ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮಾರಾಟ ನಿರ್ಬಂಧದಿಂದ ಹಿನ್ನಡೆ

ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಎಚ್ಚರಿಕೆ
Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಜಾನುವಾರುಗಳ ಮಾರಾಟದ ಮೇಲೆ ನಿರ್ಬಂಧ ವಿಧಿಸಿರುವುದು ಆರ್ಥಿಕವಾಗಿ ಲಾಭದಾಯಕವಲ್ಲ’ ಎಂದು  ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಮಣಿಯನ್‌ ಅವರು ಎಚ್ಚರಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟದ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧವು, ಆರ್ಥಿಕತೆಯ ಲಾಭದಾಯಕ ದೃಷ್ಟಿಯಿಂದ   ನೋಡಿದರೆ ಜಾಣ ನಿರ್ಧಾರವಲ್ಲ’ ಎಂದು  ಅವರು ವಿಶ್ಲೇಷಿಸಿದ್ದಾರೆ.

ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದಕ್ಕೆ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಈಗಾಗಲೇ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ದನ ಮತ್ತು ಎಮ್ಮೆ ಮಾಂಸಕ್ಕೆ ಕೊರತೆ ಕಂಡು ಬಂದಿದೆ. ಇನ್ನೊಂದೆಡೆ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತಿದೆ.  ಈ ಸಂದರ್ಭದಲ್ಲಿ ಸುಬ್ರಮಣಿಯನ್‌ ಅವರು ನೀಡಿರುವ ಹೇಳಿಕೆ ಪರೋಕ್ಷವಾಗಿ ಸರ್ಕಾರದ ನಿಲುವನ್ನೇ ಟೀಕಿಸುವ ರೂಪದಲ್ಲಿ ಇದೆ.

‘ದೇಶಿ ಆರ್ಥಿಕತೆಯಲ್ಲಿ ಹೈನುಗಾರಿಕೆ ಮತ್ತು ಜಾನುವಾರು ಉದ್ಯಮ ಎರಡೂ ಪ್ರಮುಖವಾಗಿವೆ. ಮಾಂಸದ ಉದ್ದೇಶಕ್ಕೆ    ಮಾರಾಟ ಮಾಡುವುದಕ್ಕೆ  ನಿರ್ಬಂಧ ವಿಧಿಸಿರುವುದು  ಜಾನುವಾರುಗಳ ಸಂಗೋಪನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅದೊಂದು ಕಡಿಮೆ ಲಾಭದಾಯಕ ವಹಿವಾಟು ಆಗಲಿದೆ’ ಎಂದೂ ಅವರು ಎಚ್ಚರಿಸಿದ್ದಾರೆ.

ಕೃಷಿ ವಿಜ್ಞಾನದ ರಾಷ್ಟ್ರೀಯ ಅಕಾಡೆಮಿಯ  ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇದೆ. ಇಂತಹ ನಿರ್ಧಾರಕ್ಕೆ ಬರುವ ಮುನ್ನ ಅದರ ಆರ್ಥಿಕ ನಷ್ಟವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದನ್ನು ಯಾವುದೇ   ಕಾರಣಕ್ಕೂ ನಿರ್ಲಕ್ಷಿಸಬಾರದು.

‘ಇಂತಹ ನಿಷೇಧದ  ಪರಿಣಾಮವಾಗಿ ಜಾನುವಾರುಗಳನ್ನು ಸಾಕುವ ವೃತ್ತಿ ಕಡಿಮೆ ಲಾಭದಾಯಕವಾಗಿ ಪರಿಣಮಿಸಲಿದೆ.  ಜೀವನೋಪಾಯಕ್ಕೆ ಜಾನುವಾರುಗಳ ಸಂಗೋಪನೆಯನ್ನೇ ನೆಚ್ಚಿಕೊಂಡಿರುವವರಿಗೆ ಇದು ಹಲವು ಬಗೆಗಳಲ್ಲಿ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ.

‘ಸಾಮಾಜಿಕ ನಿಯಮಗಳು ಜಾನುವಾರುಗಳ ಮಾರುಕಟ್ಟೆಗಳ ಸಹಜ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದರೆ ದನಗಳ ನಿರ್ವಹಣೆ ವೆಚ್ಚ ಹೆಚ್ಚಲಿದೆ. ಕಸಾಯಿಖಾನೆಗಳಿಗೆ ಮಾರಾಟ ಮಾಡದ ಕಾರಣಕ್ಕೆ ಆಗುವ ನಷ್ಟ ಒಂದೆಡೆ ಇದ್ದರೆ,  ಮುದಿ ಜಾನುವಾರುಗಳ ನಿರ್ವಹಣೆಗೆ ಮಾಡುವ  ಹೆಚ್ಚುವರಿ ವೆಚ್ಚವು ಇನ್ನಷ್ಟು ಹೊರೆಯಾಗಿ ಪರಿಣಮಿಸಲಿದೆ.

‘ಅನುತ್ಪಾದಕ ಮುದಿ ಜಾನುವಾರುಗಳ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕಾಗುತ್ತದೆ. ಅವುಗಳನ್ನು ಸಮರ್ಪಕವಾಗಿ ಸಲಹಬೇಕಾಗುತ್ತದೆ. ಇಲ್ಲದಿದ್ದರೆ  ಜಾನುವಾರುಗಳಲ್ಲಿ ಕಾಲುಬಾಯಿಯಂತಹ ರೋಗರುಜಿನಗಳು ವ್ಯಾಪಕವಾಗಿ ಹಬ್ಬುತ್ತವೆ. ಕಾಯಿಲೆ  ನಿಯಂತ್ರಣಕ್ಕೆ ಇನ್ನಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ. ಇದು ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ’ ಎಂದೂ ಹೇಳಿದ್ದಾರೆ.

ಜಾನುವಾರು ಮಾರಾಟಕ್ಕೆ ಸಂಬಂಧಿಸಿದ ಹೊಸ ನಿಯಮದ ಪರಿಣಾಮದ ಬಗ್ಗೆ   ಗಮನಹರಿಸಲಾಗುತ್ತಿದೆ ಎಂದು ಕೇಂದ್ರ  ಸರ್ಕಾರ ಹೇಳಿದ ಬೆನ್ನಲ್ಲೇ ಸುಬ್ರಮಣಿಯನ್ ಅವರು ಈ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ. ಮಾಂಸಕ್ಕಾಗಿ ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಳೆದ ತಿಂಗಳು ಹೊಸ ನಿಯಮ ಪ್ರಕಟಿಸಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.

* ಗೋಮಾಂಸ ನಿಷೇಧ ಮತ್ತು ಅದಕ್ಕೆ ಸಂಬಂಧಿಸಿದ ವಿವಾದದಿಂದ ಸಂಕಷ್ಟದಲ್ಲಿದ್ದ ಕುಕ್ಕುಟೋದ್ಯಮಕ್ಕೆ ವರದಾನವಾಯಿತು.

–ಅಸೋಚಾಂ ವಕ್ತಾರ

ಗೋಹತ್ಯೆ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ
ಲಖನೌ (ಪಿಟಿಐ): ಗೋ ಹತ್ಯೆ ಮಾಡುವವರು ಮತ್ತು ಹಾಲು ಕರೆಯುವ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್ಎ) ಮತ್ತು ಗೂಂಡಾ ನಿಯಂತ್ರಣ ಕಾಯ್ದೆಯ ಅನ್ವಯ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ.

ಗೋ ಹತ್ಯೆ ಮತ್ತು ಹಾಲು ಕರೆಯುವ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡುವುದನ್ನು ನಿಷೇಧಿಸಿ ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ  ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರಲಿಲ್ಲ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪೊಲೀಸ್ ಮಹಾ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ವ್ಯಕ್ತಿಯನ್ನು ಕಾರಣ ನೀಡದೆ ಬಂಧಿಸಿ ಎಷ್ಟು ದಿನ ಬೇಕಾದರೂ ಬಂಧನದಲ್ಲಿ ಇಡಲು ರಾಷ್ಟ್ರೀಯ ಭದ್ರತಾ ಕಾಯ್ದೆಯಲ್ಲಿ ಅವಕಾಶವಿದೆ.

ಗೂಂಡಾ ನಿಯಂತ್ರಣ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಾದರೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಕರೆದಾಗಲೆಲ್ಲ ಹೋಗಬೇಕು ಮತ್ತು ಠಾಣೆಗೆ ನಿಯಮಿತವಾಗಿ ಹಾಜರಾಗಿ ಸಹಿ ಮಾಡಬೇಕಾಗುತ್ತದೆ.

ಇದಲ್ಲದೆ ಬಂಧಿಸಿದ  ವ್ಯಕ್ತಿಯನ್ನು 60 ದಿನಗಳವರೆಗೆ ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಪೊಲೀಸರಿಗೆ ಅಧಿಕಾರವಿರುತ್ತದೆ.

ಗೋರಕ್ಷಣೆ ಹೆಸರಿನ ಹಿಂಸೆಗೂ ಕಡಿವಾಣ: ಗೋ ರಕ್ಷಣೆಯ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪೊಲೀಸ್ ಮಹಾ ನಿರ್ದೇಶಕರು ಆದೇಶಿಸಿದ್ದಾರೆ.

ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ, ಗುಪ್ತಚರ ಇಲಾಖೆ ಮೂಲಕ ಅವರ ಪೂರ್ವಾಪರ ಕಲೆಹಾಕಬೇಕು ಎಂದು ಆದೇಶಿಸಲಾಗಿದೆ.

ಮುಖ್ಯಾಂಶಗಳು

* ಮುದಿ ಜಾನುವಾರುಗಳಿಂದ ರೋಗ–ರುಜಿನ
* ಆರ್ಥಿಕತೆಗೆ ಹೊಡೆತ

ಕೋಳಿ ಮಾಂಸದ ದರ ಏರಿಕೆ
ಲಖನೌ: ಗೋಮಾಂಸ ನಿಷೇಧದಿಂದಾಗಿ ದೇಶದ ಹಲವು ಭಾಗಗಳಲ್ಲಿ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗಿದೆ.

ಕೋಳಿ ಮಾಂಸದ ಸೇವನೆಯಲ್ಲಿ ಶೇ 40ರಷ್ಟು ಹೆಚ್ಚಾಗಿದ್ದು,  ಶೇ 25ರಿಂದ 30ರಷ್ಟು  ದರವೂ ಏರಿಕೆಯಾಗಿದೆ ಎಂದು ಅಸೋಚಾಂ ವರದಿ ತಿಳಿಸಿದೆ.

2014ರ ಮೇ ಇಂದ 2017ರ ಮೇವರೆಗೆ ಕುಕ್ಕುಟೋದ್ಯಮದ ವಹಿವಾಟಿನಲ್ಲಿ ಶೇ 22ರಷ್ಟು ಏರಿಕೆಯಾಗಿದೆ. ಆದರೆ, ಗೋವು, ಎಮ್ಮೆ ಮಾಂಸದ ಬಳಕೆ ಕುಸಿದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT