ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಪರ ಕನಸು ಬಿತ್ತಿದ ಸಮ್ಮೇಳನ

ಬೆಳೆಗಾರರ ಗಮನಸೆಳೆದ ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನ
Last Updated 22 ಮೇ 2017, 7:01 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಕಿತ್ತಳೆ, ಬೆನೆಕೆ ಹಣ್ಣು, ನಕ್ಷತ್ರ ಹಣ್ಣು, ಚಕೋತ, ಪಪ್ಪಾಯಿ, ಲಕ್ಷ್ಮಣ ಫಲ, ರಂಗಪುರ ನಿಂಬೆ... ಅಪ್ಪೆಮಿಡಿ, ಬಾದಾಮಿ, ‘ಅರ್ಕಾ ಉದಯ’ ಸೇರಿದಂತೆ 220 ತಳಿಯ ಮಾವಿನ ಹಣ್ಣು... ಮೂಲಂಗಿ, ಬದನೆಕಾಯಿ, ಹಾಗಲಕಾಯಿ, ಪಾಲಕ್‌, ಟೊಮೆಟೊ, ಸಿಹಿ ಕುಂಬಳ, ಮುಳ್ಳುಸೌತೆ, ಕಪ್ಪು ಹರಿವೆ, ಬೆಂಡೆಕಾಯಿ, ಪಡುವಲಕಾಯಿ, ಬದನೆಕಾಯಿ ಬಿತ್ತನೆ ಬೀಜ... ಹೈಬ್ರೀಡ್‌ನೊಂದಿಗೆ ಒಂದಷ್ಟು ನಾಟಿ ತಳಿಗಳು...

–ಇವೆಲ್ಲವನ್ನೂ ಒಂದೇ ಸೂರಿನಡಿ ವೀಕ್ಷಿಸಬೇಕಾದರೆ ಮಡಿಕೇರಿಯ ಗಾಂಧಿ ಮೈದಾನಕ್ಕೆ ಬರಬೇಕು. ಕೊಡಗು ಜಿಲ್ಲೆಯ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ ಹಾಗೂ ತೋಟಗಾರಿಕೆ ಅಭಿವೃದ್ಧಿ ಸೊಸೈಟಿಯು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನ ಬೆಳೆಗಾರರನ್ನೂ ಕೈಬೀಸಿ ಕರೆಯುತ್ತಿದೆ. ಇವುಗಳನ್ನು ಕಣ್ತುಂಬಿಕೊಳ್ಳಲು ಸೋಮವಾರವೂ ಕೊನೆಯ ಅವಕಾಶ ಕಲ್ಪಿಸಲಾಗಿದೆ.

41 ಮಳಿಗೆಗೆಗಳು ಭರ್ತಿಗೊಂಡಿದ್ದು, ಬೆಳೆಗಾರರಲ್ಲಿ ‘ನಾನೂ ಪ್ರಗತಿಪರ ರೈತನಾಗಬೇಕು’ ಎಂಬ ಕನಸು ಬಿತ್ತುತ್ತಿವೆ. ಒಳಹೊಕ್ಕರೆ ಮೊದಲಿಗೆ ವಿವಿಧ ತಳಿಯ ಮಾವಿನಹಣ್ಣುಗಳು ಆಕರ್ಷಿಸುತ್ತವೆ.

ಬಳಿಕ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮಳಿಗೆಯಲ್ಲಿ ಬಗೆಬಗೆ ಹಣ್ಣುಗಳನ್ನು ಕಾಣಬಹುದು. ಜತೆಗೆ, ಮಾಹಿತಿಯನ್ನೂ ಪಡೆದುಕೊಳ್ಳಬಹುದು. ತುಮಕೂರು ಜಿಲ್ಲೆ ಹಿರೇಹಳ್ಳಿ ಸಂಶೋಧನಾ ಕೇಂದ್ರದ ಮಳಿಗೆಯಲ್ಲಿ ರುಚಿಕರ ಹಲಸಿನ ಹಣ್ಣು ಸವಿಯಲು ಅವಕಾಶವಿದೆ.
ಮಡಿಕೇರಿ ತಾಲ್ಲೂಕಿನ ಅಪ್ಪಂಗಳ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಏಲಕ್ಕಿ, ಕಾಳುಮೆಣಸಿನ ಬಳ್ಳಿಗಳು ರೈತರ ಗಮನ ಸೆಳೆಯುತ್ತಿವೆ.

ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಪೊದೆ ಕಾಳುಮೆಣಸಿನ ಬಳ್ಳಿ ಮತ್ತೊಂದು ವಿಶೇಷ. ಮನೆಯ ಬಳಕೆಗೆ ಅಗತ್ಯವಿರುವಷ್ಟು ಕಾಳುಮೆಣಸು ಮನೆ  ತಾರಸಿ ಮೇಲೆಯೇ ಬೆಳೆಯಲು ಸಾಧ್ಯ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.

ಅರಣ್ಯ ಇಲಾಖೆಯು ನರ್ಸರಿಯಲ್ಲಿ ಬೆಳೆಸಿರುವ ಸಿಲ್ವರ್‌ ಓಕ್‌, ಹೆಬ್ಬಲಸು, ಬಳಂಜಿ, ಮುಳ್ಳು ಬಿದಿರು, ಹೊಳೆಮತ್ತಿ, ಶಿವನಿ ಸಸಿಗಳನ್ನೂ ನೋಡಬಹುದು. ತರಕಾರಿ, ಹೂವಿನ ಬೆಳೆಗಳಿಗಾಗಿ ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಪೋಷಕಾಂಶಗಳು ಲಭ್ಯ ಇವೆ. ಸ್ಪ್ರಿಂಕ್ಲರ್‌, ಹನಿನೀರಾವರಿ ಮಾಹಿತಿ, ಕಾಳು ಮೆಣಸು ಬಿಡಿಸುವ ಯಂತ್ರ, ಸಬ್ಸಿಡಿ ಆಧಾರಿತ ಮರ ಕತ್ತರಿಸುವ ಯಂತ್ರ, ತೋಟಗಾರಿಕೆ ಬೆಳೆಗಳ ‘ಹೋಂಮೇಡ್‌’ ಜ್ಯೂಸ್ ಸಹ ಲಭ್ಯ ಇದೆ.

ಮಾರುಕಟ್ಟೆ ತಂತ್ರದ ಅರಿವಿಲ್ಲದೇ ಸೋಲು: ‘ಹಣ್ಣುಗಳನ್ನು ಬಳಕೆ ಮಾಡುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ವರ್ಷ 170 ಮಿಲಿಯನ್‌ ಟನ್‌ ಹಣ್ಣುಗಳ ಉತ್ಪಾದನೆ ಆಗುತ್ತಿತ್ತು. ಮೂರು ವರ್ಷದಿಂದ ಈಚೆಗೆ 284 ಮಿಲಿಯನ್‌ ಟನ್‌ಗೆ ಏರಿಕೆಯಾಗಿದೆ. ಬೆಳೆಗಾರರಿಗೆ ಮಾರುಕಟ್ಟೆಯ ತಂತ್ರಗಾರಿಕೆ ಗೊತ್ತಿಲ್ಲದೇ ಸೋಲಾಗುತ್ತಿದೆ’ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳೆಗಾರರು ಮೊದಲು ತಮ್ಮ ಪ್ರದೇಶದ ಹವಾಗುಣ ಅರಿತುಕೊಳ್ಳಬೇಕು. ಬಳಿಕ ಸೂಕ್ತ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಸಂಶೋಧನಾ ಸಂಸ್ಥೆ ವತಿಯಿಂದ ನಾಟಿಮಾವಿನ ತಳಿ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಭಾಗದ ಕಾಡುಗಳಲ್ಲಿ ಬೆಳೆಯುವ ಅಪ್ಪೆಮಿಡಿ ಮಾವಿನ ಮರದ ರೆಂಬೆಯನ್ನೇ ಕಡಿದು ಮರವನ್ನು ನಾಶ ಮಾಡಲಾಗುತ್ತಿದೆ.

ಆ ಸಸಿಗಳನ್ನು ತಂದು ಅದರಲ್ಲಿರುವ ಔಷಧೀಯ ಗುಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಜತೆಗೆ, ಆಧುನಿಕ ಮಾರುಕಟ್ಟೆಗೆ ಅಪ್ಪೆಮಿಡಿಯನ್ನು ಹೇಗೆ ಪರಿಚಯಿಸಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಶಿಸುವ ಹಂತದಲ್ಲಿರುವ ಆಲಂಕಾರಿಕ ಗಿಡಗಳ ರಕ್ಷಣೆಯನ್ನು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕೊಡಗಿನ ಕಾಫಿ, ಕಾಳುಮೆಣಸಿಗೆ ಸೂಕ್ಷ್ಮ ಜೀವಾಣುಮಿಶ್ರಣ ಅಭಿವೃದ್ಧಿ ಪಡಿಸಲಾಗಿದೆ. ಇದರ ಬಳಕೆಯಿಂದ ಕಾಫಿ ಇಳುವರಿ ಹೆಚ್ಚಳವಾಗಿದೆ. ಕಾಳು ಮೆಣಸಿಗೆ ತಗುಲುತ್ತಿದ್ದ ರೋಗವೂ ದೂರವಾಗಿದೆ. ಕಿತ್ತಳೆ ಸಸಿಗೂ ಬಳಕೆ ಮಾಡಬಹುದು’ ಎನ್ನುತ್ತಾರೆ ದಿನೇಶ್‌.

*
ಗೇರು ಹಣ್ಣಿನಿಂದ ಜ್ಯೂಸ್‌ ತಯಾರಿಸುವ ಪ್ರಯೋಗಕ್ಕೆ ಕೈಹಾಕಿದ್ದ ಸಂದರ್ಭದಲ್ಲಿ ಕೆಲವರು ಲಘುವಾಗಿ ಮಾತನಾಡಿದ್ದರು. ಇಂದು ಅದರಲ್ಲೇ ಯಶಸ್ಸು ಗಳಿಸಿದ್ದೇನೆ.
-ಶ್ಯಾಮಲಾ ಶಾಸ್ತ್ರಿ ಮುಖ್ಯಸ್ಥರು, ಪ್ರಕೃತಿ ಆಹಾರ ಉತ್ಪಾದನಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT