ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೂರಿನ ಕೊಹಿನೂರ್‌

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

‘ನಾವು ಅತ್ಯಂತ ಹಿಂದುಳಿದ ಜಿಲ್ಲೆಯವರೇ ಇರಬಹುದು. ಆದರೆ ನೆನಪಿರಲಿ... ಕೊಹಿನೂರ್‌ ವಜ್ರವನ್ನು ಜಗತ್ತಿಗೆ ನೀಡಿದ ನೆಲ ನಮ್ಮದು. ಹಾಗಂತ ನಾನು ಹೇಳುತ್ತಿಲ್ಲ. ಇಲ್ನೋಡಿ, ಇಂಗ್ಲೆಂಡ್‌ನ ಈ ಸಂಶೋಧನಾ ಕೃತಿಯೇ ಹೇಳುತ್ತಿದೆ...’ ಸುರಪುರ ಸಂಸ್ಥಾನದ ಇತಿಹಾಸದ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ 74ರ ಹರೆಯದ ಭಾಸ್ಕರ್‌ರಾವ್ ಮುಡಬೂಳ ಅವರು ಹೀಗೆ ಹೇಳುತ್ತಾ ಕೈಗೆ ಪುಸ್ತಕ ಇಟ್ಟಾಗ ಅದರ ಮುಖಪುಟದ ಮೇಲಿದ್ದ ಇಂಗ್ಲೆಂಡಿನ ರಾಜ ಸಂಸ್ಥಾನದ ಕಿರೀಟದ ಚಿತ್ರ ಥಟ್ಟನೆ ಗಮನ ಸೆಳೆಯಿತು.

ತಲೆಯ ಮೇಲೆ ಕುಳಿತ ‘ಕೊಹಿನೂರ್‌ ವಜ್ರ’ ಕಿರೀಟಕ್ಕೆ ಕಳೆಕಟ್ಟಿತ್ತು. ಇಂಗ್ಲೆಂಡಿನ ಲೇಖಕ, ಸಂಶೋಧಕ ವಿಲಿಯಂ ಡಾಲ್ರಿಂಪಲ್ ಬರೆದ ‘ಕೊಹಿನೂರ್‌್‌–ದಿ ಹಿಸ್ಟರಿ ಆಫ್‌ ದ ವರ್ಲ್ಡ್ಸ್ ಮೋಸ್ಟ್ ಇನ್‌ ಫೇಮಸ್ ಡೈಮಂಡ್’ ಪುಸ್ತಕವನ್ನು ಲೇಖಕಿ ಅನಿತಾ ಆನಂದ್‌ ಅನುವಾದಿಸಿದ್ದಾರೆ. ಇಂಗ್ಲೆಂಡಿನ ರಾಜವಂಶಸ್ಥರ ಕಿರೀಟ ಅಲಂಕರಿಸಿರುವ ಕೊಹಿನೂರ್‌ ವಜ್ರ ಎಲ್ಲಿ ಸಿಕ್ಕಿದ್ದು ಮತ್ತು ಅದು ಅಲ್ಲಿನ ರಾಣಿಯ ಕಿರೀಟದ ಮುಡಿಗೇರಿದ್ದಾದರೂ ಹೇಗೆ ಎಂಬ ಕುತೂಹಲಭರಿತ ಕತೆ ಹೇಳುವ ಪುಸ್ತಕ ಇದು.

ಡಾಲ್ರಿಂಪಲ್ ತಮ್ಮ ಸಂಶೋಧನೆಯನ್ನು ಇಂಗ್ಲೆಂಡಿನಿಂದ ಆರಂಭಿಸುತ್ತಾರೆ. ಕೊಹಿನೂರ್‌ ಭಾರತ ಮೂಲದ್ದು ಎಂಬ ಮಾಹಿತಿ ಮೇರೆಗೆ ಸಂಶೋಧನೆಗಾಗಿ ಇಲ್ಲಿಗೆ ಬರುತ್ತಾರೆ. ನಂತರ ಕೊಹಿನೂರ್‌ ನಮ್ಮದು ನಿಮ್ಮದು ಎಂದು ಕಿತ್ತಾಟ ನಡೆಸಿದ್ದ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳೆರಡರಲ್ಲೂ ಅವರು ಸಂಶೋಧನೆ ನಡೆಸುತ್ತಾರೆ.

ಭಾರತದಲ್ಲಿ ನಡೆದಾಡಿದ, ಹುಡುಕಾಡಿದ ಪ್ರತಿ ಹೆಜ್ಜೆಯನ್ನೂ ಡಾಲ್ರಿಂಪಲ್ ತಮ್ಮ ಕೃತಿಯಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಪಂಜಾಬ್‌ ಕೂಡ ಕೊಹಿನೂರ್‌ ನಮ್ಮದು ಎಂಬುದಾಗಿ ದನಿ ಎತ್ತಿತ್ತು. ಅಲ್ಲಿಗೂ ಡಾಲ್ರಿಂಪಲ್ ದೌಡಾಯಿಸುತ್ತಾರೆ. ಕೊನೆಗೆ ನಿಖರ ಮಾಹಿತಿ, ಪೂರಕ ದಾಖಲೆಗಳನ್ನು ಅಧ್ಯಯನ ಮಾಡಿ ಕೊಹಿನೂರ್‌ ವಜ್ರ ರಾಜ್ಯದ ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಕೊಳ್ಳೂರ ಬಳಿ ಸಿಕ್ಕಿದೆ ಎಂದು ನಿರ್ಧಾರಕ್ಕೆ ಬರುತ್ತಾರೆ. ಅದು ಸತ್ಯ ಎಂದು ಕರ್ನಾಟಕ ಇತಿಹಾಸ ಕೂಡ ಒಂದಷ್ಟು ಪೂರಕ ಮಾಹಿತಿ ನೀಡುತ್ತದೆ.

ಇತಿಹಾಸ ಏನು: ವಜ್ರದ ಗಣಿ ಮಾಲೀಕ ಮೀರ್‌ ಜುಮುಲಾನಿಗೆ 1656ರಲ್ಲಿ ಕೊಹಿನೂರ್‌ ವಜ್ರ ಸಿಕ್ಕಿತು. ಆ ವಜ್ರವನ್ನು ತೂಕ ಮಾಡಿ ನೋಡಿದಾಗ ಅದು 756 ಕ್ಯಾರೆಟ್ ಇತ್ತು! ಈ ಅಪರೂಪದ ವಜ್ರವನ್ನು ಅವನು ಗೋಲ್ಕೊಂಡದ ಸುಲ್ತಾನನಿಗೆ ಒಪ್ಪಿಸಿದ್ದ. ಗೋಲ್ಕೊಂಡದ ಸುಲ್ತಾನ ದಿಲ್ಲಿಯ ದೊರೆ ಶಹಜಹಾನನಿಗೆ ಈ ವಜ್ರವನ್ನು ಕಾಣಿಕೆಯಾಗಿ ನೀಡಿದ್ದ ಎಂಬುದಾಗಿ ಇತಿಹಾಸ ಹೇಳುತ್ತದೆ. ಅಷ್ಟೇ ಅಲ್ಲದೇ ಪ್ರಸಿದ್ಧ ವಜ್ರ ಪರೀಕ್ಷಣಕಾರರಾದ ಡಾ.ಬಾರ್ಲೆ ಕೂಡ ಈ ವಜ್ರ ಕೃಷ್ಣಾನದಿ ತಟದ ಕೊಳ್ಳೂರ ಗಣಿಯಲ್ಲಿ ಸಿಕ್ಕಿದ್ದು ಎಂಬುದಾಗಿ ತಮ್ಮ ‘ಫರ್ಗಾಟನ್‌ ಎಂಪೈರ್’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ವಜ್ರ ಸಿಕ್ಕ ಸಮಯದಲ್ಲಿ (1656) ವಿಜಯನಗರ ಸಾಮ್ರಾಜ್ಯ ಉತ್ತುಂಗದಲ್ಲಿತ್ತು. ಭಾರತದಲ್ಲಿ ‘ದಕ್ಷಿಣ ಪಥೇಶ್ವರ’ ಎಂದೇ ಖ್ಯಾತವಾಗಿದ್ದ ಶ್ರೀಕೃಷ್ಣದೇವರಾಯನ ಆಳ್ವಿಕೆ ಅವಧಿ ಅದಾಗಿತ್ತು. ವಜ್ರವೈಢೂರ್ಯಗಳನ್ನು ಬಳ್ಳಗಳಲ್ಲಿ ಅಳೆಯಲಾಗುತ್ತಿತ್ತು. ಅನಂತಪುರ, ವಜ್ರಕೇರೂರ, ಕೊಳ್ಳೂರ, ಗೋಲ್ಕೊಂಡ ಸ್ಥಳಗಳಲ್ಲಿ ವಜ್ರ ಗಣಿಗಾರಿಕೆ ಇತ್ತು. ವಿಜಯನಗರದ ಸಂಪತ್ತಿಗೆ ಅವು ಕಾರಣವಾಗಿದ್ದವು ಎಂಬುದಾಗಿ ಇತಿಹಾಸದಿಂದ ತಿಳಿದುಬರುತ್ತದೆ.

1739ರಲ್ಲಿ ನಾದಿರ್‌ ಷಾ ದಿಲ್ಲಿಯ ಮೇಲೆ ದಾಳಿ ಮಾಡಿ ಅಪಾರ ಸಂಪತ್ತು ಲೂಟಿ ಮಾಡುತ್ತಾನೆ. ಆಗ ವಜ್ರ ನಾದಿರ್‌ ಷಾ ಕೈಸೇರುತ್ತದೆ. ಅದನ್ನು ನೋಡಿದ ಷಾ ‘ಕೊಹಿನೂರ್‌’ (ಬೆಳಕಿನ ಬೆಟ್ಟ) ಎಂಬುದಾಗಿ ಉದ್ಗಾರ ತೆಗೆಯುತ್ತಾನೆ. ಅಂದಿನಿಂದ ಈ ವಜ್ರ ‘ಕೊಹಿನೂರ್‌’ ಎಂದೇ ಹೆಸರಾಗಿದೆ. 1813ರಲ್ಲಿ ಲಾಹೋರ್‌ ದೊರೆ ರಣಜೀತ್‌ ಸಿಂಗ್‌ಗೆ ಇದು ಕಾಣಿಕೆಯಾಗಿ ದೊರೆಯುತ್ತದೆ. 1849ರಲ್ಲಿ ಬ್ರಿಟಿಷ್‌ ಅಧಿಕಾರಿ ಸರ್‌ ಜಾನ್‌ ಲಾರೆನ್ಸ್ ಪಂಜಾಬ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಕೊಹಿನೂರ್‌ ವಜ್ರ ಇಂಗ್ಲೆಂಡಿನ ರಾಣಿಗೆ ತಲುಪುತ್ತದೆ. ಇಂಗ್ಲೆಂಡಿನ ರಾಜವಂಶಸ್ಥರ ಕಿರೀಟದಲ್ಲಿ ಯಾದಗಿರಿ ಜಿಲ್ಲೆಯ ಅಪೂರ್ವ ವಜ್ರ ಈಗಲೂ ಮೆರೆಯುತ್ತಿದೆ ಎನ್ನುತ್ತಾರೆ ಮುಡಬೂಳ.

ಬಿಡದ ಗ್ರಹಣ: ಕಂದಾಯ ಮತ್ತು ಭೂಮಾಪನ ಅಧಿಕಾರಿಗಳು ಕೊಳ್ಳೂರ ಗ್ರಾಮದ ಬಳಿ ಸರ್ವೆ ಕಾರ್ಯ ನಡೆಸಿ ಎಂಟು ಎಕರೆ 19 ಗುಂಟೆ ಭೂಮಿ ಗುರುತಿಸಿದ್ದಾರೆ. ಆಗಿನ ಜಿಲ್ಲಾಧಿಕಾರಿ ಮನೋಜ್‌ ಕುಮಾರ್‌ ಜೈನ್‌ ಆಸಕ್ತಿ ವಹಿಸಿದ್ದರಿಂದ ಕೊಹಿನೂರ್‌ ಸಿಕ್ಕ ನೆನಪಿಗಾಗಿ ಅಲ್ಲೊಂದು ಪ್ರವಾಸಿತಾಣ ನಿರ್ಮಾಣ ಮಾಡಲು ಕಾರ್ಯ ಚಟುವಟಿಕೆಗಳು ಚುರುಕಿನಿಂದ ಸಾಗಿದ್ದವು. ಸರ್ವೆ ನಂ.337, 342ರಲ್ಲಿ ಕಂದಾಯ ಭೂಮಿ ಗುರುತಿಸಿ ಪ್ರತ್ಯೇಕ ಪಹಣಿ ಸಿದ್ಧಗೊಳಿಸಲಾಗಿದೆ. ಪಹಣಿಯಲ್ಲಿ ‘ವಿಶ್ವಪ್ರಸಿದ್ಧ ಕೊಹಿನೂರ್‌ ವಜ್ರ ಸಿಕ್ಕ ಸ್ಥಳ; ಪ್ರವಾಸಿ ತಾಣಕ್ಕೆ ಕಾಯ್ದಿರಿಸಿದ ಸ್ಥಳ’ ಎಂಬುದಾಗಿ ನಮೂದಿಸಲಾಗಿದೆ. ಆದರೆ, ಮನೋಜ್‌ ಕುಮಾರ್‌ ದಿಢೀರ್‌ ವರ್ಗಾವಣೆ ನಂತರ ಈ ಕಾರ್ಯ ನನೆಗುದಿಗೆ ಬಿದ್ದಿದೆ.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಹಿಂದಿನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕೊಹಿನೂರ್‌ ವಜ್ರ ಪ್ರವಾಸಿ ತಾಣ ಯೋಜನೆ ಸಾಕಾರದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರಿಂದ ಯೋಜನೆಗೆ ಮರುಚಾಲನೆ ನೀಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರ ವರ್ಗಾವಣೆಯ ನಂತರ ಪುನಃ ಈ ಯೋಜನೆಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ.

ಕೊಹಿನೂರ್‌ ವಜ್ರ ನಮ್ಮ ನೆಲದಲ್ಲಿ ಸಿಕ್ಕಿದೆ ಎಂಬುದೇ ಹೆಮ್ಮೆ. ಅಂತಹ ನೆಲೆಯನ್ನು ಪ್ರವಾಸಿತಾಣವಾಗಿ ನಿರ್ಮಾಣ ಮಾಡಿ ಅದಕ್ಕೊಂದು ಶಾಶ್ವತ ತಾಣ ಕಲ್ಪಿಸಬೇಕು. ಆದರೆ, ಪ್ರವಾಸೋದ್ಯಮ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದೇ ಇಲ್ಲ. ಸಚಿವರಿಗಂತೂ ಅದರ ಉಸಾಬರಿ ಬೇಕಿಲ್ಲ. ಪ್ರವಾಸೋದ್ಯಮ ಖಾತೆಯನ್ನೇ ಇಟ್ಟುಕೊಂಡಿರುವ ಸಚಿವರ ಜಿಲ್ಲೆಯಲ್ಲಿ ಇಂಥಾ ಸ್ಥಿತಿ, ನಿರ್ಲಕ್ಷ್ಯ ಇದೆ ಎನ್ನುತ್ತಾರೆ ಮುಡಬೂಳ.

‘ಪ್ರವಾಸೋದ್ಯಮ ಇಲಾಖೆಗೆ ಅಂತಹ ಪ್ರಸ್ತಾವ ಬಂದಿಲ್ಲ. ವಿಶ್ವಕ್ಕೆ ಕೊಹಿನೂರ್‌ ವಜ್ರ ಕೊಟ್ಟ ಸ್ಥಳ ನಮ್ಮಲಿದೆ ಎಂಬುದೇ ಹೆಮ್ಮೆ. ಪರಿಶೀಲಿಸಿ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸುತ್ತಾರೆ ಸಚಿವ ಪ್ರಿಯಾಂಕ್‌ ಖರ್ಗೆ. ಕೊಹಿನೂರ್‌ ವಜ್ರ ನಮ್ಮದು ಎಂಬುದಾಗಿ ಈಚೆಗೆ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ರಿಟ್‌ ಸಲ್ಲಿಸಿತ್ತು. ಆದರೆ, ಅಧಿಕೃತ ದಾಖಲೆಗಳನ್ನು ಶಹಾಪುರದ ಭೀಮರಾಯನ ಗುಡಿ ಸಂಶೋಧನಾ ಕೇಂದ್ರ ಒದಗಿಸಿದ ಮೇಲೆ ಆಂಧ್ರ ತೆಪ್ಪಗಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT