ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಯೊಳಗೆ ಕಂಡದ್ದೇನು?

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಾಣಾಜೆ ಕಾಡಿಗೆ ಕೆಲವು ದಿನಗಳ ಹಿಂದೆ ಜನಸಾಗರವೇ ಹರಿದುಬಂದಿತ್ತು. ಬೆಟ್ಟ ಏರಿಳಿದು, ಹುಲ್ಲುಗಾವಲು ದಾಟಿಕೊಂಡು, ಅಲ್ಲಿನ ಗುಹೆಯನ್ನು ಹುಡುಕಿಕೊಂಡು ಬಂದಿತ್ತು ಆ ಜನಸಾಗರ. ಶ್ವೇತವಸ್ತ್ರ ತೊಟ್ಟು ಅಲ್ಲಿನ ಸ್ವಯಂಭೂ ಜಾಂಬ್ರಿ ಗುಹಾ ಪ್ರವೇಶ ಮಾಡುತ್ತಿದ್ದವರಲ್ಲಿ ಅದೆಂತಹ ಸಂಭ್ರಮ ಅಂತೀರಿ. ಅಂದಹಾಗೆ, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪ್ರವೇಶೋತ್ಸವ ಇದು. ಇನ್ನು ನೀವು ಈ ಉತ್ಸವವನ್ನು ನೋಡಬೇಕೆಂದರೆ 2029ರವರೆಗೆ ಕಾಯಲೇಬೇಕು!

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಮಹಾಲಿಂಗೇಶ್ವರ ಕ್ಷೇತ್ರದ ಮೂಲಸ್ಥಾನ ಈ ಗುಹೆಯಲ್ಲಿದೆ ಎಂಬುದು ಜನರ ನಂಬಿಕೆ. ನೆಟ್ಟಣಿಗೆ ಕ್ಷೇತ್ರದಿಂದ ವಾಯುವ್ಯ ದಿಕ್ಕಿನ ದಟ್ಟಾರಣ್ಯದಲ್ಲಿ ಸುಮಾರು ಆರು ಕಿಲೋಮೀಟರ್ ಹೆಜ್ಜೆ ಹಾಕಿದಾಗ ಪಾಣಾಜೆಯ ಚೆಂಡೆತ್ತಡ್ಕದ ಹುಲ್ಲುಗಾವಲು ಪ್ರದೇಶ ಸಿಗುತ್ತದೆ. ಅಲ್ಲಿಂದ ತುಸು ಮುಂದೆ ಸಾಗಿದಾಗ ಈ ಗುಹೆ ಕಾಣಸಿಗುತ್ತದೆ. ಕರ್ನಾಟಕ ಹಾಗೂ ಕೇರಳದ ಸಾವಿರಾರು ಭಕ್ತರ ಸಮಾಗಮದ ತಾಣವದು.  

ಕಾಪಾಡ ವರ್ಗದ ಮೂಲನಿವಾಸಿಗಳಿಗೆ ಇಲ್ಲಿ ವಿಶೇಷ ಮನ್ನಣೆ. ಕಾಪಾಡರೆಂದರೆ ಹರಿಜನ, ಮೇರ ಪರಂಪರೆಗೆ ಸೇರಿದವರು. ದೇವರಿಂದ ಅನುಮತಿ ಪಡೆದ ವ್ರತಧಾರಿಗಳು ಎನ್ನಲಾಗಿದೆ. ಸಮಾಂಗ ವಚನ ಮಾಡಿ ದೇವಾಲಯದ ಪರಿಸರದಲ್ಲಿ ಗುಡಾರಗಳನ್ನು ಹೂಡಿ ಲೌಕಿಕ ಜೀವನದಿಂದ ಮುಕ್ತರಾಗಿ ವ್ರತ ಆಚರಿಸುತ್ತಾರೆ. ದೇವಾಲಯದಿಂದ ಒದಗಿಸುವ ಆಹಾರ ಹೊರತು ಬೇರೇನನ್ನೂ ಸೇವಿಸುವುದಿಲ್ಲ. ವಿವಾಹ, ಮರಣಪೂರ್ವ ಉತ್ತರಕ್ರಿಯಾದಿಗಳನ್ನು ನಡೆಸಿ ಕಾಪಾಡರು ವ್ರತಸ್ಥರಾಗುತ್ತಾರೆ. 48 ದಿನಗಳ ಕಠಿಣ ವ್ರತದ ನಂತರ ಜಾಂಬ್ರಿ ಗುಹಾ ಪ್ರವೇಶೋತ್ಸವದ ದಿನ ಹೊಸ ವಸ್ತ್ರಗಳನ್ನು ತೊಟ್ಟು ಮುಸುಕುಧಾರಿಗಳಾಗಿ ದೊಂದಿ ಹಿಡಿದು ಗುಹಾಪ್ರವೇಶ ಯಾತ್ರೆಯ ಮುಂಚೂಣಿಯಲ್ಲಿ ಇರುತ್ತಾರೆ. ವ್ರತಧಾರಿಗಳಾಗಿ ಶಿವನಾಮ ಪಠಿಸುತ್ತಾ ದೇವಾಲಯದ ತಂತ್ರಿಗಳು ಹಾಗೂ ಸ್ಥಾನಿಕರು ಕಾಪಾಡರನ್ನು ಹಿಂಬಾಲಿಸುತ್ತಾರೆ.

ಕಾಪಾಡರು ಗುಹಾ ಪ್ರವೇಶ ಮಾಡುವಾಗ ಬೆಳಕಿಗಾಗಿ ದೊಂದಿಗಳನ್ನು ಹಿಡಿಯುತ್ತಾರೆ. ಈ ದೀವಟಿಗೆಗಳನ್ನು ಕುಳದ ಮನೆತನದವರು ಉರಿಸಿಕೊಡುವುದು ಸಂಪ್ರದಾಯ. ಅದಕ್ಕೆ ಆಗಾಗ ಸುರಿದುಕೊಳ್ಳಲು ಬೇಕಾಗುವ ಎಳ್ಳೆಣ್ಣೆಯನ್ನು ಬಿದಿರಿನ ಅಂಡೆಗಳಲ್ಲಿ ಕೊಂಡೊಯ್ಯುವರು. ಸುಮಾರು ಎರಡು ಗಂಟೆಗಳ ಕಾಲ ಕಲ್ಲು ಮುಳ್ಳು ಪೊದೆಗಳಿಂದ ತುಂಬಿದ ಬೆಟ್ಟವನ್ನು ಹತ್ತಿ ಜಾಂಬ್ರಿ ಗುಹೆಯ ಬಳಿಗೆ ಬರುವಾಗ ಭಕ್ತಸಾಗರವೇ ತುಂಬಿರುತ್ತದೆ. ಆರು ಆಡಿ ಉದ್ದ, ಮೂರು ಅಡಿ ಅಗಲ ಹಾಗೂ ಹತ್ತು ಅಡಿಗಳಷ್ಟು ಆಳವಿರುವ ಗುಹೆಯೊಳಗೆ ಪ್ರವೇಶಿಸುವವರನ್ನು ಏಣಿಯ ಮೂಲಕ ಇಳಿಸಲಾಗುತ್ತದೆ.

(ಪಾಣಾಜೆ ಕಾಡಿನಲ್ಲಿರುವ ಜಾಂಬ್ರಿ ಗುಹೆ)

ವ್ರತಸ್ಥರಾದ ಕಾಪಾಡರು ಮೊದಲಿಗೆ ಗುಹೆಯನ್ನು ಪ್ರವೇಶಿಸುತ್ತಾರೆ. ಶ್ವೇತವಸ್ತ್ರಧಾರಿಗಳಾಗಿ ಕೈಯಲ್ಲಿ ದೊಂದಿಗಳಲ್ಲದೆ ಬೊಳ್ ಸರೊಳಿ ಸೊಪ್ಪಿನ ಸೂಡಿಗಳನ್ನು ಧರಿಸಿ ಗುಹಾಪ್ರವೇಶ ಮಾಡುವರು. ಗುಹೆಯೊಳಗಿನ ವಿಚಾರಗಳನ್ನು ಹೊರಜಗತ್ತಿಗೆ ಹೇಳಬಾರದು ಎಂಬ ನಿರ್ಬಂಧ ಇದೆ. ಒಳಹೋದವರು ಸುಮಾರು ಒಂದೂವರೆ ಗಂಟೆ ಕಳೆಯುವಷ್ಟರಲ್ಲಿ ಬಿಳಿಬಟ್ಟೆಯ ಮಾರಾಪಿನೊಂದಿಗೆ ಹೊರ ಬರುತ್ತಾರೆ. ನಂತರ ಅದನ್ನು ಮುಂಡೂರು ವನದಲ್ಲಿ ಹೂಳುವರು. ಇದು ಉರಗಗಳ ಅಸ್ಥಿಯಾಗಿರಬಹುದೆಂದು ಜನರ ಅಭಿಮತ.

ನಂತರ ಸ್ಥಾನಿಕರು ಕೈದೀಪ ಹಿಡಿದು ತಂತ್ರಿಗಳಿಗೆ ಗುಹಾ ಮಾರ್ಗ ತೋರಿಸುವರು. ದೇವಾಲಯದಿಂದ ಅರ್ಚಿತ ಕಲಶವನ್ನು ತಂತ್ರಿಗಳು ಕೊಂಡೊಯ್ಯುವರು. ವಿಧಿಗಳನ್ನು ಮುಗಿಸಿ ಸುಮಾರು ಒಂದೂವರೆ ಗಂಟೆಯಲ್ಲಿ ಅವರೂ ಹೊರಬರುವರು. ಅಲ್ಲಿವರೆಗೂ ಜನ ನಿಸರ್ಗರಮಣೀಯ ನೋಟವನ್ನು ವೀಕ್ಷಿಸುತ್ತಾ, ದೇವರನ್ನು ಪ್ರಾರ್ಥಿಸುತ್ತಾ ಗುಹೆಯನ್ನು ಪ್ರವೇಶಿಸಿದವರ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಶಂಖಪಾಲವೆಂಬ ಸರ್ಪದ ಸಂರಕ್ಷಣೆಯಲ್ಲಿರುವ ಈ ಪವಿತ್ರ ಗುಹೆಯೊಳಗಿನ ದೇವತಾರ್ಚನೆ ಮುಗಿಸಿ ಹೊರಬಂದ ತಂತ್ರಿಗಳು ಅಲ್ಲಿ ನೆರೆದ ಭಕ್ತಾದಿಗಳಿಗೆ ಮೂಲ ಮೃತ್ತಿಕಾ ಪ್ರಸಾದ ಹಂಚುತ್ತಾರೆ.

ಅವಭೃತ ಪ್ರದೇಶಲ್ಲಿರುವ ಮೀನಿನಲ್ಲಿ ವಿಶೇಷತೆಯಿದೆ. ಅದರ ಕಿವಿಭಾಗದಲ್ಲಿರುವ ಚಿನ್ನದ ಕುಂಡಗಳನ್ನು ಯಾರು, ಯಾವಾಗ ತೊಡಿಸಿದರೆಂದು ಯಾರಿಗೂ ತಿಳಿದಿಲ್ಲ. ಈ ಸ್ನಾನಘಟ್ಟದಿಂದ ಮೀನು ಹಿಡಿದವರು ರಕ್ತವಾಂತಿ ಮಾಡಿಕೊಂಡ ದೃಷ್ಟಾಂತಗಳಿವೆ. ಹಾಗೆಯೇ ಮುಂಡೂರು ಸಮೀಪದ ವನದ ತುಂಬ ಬಿಳಿ ಆಮೆಗಳನ್ನು ಕಾಣಬಹುದು. ಉಪ್ಪಿನ ಹೊಂಡ ಇಲ್ಲಿನ ಇನ್ನೊಂದು ವಿಶೇಷ ತಾಣ. ಇದು ನಾಗರಹಾವು, ಕೃಷ್ಣಸರ್ಪ ಹಾಗೂ ಜಾಂಬ್ರಿ ಗುಹೆಯ ರಕ್ಷಕನಾದ ಶಂಖಪಾಲ ಸರ್ಪದ ತಾಣವೂ ಆಗಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT