ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು ‘ಸುರಂಗ ಮಾರ್ಗ ನಿರ್ಮಾಣ ಅಸಾಧ್ಯ’

Last Updated 23 ಮೇ 2017, 19:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ– ಅಂಕೋಲಾ ಮಧ್ಯೆ ರೈಲು ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಆಗುವ ಅರಣ್ಯ ನಾಶ ತಡೆಯಲು ಸುರಂಗ ಮಾರ್ಗ ನಿರ್ಮಿಸಿ ಎಂಬ ತಜ್ಞರ ಸಲಹೆಯನ್ನು ಅನುಷ್ಠಾನಗೊಳಿಸುವುದು ಅಸಾಧ್ಯ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಸ್ಪಷ್ಟಪಡಿಸಿದರು.

ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ಹುಬ್ಬಳ್ಳಿ–ವಾರಾಣಸಿ, ಹುಬ್ಬಳ್ಳಿ–ಮೈಸೂರು ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಳಿಕ ನಡೆದ ಸಂವಾದ ಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದರು.

‘ತಜ್ಞರ ಸಮಿತಿಯು ಅರಣ್ಯ ನಾಶ ಮಾಡುವುದನ್ನು ತಡೆಯುವ ಸಲುವಾಗಿ ಸುರಂಗ ಮಾರ್ಗದ ಶಿಫಾರಸು ಮಾಡಿದೆ. ರಾಷ್ಟ್ರೀಯ ಹಸಿರು ಪೀಠವೂ (ಎನ್‌ಜಿಟಿ) ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಕೇಳಿದೆ.

ಇದು ಯೋಜನೆಯೊಂದರ ಅನುಷ್ಠಾನದ ಹಂತದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಅಗತ್ಯ ಮಾಹಿತಿಯನ್ನು ಕೊಡಲಿದ್ದೇವೆ. ಹುಬ್ಬಳ್ಳಿ– ಅಂಕೋಲಾ ಮಾರ್ಗ ಕುರಿತು 10 ವರ್ಷಗಳ ಹಿಂದೆ ನೀಡಲಾದ ವರದಿ ಆಧರಿಸಿ ಈಗ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದೆ. ಮೊದಲು ಒಂದು ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಈಗ 600 ಹೆಕ್ಟೇರ್‌ ಅರಣ್ಯದಲ್ಲಿ ರೈಲು ಮಾರ್ಗ ಹಾದುಹೋಗಲಿದೆ’ ಎಂದರು.

ರೈಲು ಸಂಚಾರ ಆರಂಭ:  ನವದೆಹಲಿಯ ರೈಲ್ವೆ ಪ್ರಧಾನ ಕಚೇರಿಯಿಂದ ಸಚಿವ ಸುರೇಶ ಪ್ರಭು ಅವರು ವಿಡಿಯೊ ಲಿಂಕ್‌ ಮೂಲಕ ಎರಡು ರೈಲುಗಳ ಸಂಚಾರಕ್ಕೆ ಹಸಿರುನಿಶಾನೆ ತೋರಿಸಿದರು. ಇದನ್ನು ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 1ರಲ್ಲಿ ಟಿ.ವಿ. ಪರದೆಯಲ್ಲಿ ನೇರ ಪ್ರಸಾರ ಮಾಡಲಾಯಿತು.

ಹುಬ್ಬಳ್ಳಿ– ವಾರಾಣಸಿ ಮತ್ತು ಹುಬ್ಬಳ್ಳಿ–ಮೈಸೂರು ರೈಲುಗಳಿಗೆ ಸಂಸದ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಯತ್ತ ಬರುವ ರೈಲಿಗೆ ಸಂಸದ ಪ್ರತಾಪ ಸಿಂಹ ಮೈಸೂರಿನಲ್ಲಿ ಹಸಿರು ನಿಶಾನೆ ತೋರಿಸಿದ್ದನ್ನು ಪರದೆಯಲ್ಲಿ ತೋರಿಸಲಾಯಿತು. ಸಂಜೆ 4.30ಕ್ಕೆ ಹುಬ್ಬಳ್ಳಿ–ಮೈಸೂರು ರೈಲು ಪ್ಲಾಟ್‌ಫಾರಂನಿಂದ ಹೊರಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT