ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌, ಬೆಂಗಳೂರಿನಲ್ಲಿ ಸುಲಭ

ವಿಮಾನ ನಿಲ್ದಾಣ ಸಂಪರ್ಕ
Last Updated 22 ಮೇ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿನ ವಿಮಾನ ನಿಲ್ದಾಣಗಳ ಸಂಪರ್ಕ ಸುಲಭ ಸಾಧ್ಯ ಎಂಬ ಅಂಶ ಅಧ್ಯಯನದಿಂದ ಬಹಿರಂಗಗೊಂಡಿದೆ.
 
ಸಂಚಾರ ದಟ್ಟಣೆ ಇರುವಾಗ ಅಥವಾ ದಟ್ಟಣೆರಹಿತ ವೇಳೆಯಲ್ಲಿ, ನಗರದ ಹೃದಯ ಭಾಗದಿಂದ ವಿಮಾನ ನಿಲ್ದಾಣವನ್ನು ತಲುಪಲು ವಿನಿಯೋಗಿಸಬಹುದಾದ ಸಮಯಕ್ಕೆ ಸಂಬಂಧಿಸದಂತೆ ರಾಷ್ಟ್ರದ ರಾಜಧಾನಿ ನವದೆಹಲಿ ಕಟ್ಟಕಡೆಯ ಸ್ಥಾನ ಗಳಿಸಿದೆ.
 
ನವದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಪಿಎ)ನ ವಿದ್ಯಾರ್ಥಿ ಅಮಲ್‌ ಜೋಸ್‌ ಅವರು, ಹಿರಿಯ ಪ್ರಾಧ್ಯಾಪಕ ಡಾ.ಸೇವಾ ರಾಮ್ ಅವರ ಮಾರ್ಗದರ್ಶನದಲ್ಲಿ ನಡೆಸಿರುವ ‘ಬೆಂಚ್‌ಮಾರ್ಕಿಂಗ್‌ ಆಫ್‌ ಆ್ಯಕ್ಸೆಸ್ಸಿಬಿಲಿಟಿ ಅಂಡ್‌ ಕನೆಕ್ಟಿವಿಟಿ ಆಫ್‌ ಇಂಡಿಯನ್‌ ಏರ್‌ಪೋರ್ಟ್ಸ್‌’ ಎಂಬ ವಿಷಯದ ಅಧ್ಯಯನದ ಪ್ರಕಾರ, ಈ ಎರಡೂ ಮಹಾನಗರಗಳ ವಿಮಾನ ನಿಲ್ದಾಣ ಸಂಪರ್ಕವು ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳಲ್ಲಿನ ವಿಮಾನ ನಿಲ್ದಾಣಗಳ ಸಂಪರ್ಕಕ್ಕಿಂತಲೂ ಸುಲಭ.
 
ನಗರದ ಹೊರ ವಲಯದಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಅಲ್ಲಿಗೆ ತಲುಪಲು ಸಾರ್ವಜನಿಕರ ವಾಹನಗಳು ಉತ್ತಮ ವೇಗದೊಂದಿಗೆ ಸಾಗಲು ಸಾಧ್ಯವಾಗುವುದೇ ಬೆಂಗಳೂರು ಈ ಪಟ್ಟಿಯಲ್ಲಿ ಎರಡನೆ ಸ್ಥಾನ ಗಳಿಸಲು ಪ್ರಮುಖ ಕಾರಣವಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ಮಾರ್ಗ ವ್ಯವಸ್ಥೆ ಇರುವ ಹೈದರಾಬಾದ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ ಎಂದು ಹೇಳುತ್ತಾರೆ ಡಾ.ಸೇವಾ ರಾಮ್‌.
 
ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಉತ್ತಮ ಸೌಲಭ್ಯಗಳು ಇವೆಯಾದರೂ ವಿಮಾನಯಾನ ಪ್ರಯಾಣಿಕರ ದಟ್ಟಣೆಯೂ ಅಧಿಕ. ಹಾಗಾಗಿ ಸಂಪರ್ಕ ತುಸು ತ್ರಾಸದಾಯಕ.
 
ವಿಮಾನ ನಿಲ್ದಾಣಗಳ ಸುಲಭ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಂಗಳೂರು ದೇಶದ 60 ನಗರಗಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್‌ 3ನೇ ಸ್ಥಾನದಲ್ಲಿದೆ. ಚೆನ್ನೈಗೆ 46 ಹಾಗೂ ಕೋಲ್ಕತ್ತಕ್ಕೆ 59ನೇ ಸ್ಥಾನ ಲಭಿಸಿದ್ದು, ದೆಹಲಿಯು ಕೊನೆಯ ಸ್ಥಾನ ಪಡೆದಿದೆ.
 
ಹೈದರಾಬಾದ್‌ ಮತ್ತು ಬೆಂಗಳೂರು ವಿಮಾನ ನಿಲ್ದಾಣ ತಲುಪುವುದಕ್ಕೆ ಕಾರಿನಲ್ಲಿ ತೆರಳುವುದು ಉತ್ತಮ. ಬೆಂಗಳೂರಿನ ಶಿವಾಜಿನಗರದಿಂದ ವಿಮಾನ ನಿಲ್ದಾಣ ತಲುಪಲು ಸಂಚಾರ ದಟ್ಟಣೆ ಇರುವಾಗ 57 ನಿಮಿಷ ವ್ಯಯಿಸಬೇಕಾಗುತ್ತದೆ. ಅದೇ ದಟ್ಟಣೆರಹಿತ ವೇಳೆಯಲ್ಲಿ 39 ನಿಮಿಷ ಬೇಕು. ಈ ಎರಡೂ ಅವಧಿಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶೇ 46.2ರಷ್ಟು ವ್ಯತ್ಯಾಸ ಕಂಡುಬಂದರೆ, ದೆಹಲಿಯಲ್ಲಿ ಇದರ ಪ್ರಮಾಣ ಶೇ 145.2ರಷ್ಟು.
 
ವಿಮಾನ ನಿಲ್ದಾಣ ತಲುಪಲು ದೆಹಲಿ ಮತ್ತು ಕೋಲ್ಕತ್ತಗಳಿಗೆ ಹೋಲಿಸಿದರೆ ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರುಗಳಲ್ಲಿ ಉತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯ ಇದೆ.
 
ಹೈದರಾಬಾದ್‌ ನಗರದ ಹೃದಯ ಭಾಗದಿಂದ ವಿಮಾನ ನಿಲ್ದಾಣದತ್ತ ಹೊರಡುವ ವಾಹನದ ವೇಗ ಪ್ರತಿ ಗಂಟೆಗೆ ಸರಾಸರಿ 35.1 ಕಿ.ಮೀ ಇದ್ದರೆ, ಬೆಂಗಳೂರಿನಲ್ಲಿ 28.4 ಕಿ.ಮೀ, ಚೆನ್ನೈನಲ್ಲಿ 23.5 ಕಿ.ಮೀ, ಮುಂಬೈನಲ್ಲಿ 21.4 ಕಿ.ಮೀ, ಕೋಲ್ಕತ್ತದಲ್ಲಿ 20.2 ಕಿ.ಮೀ, ದೆಹಲಿಯಲ್ಲಿ 20.1 ಕಿ.ಮೀ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT