ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಸುಭದ್ರ ಸಮಾಜನಿರ್ಮಾಣ

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಸುಶಿಕ್ಷಿತ ಮಾನವ ಸಂಪನ್ಮೂಲವು ಒಂದು ದೇಶದ ಬಹುದೊಡ್ಡ ಆಸ್ತಿ. 2016ರ ಜನಗಣತಿ ಆಧಾರಿತ ಅಂಕಿ-ಅಂಶಗಳ ಪ್ರಕಾರ ನಮ್ಮ ದೇಶದ ಜನಸಂಖ್ಯೆ 121 ಕೋಟಿ. ಸಾಕ್ಷರತೆಯ ಪ್ರಮಾಣ ಶೇ. 74.04. ಇದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. 82.14 ಹಾಗೂ ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ. 65.46. 

ನಮ್ಮ ರಾಜ್ಯದ ಜನಸಂಖ್ಯೆ  6.11ಕೋಟಿ. ಸಾಕ್ಷರತೆಯ ಪ್ರಮಾಣ ಶೇ. 75.06. ಇದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. 82.85; ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. 68.13. ಹೀಗಿರುವಾಗ ಈ ಮಾನವ ಸಂಪನ್ಮೂಲವನ್ನು ಸಾಕ್ಷರತೆಯಲ್ಲಿ ಬಲವರ್ಧನೆಗೊಳಿಸಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯಗೊಳಿಸಿಕೊಳ್ಳಬೇಕೆಂಬುದು ಎಲ್ಲ  ಚಿಂತಕರ ಮಹದಾಶಯವಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿವೆ.

ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಸದ್ಯದ ಸಾಕ್ಷರತೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಅದಕ್ಕೆ ಕಾರಣಗಳನ್ನು ಚಿಂತಿಸಿದಾಗ ಇತ್ತೀಚಿನ ದಶಕಗಳಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳಿಂದ ಹಲವಾರು ಕಾರ್ಯಕ್ರಮಗಳು ರೂಪುಗೊಂಡಿವೆ.

ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ತುಂಬಾ ಮುಖ್ಯವಾಗಿ ದೇಶದ ಎಲ್ಲಾ ಮಕ್ಕಳಿಗೂ ಉಚಿತವಾದ ಗುಣಾತ್ಮಕ ಶಿಕ್ಷಣವನ್ನು ಕಡ್ಡಾಯಗೊಳಿಸಿ ಕಾನೂನು ವ್ಯಾಪ್ತಿಗೆ ಒಳಪಡಿಸಿರುವುದು.

ಈ ಕಡ್ಡಾಯ ಹಾಗೂ ಗುಣಾತ್ಮಕ ಶಿಕ್ಷಣದ ಆಶಯವನ್ನು ಈಡೇರಿಸಲು ಸಂವಿಧಾನದ 48ನೇ ಪರಿಚ್ಛೇದವು ಹತ್ತು ವರ್ಷಗಳ ಜವಾಬ್ದಾರಿಯುತ ಅವಧಿಗೆ ಗುರಿ ಹೊಂದಿತ್ತು. ಮುಂದುವರಿದು 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಯಿತು. ಅದರನ್ವಯ ಕಪ್ಪುಹಲಗೆ ಕಾರ್ಯಕ್ರಮ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ಹಾಗೂ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ಮುಂತಾದ ಅಂಗಸಂಸ್ಥೆಗಳು ಕಾರ್ಯೋನ್ಮುಖವಾದವು. 

ತದನಂತರ ಬಂದ ಸರ್ವ ಶಿಕ್ಷಣ ಅಭಿಯಾನವು ಒಂದು ಮಹತ್ತರ ಮೈಲುಗಲ್ಲು. 2002ರ 86ನೇ ಸಂವಿಧಾನ ತಿದ್ದುಪಡಿಯಿಂದ ಕಾಯಿದೆಯೊಂದು ಜಾರಿಯಾಗಿ, ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸಿತು.

ಈ ಎಲ್ಲ ಪರಿಣಾಮಕಾರಿ ಯೋಜನೆಗಳಿಂದ  ಯಶಸ್ಸು ಪಡೆದು ನೂರಕ್ಕೆ ತೊಂಬತ್ತರಷ್ಟಾದರೂ ಸಾಕ್ಷರತೆಯ ಗುರಿಯನ್ನು ಸಾಧಿಸಿದಾಗ ಮಾತ್ರ ಸರ್ಕಾರ ಹಾಗೂ ಇಲಾಖೆಯ ಶ್ರಮ ಸಾರ್ಥಕವಾಗಿ ದೇಶದ ಅಭಿವೃದ್ಧಿ ಯಂತ್ರ ಸರಳವಾಗಿ ಸಾಗುವಲ್ಲಿ ಸಫಲವಾಗುತ್ತದೆ.

ಗುಣಾತ್ಮಕ ಶಿಕ್ಷಣದಿಂದ ಸುಭದ್ರ ಸಮಾಜ  ಸಾಧ್ಯವೆಂಬುದನ್ನು ಮನಗಂಡು ಶಿಕ್ಷಣದ ಕೇಂದ್ರಬಿಂದುವಾದ ಆರರಿಂದ ಹದಿನಾಲ್ಕು ವರ್ಷಗಳ ಮಕ್ಕಳ ಮೇಲೆ ತನ್ನ ಇಡೀ ಗಮನವನ್ನು ಕೇಂದ್ರೀಕರಿಸಿದೆ.

ಪ್ರಾಥಮಿಕ ಶಿಕ್ಷಣವು ಮೂಲಭೂತ ಹಕ್ಕು – ಎಂಬುದನ್ನು ಪೂರಕವಾಗಿಟ್ಟುಕೊಂಡು ಮಕ್ಕಳ ಶಿಕ್ಷಣದ ಹಕ್ಕು ಜಾರಿಗೆ ಬಂದಿದೆ. ಅದರ ಅನ್ವಯ  ಆರರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗು ತನ್ನ ನೆರೆಹೊರೆಯಲ್ಲಿ ಶಾಲೆಯನ್ನು ಹೊಂದಿರಬೇಕು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬೇಕು. ಇದು ಈ ಕಾಯಿದೆಯ ತಾತ್ಪರ್ಯ. 2010ರ ಏಪ್ರಿಲ್ 1ರಿಂದ ದೇಶಾದ್ಯಂತ ಮಕ್ಕಳ ಹಕ್ಕು ಕಾಯಿದೆ ಜಾರಿಗೆ ಬಂದಿದೆ.

ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಹಕ್ಕುಗಳು ಯಾವುವೆಂದರೆ:
*ಮನೆಯ ಸಮೀಪದಲ್ಲಿರುವ ಶಾಲೆಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು.
* 1 ರಿಂದ 8ನೇ ತರಗತಿಯವರೆಗೆ ಉಚಿತ ಪ್ರಾಥಮಿಕ ಶಿಕ್ಷಣದ ಹಕ್ಕು.
*ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರೈಸಲು ಅಗತ್ಯವಾದ ಪಠ್ಯಪುಸ್ತಕ, ಸಮವಸ್ತ್ರ, ಬಿಸಿ ಊಟ, ಪ್ರಯಾಣ ಸೌಲಭ್ಯ ಮುಂತಾದ ಮೂಲಭೂತ ಸೌಕರ್ಯಗಳು ಪ್ರತಿಯೊಂದು ಮಗುವಿನ ಹಕ್ಕು.
*ಮಧ್ಯದಲ್ಲಿ ಶಾಲೆಯನ್ನು ಬಿಟ್ಟ ಅಥವಾ ಶಾಲೆಗೆ ದಾಖಲಾಗದೆ ಉಳಿದ 14 ವರ್ಷದ ಮಕ್ಕಳಿಗೆ ತಮ್ಮ ವಯಸ್ಸಿಗನುಗುಣವಾಗಿ ತರಗತಿಗೆ ದಾಖಲಾಗುವ ಹಕ್ಕು.
* ಆರ್ಥಿಕ, ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ಹಾಗೂ ಲಿಂಗತಾರತಮ್ಯ ಇಲ್ಲದ ಶಿಕ್ಷಣ ಪಡೆಯುವ ಹಕ್ಕು.
*ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಎಲ್ಲ ಮಕ್ಕಳಂತೆ ಉಚಿತ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕು.
ಈ ಹಕ್ಕುಗಳ ಸಂರಕ್ಷಿಸಿ, ಅವು ಜಾರಿಯಾಗುವಂತೆ ಸರ್ಕಾರ, ಶಿಕ್ಷಣ ಇಲಾಖೆ, ಚುನಾಯಿತ ಪ್ರತಿನಿಧಿಗಳು, ಮಾಧ್ಯಮಗಳು, ಸ್ಥಳೀಯ ಸಮುದಾಯ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣತಜ್ಞರು ಎಲ್ಲರೂ ಒಂದುಗೂಡಿ ಶ್ರಮಿಸಲು ಕೈ ಜೋಡಿಸಬೇಕು. ಆಗಷ್ಟೆ ಶಿಕ್ಷಣವು ಮೂಲಭೂತ ಹಕ್ಕು ಎಂಬ ನಿಲುವು ಸಾರ್ಥಕತೆಯನ್ನು ಪಡೆಯುತ್ತದೆ. ಶಿಕ್ಷಣದ ಮೂಲಕ ಗಟ್ಟಿಯಾದ ಸಮಾಜವನ್ನೂ ಅರ್ಥಪೂರ್ಣವಾದ ಪ್ರಜಾಪ್ರಭುತ್ವವನ್ನೂ ಕಟ್ಟಲು ಸಾಧ್ಯ. ಈ ಗುರಿ ಸಾಧನೆಗೆ ಸಮಾಜದ ಎಲ್ಲ ವರ್ಗಗಳೂ ಕಂಕಣಬದ್ಧರಾಗಬೇಕು.
ಸೋಮು ಕುದರಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT