ಮನೋಭಾವ ಇದೆ. ಅಮೆರಿಕ ಸೇರಿದಂತೆ ಯಾವುದೇ ದೇಶದಲ್ಲೂ ಇದನ್ನು ಕಾಣಲು ಸಾಧ್ಯವಿಲ್ಲ’ ಎಂದರು.

‘ಸಹಿಷ್ಣುತೆ, ಅಸಹಿಷ್ಣುತೆ ಎಂಬುದು ಸಂಕೀರ್ಣ ವಿಷಯ. ಸಾಹಿತಿಗಳ ನಡುವೆ ಎಡ, ಬಲ ಎಂಬ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ಆದರೆ, ಮಧ್ಯಮ ಪಂಥದವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಸಹಿಷ್ಣುತೆ ಎನ್ನುವುದು ನವೋದಯ ಕಾಲದಲ್ಲೂ ಇತ್ತು’ ಎಂದು ಹೇಳಿದರು.

ವೈಯಕ್ತಿಕ ವಿಷಯಗಳ ಕುರಿತು ಮಾತನಾಡಿದ ಅವರು, ‘ನಾನು ಆರಂಭದಲ್ಲಿ ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋದಲ್ಲಿ ಆರು ತಿಂಗಳು ಕೆಲಸ ಮಾಡಿದೆ. 1964ರಲ್ಲಿ ಸುಧಾ ಪತ್ರಿಕೆಗೆ ಟೈಪಿಸ್ಟ್‌ ಆಗಿ ಕೆಲಸಕ್ಕೆ ಸೇರಿದೆ. ಪದವಿ ಓದುತ್ತಿದ್ದಾಗ ಕಮ್ಯುನಿಸ್ಟರ ಸಂಪರ್ಕ ಪಡೆದು ಪತ್ರಿಕೆಯೊಂದರಲ್ಲಿ ಮೂರು ವರ್ಷಗಳು ಕೆಲಸ ಮಾಡಿದೆ. ಬಳಿಕ ಅದಕ್ಕೆ ರಾಜೀನಾಮೆ ನೀಡಿದೆ’ ಎಂದರು.

‘ಸುಮತೀಂದ್ರ ನಾಡಿಗ ಅವರು ಮಲ್ಲಿಗೆ ಪತ್ರಿಕೆಯಲ್ಲಿ ಕೆಲಸ ಕೊಡಿಸಿದರು. ಬಳಿಕ ‘ಪ್ರಜಾವಾಣಿ’ ಬಳಗದ ಸುಧಾ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕನಾಗಿ ಎಂಟು ವರ್ಷಗಳು ಕೆಲಸ ಮಾಡಿದೆ. ಅಲ್ಲಿಂದ ಅಮೆರಿಕ ಕಾನ್ಸಲ್‌ನಲ್ಲಿ ಕನ್ನಡ ಸಂಪಾದಕರಾಗಿ 17 ವರ್ಷಗಳು ಕಾರ್ಯನಿರ್ವಹಿಸಿದೆ. ನಿವೃತ್ತಿ ಬಳಿಕ ಮತ್ತೆ ‘ಪ್ರಜಾವಾಣಿ’ ಪತ್ರಿಕೆಯ ಸಹಾಯಕ ಸಂಪಾದಕನಾಗಿ ಎರಡು ವರ್ಷಗಳು ಕೆಲಸ ಮಾಡಿದೆ’ ಎಂದು ಹೇಳಿದರು.

‘ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ. ಆರಂಭದಲ್ಲಿ 500ಕ್ಕೂ ಹೆಚ್ಚು ಕವನಗಳನ್ನು ಬರೆದೆ. ಎ.ಕೆ.ರಾಮಾನುಜನ್‌ ಅವರಿಗೆ ಕವನಗಳನ್ನು ನೀಡಿದೆ. ಅವರ ಅಭಿಪ್ರಾಯ ಪಡೆದ ಬಳಿಕ ಕವನ ಬರೆಯುವುದನ್ನು ನಿಲ್ಲಿಸಿದೆ’ ಎಂದರು.

‘ಬಳಿಕ ಸಂಗೀತ ಕಲಿಯಬೇಕೆಂಬ ಆಸೆ ಹುಟ್ಟಿತು. ಸಂಗೀತಗಾರ ಬಾಲಮುರಳಿ ಕೃಷ್ಣ ಅವರ ಬಳಿ ಒಂದು ವರ್ಷ ಇದ್ದೆ. ಅವರು ಸಂಗೀತದ ಬಗ್ಗೆ ಏನನ್ನೂ ಹೇಳಿಕೊಡಲಿಲ್ಲ, ನಾನೂ ಕಲಿಯಲಿಲ್ಲ. ಮುಂದೆ, ಚಿತ್ರಕಲೆ, ವ್ಯಂಗ್ಯಚಿತ್ರದ ಕಡೆಗೆ ಆಸಕ್ತಿ ಬೆಳೆಯಿತು. ಆದರೆ, ಅದೂ ನನಗೆ ಒಲಿಯುವುದಿಲ್ಲ ಎನಿಸಿತು’ ಎಂದರು.

‘ಈ ಮಧ್ಯೆ ಟಿ.ಎಸ್‌.ನಾಗಾಭರಣ ನಿರ್ದೇಶನದ ಗ್ರಹಣ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದೆ. ಗಿರೀಶ್‌ ಕಾಸವರಳ್ಳಿ ಅವರ ಘಟಶ್ರಾದ್ಧಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಸಿನಿಮಾ ಕ್ಷೇತ್ರವೂ ಸಾಕೆನಿಸಿತು’ ಎಂದು ವಿವರಿಸಿದರು.

‘ಇಂಗ್ಲಿಷ್‌ ಭಾಷೆಯ ಕಥೆಯನ್ನು ಅನುವಾದ ಮಾಡುವಂತೆ ಗೋಪಾಲಕೃಷ್ಣ ಅಡಿಗರು ಸೂಚಿಸಿದ್ದರು. ನಾನು ಅನುವಾದಿಸಿದ ಕಥೆಯನ್ನು ನೋಡಿ ತುಂಬಾ ಖುಷಿಪಟ್ಟರು. ಮುಂದೆ ನೊಬೆಲ್‌ ಪ್ರಶಸ್ತಿ ಪುರಸ್ಕೃತ 50 ಕಥೆಗಾರರ ಕಥೆಗಳನ್ನು ಅನುವಾದ ಮಾಡಿದೆ’  ಎಂದರು.

ನಾನು ತುಂಬಾ ಓದಿ ಕೆಟ್ಟೆ
‘ನಾನು ತುಂಬಾ ಓದಿ ಕೆಟ್ಟೆ. ಇದರಿಂದ ಒಳ್ಳೆಯ, ಹೊಸದನ್ನು ಬರೆಯಲು ಆಗುತ್ತಿಲ್ಲ. ನನಗಿಂತ ಕಡಿಮೆ ಓದಿದವರು ಉತ್ತಮ ಸಾಹಿತ್ಯವನ್ನು ರಚಿಸಿದ್ದಾರೆ. ನನಗಿಂತ ಸೋಮಾರಿ, ಬೇಜವಾಬ್ದಾರಿ ವ್ಯಕ್ತಿ ಮತ್ತೊಬ್ಬರಿಲ್ಲ. ಆದರೆ, ಪತ್ನಿ ಜಯಶ್ರೀ ಕಾಸರವಳ್ಳಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾಳೆ’ ಎಂದು ದಿವಾಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT