ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್ ಜನತಂತ್ರ ನಡೆಗೆ ಕನ್ನಡಿಗನ ನೆರವು

ಫೋರಂ ಆಫ್ ಫೆಡರೇಷನ್ಸ್ ಮೂಲಕ ತರಬೇತಿ ಕಾರ್ಯಕ್ರಮ
Last Updated 22 ಮೇ 2017, 20:17 IST
ಅಕ್ಷರ ಗಾತ್ರ
ಬೆಂಗಳೂರು: ಜನತಂತ್ರ ವ್ಯವಸ್ಥೆಯಲ್ಲಿ ಅಂಬೆಗಾಲಿಡುತ್ತಿರುವ ನೆರೆಯ ಮ್ಯಾನ್ಮಾರ್ ದೇಶವನ್ನು ಕೈಹಿಡಿದು ಮುನ್ನಡೆಸುವ ಕೆಲಸವನ್ನು ಭಾರತವೂ ಸೇರಿ ಒಂಬತ್ತು ದೇಶಗಳ ಫೋರಂ ಆಫ್ ಫೆಡರೇಷನ್ಸ್ ಎಂಬ ಸಂಘಟನೆ ನಡೆಸುತ್ತಿದೆ.
 
1962ರಲ್ಲಿ ನಡೆದ ಸೇನಾ ಕ್ರಾಂತಿಯ ನಂತರ ಮ್ಯಾನ್ಮಾರ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸೇನಾ ಆಡಳಿತಕ್ಕೆ ಒಳಗಾಗಿತ್ತು. 2010ರಿಂದ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಹೊರಳುತ್ತಿದೆ. ಪ್ರಜಾಪ್ರಭುತ್ವದೆಡೆಗಿನ  ಪರಿವರ್ತನೆಗೆ ಅಲ್ಲಿನ ಜನರನ್ನು ಸಜ್ಜುಗೊಳಿಸುವ ಕೆಲಸವನ್ನು ಫೋರಂ ಆಫ್ ಫೆಡರೇಷನ್ಸ್ ನಡೆಸುತ್ತಿದೆ.
 
2012ರ ಅಕ್ಟೋಬರ್‌ನಲ್ಲಿ ಆರಂಭವಾದ ಈ ಕಾರ್ಯಕ್ರಮದ ಮುಖ್ಯ ಮಾರ್ಗದರ್ಶಕರಾಗಿರುವವರು ಕನ್ನಡಿಗ, ಜೈನ್ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಸಂದೀಪ್ ಶಾಸ್ತ್ರಿ. ಕಳೆದ ನಾಲ್ಕೂವರೆ ವರ್ಷದಲ್ಲಿ ಅವರು ಆ ದೇಶದ ವಿವಿಧ ಭಾಗಗಳಿಗೆ 28 ಬಾರಿ ಭೇಟಿ ನೀಡಿದ್ದಾರೆ.
 
ರಾಜಕೀಯ ಪಕ್ಷಗಳ ಮುಖಂಡರು, ಸೇನೆಯ ಅಧಿಕಾರಿಗಳು, ನಾಗರಿಕ ಸೇವೆಯ ಅಧಿಕಾರಿಗಳು, ನಾಗರಿಕ ಸಂಘಟನೆಗಳ ಸದಸ್ಯರು ಸೇರಿ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ.
 
ಮ್ಯಾನ್ಮಾರ್‌ನ ಸ್ಥಳೀಯ ಸಮಾಜಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ‘ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಎಂಬ ಪದಗಳನ್ನು ಬಳಸಲೇಬಾರದು. ಈ ಪದಗಳನ್ನು ಬಳಸಿದರೆ ಸೇನೆಯು ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶವನ್ನೇ ನಿರಾಕರಿಸುವ ಅಪಾಯ ಇದೆ’ ಎಂದು ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮದ ಆರಂಭದಲ್ಲಿ ಹೇಳಿದ ಕಿವಿಮಾತನ್ನು ಶಾಸ್ತ್ರಿ ಅವರು ನೆನಪಿಸಿಕೊಳ್ಳುತ್ತಾರೆ.
 
ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗಲು ಮುಂದಾಗಿರುವ ದೇಶವೊಂದರಲ್ಲಿ ‘ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ’ಯಂತಹ ಪದಗಳನ್ನೇ ಬಳಸದೆ ಜನತಂತ್ರದ ಬಗ್ಗೆ ಅರಿವು ಮೂಡಿಸುವುದು ದೊಡ್ಡ ಸವಾಲಾಗಿತ್ತು.  ಈ ಪದಗಳ ಬದಲಿಗೆ ‘ವಿಕೇಂದ್ರೀಕರಣ, ಆಡಳಿತದಲ್ಲಿ ಸಹಭಾಗಿತ್ವ’ದಂತಹ ಪದಗಳನ್ನು ಬಳಸಿ ತಿಳಿವಳಿಕೆ ನೀಡುವ ಕೆಲಸ ಆರಂಭವಾಯಿತು.
 
2014ರಲ್ಲಿ ಮ್ಯಾನ್ಮಾರ್‌ನ ಆಗಿನ ಅಧ್ಯಕ್ಷ ಥೈನ್ ಸೈನ್ ಅವರು ದೇಶ ಪ್ರಜಾಪ್ರಭುತ್ವದತ್ತ ಸಾಗುತ್ತಿದೆ ಎಂಬುದನ್ನು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದರು. ದೇಶದ ಸಮಸ್ಯೆಗಳಿಗೆ ಒಕ್ಕೂಟ ವ್ಯವಸ್ಥೆಯೇ ಪರಿಹಾರ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
 
ದೇಶದ ಅಧ್ಯಕ್ಷರೇ ಈ ಮಾತನ್ನು ಹೇಳಿದ ನಂತರ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯಂತಹ ಪದಗಳನ್ನು ಬಳಸಲು ಆರಂಭಿಸಲಾಯಿತು ಎಂದು ಶಾಸ್ತ್ರಿ ಹೇಳುತ್ತಾರೆ.
 
ಮ್ಯಾನ್ಮಾರ್‌ನಲ್ಲಿ ವಿಶಿಷ್ಟವಾದ ರಾಜಕೀಯ ವ್ಯವಸ್ಥೆ ಇದೆ. ಸೇನೆಯು ರಚಿಸಿರುವ ಸಂವಿಧಾನದ ಪ್ರಕಾರ ಸಂಸತ್ತಿಗೆ ಶೇ 25ರಷ್ಟು ಸ್ಥಾನಗಳನ್ನು ಸೇನೆಯು ನಾಮಕರಣ ಮಾಡುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದ್ದರೆ ಶೇ 80ರಷ್ಟು ಬಹುಮತ ಬೇಕು.

2015ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಅವರ ಎನ್‍ಎಲ್‌ಡಿ ಬಹುಮತ ಪಡೆದಿದೆ. ಆದರೆ ಸೂಕಿ ಅವರಿಗೆ ದೇಶದ ಅಧ್ಯಕ್ಷರಾಗುವ ಅವಕಾಶವೇ ಇಲ್ಲ. ಕುಟುಂಬದಲ್ಲಿ ಯಾರಾದರೂ ವಿದೇಶಿ ಪ್ರಜೆಗಳಿದ್ದರೆ ಅಂಥವರಿಗೆ ಅಧ್ಯಕ್ಷ ಸ್ಥಾನ ಪಡೆಯಲು ಅವಕಾಶ ಇಲ್ಲ ಎಂದು ಸಂವಿಧಾನ ಹೇಳುತ್ತದೆ. ಸೂಕಿ ಅವರ ಗಂಡ ಮತ್ತು ಇಬ್ಬರು ಮಕ್ಕಳು ವಿದೇಶಿ ಪ್ರಜೆಗಳು.
 
ಸ್ಟೇಟ್ ಕೌನ್ಸಿಲರ್ ಎಂಬ ಹುದ್ದೆಯನ್ನು ಸೂಕಿ ಅವರಿಗಾಗಿ ಸಂಸತ್ತು ಸೃಷ್ಟಿಸುತ್ತದೆ. ಅಧ್ಯಕ್ಷರು ನಡೆಸುವ ಎಲ್ಲ ಸಭೆಗಳಲ್ಲಿಯೂ ಸ್ಟೇಟ್ ಕೌನ್ಸಿಲರ್ ಭಾಗವಹಿಸಲು ಅವಕಾಶ ಇದೆ. ಹೀಗೆ ಅಧ್ಯಕ್ಷರಿಗೆ ಬಹುತೇಕ ಸರಿಸಮನಾದ ವ್ಯವಸ್ಥೆಯೊಂದನ್ನು ಸಂಸತ್ತು ರೂಪಿಸಿತು. ಈ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗದೆ ಸೂಕಿ ಅವರಿಗೆ ಸ್ಥಾನವೊಂದನ್ನು ಸೃಷ್ಟಿಸಲಾಯಿತು.
 
ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಷ್ಟಾಚಾರಗಳು ಅಲ್ಲಿ ಇನ್ನೂ ಪಕ್ವಗೊಂಡಿಲ್ಲ ಎಂಬುದಕ್ಕೆ ಅವರು ಒಂದು ಉದಾಹರಣೆ ನೀಡುತ್ತಾರೆ. ಇತ್ತೀಚೆಗೆ ರಾಖೈನ್ ರಾಜ್ಯದಲ್ಲಿ ಒಂದು ಸಂಘರ್ಷ ಉಂಟಾಯಿತು. ರಾಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರು ಸೇನೆಯ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತಾರೆ.

ಇದರಿಂದ ಕೆರಳಿದ ಸೇನೆ, ಭಾರಿ ಪ್ರಮಾಣದಲ್ಲಿ ರೊಹಿಂಗ್ಯಾ ಜನರ ಹತ್ಯೆ ನಡೆಸುತ್ತದೆ. ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥ ಕೋಫಿ ಅನ್ನಾನ್ ಅವರ ನೇತೃತ್ವದಲ್ಲಿ ಈ ಬಗ್ಗೆ ವಿಚಾರಣೆ ನಡೆಸಲು ಸೂಕಿ ಅವರು ಆಯೋಗವೊಂದನ್ನು ರಚಿಸುತ್ತಾರೆ. ಸಂಸತ್ತಿನಲ್ಲಿ ಅಂಗೀಕಾರವಾದ ಆಯೋಗ ಇದು.
 
ಆದರೆ ರಾಖೈನ್‌ನ ರಾಜ್ಯ ಸರ್ಕಾರದಲ್ಲಿ ಸ್ಥಳೀಯ ಬುಡಕಟ್ಟು ಪಕ್ಷವೇ ಬಹುಮತ ಹೊಂದಿದೆ. ಹಾಗಾಗಿ ಈ ಆಯೋಗದ ರಚನೆಯನ್ನೇ ರಾಜ್ಯದ ವಿಧಾನಸಭೆ ತಿರಸ್ಕರಿಸುತ್ತದೆ. ‘ನಮ್ಮ ಭೇಟಿಯ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ.
 
ಸಂಸತ್ತಿನ ನಿರ್ಧಾರವೊಂದನ್ನು ರಾಜ್ಯಗಳು ದಿಕ್ಕರಿಸಲು ಅವಕಾಶ ಇದೆಯೇ ಎಂದು ಅಲ್ಲಿನ ಜನರು ಪ್ರಶ್ನಿಸಿ, ಬೇರೆ ಬೇರೆ ದೇಶಗಳಲ್ಲಿ ಈ ಬಗ್ಗೆ ಇರುವ ನಿಯಮಗಳನ್ನು ತಿಳಿದುಕೊಂಡರು’ ಎಂದು ಶಾಸ್ತ್ರಿ ಹೇಳುತ್ತಾರೆ.
 
****
ಭಿನ್ನ ಒಕ್ಕೂಟ ವ್ಯವಸ್ಥೆ
ಮ್ಯಾನ್ಮಾರ್‌ನಲ್ಲಿ ಏಳು ರಾಜ್ಯಗಳು ಮತ್ತು ಏಳು ಪ್ರಾಂತ್ಯಗಳಿವೆ. ಅಲ್ಪಸಂಖ್ಯಾತ ಬುಡಕಟ್ಟು ಜನರು ಹೆಚ್ಚಾಗಿರುವ ಗಡಿಯ ಪ್ರದೇಶಗಳನ್ನು ರಾಜ್ಯಗಳು ಎಂದು ಗುರುತಿಸಲಾಗಿದೆ. ಬರ್ಮೀಯರು ಹೆಚ್ಚಾಗಿರುವ ಕೇಂದ್ರ ಭಾಗವನ್ನು ಪ್ರಾಂತ್ಯಗಳು ಎಂದು ಗುರುತಿಸಲಾಗಿದೆ.

ಈ ರಾಜ್ಯಗಳು ಮತ್ತು ಪ್ರಾಂತ್ಯಗಳಿಗೆ ಒಟ್ಟು ತೆರಿಗೆ ವ್ಯವಸ್ಥೆಯಲ್ಲಿ ಶೇ 4ರಷ್ಟು ತೆರಿಗೆ ಸಂಗ್ರಹಿಸುವ ಅಧಿಕಾರ ಮಾತ್ರ ಇದೆ. ಉಳಿದ ಶೇ 96ರಷ್ಟು ತೆರಿಗೆಯನ್ನು ಕೇಂದ್ರವೇ ಸಂಗ್ರಹಿಸುತ್ತದೆ. ಆದರೆ ರಾಜ್ಯಗಳು ಮತ್ತು ಪ್ರಾಂತ್ಯಗಳ ವೆಚ್ಚದ ಪ್ರಮಾಣ ಒಟ್ಟು ತೆರಿಗೆಯ ಶೇ 40ರಷ್ಟಿದೆ. ಹೀಗಾಗಿ ಇಲ್ಲಿ ವರಮಾನ ಹಂಚಿಕೆಗೂ ಗಮನ ಹರಿಸಬೇಕಿದೆ.

ಸಂಸ್ಥೆಗಳು ಬೆಳೆದಿಲ್ಲ: ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ಸೇನೆಯ ಆಡಳಿತದ ಅಡಿಯಲ್ಲಿ ಸರ್ವತೋಮುಖವಾಗಿ ಬೆಳೆದಿಲ್ಲ. ಉದಾಹರಣೆಗೆ, ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳ ಅಧ್ಯಯನವೇ ಇಲ್ಲ.

ಸಮಾಜಶಾಸ್ತ್ರ, ರಾಜ್ಯಶಾಸ್ತ್ರದಂತಹ ವಿಷಯಗಳೇ ಇಲ್ಲ. ಇದನ್ನು ಸರಿಪಡಿಸಬೇಕಾದ ಅಗತ್ಯ ಇದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಫೋರಂ ಆಫ್ ಫೆಡರೇಷನ್ಸ್ ವಿಶ್ವವಿದ್ಯಾಲಯಗಳಲ್ಲಿಯೂ ಕಾರ್ಯಾಗಾರಗಳನ್ನು ನಡೆಸಲು ಆರಂಭಿಸಿದೆ ಎಂದು ಶಾಸ್ತ್ರಿ ಅವರು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT