ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನ ದಾಂಪತ್ಯಕ್ಕೆ ಸಾಹಿತ್ಯದ ಸಾಂಗತ್ಯ

Last Updated 20 ಡಿಸೆಂಬರ್ 2019, 8:00 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಲೋಕಕ್ಕೆಎಲ್‌.ಎಸ್‌.ಶೇಷಗಿರಿರಾವ್ ಏಕೆ ಮುಖ್ಯ ಎಂಬುದನ್ನು ಮನಗಾಣಿಸುವ ಈ ಲೇಖನ ‘ಭೂಮಿಕಾ’ ಪುರವಣಿಯಲ್ಲಿ2017ರ ಜೂನ್‌ 3ರಂದು ಪ್ರಕಟವಾಗಿತ್ತು.ಶೇಷಗಿರಿರಾಯರ ಸಾಹಿತ್ಯ ಪ್ರೀತಿಯ ಜೊತೆಜೊತೆಗೆ ಪತ್ನಿ ಭಾರತಿ ಅವರ ಕ್ರಿಯಾಶೀಲತೆಗೂ ಇದುಕನ್ನಡಿ ಹಿಡಿಯುತ್ತದೆ.

---

ಈ ಕೃತಿಯ ಹಿಂದೆ ಅವರ ಪತ್ನಿ ಭಾರತಿಯವರ ಕ್ರಿಯಾಶೀಲತೆ, ಸಂಕಲ್ಪಶಕ್ತಿಗಳು ಕೆಲಸ ಮಾಡುತ್ತಿವೆ. ವೃದ್ಧದಂಪತಿಯ ಈ ಸಾಹಿತ್ಯಸಾಂಗತ್ಯ ಅಪೂರ್ವ; ಅನನ್ಯ....

‘ತೌಲನಿಕ ಅಧ್ಯಯನ ಮಾಡೋದು ಸಾಕಷ್ಟು ಬಾಕಿ ಇದೆ’

‘ಇಂಗ್ಲಿಷ್‌ ಸಾಹಿತ್ಯ ಒಂದು ದೊಡ್ಡ ಸಾಗರ. ಓದೋದು, ಬರಿಯೋದು ಎಷ್ಟೊಂದು ಇದೆ. ಬರೀಬೇಕು... ಆಗ್ತಿಲ್ಲ.’

‘ಇವಳು ಈಗೀಗ ನನ್ನ ಹತ್ರ ಜಗಳ ಆಡ್ತಾಳೆ. ನಂಗೆ ಕೈಕಾಲು ಆಡ್ತಿಲ್ಲ. ಅವಳಿಗೆ ಡಿಪೆಂಡ್‌ ಆಗಿದ್ದೇನೆ. ಒಬ್ಬಳೇ ಎಲ್ಲಾನೂ ಮಾಡ್ಬೇಕಲ್ಲ. ಸುಸ್ತಾಗಿದ್ದಾಳೆ...’

– ಹೀಗೆಂದು ತಡೆದು ತಡೆದು ಒಂದೊಂದು ಪದವನ್ನೂ ಕಷ್ಟದಿಂದ ಹೊರಹಾಕುತ್ತಾ ಹೋದರು ಮೇಷ್ಟ್ರು. ಎಷ್ಟೇ ಸನಿಹಕ್ಕೆ ಸರಿದರೂ ಅವರ ಮಾತು ಅರ್ಥವಾಗುತ್ತಿರಲಿಲ್ಲ. ಭಾರತಿ ಮೇಡಂ ಮುಖ ನೋಡಿದರೆ ಗಂಡ ಹೇಳಿದ್ದನ್ನು, ಅರ್ಧಕ್ಕೆ ನಿಂತ ಮಾತನ್ನು ಒಪ್ಪಿಸುತ್ತಿದ್ದರು.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಎಲ್.ಎಸ್. ಶೇಷಗಿರಿರಾಯರ ಮನೆಗೆ ಕೆಲವು ದಿನಗಳ ಹಿಂದೆ ಭೇಟಿ ನೀಡಿದಾಗ ಇಂಥದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಯಿತು. ರಾಯರು ಹಣ್ಣಾಗಿರುವ ಪರಿ ಕಂಡು ಖೇದ ಎನಿಸಿದರೂ, ಪತಿಯ ಜ್ಞಾನ ಸಂಪತ್ತನ್ನು ಮುಂದಿನ ಪೀಳಿಗೆಗೆ ದಾಟಿಸುವ ಕರ್ತವ್ಯಪ್ರಜ್ಞೆ ಭಾರತಿ ಅಮ್ಮನಲ್ಲಿ ಕಂಡುಬಂತು.

ಪತಿಯ ಸಾಹಿತ್ಯ ಜ್ಞಾನದ ಬಗ್ಗೆ ಮಾತನಾಡುವಾಗ ಅವರ ಕಣ್ಣಲ್ಲಿ ಅಪೂರ್ವ ಹೊಳಪು. ಮುಖದಲ್ಲಿ ವಿಶೇಷ ಕಳೆ! ಸಾಹಿತ್ಯಸಾಂಗತ್ಯದ ಮಹಿಮೆಯೇ ಇದು ಎಂದು ಆ ಕ್ಷಣ ಅನಿಸಿದ್ದು ಸುಳ್ಳಲ್ಲ.

‘ಕೆಲವು ದಿನಗಳ ಹಿಂದಿನವರೆಗೂ ವಾಕರ್‌ ನೆರವಿನಲ್ಲಿ ಮನೆಯೊಳಗೆ, ಹೊರಗೆ ವರಾಂಡದಲ್ಲಿ ನಡೀತಿದ್ರು. ಈಗ ಸ್ವಲ್ಪವೂ ತ್ರಾಣವೇ ಇಲ್ಲವಾಗಿದೆ. ಆದರೆ ಜ್ಞಾಪಕಶಕ್ತಿ ಒಂದು ಚೂರೂ ಕುಂದಿಲ್ಲ; ಎಕ್ಸಲೆಂಟ್‌ ಅಗಿದೆ. ಕನ್ನಡಕ ಹಾಕಿಕೊಂಡರೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. ಈಗೀಗ ಯಾವ್ಯಾವುದೋ ಹೊತ್ತಿನಲ್ಲಿ ‘‘ಏನೋ ಹೊಳೀತು ಬರ್ಕೊಂಡುಬಿಡು. ಆಮೇಲೆ ನನಗೂ ಮರೆತುಹೋದೀತು. ಇನ್ನೇನೋ ಹೊಳೆದೀತು. ನಿನ್ನ ಕೆಲಸ ಆಮೇಲಾದರೂ ಮಾಡ್ಕೋಬಹುದು’’ ಅಂತಾರೆ.

‘ನಾನೂ ಏನೇ ಕೆಲಸ ಮಾಡ್ತಿದ್ರೂ ಅದನ್ನು ಬಿಟ್ಟು ಅವರು ಡಿಕ್ಟೇಟ್‌ ಮಾಡಿದ್ದನ್ನೆಲ್ಲಾ ಬರೆದಿಟ್ಕೋತೀನಿ. ಈಗೀಗ ಅವರನ್ನು ಇಂಗ್ಲಿಷ್‌ ಕಾವ್ಯ ತುಂಬಾ ಕಾಡತೊಡಗಿದೆ. ಅವರಿಗೆ ಶಕ್ತಿ ಇದ್ದಿದ್ದರೆ ಅವರೇ ಬರೀತಿದ್ರು. ಈಗ ಕೈಲಾಗಲ್ಲ ಅಂತ ಸುಮ್ಮನಾದ್ರೆ ಅವರ ಜ್ಞಾನ ವ್ಯರ್ಥವಾಗುತ್ತದೆ. ಮತ್ತೆ ಅದೇ ಕೊರಗು ಆಗುತ್ತದೆ. ಅವರ ಸ್ಮರಣಾಶಕ್ತಿ ಕುಂದದೇ ಇರುವುದು ನನ್ನ ಸುದೈವವಷ್ಟೇ ಅಲ್ಲ, ಕನ್ನಡದ ಸುದೈವವೂ ಹೌದು. ಏಕೆಂದರೆ, ಅವರಲ್ಲಿ ಬೃಹತ್‌ ಜ್ಞಾನಸಾಗರವೇ ಇದೆ.


ಕನ್ನಡ ಸಾಹಿತ್ಯಲೋಕದಲ್ಲಿ ದಾಖಲಾಗಬೇಕಾದ ಒಂದಿಷ್ಟನ್ನಾದರೂ ಅವರಿಂದ ಹೇಳಿಸಿಕೊಂಡು ಬರೆದುಕೊಳ್ಳಬೇಕು ಎಂಬ ಉಮೇದು ನನ್ನದು. ದಿನೇದಿನೇ ಅವರ ಆರೋಗ್ಯಸ್ಥಿತಿ ಹದಗೆಡುತ್ತಿದೆ. ಅಂದುಕೊಂಡಿದ್ದನ್ನು ಬರೆಯಲಾಗುತ್ತಿಲ್ಲ ಎಂಬ ನೋವು ಅವರಲ್ಲಿದೆ. ಅವರ ಸಾಹಿತ್ಯ ಚಿಂತನೆಗಳು, ಆಗಬೇಕಾಗಿದ್ದ ಸಾಹಿತ್ಯಕೃಷಿ ಅರ್ಧದಲ್ಲೇ ನಿಂತುಹೋಗುತ್ತದೆಯೇನೋ – ಎಂಬ ನೋವು ನನ್ನನ್ನು ಈಗೀಗ ಹೆಚ್ಚು ಕಾಡತೊಡಗಿದೆ.

‘ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ ಮೇಷ್ಟ್ರನ್ನು ಈಗಲೂ ಬಹುವಾಗಿ ಕಾಡುತ್ತಿದೆ. ಟಿ.ಎಸ್‌. ಎಲಿಯಟ್‌ನ ಕಾವ್ಯಗಳ ಬಗ್ಗೆ ಆಗಾಗ ಪ್ರಸ್ತಾಪ ಮಾಡುತ್ತಾರೆ. ‘‘ಮೊನ್ನೆ ತೌಲನಿಕ ಅಧ್ಯಯನದ ಬಗ್ಗೆ ಏನೋ ಹೇಳಿದೆ ನೋಡು ಅದನ್ನು ಸ್ವಲ್ಪ ಓದಿಹೇಳು. ಅದಕ್ಕೆ ಏನೋ ಸೇರಿಸಬೇಕಿದೆ’’ ಅಂತಾರೆ.

‘ಮೇಷ್ಟ್ರು, ಹೊಳೆದದನ್ನೆಲ್ಲಾ ಉಕ್ತಲೇಖನವೇನೋ ಮಾಡಿಸಿ ನಿಟ್ಟುಸಿರು ಬಿಡಬಹುದು. ಆದರೆ ಅದನ್ನು ಸಂಬಂಧಿಸಿದ ವಿಷಯದೊಂದಿಗೇ ಸೇರಿಸಿ ಅಂತಿಮ ಪ್ರತಿ ಸಿದ್ಧಪಡಿಸುವ ಕೆಲಸ ಯಾವಾಗ ಮಾಡುತ್ತೀರಿ’ ಎಂದು ಕೇಳಿದರೆ ಭಾರತಿ ಅಮ್ಮ ನಗುತ್ತಾರೆ.

‘ಕರೆಕ್ಟಾಗಿ ಕೇಳಿದ್ರಿ. ಅದು ನಿಜಕ್ಕೂ ದೊಡ್ಡ ಸವಾಲು. ಎಲಿಯಟ್‌ ಕಾವ್ಯವಿಮರ್ಶೆಯನ್ನು ತೌಲನಿಕ ಅಧ್ಯಯನಕ್ಕೆ ಜೋಡಿಸಿಬಿಟ್ಟರೆ? ಅದಕ್ಕೆ ರಾತ್ರಿ ಇವರು ನಿದ್ದೆ ಮಾಡಿದ ನಂತರ ಈ ಅಂತಿಮ ಪ್ರತಿ ಸಿದ್ಧ ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೆಲವೊಮ್ಮೆ ರಾತ್ರಿ 12.30ರವರೆಗೂ ಬರೀತಾ ಇರ್ತೀನಿ. ಅಂದಂದಿನ ಉಕ್ತಲೇಖನವನ್ನು ಅಂದಂದೇ ಫೇರ್‌ ಮಾಡಿದ್ರೆ ನಂಗೆ ಸಮಾಧಾನ. ಇಲ್ಲದಿದ್ದರೆ ಯಾವುದೋ ಇನ್ಯಾವುದಕ್ಕೋ ಜೋಡಿಸಿಬಿಟ್ರೆ ಅನ್ನೋ ಆತಂಕ’ ಎಂದು ಮತ್ತೆ ನಕ್ಕರು, ಭಾರತಿ ಅಮ್ಮ.

ದಣಿವು, ಛಲ, ವಿಷಾದ, ಹೆಮ್ಮೆ. ಸಂಕಲ್ಪಶಕ್ತಿಗಳ ಸಮಪಾಕದಂತಿತ್ತು ಅವರ ನಗೆ. ಭಾರತಿ ಅಮ್ಮ ಬೆಳಿಗ್ಗೆ ಐದೂ ಮುಕ್ಕಾಲರಿಂದ ಆರು ಗಂಟೆಯೊಳಗೆ ಎದ್ದರೆ ಅರ್ಧರಾತ್ರಿವರೆಗೂ ಅವರಿಗೆ ವಿರಾಮ ಸಿಗುವುದಿಲ್ಲ. ಸ್ವಲ್ಪ ಪುರುಸೊತ್ತು ಇದೆ ಎಂದೆನಿಸಿದರೂ ಪತ್ರಿಕೆ ಓದುವುದು ಇರುತ್ತದಲ್ಲ?

‘ಪತ್ರಿಕೆ ಎಂದರೆ ನಮ್ಮ ಪಾಲಿಗೆ ‘ಪ್ರಜಾವಾಣಿ’ ಮಾತ್ರ. ಬೆಳಿಗ್ಗೆ ಮುಖಪುಟದ ಸುದ್ದಿಗಳನ್ನು ಸಮಗ್ರವಾಗಿ ಓದಿಹೇಳುತ್ತೇನೆ. ಆಮೇಲೆ ಕೊನೆಯ ಪುಟದವರೆಗೂ ಶೀರ್ಷಿಕೆಗಳನ್ನು, ಚಿತ್ರ ಶೀರ್ಷಿಕೆಗಳನ್ನು, ಪುರವಣಿಗಳಲ್ಲಿ ಬಂದಿರುವ ಲೇಖನಗಳನ್ನು ಓದಿಹೇಳುತ್ತೇನೆ. ಸಂಜೆ ಇಲ್ಲವೇ ರಾತ್ರಿ ಸಂಪಾದಕೀಯ ಪುಟಕ್ಕೆ ಮೀಸಲು. ಓದಿದ ನಂತರ ಚರ್ಚೆ ಮಾಡುತ್ತೇವೆ. ಈ ಓದುವ ಸಮಯದಲ್ಲೇ ನನಗೆ ವಿಶ್ರಾಂತಿ ಸಿಗೋದು’ ಎಂದರು.

ಬಿಳಿ ಹಾಳೆ ಮತ್ತು ಪೆನ್ನು ಲಗತ್ತಿಸಿದ ರಟ್ಟು ಟೀಪಾಯಿಯ ಮೇಲೆ ವಿರಾಜಮಾನವಾಗಿತ್ತು. ಯಾವುದೇ ಕ್ಷಣದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಜ್ಜಾಗಿ ನಿಂತ ಸಿಪಾಯಿಯಂತೆ! ಭಾರತಿ ಅಮ್ಮನ ಮಾತಿನ ರೂಪಕದಂತೆಯೂ!

‘ನೀನು ಬರೆಯಬೇಕಾಗಿತ್ತು!’
ಶೇಷಗಿರಿರಾಯರ ಸಾಹಿತ್ಯಕೃಷಿಗೆ ಭಾರತಿ ಅವರು ಲೇಖನಿಯಾಗಿರುವುದು ಇದೇ ಮೊದಲಲ್ಲ; ಇದು ಹಲವು ವರ್ಷಗಳಿಂದ ನಡೆದುಬಂದಿರುವ ಅಭ್ಯಾಸ. ‘ನಾನು ಹೇಳಿದ್ದನ್ನು ಸರಿಯಾಗಿ ಗ್ರಹಿಸಿ ಒಂದೂ ತಪ್ಪಿಲ್ಲದಂತೆ ಬರೆದುಕೊಳ್ತೀಯಲ್ಲ’ ಎಂದು ಪತ್ನಿಯ ಜಾಣ್ಮೆಯನ್ನು ಎಷ್ಟೋ ಬಾರಿ ಮೆಚ್ಚಿ ನುಡಿದಿದ್ದರಂತೆ.

‘ನೀನೂ ಸಾಹಿತ್ಯದ ವಿದ್ಯಾರ್ಥಿಯಾದ್ದರಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಿದ್ದರೆ ನನ್ನನ್ನೂ ಮೀರಿಸುತ್ತಿದ್ದೆಯೇನೋ.? ನಿನಗೆ ಅವಕಾಶವೇ ಕೊಡಲಿಲ್ಲ ನಾನು. ಬರೆಯುವಂತೆ ಪ್ರೋತ್ಸಾಹಿಸಲೂ ಇಲ್ಲ. ನನ್ನ ಸಾಹಿತ್ಯಕೃಷಿಗೇ ಬಳಸಿಕೊಂಡೆ’ ಎಂದು ಮೇಷ್ಟ್ರು ಇತ್ತೀಚೆಗೆ ಪದೇಪದೇ ಹೇಳುತ್ತಿರುತ್ತಾರಂತೆ. ಆದರೆ ಗಂಡನ ಬೆಳವಣಿಗೆಯಲ್ಲೇ ಖುಷಿ ಕಾಣುವ ಭಾರತಿ ಅಮ್ಮನಿಗೆ ತಾನೂ ಬರೆಯಬೇಕು ಎಂದು ಅನಿಸಲೇ ಇಲ್ಲವಂತೆ!


ಭಾರತಿ ಶೇಷಗಿರಿರಾವ್
ಎಲ್‌.ಎಸ್‌. ಶೇಷಗಿರಿರಾಯರು ಮತ್ತು ಭಾರತಿ ಅವರದ್ದು ಪ್ರೇಮವಿವಾಹ (1979). ಮೇಷ್ಟ್ರು ಧಾರವಾಡದವರಾದರೆ, ಭಾರತಿ ಕೋಲಾರದವರು.

ಭಾರತಿಯವರು ಓದಿದ್ದು ವಿಜ್ಞಾನ ಪದವಿ. ಆದರೆ ಕನ್ನಡ ಮತ್ತು ಆಂಗ್ಲಸಾಹಿತ್ಯದ ಓದು ಎಂದರೆ ಮೊದಲಿನಿಂದಲೂ ಅಚ್ಚುಮೆಚ್ಚು. 1965ರಲ್ಲಿ ಮೊದಲ ದರ್ಜೆಯಲ್ಲಿ ವಿಜ್ಞಾನಪದವಿ ಉತ್ತೀರ್ಣರಾದರು. ಮರುವರ್ಷ ಕೋಲಾರದಿಂದ ಬೆಂಗಳೂರಿಗೆ ತಂದೆಗೆ ವರ್ಗಾವಣೆ. ಗವಿಪುರಂ ಬಡಾವಣೆಯ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ರಸ್ತೆಯಲ್ಲಿ ನೆಲೆಸಿದ್ದು. ಅದೇ ವರ್ಷ ತಂದೆ ಹಠಾತ್ತನೆ ನಿಧನ.

ಭಾರತಿಯವರು ಎಜಿಎಸ್‌ ಕಚೇರಿಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅದೇ ಹೊತ್ತಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT