ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಗೇಟ್‌ ಬಂದ್‌: ಆಕ್ರೋಶ

ಸುರಕ್ಷತೆ ಕಾರಣಕ್ಕೆ ತಡೆಗೋಡೆ ನಿರ್ಮಿಸಲು ಮುಂದಾದ ಅಧಿಕಾರಿಗಳು
Last Updated 22 ಮೇ 2017, 7:42 IST
ಅಕ್ಷರ ಗಾತ್ರ

ರಾಮನಗರ: ಚರ್ಚ್‌ ಎದುರಿನ ರೈಲ್ವೆ ಗೇಟಿನಲ್ಲಿ ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಿದ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ರೈಲ್ವೆ ಇಲಾಖೆ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕೆ ಇಳಿದ ಘಟನೆ ಭಾನುವಾರ ಸಂಜೆ ನಡೆಯಿತು.

ಈ ಮಾರ್ಗವಾಗಿ ಟಿಪ್ಪುನಗರ, ಯಾರಬ್‌ನಗರ, ಜನತಾ ಕಾಲೊನಿ, ಟ್ರೂಪ್‌ಲೈನ್‌, ಅರ್ಕೇಶ್ವರ ಕಾಲೊನಿ, ಮೆಹಬೂಬ್‌ ನಗರ ಮೊದಲಾದ ಪ್ರದೇಶಗಳ ಜನರು ಸಂಚರಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದಿನಿಂದ ಇಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಇದೀಗ ಪಾದಚಾರಿಗಳೂ ಓಡಾಡದಂತೆ ರೈಲ್ವೆ ಇಲಾಖೆ ಸಿಬ್ಬಂದಿ ಎರಡೂ ಕಡೆಯ ಗೇಟುಗಳನ್ನು ಭದ್ರಪಡಿಸಲು ಮುಂದಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಜನರ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಕಾರಣ ಇಲ್ಲೊಂದು ಕೆಳ ಸೇತುವೆ (ಅಂಡರ್‌ಪಾಸ್) ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಈ ಹಿಂದೆ ಸಂಸದ ಡಿ.ಕೆ. ಸುರೇಶ್‌ ಈ ಕುರಿತು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳ ಜೊತೆ ಮಾತನಾಡಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಆ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತಿಲ್ಲ.

ಇದೀಗ ಇಲ್ಲಿ ಪಾದಚಾರಿಗಳ ಸಂಚಾರಕ್ಕೂ ನಿರ್ಬಂಧ ಹೇರಿದಲ್ಲಿ ಸ್ಥಳೀಯರು ನಗರದೊಳಗೆ ತೆರಳಲು ಕಿಲೋಮೀಟರ್ ಬಳಸಿ ಬರಬೇಕು. ಹೀಗಾಗಿ ಯಾವುದೇ ಕಾರಣಕ್ಕೂ ಈ ಸೇತುವೆಯನ್ನು ಶಾಶ್ವತವಾಗಿ ಮುಚ್ಚಬಾರದು ಎಂದು ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದರು.

ರೈಲ್ವೆ ಇಲಾಖೆ ವಾದವೇನು?: ‘ಈ ಹಳಿಗಳಲ್ಲಿ ಅನೇಕರು ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಇಲ್ಲಿನ ನಿವಾಸಿಗಳು ಟಿಕೆಟ್‌ ಇಲ್ಲದೆ ಟ್ರ್ಯಾಕ್‌ ಮೂಲಕವೇ ಅಕ್ರಮವಾಗಿ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಾರೆ. ಮುಖ್ಯವಾಗಿ ಪ್ರಯಾಣಿಕರಿಗೆ ಕಲ್ಲು ತೂರಲಾಗುತ್ತಿದೆ. ಹೀಗಾಗಿ ಇಲ್ಲಿ ಮುಂದಿನ ಎರಡು ದಿನಗಳ ಒಳಗೆ ತಡೆಗೋಡೆ ನಿರ್ಮಿಸಲಾಗುವುದು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಸ್ಥಳದಲ್ಲಿ ನೂರಾರು ಸಾರ್ವಜನಿಕರು ಸೇರಿದ್ದು, ಸ್ಥಳೀಯ ಟೌನ್‌ ಠಾಣೆ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಿದರು.

*
ಪ್ರಯಾಣಿಕರು, ರೈಲು ಸಂಚಾರದ ಹಿತದೃಷ್ಟಿಯಿಂದ ಗೇಟಿನ ಎರಡೂ ಕಡೆ ತಡೆಗೋಡೆ ನಿರ್ಮಿಸಲಾಗುವುದು. ಕಾನೂನಿನ ಪ್ರಕಾರವೇ  ಕ್ರಮ ಕೈಗೊಳ್ಳಲಾಗುತ್ತಿದೆ.
-ಮುಖೇಶ್,
ಆರ್‌ಪಿಎಫ್‌ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT