ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋಗುತ್ತಿದೆ ಮಳೆ ನೀರು?

ನಗರಕ್ಕೆ ಬೇಕೇ ಇಲ್ಲ ಹೇಮಾವತಿ ನದಿ ನೀರು !
Last Updated 22 ಮೇ 2017, 5:13 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಬೀಳುವ ಮಳೆ ನೀರಿನ ಬಗ್ಗೆ ಎಂದಾದರೂ ನಾವು ಯೋಚಿಸಿದ್ದೇವೆಯೇ?  ಎಂಬ ಪ್ರಶ್ನೆಯನ್ನು ಹಲವು ಜಲತಜ್ಞರು ಕೇಳುತ್ತಿದ್ದಾರೆ.
‘ನಗರವು ಸುಮಾರು  48.6 ಚದರ ಕಿಲೋ ಮೀಟರ್‌ ವ್ಯಾಪ್ತಿ ಇದೆ. ಪ್ರತಿ ವರ್ಷ 520 ಮಿಲಿ ಮೀಟರ್‌ ವಾಡಿಕೆ ಮಳೆಯಾದರೂ 1.5 ಟಿಎಂಸಿ ಅಡಿ ನೀರು ಶೇಖರಣೆಯಾಗುತ್ತದೆ. ಈ ನೀರು ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಆಡಳಿತ ಉತ್ತರಿಸಬೇಕು’ ಎನ್ನುತ್ತಾರೆ ನಿವೃತ್ತ ಎಂಜಿನಿಯರ್‌ ರಾಮಚಂದ್ರಯ್ಯ.

‘ಕಟ್ಟಡಗಳು, ಡಾಂಬರ್ ರಸ್ತೆಗಳ ಕಾರಣಕ್ಕೆ ಮಳೆ ನೀರು ಇಂಗುವ ಪ್ರಮಾಣ ಕೂಡ ಕಡಿಮೆ. 0.50 ಟಿಎಂಸಿ ಅಡಿ ನೀರು ವ್ಯರ್ಥವಾದರೂ ಇನ್ನೂ 1 ಟಿಎಂಸಿ ಅಡಿಯಷ್ಟು ಮಳೆ ನೀರನ್ನು ಸಂಗ್ರಹಿಸಬಹುದು. ಇದು  ನಗರದ ಬುಗುಡನಹಳ್ಳಿ, ಹೆಬ್ಬಾಕ ಕೆರೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕಿಂತ ಹೆಚ್ಚು. ಈ ನೀರನ್ನು ಬಳಸಿಕೊಂಡರೆ ನಗರಕ್ಕೆ ಕುಡಿಯುವ ನೀರನ ಸಮಸ್ಯೆಯೇ ಬಾರದು’ ಎಂದು ವಿವರಿಸಿದರು.

‘ಯಾವಾಗಲೂ ಹೇಮಾವತಿ ನೀರಿನ ಬಗ್ಗೆಯೇ ಮಾತನಾಡುತ್ತೇವೆ. ಮಳೆ ನೀರಿನ ಬಗ್ಗೆ ಈವರೆಗೂ ಒಬ್ಬರೂ ಚರ್ಚೆ ಮಾಡಿಲ್ಲ. ಪಾಲಿಕೆಯೂ ಈ ಸಂಬಂಧ ಮೌನವಾಗಿದೆ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಅರಿವು ಇದ್ದಂತೆ ಕಾಣುವುದಿಲ್ಲ. ಮಳೆ ನೀರನ್ನು ಸರಿಯಾಗಿ ಸಂಗ್ರಹಿಸಿದರೆ ನಗರಕ್ಕೆ ಕುಡಿಯುವ ನೀರಿಗಾಗಿ ಹೇಮಾವತಿ ನದಿ ನೀರು ಬೇಕಾಗಿಲ್ಲ’ ಎಂದು ಹೇಮಾವತಿ ನಾಲಾ ವಲಯದ ಎಂಜಿನಿಯರ್ ಒಬ್ಬರು ವಿಶ್ಲೇಷಿಸುವರು.

‘ನೂರಾರು ಕಿಲೋ ಮೀಟರ್‌ ದೂರದ ನದಿಗಳಿಂದ ನೀರು ತಂದು ಜನರ ಬಾಯಾರಿಕೆ ನೀಗಿಸುತ್ತೇವೆ ಎಂಬುದನ್ನು ಮೊದಲು ಬಿಡಬೇಕು. ನಮ್ಮೂರಿನಲ್ಲಿ ಬೀಳುವ ಮಳೆ ನೀರಿನ ಹನಿ, ಹನಿಯ ಲೆಕ್ಕ ಮಾಡುವುದು ಕಲಿತರೆ ನೀರಿನ ಸಮಸ್ಯೆಯೇ ಬಾರದು’ ಎಂದು ಅವರು ಹೇಳಿದರು.

‘ಮನೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಮಳೆ ನೀರು ಸಂಗ್ರಹವನ್ನು ಕಡ್ಡಾಯ ಮಾಡಬೇಕು. ನಗರ ಅತಿವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ಮಳೆ ನೀರನ್ನು ಕುಡಿಯಲು ಆಶ್ರಯಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎಂದು ಮಾನವ ಹಕ್ಕುಗಳ ಹೋರಾಟಗಾರ ರಮೇಶ್‌ಬಾಬು ಅಭಿಪ್ರಾಯ ವ್ಯಕ್ತಪಡಿಸುವರು.

‘ಮಳೆ ನೀರು ಚರಂಡಿಗಳಿಗೆ ಸೇರುತ್ತಿದೆ. ಈ ಚರಂಡಿ ನೀರು ಎಲ್ಲಿಗೆ ಹೋಗಿ ತಲುಪುತ್ತಿದೆ ಎಂಬ ಬಗ್ಗೆ ಪಾಲಿಕೆಯಲ್ಲಿ ನೀಲ ನಕ್ಷೆಯೇ ಇಲ್ಲ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ’ ಎಂದು ಪಾಲಿಕೆಯ ಎಂಜಿನಿಯರೊಬ್ಬರು ಮಾಹಿತಿ ನೀಡುವರು.

‘ಮಳೆ ನೀರು ಕೆರೆಗಳಿಗೆ ಹರಿಯಬೇಕು. ಮಳೆ ಲೆಕ್ಕ ಹಿಡಿದರೆ ನಗರದಲ್ಲಿರುವ ಎಲ್ಲ ಕೆರೆಗಳೂ ತುಂಬಬೇಕು. ಆದರೆ ಒಂದೇ ಒಂದು ಕೆರೆಯೂ  ತುಂಬುತ್ತಿಲ್ಲ. ಇದು ಮಳೆ ನೀರು ಕೆರೆಗೆ ಹೋಗುತ್ತಿಲ್ಲ ಎಂಬುದಕ್ಕೆ ಸಾಕ್ಷಿ. ಇನ್ನಾದರೂ ಈ ಬಗ್ಗೆ ಚಿಂತಿಸಬೇಕು’  ಎಂದರು.

ಮಳೆ ನೀರು ತೊಟ್ಟಿ ನಿರ್ಮಿಸಿ!
‘ನಗರದಲ್ಲಿ ಜಾಗ ಇರುವ ಕಡೆಗಳಲ್ಲಿ ಮಳೆ ನೀರು ಸಂಗ್ರಹದ ತೊಟ್ಟಿಗಳನ್ನು ನಿರ್ಮಿಸಬೇಕು. ಕಟ್ಟಡಗಳ ನೀರು ಶುದ್ಧೀಕರಣಗೊಂಡು ಈ ತೊಟ್ಟಿಗಳಿಗೆ ಹೋಗುವಂಥ ಯೋಜನೆ ರೂಪಿಸಬೇಕು’ ಎಂದು ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್‌.ರಮೇಶ್‌ ಸಲಹೆ ನೀಡುವರು.

‘ಪ್ರತಿ ಬೇಸಿಗೆಯಲ್ಲಿ ಕೋಟ್ಯಂತ ರೂಪಾಯಿ ಖರ್ಚು ಮಾಡಿ  ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ. ಸಾಕಷ್ಟು ಕಡೆ ನೀರು ದೊರೆಯುತ್ತಿಲ್ಲ. ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಕೊಳವೆಬಾವಿ ಕೊರೆಸಲು ಬಳಸುತ್ತಿರುವ ಹಣದಲ್ಲಿ ಅರ್ಧದಷ್ಟು ಹಣವನ್ನು ಬಳಸಿದರೂ ಮಳೆ ನೀರು ತೊಟ್ಟಿಗಳನ್ನು ನಿರ್ಮಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಮಳೆ ನೀರೇ ಪರಿಹಾರ: ‘ಮಳೆ ನೀರು ಒಂದೇ ಪರಿಹಾರ ಮಾರ್ಗ. ಆದರೆ ನಮ್ಮ ಮಾತು ಯಾರು ಕೇಳುತ್ತಾರೆ. ಸದಸ್ಯರು ಒಂದು ರೀತಿಯ ಜನ. ಅವರಿಗೆ ಬೇಕಿರುವುದನ್ನೇ  ಅವರು ಮಾಡುವುದು. ಅವರಿಗೆ ಲಾಭ ಆಗುವುದನ್ನು ನೋಡಿಕೊಂಡು ಕೆಲಸ ಮಾಡುತ್ತಾರೆ.  ಜನರಿಗೆ ಅಗತ್ಯವಿರುವ ಉತ್ತಮ ಯೋಜನೆಗಳು ಬೇಕಿಲ್ಲ’ ಎಂದು ಪಾಲಿಕೆ ಎಂಜಿನಿಯರೊಬ್ಬರು ನೊಂದು ನುಡಿದರು.

ಪ್ರತ್ಯೇಕ ಕೊಳವೆ ಮಾರ್ಗ
‘ನಗರದಲ್ಲಿ ಬೀಳುವ ಮಳೆ ನೀರನ್ನು ಕೆರೆಗಳಿಗೆ ಪೂರೈಸಲು ಪ್ರತ್ಯೇಕವಾಗಿ ಕೊಳವೆ ಮಾರ್ಗ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿಗೆ ತರಬೇಕು’ ಎನ್ನುತ್ತಾರೆ ನಿವೃತ್ತ ಎಂಜಿನಿಯರ್‌ ರಾಮಚಂದ್ರಯ್ಯ.

‘ಮನೆಗಳು, ಕಟ್ಟಡಗಳ ಚಾವಣೆಯಿಂದ ಆಯಾ ಮನೆಯವರು,  ಮಾಲೀಕರು ಈ ಕೊಳವೆ ಮಾರ್ಗಕ್ಕೆ ಮಳೆ ನೀರನ್ನು ಸಂಪರ್ಕಿಸಬೇಕು. ಈ ನೀರು ನೇರವಾಗಿ ಕೆರೆಗಳಿಗೆ ಸೇರಬೇಕು. ಇದರಿಂದ ನಗರದ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಚಾವಣೆಯ ನೀರನ್ನು  ಚರಂಡಿಗಳಿಗೆ ಬಿಡಲಾಗುತ್ತಿದೆ. ಈ ಚರಂಡಿಗಳು ಜಾಲ ಸರಿಯಾಗಿಲ್ಲ. ಹೀಗಾಗಿ ಈ ನೀರು ಕೆರೆಗಳನ್ನು ಸೇರುತ್ತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT