ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೇನು ಕೊಂಚವೇ ದೂರ

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಹೀಗೇ...
ಒಂದಮಾವಾಸ್ಯೆಯ ದಿನ
ಅಚಾನಕ್ ನೀನು ಪ್ರತ್ಯಕ್ಷವಾಗಿ
ಬೆಟ್ಟದ ಬುಡದಲಿ
ಮುದ್ದೆಯಾಗಿ ಬಿದ್ದ
ನಿರಾಕಾರ ದೇಹಕ್ಕೆ
ಮೊದಲು ಪಾದ ಬಿಡಿಸಿದೆ.
ಆಕಾರದ ಗೆರೆಯೆಳೆಯುತ್ತಾ
ಬಣ್ಣ ತುಂಬುತ್ತಾ
ಕಣ್ಣು, ಮೂಗು,
ತುಟಿ, ಕೈ,
ಅಂಗಾಂಗ ಮೂಡಿಸಿದೆ.
ಈ ಪಯಣಕ್ಕೆ
ಹೆಜ್ಜೆಯೂರಿಸಿದೆಯಲ್ಲಾ
ಆಗ ಜೀವಸಂಚಾರ.

ಅದೋ ಅಲ್ಲಿ ಬೆಟ್ಟದ ತುದಿಯಲ್ಲಿ
ತುಂಬಿದಾಕಾಶದಲ್ಲಿ ತೂಗುತ್ತಿರುವ
ಆ ಪೊಟರೆಯೇ
ನಿನ್ನ ಗೂಡು...
ನಡೆ ಹೋಗೋಣವೆಂದು
ಕೈ ಹಿಡಿದೆಳೆದು ಹೊರಟದ್ದು,

ಮತ್ತೆ ನಡೆ ನಡೆ ನಡೆ
ನಿಲ್ಲದ ಯಾನ
ದಾರಿಯುದ್ದಕ್ಕೂ
ಬೆಳ್ಮುಗಿಲು
ನದಿ ಹರಿವು
ಜೊತೆ ಜೊತೆಗೆ
ನಾನು ನೀನು
ಕತ್ತಲು ಬೆಳಕು...
ನಡುವೆ
ಏರಿಳಿತದಾಟ.

ಕ್ಷಣಕೆ ಸಾಕ್ಷಿ ನಾವು.

ಪ್ರತಿ ಬೆಳಗೂ ಮತ್ತೆ ಹೊಸದು
ಅದೇ ಹಾಡು...
ಅದೋ ಇನ್ನೇನು
ಕೊಂಚವೇ ದೂರ
ತುಂಬಿದಾಕಾಶದಲ್ಲಿ ತೂಗುತಿರುವ
ಆ ಪೊಟರೆಯೇ
ನಿನ್ನ ಗೂಡು...

ನೀನೇ ಬಿಡಿಸಿದ ಕಣ್ಣು
ಮತ್ತಷ್ಟಗಲಿಸಿ
ನೋಡುತ್ತಲೇ ಇದ್ದೇನೆ
ಬೆಟ್ಟದ ತುದಿಯೂ ಕಾಣೆ
ತುಂಬಿದಾಕಾಶವೂ ಕಾಣೆ
ತೂಗುವ ಪೊಟರೆಯಂತೂ...
ಕಂಡಿಲ್ಲ ದೇವರಾಣೆ

ಒಂದೇ ಒಂದು
ಪ್ರತಿ ಮಾತಿಲ್ಲ.
ಅದಕೆ ತಾವಿಲ್ಲ.
ನೀನು,
ನೀನು ತೋರುವ ದಾರಿ
ನಾನು.
ಅಷ್ಟೇ...

ಪಾದ ಸವೆದು
ಗೆರೆಗಳಳಿಸಿವೆ!
ನೆರೆಯ ಹಣ್ಣುಗೆರೆ
ಮೈ ತುಂಬಾ ಬರೆ ಬರೆದಿವೆ.

ಬೆಟ್ಟವೇರುತ್ತಿದ್ದೇವೆ ನಾವು.

ಅದೋ...
ಇನ್ನೇನು ಕೊಂಚವೇ ದೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT