ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌ಡಿ ‘ಗೈಡ್‌ ಶಿಪ್‌’ ರದ್ದಿಗೆ ಸಲಹೆ

Last Updated 27 ಮೇ 2017, 9:00 IST
ಅಕ್ಷರ ಗಾತ್ರ

ಧಾರವಾಡ: ವಿದ್ಯಾರ್ಥಿನಿ ಬಳಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಎಂ.ಆರ್.ಹಿರೇಮಠ ಅವರ ಪಿಎಚ್‌ಡಿ ‘ಗೈಡ್‌ ಶಿಪ್‌’ ವಾಪಾಸ್‌ ಪಡೆಯುವುದು ಸೇರಿದಂತೆ ಒಟ್ಟು ಮೂರು ಬಗೆಯ ಶಿಸ್ತು ಕ್ರಮ ತೆಗೆದುಕೊಳ್ಳಲು ಸಿಂಡಿಕೇಟ್‌ ಸದಸ್ಯ ಬಸವರಾಜ ಮರದ ನೇತೃತ್ವದ ಸಮಿತಿಯು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವರದಿ ನೀಡಿದೆ.

ಕನ್ನಡ ಅಧ್ಯಯನ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿನಿ ಬಸಮ್ಮ ಗಂಗನಳ್ಳಿ ಎಂಬುವವರ ಬಳಿ ₹ 2ಲಕ್ಷ ಲಂಚ ಕೇಳಿದ ಆರೋಪವನ್ನು ಹಿರೇಮಠ ಅವರು ಎದುರಿಸುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿಯು ಅವರಿಗೆ ಮಾರ್ಗದರ್ಶನ ಅರ್ಹತೆ ನೀಡಬಾರದು. ಅವರ ಬಳಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಇತರ ಪ್ರಾಧ್ಯಾಪಕರಿಗೆ ವಹಿಸಬೇಕು. ಸಾಧ್ಯವಾದರೆ, ಅವರ ವೇತನ ಹೆಚ್ಚಳ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ’ ಎಂದು ಕವಿವಿ ಮೂಲಗಳು ತಿಳಿಸಿವೆ.

ಹಿರೇಮಠ ಅವರ ವರ್ತನೆ, ಅಲಭ್ಯತೆ, ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ ಎಂದು ಕಳೆದ ನವೆಂಬರ್‌ನಲ್ಲಿ ಅವರ ವಿರುದ್ಧ ಕೆಲ ವಿದ್ಯಾರ್ಥಿಗಳು ಕವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲೂ ದೂರು ಸಲ್ಲಿಸಿದ್ದರು. ಆಗ ಕವಿವಿಯು ಸಿಂಡಿಕೇಟ್‌ ಸದಸ್ಯ ಬಸವರಾಜ ಮರದ ಅಧ್ಯಕ್ಷತೆಯಲ್ಲಿ ಸತ್ಯ ಶೋಧನಾ ಸಮಿತಿ ರಚಿಸಿತ್ತು.

ವಿದ್ಯಾರ್ಥಿಗಳ ದೂರಿಗೆ ಉತ್ತರ ನೀಡುವಂತೆ ಸಮಿತಿ ಸೂಚಿಸಿದಾಗ ಅವರು, ಕವಿವಿ ಕ್ರಮವನ್ನೇ ಅವರು ಪ್ರಶ್ನಿಸಿದ್ದರು. ಇದಕ್ಕೆ ಸಮಿತಿಯು ಉತ್ತರ ತಿರಸ್ಕರಿಸಿದ್ದಲ್ಲದೇ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು.

ಕರ್ನಾಟಕ ವಿವಿ ಆಡಳಿತ ವಿಭಾಗದ ಕುಲಸಚಿವ ಡಾ. ಎಂ.ಎನ್‌.ಜೋಶಿ ಪ್ರತಿಕ್ರಿಯಿಸಿ, ‘ಬಸವರಾಜ ಮರದ ನೇತೃತ್ವದ ಸಮಿತಿ ಸಲಹೆಗಳನ್ನು ಜಾರಿಗೆ ಕಾನೂನು ಕೋಶದ ಸಲಹೆ ಕೋರಿದಾಗ ಸಿಂಡಿಕೇಟ್‌ ಸಭೆ ಶಿಫಾರಸು ಅನುಮೋದಿಸಿದ ನಂತರ ಸಲಹೆ ನೀಡಲಾಗುವುದು ಎಂದು ಕೋಶದ ಮುಖ್ಯಸ್ಥರು ತಿಳಿಸಿದ್ದಾರೆ. ಮೇ 18 ರಂದು ನಡೆಯಲಿರುವ ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT