ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಇಲಾಖೆ ಆಡಳಿತ ವೈಪಲ್ಯ

Last Updated 24 ಮೇ 2017, 7:07 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣದಲ್ಲಿ ಅಬಕಾರಿ ಇಲಾಖೆ ವಿಫಲವಾಗಿದ್ದು, ವಿವಿಧ ಸಮಸ್ಯೆಗೆ ಕಾರಣವಾಗಿದೆ ಎಂದು ಸದಸ್ಯರು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಆರೋಪಿಸಿದರು.

ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕಾಗಿ ಅಬಕಾರಿ ಸಚಿವರು, ಲೋಕಾಯುಕ್ತ, ಮೇಲಧಿಕಾರಿಗಳಲ್ಲಿ ಮನವಿ  ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಅಧ್ಯಕ್ಷೆ ಪುಷ್ಪಾ ರಾಜೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು, ಪಟ್ಟಣ ಸೇರಿದಂತೆ  ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದಾಗಿ ಯುವಜನರು ಹಾದಿ ತಪ್ಪುತ್ತಿದ್ದಾರೆ ಎಂದು ದೂರಿದರು.

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಮಜರುಗಿಸಿ, ಲೋಕಾಯುಕ್ತ ಸೇರಿ ಮೇಲಾಧಿಕಾರಿಗಳಿಗೆ ದೂರು ನೀಡಲು ನಿರ್ಣಯವನ್ನು ಕೈಗೊಳ್ಳಲಾಯಿತು. ಪಟ್ಟಣದಲ್ಲಿ ಸರಣಿ ಕಳ್ಳತನ, ಗೂಂಡಾಗಿರಿ, ಹಲ್ಲೆ ಪ್ರಕರಣಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗುತ್ತಿರುವ ಇಲ್ಲಿನ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಸಭೆ ಅಸಮಾಧಾನ ವ್ಯಕ್ತಪಡಿಸಿತು.

ತಾಲ್ಲೂಕಿನ ಸರ್ಕಾರಿ ಶಾಲೆ, ಸ್ಮಶಾನ, ಕಸ ವಿಲೇವಾರಿಗಾಗಿ ಸ್ಥಳದ ಸರ್ವೆ ಕಾರ್ಯ ಹಾಗೂ ಆ ಬಗ್ಗೆ ಚರ್ಚಿಸಿ, ಅನುಷ್ಠಾನಗೊಳಿಸಲು ಭೂಮಾಪನಾ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಸಭೆಗೆ ಬಂದಿಲ್ಲ ಎಂಬದಕ್ಕೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರ ಗೈರುಹಾಜರಿಗೆ  ಸತೀಶ್, ತಂಗಮ್ಮ, ಸಬಿತಾ ಚೆನ್ನಕೇಶವ ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯ ಬಗ್ಗೆ ಸಭೆ ಖಂಡಣಾ ನಿರ್ಣಯ ಕೈಗೊಂಡಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ 206 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ವ್ಯವಸ್ಥೆ ಹಾಗೂ ಫ್ಯಾನ್ ಅಳವಡಿಕೆಗೆ ₹ 17 ಲಕ್ಷ ಹಣ 2013-14ರಲ್ಲಿಯೇ ಬಿಡುಗಡೆಯಾಗಿತ್ತು. ಕೆಲಸ ಆಗದಿದ್ದರೂ ಬಿಲ್ ಪಾವತಿಯಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೆಸ್ವಾಮಿ, ತಾಲ್ಲೂಕಿಗೆ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದೆ. ಶಾಲೆಯನ್ನು ಸದ್ಯ ತೋಳೂರುಶೆಟ್ಟಳ್ಳಿಯ ಪ್ರಸಾದ್ ಪ್ರೌಢಶಾಲೆಯಿದ್ದ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದರು.

ಸಭೆಗೆ ಸೆಸ್ಕ್ ಹಾಗೂ ಬಿಎಸ್ಎನ್ಎಲ್‌ ಅಧಿಕಾರಿಗಳು ಗೈರು ಹಾಜರಾಗಿದ್ದರು. ಜಿಲ್ಲಾ ಪಂಚಾಯಿತಿ ನೀರಾವರಿ ವಿಭಾಗದ ಅಭಿಯಂತರ ರಮೇಶ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ಇದ್ದರು. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಾಲ್ಲೂಕು ಪಂಚಾಯಿತಿ ಇಒ ಸುನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT