ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ರತಿಮ ಬೀಸಣಿಗೆ ಕತ್ತಿನ ಓತಿ’ ಯ ಬಣ್ಣದ ತೊಗಲಿನ ಕಥೆ

Last Updated 28 ಮೇ 2017, 18:43 IST
ಅಕ್ಷರ ಗಾತ್ರ

ಎಲ್ಲಾ ಜೀವಿಗಳು ತಮ್ಮ ಪರಿಸರದ ಇತರ ಜೀವಿಗಳೊಂದಿಗೆ ಸಂವಹನ ನಡೆಸುತ್ತವೆ; ಇದು ಹಲವು ಪ್ರಾಣಿಗಳನ್ನು ಉದ್ದೇಶಿಸಿದ್ದೇ ಇರಬಹುದು, ಉದಾಹರಣೆಗೆ, ಹುಲಿಯ ಇರುವಿಕೆಯ ಬಗ್ಗೆ ಪ್ರಸಾರ ಮಾಡಲು ಎಚ್ಚರಿಕೆಯ ಕರೆಯನ್ನು ಕೋತಿಯೊಂದು ಹುಟ್ಟುಹಾಕುವುದು ಹಲವು ಪ್ರಾಣಿಗಳನ್ನು ಉದ್ದೇಶಿಸಿ; ಅಂತೆಯೇ, ಒಂದೇ ನಿರ್ದಿಷ್ಟ ಜೀವಿಯನ್ನು ಉದ್ದೇಶಿಸಿ ನಡೆಸಿರುವ ಸಂವಹನವೂ ಆಗಿರಬಹುದು, ಉದಾಹರಣೆಗೆ, ಗಂಡು ನವಿಲೊಂದು ಹೆಣ್ಣು ನವಿಲಿಗೊಸ್ಕರವೇ ಸುಂದರವಾದ ಗರಿಗಳನ್ನು ಪ್ರದರ್ಶಿಸುತ್ತದೆ. ಸಾಮಾನ್ಯವಾಗಿ ಸಂವಹನವು ಸ್ವೀಕರಿಸುವವರಿಗೆ ಒಂದು ಸಂದೇಶವನ್ನು ನೀಡುತ್ತದೆ; ಆದರೆ, ಒಂದೇ ಸಂವಹನವು ವಿವಿಧ ಜೀವಿಗಳಿಗೆ ವಿವಿಧ ಸಂದೇಶಗಳನ್ನು ನೀಡುವುದು ಸಾಧ್ಯವೇ?  ಭಾರತೀಯ ವಿಜ್ಞಾನ ಸಂಸ್ಥೆಯ ‘ಪರಿಸರ ವಿಜ್ಞಾನ ಕೇಂದ್ರ’ ದ ಸಂಶೋಧಕರ ತಂಡವು, ‘ಅಪ್ರತಿಮ ಬೀಸಣಿಗೆ ಕತ್ತಿನ ಓತಿ’ಯ (ಸಾರದ ಸುಪರ್ಬಾ) ಬಗ್ಗೆ ನಡೆಸಿದ ಅಧ್ಯಯನದಲ್ಲಿ, ಈ ಆಸಕ್ತಿದಾಯಕ ಪ್ರಶ್ನೆಯ ಬಗ್ಗೆ ಅನ್ವೇಷಣೆ ನಡೆಸಿದೆ.

ಪಶ್ಚಿಮ ಘಟ್ಟಗಳ ಉತ್ತರ ಒಣ ಭಾಗಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ ವಿಶಿಷ್ಟ ‘ಬೀಸಣಿಗೆ ಕತ್ತಿನ ಓತಿ’ಗಳಲ್ಲಿ, ಪುರುಷ ಓತಿಗಳು ‘ಡ್ಯೂಲಾಪ್’ ಎಂಬ ಚರ್ಮದ ಪದರವನ್ನು ತಮ್ಮ ಕೆಳದವಡೆಯ ಅಡಿಯಲ್ಲಿ, ಹೊಂದಿರುತ್ತವೆ; ಸಂಯೋಗದ ಋತುವಿನ ಆರಂಭಕ್ಕೂ ಮುನ್ನ ನೀಲಿ, ಕಪ್ಪು ಮತ್ತು ಕಿತ್ತಳೆ ಬಣ್ಣದ ತೇಪೆಗಳೊಂದಿಗೆ ಆಕರ್ಷಕ ‘ಡ್ಯೂಲಾಪ್’ಗಳ ರಚನೆ ಆರಂಭವಾಗುತ್ತದೆ. ಈ ಸುಂದರ ‘ಡ್ಯೂಲಾಪ್’ಗಳ ಕಾರಣದಿಂದಲೇ, ಈ ಓತಿಗೆ ‘ಸುಪರ್ಬ್ ಫ್ಯಾನ್ ಥ್ರೋಟೆಡ್ ಲಿಝರ್ಡ್’ ಎಂಬ ಹೆಸರು ಬಂದಿದೆ. ಈ ಜಾತಿಯ ಹೆಣ್ಣು ಓತಿಗಳು,  ಸಣ್ಣ ಬಿಳಿ ಬಣ್ಣದ ‘ಡ್ಯೂಲಾಪ್’ಗಳನ್ನು ಹೊಂದಿರುತ್ತವೆ; ಇದು ಲೈಂಗಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಆಕರ್ಷಕವಾಗಿರುವ ಅವಶ್ಯಕತೆ ಈ ಜಾತಿಯ ಹೆಣ್ಣು ಓತಿಗಳಿಗಿಲ್ಲ ಎಂಬುದನ್ನು ಸೂಚಿಸುತ್ತದೆ.

‘ಆಗ್ನೇಯ ಏಷ್ಯಾದ ಓತಿಗಳಲ್ಲೇ, ಹೆಚ್ಚು ಎದ್ದುಕಾಣುವ ಲೈಂಗಿಕ ಸಂಕೇತಗಳನ್ನು ಇವು ಪ್ರದರ್ಶಿಸುತ್ತವೆ; ಹಾಗಾಗಿ, ಸಂಕೇತಗಳ ವಿಕಾಸವನ್ನು ಪರೀಕ್ಷಿಸಲು ಇವು ಉತ್ತಮ ಮಾದರಿಯಾಗಿವೆ’ ಎನ್ನುತ್ತಾರೆ ಈ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಅಮೋದ್ ಜಾಂಬ್ರೆ.

ಸಾಮಾನ್ಯವಾಗಿ, ಗುಡ್ಡಗಾಡು ಪ್ರದೇಶಗಳಲ್ಲಿ ಬಂಡೆಗಳ ಮೇಲೆ ಕೂರುವ ಗಂಡು ಓತಿಗಳು, ಸುತ್ತಮುತ್ತಲಿನ ಗಂಡು ಹಾಗೂ ಹೆಣ್ಣು ಓತಿಗಳಿಗೆ ತಮ್ಮ ಅತ್ಯಾಕರ್ಷಕ ‘ಡ್ಯೂಲಾಪ್’ಗಳು ಗೋಚರಿಸುವಂತೆ ನೋಡಿಕೊಳ್ಳುತ್ತವೆ. ಗಂಡು ಓತಿಗಳ ಈ ನಡವಳಿಕೆಯು, ಒಂದಕ್ಕಿಂತ ಹೆಚ್ಚು ಸಂದೇಶ ಸ್ವೀಕೃತದಾರರೊಂದಿಗೆ ಸಂವಹನದ ಸಾಧ್ಯತೆಯನ್ನು ಸೂಚಿಸುತ್ತದೆ. ಜೊತೆಗಾರರನ್ನು ಹುಡುಕುವ ಮತ್ತು ಸ್ಪರ್ಧಿಗಳನ್ನು ದೂರ ಮಾಡುವ ಮೂಲಕ, ಈ ಓತಿಗಳು ಸಂತಾನೋತ್ಪತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತವೆ. ಇವೆಲ್ಲವೂ, ಯಶಸ್ವಿಯಾಗಿ ಸಂದೇಶಗಳನ್ನು ಬಳಸಿಕೊಂಡು ಸಂವಹನ ನಡೆಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಗುಣಲಕ್ಷಣಗಳನ್ನು ಯಾವ ಓತಿಗಳು ಹೊಂದಿರುತ್ತವೋ, ಅಂತಹಾ ಓತಿಗಳೇ ಸುಲಭವಾಗಿ ಸಂಗಾತಿಗಳನ್ನು ಪಡೆದುಕೊಳ್ಳುತ್ತವೆ; ಈ ಲಕ್ಷಣಗಳೇ ಜೀನ್‌ಗಳ ಮೂಲಕ  ಮುಂದಿನ ಪೀಳಿಗೆಗೆ ರವಾನೆಯಾಗುತ್ತವೆ.

‘ನಮ್ಮ ಅಧ್ಯಯನವು, ಹೆಣ್ಣು ಮತ್ತು ಗಂಡು ಓತಿಗಳೊಂದಿಗೆ ಬೇರೆ ಬೇರೆ ರೀತಿಯಲ್ಲಿ ಸಂವಹನ ನಡೆಸುವ ಸಲುವಾಗಿ, ಒಂದು ಗಂಡು ಓತಿಯ ‘ಡ್ಯೂಲಾಪ್’ನಲ್ಲಿ ವಿವಿಧ ಬಣ್ಣಗಳು, ವಿವಿಧ ಆಯ್ಕೆಯ ಒತ್ತಡಗಳ ಅಡಿಯಲ್ಲಿ ವಿಕಸನಗೊಂಡಿದೆಯೇ ಎಂಬುದನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ’ ಎನ್ನುತ್ತಾರೆ ಅವರು.

ಸಂಶೋಧಕರ ತಂಡವು, ಪ್ರಯೋಗಗಳನ್ನು ನಡೆಸಲು ಗಂಡು ಓತಿಗಳಂತೆ ಕಾಣುವ ಮತ್ತು ವರ್ತಿಸುವ ರೋಬೋಟ್‌ಗಳನ್ನು ನಿರ್ಮಿಸಿತು.  ‘ಇವುಗಳನ್ನು ಬಳಸುವುದರಿಂದ ಓತಿಯ ಸಂವಹನ ಸಂಕೇತಗಳ ಪ್ರತ್ಯೇಕ ಘಟಕಗಳನ್ನು ನಾವು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬಹುದು. ಹೊರಕ್ಷೇತ್ರದಲ್ಲಿ ಜೀವಂತ ಓತಿಗಳೊಂದಿಗೆ ಇದು ಅಸಾಧ್ಯವೇ ಸರಿ’ ಎನ್ನುತ್ತಾರೆ  ಜಾಂಬ್ರೆ. ಭಾರತದಲ್ಲಿ 'ಪ್ರಾಣಿ ವರ್ತನೆ'ಯ ಅಧ್ಯಯನ ಮಾಡಲು ರೋಬೋಟ್‌ ಬಳಸಿದ್ದು ಇದೇ ಮೊದಲು.

ಈ ಪ್ರಯೋಗದಲ್ಲಿ, ಕಾಡಿನ ಓತಿಗಳಿಗೆ ಗಾಜಿನ ಪೆಟ್ಟಿಗೆಯೊಳಗಿನ ಓತಿಯಂತಹ ರೋಬೋಟ್‌ ತೋರಿಸಲಾಯಿತು.  ಅವುಗಳ ಬಣ್ಣ ಮತ್ತು ವರ್ತನೆಗೆ, ಕಾಡಿನ ಓತಿಗಳು ನೀಡುವ ಪ್ರತಿಕ್ರಿಯೆಯನ್ನು, ಕ್ಯಾಮೆರಾದ ಮೂಲಕ ಗಮನಿಸಲಾಯಿತು. ಇಲ್ಲಿ ಗಮನಿಸಲಾದ ವಿಷಯವೆಂದರೆ, ಗಂಡು ಮತ್ತು ಹೆಣ್ಣು ಓತಿಗಳು ರೋಬೋಟ್ ಓತಿಯ ‘ಡ್ಯೂಲಾಪ್’ನ ವಿವಿಧ ಬಣ್ಣಗಳಿಗೆ  ವಿಭಿನ್ನವಾಗಿ ಪ್ರತಿಕ್ರಿಯಿಸಿದವು;  ಇದು, ಸಾಮಾಜಿಕ ಸಂವಹನಗಳಲ್ಲಿ ಬಣ್ಣಗಳ ಮತ್ತು ನಡವಳಿಕೆಯ ಪಾತ್ರದ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡುತ್ತದೆ.

ಸ್ಥಾಯಿ ಡ್ಯೂಲಾಪ್‌ಗಿಂತಾ ಚಲನೆಯಲ್ಲಿರುವ ಡ್ಯೂಲಾಪ್‌ಗಳು ಹೆಚ್ಚು ಪರಿಣಾಮಕಾರಿಯಾಗಿ ಆಕರ್ಷಕವಾಗಿದ್ದುದರಿಂದ, ಚಲಿಸುವ ಡ್ಯೂಲಾಪ್‌ಗಳಿಗೆ ಎಲ್ಲಾ ಓತಿಗಳೂ  ತ್ವರಿತ ಪ್ರತಿಕ್ರಿಯೆ ನೀಡಿದವು. ವಿವಿಧ ಬಣ್ಣಗಳು  ವಿವಿಧ ಪ್ರತಿಸ್ಪಂದನಗಳನ್ನು ಹೊರಹೊಮ್ಮಿಸಿದವು. ಹೆಣ್ಣು ಓತಿಗಳು ಕಿತ್ತಳೆಬಣ್ಣಕ್ಕೆ ಆದ್ಯತೆ ನೀಡಿದರೆ, ಗಂಡು ಓತಿಗಳು ನೀಲಿ ಮತ್ತು ಕಪ್ಪು ಬಣ್ಣಗಳಿಗೆ ಆದ್ಯತೆ ನೀಡಿದವು. ‘ಓತಿಗಳು ಈ ಎಲ್ಲಾ ಬಣ್ಣಗಳನ್ನು ಗ್ರಹಿಸಿದರೂ, ತಮ್ಮವೇ ಆದ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತವೆ. ಅವು ಯಾವುದಕ್ಕೆ ಗಮನ ನೀಡುತ್ತವೆ ಎಂಬುದು ಅವಕ್ಕೆ ಸಂಬಂಧಿಸಿದ ಮಾಹಿತಿಯ ಸಾಧ್ಯತೆಯನ್ನು ಪ್ರತಿಬಿಂಬಿಸುತ್ತದೆ’ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕಿ ಡಾ. ಮರಿಯಾ ಥಾಕರ್. 

‘ಈ ವಿಶಿಷ್ಟ ಓತಿಗಳಲ್ಲಿ ಕಿತ್ತಳೆ ಬಣ್ಣದ ಹೊಮ್ಮುವಿಕೆಯು, ಸ್ತ್ರೀ ಆಯ್ಕೆಯ ಫಲಿತಾಂಶವಾಗಿ ಮತ್ತು ಪುರುಷ-ಪುರುಷ ಸ್ಪರ್ಧೆಯ ಕಾರಣದಿಂದ ನೀಲಿ ಮತ್ತು ಕಪ್ಪು ಬಣ್ಣದ ಹೊಮ್ಮುವಿಕೆಯು ವಿಕಸನಗೊಂಡಿರುವ ಸಾಧ್ಯತೆಯಿದೆ. ಇದಕ್ಕೆ ಕಾರಣ, ಸಂಕೇತ ಹೊರಡಿಸುತ್ತಿರುವ ಜೀವಿಯ ಬಗ್ಗೆ,  ಗಂಡು ಮತ್ತು ಹೆಣ್ಣು ಓತಿಗಳಿಗೆ ವಿವಿಧ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ಆಸಕ್ತಿ ಇರಬಹುದು. ಇದು ಬಹುವರ್ಣದ ಡ್ಯೂಲಾಪ್‌ಗಳ ವಿಕಾಸವನ್ನು ವಿವರಿಸುತ್ತದೆ’ ಎನ್ನುತ್ತಾರೆ ಜಾಂಬ್ರೆ.
2016ರಲ್ಲಿ ಪತ್ತೆಯಾದ ‘ಅಪ್ರತಿಮ ಬೀಸಣಿಗೆ ಕತ್ತಿನ ಓತಿ’ಯ ವರ್ತನೆಯನ್ನು ಅರ್ಥಮಾಡಿಕೊಳ್ಳುವುದರ ಜತೆಗೆ ಪ್ರಕೃತಿಯ ಬಣ್ಣಗಳು  ಮತ್ತು ಮಾದರಿಗಳ ಅಗಾಧ ವೈವಿಧ್ಯದ ಹಿಂದಿರುವ ಕಾರಣ ಅರ್ಥಮಾಡಿಕೊಳ್ಳುವಲ್ಲಿಯೂ ಈ ಸಂಶೋಧನೆಯು ಮೈಲುಗಲ್ಲು. 

– ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT