ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುಂಡಿ ಕೆರೆಗೆ ಶೀಘ್ರವೇ ಕಾಯಕಲ್ಪ: ಶಿವಣ್ಣನವರ

Last Updated 21 ಮೇ 2017, 7:27 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ): ‘ಅಸುಂಡಿ ಕೆರೆಯನ್ನು ಪುನಶ್ಚೇತನಗೊಳಿಸಿ, ನೀರು ತುಂಬಿಸುತ್ತೇನೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ತಾಲ್ಲೂಕಿನ ಕದರಮಂಡಲಗಿಯ ಅಸುಂಡಿ ಕೆರೆಯ ಬೆಳಕೆರೆ ಹಳ್ಳದಲ್ಲಿ ಶನಿವಾರ ನರೇಗಾ (ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ) ಅಡಿ ಕೂಲಿಕಾರರ ಜೊತೆ ಶ್ರಮದಾನ, ರೋಜಗಾರ್ ದಿನ, ಆರೋಗ್ಯ ತಪಾಸಣೆ, ಉದ್ಯೋಗದ ಅರಿವು, ಶೌಚಾಲಯ ಹಾಗೂ ಮನೆ ನಿರ್ಮಾಣಕ್ಕೆ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರ ಬೇಡಿಕೆಯಂತೆ ನಿಶ್ಚಿತವಾಗಿ ಕೆರೆ ಕಾಯಕಲ್ಪ ಮಾಡುತ್ತೇನೆ’ ಎಂದ ಅವರು, ‘530 ಎಕರೆ ವಿಸ್ತೀರ್ಣದ ಅಸುಂಡಿ ಕೆರೆಯನ್ನು ಮುಖ್ಯಮಂತ್ರಿಗಳಿಗೂ ತೋರಿಸಿದ್ದೇನೆ. ಕೆರೆ ಹೂಳೆತ್ತುವ ಕಾಮಗಾರಿಗೆ ಶೀಘ್ರದಲ್ಲೇ ಮಂಜೂರಾತಿ ನೀಡಲಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಅಧಿಕಾರಿಗಳೇ ಸ್ವತಃ ಜಮೀನಿಗಳಿದ್ದು ಜನರಿಗೆ ಭರವಸೆ ನೀಡುತ್ತಿರುವುದು ಉತ್ತಮ ಕಾರ್ಯ. ಹಾವೇರಿ ಭಾಗಕ್ಕಿಂತ ಬ್ಯಾಡಗಿಯಲ್ಲಿ ನರೇಗಾ ಕೆಲಸಕ್ಕೆ ಹೆಚ್ಚಿನ ಜನ ಬರುತ್ತಿದ್ದಾರೆ. ಇಲ್ಲಿ ಸಂಘಟನೆಗಳು ಒಳ್ಳೆ ಕೆಲಸ ಮಾಡುತ್ತಿವೆ’ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ. ಮಾತನಾಡಿ, ‘ನರೇಗಾ ಜಾಗೃತಿಗಾಗಿ ಜಿಲ್ಲೆಯಾದ್ಯಂತ ‘ಉದ್ಯೋಗ ಉತ್ಸವ ಅಭಿಯಾನ’ ಕೈಗೊಳ್ಳಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಅರಿವು, ಆರೋಗ್ಯ ತಪಾಸಣೆ, ಅಕ್ಷರ ಕಲಿಕೆ, ಬಯಲು ಬಹಿರ್ದೆಸೆ ನಿರ್ಮೂಲನೆ, ಶೌಚಾಲಯ ನಿರ್ಮಾಣದ ಮಹತ್ವದ ಸಾರಲಾಗುತ್ತಿದೆ’ ಎಂದರು.

‘ನೆಲ, ಜಲ ಹಾಗೂ ಪರಿಸರದ ಸಂರಕ್ಷಣೆಯು ಪ್ರತಿ ಪ್ರಜೆಯ ಕರ್ತವ್ಯ’ ಎಂದರು.ಜಿಲ್ಲಾ ಪಂಚಾಯ್ತಿ ಸಿ.ಇ.ಓ ಕೆ.ಬಿ.ಅಂಜನಪ್ಪ ಮಾತನಾಡಿ, ‘ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ಉದ್ಯೋಗ ನೀಡುವ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕೆಲಸ ಬೇಕಾದರೆ, ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಿ. ‘ನರೇಗಾ’ ಕೆಲಸದಲ್ಲಿ ಸಮಾನತೆ ಇದೆ. ಇಲ್ಲಿ ಗಂಡು–ಹೆಣ್ಣುಗಳಿಗೆ ಸಮಾನ ಸಂಬಳವಿದೆ. ಮೇಲುಕೀಳುಗಳ ಯಾವುದೇ ಭೇದಭಾವವಿಲ್ಲ’ ಎಂದರು.

ಗುರುತಿನ ಪತ್ರ: ‘ನರೇಗಾ’ ಕೂಲಿಕಾರರಿಗೆ ಗುರುತಿನ ಪತ್ರ ನೀಡಲಾಯಿತು. ‘ವನಶ್ರೀ ಕೂಲಿಕಾರ್ಮಿಕ ಸಂಘಟನೆಯು ರಾಜ್ಯದಲ್ಲೇ ಮೊದಲ ಬಾರಿಗೆ ಗುರತಿನ ಚೀಟಿ ಮಾಡಿ ನೀಡುತ್ತಿದೆ’ ಎಂದು ಸಂಸ್ಥೆಯ ಬಳಿಗಾರ ತಿಳಿಸಿದರು.ಶೌಚಾಲಯ ನಿರ್ಮಾಣ ಹಾಗೂ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ನೀಡಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶಕುಂತಲಾ ಪಟ್ಟಣಶೆಟ್ಟಿ, ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ತಹಶೀಲ್ದಾರ್ ಶಿವಶಂಕರ ನಾಯಕ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಸದಸ್ಯ ಗುಡ್ಡಪ್ಪ ಕೋಳೂರ, ಇ.ಓ. ಬಸವರಾಜ , ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜ, ಮುಖಂಡರಾದ ರವೀಂದ್ರ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೋಮವ್ವ ನಾಯ್ಕರ. ಉಪಾಧ್ಯಕ್ಷ ಮಲ್ಲಿಕಾರ್ಜುನ ಬಡಗಿರಿಯಣ್ಣನವರ, ಸದಸ್ಯರಾದ ರುದ್ರಮ್ಮ ನಂದಿಹಳ್ಳಿ, ಶಿವಪ್ಪ ವಡ್ಡರ, ಕಾಂತೇಶ ದಾಳೇರ, ಕಾಂತೇಶ ನಾಯ್ಕರ, ಚಂದ್ರಕಲಾ ಹಾವನೂರ, ತಿಪ್ಪಣ್ಣ ಕಾಟೇನಹಳ್ಳಿ, ರೇಣುಕಾ ದ್ಯಾವಣ್ಣನವರ, ಸುವರ್ಣಾ ಅಕ್ಕಿ, ಹನುಮಂತಪ್ಪ ಕುರಡಣ್ಣನವರ, ನೇತ್ರಾ ಹಿರಿಯಕ್ಕನವರ, ಪರಶುರಾಮ ಅಜ್ಜಮ್ಮನವರ, ಪ್ರೇಮಾ ಹಳ್ಳೇರ ಅಭಿವೃದ್ಧಿ ಅಧಿಕಾರಿ ರಹಮತ್‌ಬಿ, ಶಿಕ್ಷಕ ಬಿ.ಎಂ.ಜಗಾಪುರ ಉಪಸ್ಥಿತರಿದ್ದರು.

‘ಕೂಲಿ’ ಮಾಡಿದ ಡಿ.ಸಿ, ಶಾಸಕ, ಜಿ.ಪಂ ಅಧ್ಯಕ್ಷ, ಸಿಇಓ

ಕೆರೆಯ ಬೆಳಕೇರಿ ಹಳ್ಳದಲ್ಲಿ ಹೂಳೆತ್ತುವ ಕಾಮಗಾರಿ ವೇಳೆ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಅಂಜನಪ್ಪ ಅವರು ಕಾರ್ಮಿಕರೊಂದಿಗೆ ಕೆಲಸ ಮಾಡಿದರು.

ಹಾವೇರಿ ತಾಲ್ಲೂಕಿನ ಹೆಗ್ಗೇರಿ, ದೇವಿಹೊಸೂರು ಕೆರೆಗಳಲ್ಲಿ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ) ಕೂಲಿಕಾರರ ಜೊತೆ ಕೆಲಸ ಮಾಡಿ ಅವರನ್ನು ಹುರಿದುಂಬಿಸಿದರು. ಜಿಲ್ಲೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

‘ಜಿಲ್ಲಾಧಿಕಾರಿ ಮತ್ತು ಸಿಇಒ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವ ಅಧಿಕಾರಿ ಗಳನ್ನು ಬೆಂಬಲಿಸುವುದು ಜನಪ್ರತಿ ನಿಧಿಗಳ ಧರ್ಮ. ಅದಕ್ಕಾಗಿ ನಾನು ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಕೂಲಿ ಕೆಲಸದಲ್ಲಿ ಪಾಲ್ಗೊಂಡಿದ್ದೇವೆ’ ಎಂದು ಶಾಸಕ ಬಸವ ರಾಜ ಶಿವಣ್ಣನವರ ಪ್ರತಿಕ್ರಿಯಿಸಿದರು.

ಬಳಿಕ, ಆರೋಗ್ಯ ಶಿಬಿರ ದಲ್ಲಿ ಕೂಲಿಕಾರರನ್ನು ಸ್ವತಃ ಪರಿಶೀಲಿ ಸಿದ ಜಿಲ್ಲಾಧಿಕಾರಿ ವೆಂಕಟೇಶ್‌ (ವೈದ್ಯರೂ ಆಗಿದ್ದಾರೆ), ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋ ಗ್ಯದ ಬಗೆಗಿನ ಯಾವ ಅಂಶಗಳ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಅಲ್ಲಿದ್ದ ವೈದ್ಯರಿಗೆ ಸಲಹೆ ನೀಡಿದರು.

ಪ್ರವಾಸಿ ಮಂದಿರದ ಉಪಾಹಾರ ನಿರಾಕರಣೆ: ‘ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ಪ್ರವಾಸಿ ಮಂದಿರ (ಐ.ಬಿ.)ದಲ್ಲಿ ಟಿಫಿನ್‌ ವ್ಯವಸ್ಥೆ ಮಾಡಲಾಗಿದೆ’ ಎಂದು
ಅಲ್ಲಿದ್ದ ಸಿಬ್ಬಂದಿ ತಿಳಿಸಿದರು. ಆದರೆ, ಅದನ್ನು ನಿರಾಕರಿಸಿದ ಅಧಿ ಕಾರಿಗಳು ಮತ್ತು ಜನಪ್ರತಿ ನಿಧಿಗಳು ಕಾರ್ಮಿಕರ ಜೊತೆಯೇ ಉಪ್ಪಿಟ್ಟು ಹಾಗೂ ಶಿರಾ ಸವಿದರು.

ಬಳಿಕ ಮಾತನಾಡಿದ ಡಾ.ವೆಂಕಟೇಶ್‌, ‘ತಮಿಳು ನಾಡಿನ ಕೆಲವು ಗ್ರಾಮ ಪಂಚಾಯ್ತಿಗಳು ‘ನರೇಗಾ’ ಅಡಿಯಲ್ಲಿ ವಾರ್ಷಿಕ ₹ 5 ಕೋಟಿ ವಿನಿಯೋಗಿಸಿಕೊಂಡು ಅಭಿವೃದ್ಧಿ ಸಾಧಿಸಿವೆ. ಇಲ್ಲಿಯೂ ಬರಪೀಡಿತ ಪ್ರದೇಶದ ಜನತೆಗೆ ವಿಶ್ವಾಸ ತುಂಬುವುದು, ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಶಿಕ್ಷಣ, ಪರಿಸರ ಹಾಗೂ ಜಲಸಂರಕ್ಷಣೆ ಕುರಿತ ಜಾಗೃತಿ, ಸಮಾನತೆ ಮತ್ತಿತರ ಸಂದೇಶ ರವಾನಿಸಲು ‘ಕೂಲಿ’ ಮಾಡುತ್ತಿದ್ದೇನೆ. ನಾನೂ ರೈತ ಕುಟುಂಬದವನೇ’ ಎಂದು ಅವರು ಮುಗುಳ್ನಕ್ಕರು.

* *

‘ಕಾಯಕವೇ ಕೈಲಾಸ’ದ ಪರಿಕಲ್ಪನೆಯಂತೆ ‘ಕೂಲಿ’ ಮತ್ತು ‘ಕಾರ್ಪೊರೇಟ್’ ನಡುವೆ ಭೇದಭಾವ ಸಲ್ಲದು. ಎಲ್ಲೆಡೆ ವೃತ್ತಿಪರತೆಯೇ ಬಹುಮುಖ್ಯ
ಡಾ.ವೆಂಕಟೇಶ್‌ ಎಂ.ವಿ.
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT