ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಪ್ಪರಗಿ ಏತ ನೀರಾವರಿ ಕೈಬಿಟ್ಟಿಲ್ಲ’

Last Updated 23 ಮೇ 2017, 7:22 IST
ಅಕ್ಷರ ಗಾತ್ರ

ಸುರಪುರ: ‘ತಾಲ್ಲೂಕಿನ ಬಪ್ಪರಗಿ- ಹೊರಟ್ಟಿ ಏತ ನೀರಾವರಿ ಯೋಜನೆ ಕೈ ಬಿಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಯೋಜನೆ ಜಾರಿ ನನ್ನ ಸಂಕಲ್ಪವಾಗಿದ್ದು ಈಗಾಗಲೇ ₹ 50 ಕೋಟಿ ಅಂದಾಜು ವೆಚ್ಚ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಪ್ಪರಗಿ ನೀರಾವರಿ ಯೋಜನೆ ನಮ್ಮ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಬಪ್ಪರಗಿ, ಉಪ್ಪಲದಿನ್ನಿ, ಹಗರಟಗಿ, ಕುರೇಕನಾಳ, ಮದಲಿಂಗನಾಳ, ಹೊರಟ್ಟಿ ಸೇರಿದಂತೆ ಸುಮಾರು 8–10 ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಅದೇ ರೀತಿ ಬೂದಿಹಾಳ–ಪೀರಾಪುರ ಯೋಜನೆಯು ನಮ್ಮ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಒಳಪಡುತ್ತದೆ ಮತ್ತು ಹೂವಿನ ಹಿಪ್ಪರಗಿ ರೈತರಿಗೂ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಬಪ್ಪರಗಿ–ಹೊರಟ್ಟಿ ಮತ್ತು ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆ ಇನ್ನೂ ಮಂಜೂರಿ ಆಗಿಯೇ ಇಲ್ಲ. ಆಗಲೇ ಕೈಬಿಡಲಾಗಿದೆ ಎಂಬ ಉಹಾಪೋಹದಲ್ಲಿ ಯಾವುದೇ ಹುರುಳಿಲ್ಲ. ಇದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಬಪ್ಪರಗಿ ನೀರಾವರಿ ಯೋಜನೆ ಇನ್ನೂ ಜಾರಿ ಪ್ರಯತ್ನದಲ್ಲಿದೆ. ಈ ಸಂಬಂಧ ನಾನು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜು ಪರ್ವೇಜರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ’ ಎಂದು ಹೇಳಿದರು.

‘ಈ ನೀರಾವರಿ ಯೋಜನೆಗಳ ಕುರಿತಂತೆ ತಾಲ್ಲೂಕಿನ ರೈತರು ಗೊಂದಲಕ್ಕೆ ಸಿಲುಕುವುದು ಬೇಡ. ಎರಡನೇ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿಯೇ ಈ ಯೋಜನೆಯ ಜಾರಿಗೆ ಒತ್ತು ನೀಡಿದ್ದೆ. ಅದೇ ರೀತಿ ಈಗಲೂ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿದ್ದೇನೆ’ ಎಂದರು.

‘ಅದೇ ರೀತಿಯಾಗಿ ಗುಂಡಲಗೇರಾ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿರುವೆ’ ಎಂದು ಹೇಳಿದರು. ಮುಖಂಡ ಸೂಲಪ್ಪ ಕಮತಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT