ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಜ್ವಾಲೆ ಹೊತ್ತಿಸುತ್ತಿವೆ ವೈಯಕ್ತಿಕ ಘರ್ಷಣೆಗಳು!

ಕಲ್ಲಡ್ಕ: ತೆರೆದುಕೊಳ್ಳುತ್ತಿದೆ 46 ವರ್ಷದ ಇತಿಹಾಸ, ಧರ್ಮಗಳ ಕಾರಣಕ್ಕಾಗಿ ಇಲ್ಲಿ ಸಂಘರ್ಷ ನಡೆದಿಲ್ಲ-
Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣ 25 ದಿನಗಳಿಂದ ಕೋಮು ಜ್ವಾಲೆಯಲ್ಲಿ ಬೇಯುತ್ತಿದೆ. 1971ರಲ್ಲಿ ಇಲ್ಲಿ ಆರಂಭವಾದ ಕೋಮು ಸಂಘರ್ಷದ ಇತಿಹಾಸ ಉದ್ದಕ್ಕೆ ಬೆಳೆಯುತ್ತಲೇ ಇದೆ. ಪ್ರತಿಬಾರಿಯೂ ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಸಂಘರ್ಷಗಳು ಯಾರ ಊಹೆಗೂ ನಿಲುಕದ ವೇಗದಲ್ಲಿ ಎರಡು ಧರ್ಮದ ಜನರ ನಡುವಿನ ಸಂಘರ್ಷ ವಾಗಿ ಬದಲಾಗಿ ಇಡೀ ಪಟ್ಟಣದ ಬದುಕನ್ನೇ ದುಸ್ತರಗೊಳಿಸುತ್ತಿದೆ.

ಇಲ್ಲಿ ಒಂದು ಧರ್ಮದ ವ್ಯಕ್ತಿಯ ವಾಹನದಿಂದ ಚಿಮ್ಮಿದ ಕೆಸರು ಮತ್ತೊಂದು ಧರ್ಮದವರ ಮೇಲೆ ಬಿದ್ದುದು ಕೋಮು ಗಲಭೆಗೆ ಕಾರಣವಾಗಿದೆ. ಒಂದು ಧರ್ಮಕ್ಕೆ ಸೇರಿದ ವರ್ತಕರ ಅಂಗಡಿಯಲ್ಲಿದ್ದ ಕೊಳೆತ ಟೊಮೆಟೊ ಹಣ್ಣನ್ನು ಎಸೆಯುವಾಗ ಮತ್ತೊಂದು ಧರ್ಮದ ವ್ಯಕ್ತಿಯ ಮೇಲೆ ಆಕಸ್ಮಿಕವಾಗಿ ಬಿದ್ದ ಘಟನೆಯೂ ಕೋಮು ಜ್ವಾಲೆಯನ್ನು ಹೊತ್ತಿಸಿದೆ. ಒಂದು ಧರ್ಮದವರ ವಾಹನ ಮತ್ತೊಂದು ಧರ್ಮದವರ ವಾಹನಕ್ಕೆ ತಾಗಿರುವುದು, ರಸ್ತೆಯ ಮೇಲಿದ್ದ ಜಾನುವಾರುಗಳಿಗೆ ವಾಹನ ಡಿಕ್ಕಿಯಾದುದು, ಒಬ್ಬರು ಇನ್ನೊಬ್ಬರನ್ನು ದಿಟ್ಟಿಸಿ ನೋಡಿದಂತಹ ವೈಯಕ್ತಿಕ ನೆಲೆಯ ಘಟನೆಗಳಿಗೆ ಕ್ಷಣಮಾತ್ರದಲ್ಲಿ ಕೋಮು ಸಂಘರ್ಷದ ಸ್ವರೂಪ ದೊರೆಯುತ್ತಿರುವುದು ಹಿಂದೂ, ಮುಸ್ಲಿಮರನ್ನು ದಿನದಿಂದ ದಿನಕ್ಕೆ ದೂರ ದೂರ ನಿಲ್ಲಿಸುವತ್ತ ಕೊಂಡೊಯ್ಯುತ್ತಿದೆ.

ಕಳೆದ ತಿಂಗಳ 26ರಂದು ಹಿಂದೂ ಮತ್ತು ಮುಸ್ಲಿಂ ಯುವಕರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕ್ಷಣಾರ್ಧದಲ್ಲಿ ಕೋಮು ಗಲಭೆಯ ಸ್ವರೂಪ ಪಡೆದುಕೊಂಡಿತ್ತು. ಅಂದಿನಿಂದ ಈವರೆಗೆ ಮತ್ತೆ ಮತ್ತೆ ಗಲಭೆ, ಚೂರಿ ಇರಿತ, ಕಲ್ಲು ತೂರಾಟದಂತಹ ಘಟನೆಗಳು ನಡೆಯುತ್ತಲೇ ಇವೆ. ಅಂಗಡಿ ಮುಂಗಟ್ಟುಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿವೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆಲ್ಲ ವ್ಯಾಪಾರಿಗಳು ಅರ್ಧ ಬಾಗಿಲು ಮುಚ್ಚಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಸಂಜೆ 6ಕ್ಕೆ ಪಟ್ಟಣದಲ್ಲಿ ಮನುಷ್ಯರ ಸಂಚಾರವೇ ವಿರಳವಾಗು ವಂತಹ ಸ್ಥಿತಿ ಇದೆ. ಈ ಬೆಳವಣಿಗೆಗಳಿಂದ ವ್ಯಾಪಾರಿಗಳು, ಆಟೊ ಚಾಲಕರು, ಹೋಟೆಲ್‌ ಮಾಲೀಕರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.

25 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿರುವ ಪಟ್ಟಣದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಲೇ ಇದೆ. ಇದೇ 14ರಂದು ನಡೆದ ಗಲಭೆ ಮತ್ತು ಸಮೀಪದ ಬೆಂಜನಪದವು ಬಳಿ ಬುಧವಾರ ನಡೆದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್‌ ಕಲಾಯಿ ಕೊಲೆ ಪ್ರಕರಣದ ಪ್ರಭಾವದಿಂದಾಗಿ ಪಟ್ಟಣ ಮತ್ತಷ್ಟು ಉದ್ವಿಗ್ನ ಸ್ಥಿತಿಯತ್ತ ಸಾಗುತ್ತಿರುವುದು ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂತು. ಕಲ್ಲಡ್ಕದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತು ಮಾತಿಗಿಳಿಯಲು ಇಲ್ಲಿನ ಬಹುತೇಕರು ಹಿಂಜರಿಯುತ್ತಿರುವುದು ತಿಳಿಯಿತು.

(ರುಕ್ಮಯ್ಯ ಪೂಜಾರಿ)

ಧರ್ಮದ ಜೊತೆ ಗಾಂಜಾ ಅಮಲು: ‘1971ರಲ್ಲಿ ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ಕೊಲೆ ನಡೆದ ಸಮಯದಲ್ಲಿ ಮೊದಲ ಕೋಮು ಸಂಘರ್ಷ ನಡೆದಿತ್ತು. ಆಗಿನ್ನೂ ನಾವೆಲ್ಲ ಚಿಕ್ಕ ಹುಡುಗರು. ಆ ನಂತರ ಕೆಲವು ವರ್ಷ ಯಾವ ಪ್ರಕರಣಗಳೂ ಇರಲಿಲ್ಲ. ಅಂಗಡಿಯಲ್ಲಿದ್ದ ಕೊಳೆತ ಟೊಮೆಟೊ ಎಸೆಯುವಾಗ ಒಬ್ಬ ವ್ಯಕ್ತಿ ಮೇಲೆ ಬಿದ್ದುದು ಮತ್ತೊಮ್ಮೆ ಕೋಮು ಗಲಭೆಗೆ ಕಾರಣವಾಗಿತ್ತು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ನಡೆದಿದ್ದಾಗ ಮತ್ತೆ ಇಲ್ಲಿ ಕೋಮುಗಲಭೆ ನಡೆದಿತ್ತು. 1998ರಲ್ಲಿ ಸುರತ್ಕಲ್‌ನಲ್ಲಿ ನಡೆದ ಕೋಮುಗಲಭೆಯ ಪರಿಣಾಮವಾಗಿ ಕಲ್ಲಡ್ಕದಲ್ಲೂ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿತ್ತು. ಅದು ಹಾಗೆಯೇ ಮುಂದುವರಿಯುತ್ತಿದೆ’ ಎಂದು ಉದ್ಯಮಿ, ಗೋಳ್ತಮಜಲು ಮಸೀದಿ ಅಧ್ಯಕ್ಷ ಜಿ.ಮೊಹಮ್ಮದ್‌ ಹನೀಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವ ಸಂದರ್ಭದಲ್ಲೂ ಎರಡು ಧರ್ಮಗಳ ಕಾರಣಕ್ಕಾಗಿ ಯಾರ ನಡುವೆಯೂ ಘರ್ಷಣೆ ನಡೆದಿಲ್ಲ. ವೈಯಕ್ತಿಕವಾಗಿ ನಡೆಯುವ ಜಗಳ, ಘರ್ಷಣೆಗಳು ಧರ್ಮದ ಹೆಸರಿನಲ್ಲಿ ಪ್ರಚಾರವಾಗಿ ಹಿಂಸಾಚಾರ ನಡೆಯುತ್ತಿದೆ. ಎರಡೂ ಧರ್ಮದವರಲ್ಲಿ ಕೆಲವರು ತೆರೆಯ ಮರೆಯಲ್ಲಿ ನಿಂತು ಯುವಕರನ್ನು ಪ್ರಚೋದಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಲ್ಲಡ್ಕದಲ್ಲಿ ಯಥೇಚ್ಛವಾಗಿ ಗಾಂಜಾ ಸರಬರಾಜು ಆಗುತ್ತಿದೆ. ಧರ್ಮದ ಅಮಲಿನ ಜೊತೆ ಗಾಂಜಾ ಅಮಲು ಸೇರಿದಾಗ ಯುವಕರು ನಿಯಂತ್ರಣಕ್ಕೆ ಬಾರದಂತೆ ವರ್ತಿಸುತ್ತಾರೆ. ಅದು ಇಡೀ ಪಟ್ಟಣದ ಜನಜೀವನವನ್ನು ಹೈರಾಣಾಗಿ ಸುತ್ತಿದೆ’ ಎನ್ನುತ್ತಾರೆ ಅವರು.

‘ರುಕ್ಮಯ್ಯ ಪೂಜಾರಿ ಶಾಸಕರಾಗಿ ದ್ದಾಗ ಒಮ್ಮೆ ಗಲಭೆ ನಡೆದಿತ್ತು. ಎರಡೂ ಕಡೆಯ ತಲಾ ಐದು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಆಯಾ ಧರ್ಮದವರಲ್ಲಿನ ತಪ್ಪಿತಸ್ಥರ ಕುರಿತು ಮಾಹಿತಿ ಒದಗಿಸುವ ಹೊಣೆ ನೀಡಲಾಗಿತ್ತು. ಆ ಬಳಿಕ ಕೆಲಕಾಲ ಪರಿಸ್ಥಿತಿ ಶಾಂತವಾಗಿತ್ತು. ಈಗಲೂ ಅಂತಹ ಪ್ರಯತ್ನಗಳು ನಡೆಯಬೇಕು. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಕೋಮು ದ್ವೇಷದ ಭಾವನೆಯನ್ನು ಕಿತ್ತುಹಾಕುವ ಕೆಲಸ ಆಗಬೇಕು. ಆರ್‌ಎಸ್‌ಎಸ್‌ ಮುಖಂಡ ಪ್ರಭಾಕರ ಭಟ್‌ ಅವರು ಒಬ್ಬ ಮುಸ್ಲಿಂ ಮಾಡುವ ತಪ್ಪಿಗೆ ಇಡೀ ಧರ್ಮದವರನ್ನು ಹಳಿಯುವುದನ್ನು ನಿಲ್ಲಿಸಬೇಕು’ ಎಂದರು.

ಕೆಟ್ಟವರ ಆಟಕ್ಕೆ ಬಲಿ: ‘ಹಿಂದೂ, ಮುಸ್ಲಿಂ ಎರಡೂ ಧರ್ಮೀಯರಲ್ಲಿ ಕೆಲವು ಮಂದಿ ಕೆಟ್ಟವರಿದ್ದಾರೆ. ಅಂತಹವರ ವೈಯಕ್ತಿಕ, ಖಾಸಗಿ ಘರ್ಷಣೆಗಳು ನಿರಂತರವಾಗಿ ಕಲ್ಲಡ್ಕದ ನೆಮ್ಮದಿಯನ್ನು ಕದಡುತ್ತಿವೆ. 1971ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಕೋಮು ಗಲಭೆಗಳಿಗೂ ವೈಯಕ್ತಿಕ ಘರ್ಷಣೆಗಳೇ ಪ್ರೇರಣೆ. ಎರಡೂ ಧರ್ಮದಲ್ಲಿನ ಹಿರಿಯರು ಅನ್ಯೋನ್ಯವಾಗಿದ್ದಾರೆ. ಆದರೆ, ಯುವಕರು ಮಾತ್ರ ಸಂಘಟನೆ, ಗುಂಪು ಕಟ್ಟಿಕೊಂಡು ಹೊಡೆದಾಡುತ್ತಿದ್ದಾರೆ. ಪ್ರತಿ ಬಾರಿಯೂ ಒಮ್ಮೆ ಗಲಾಟೆ ನಡೆದರೆ ಪಟ್ಟಣದ ಜನಜೀವನ ಸಹಜಸ್ಥಿತಿಗೆ ಬರಲು ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ’ ಎನ್ನುತ್ತಾರೆ ಬಂಟ್ವಾಳ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ, ಸ್ಥಳೀಯ ನಿವಾಸಿಯೂ ಆಗಿರುವ ರುಕ್ಮಯ್ಯ ಪೂಜಾರಿ.

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಲ್ಲಡ್ಕ ಶಾಂತವಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಸ್ಲಿಮರ ಓಲೈಕೆಗೆ ಮುಂದಾದರು. ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತಲಿಲ್ಲ. ಇವೆಲ್ಲವೂ ಇಲ್ಲಿನ ಕೆಲವರಿಗೆ ಪ್ರೇರಣೆ ನೀಡಿದಂತಾಯಿತು. ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಬಲಗೊಳ್ಳುತ್ತಿರುವುದು ಕೂಡ ಈ ಪರಿಸ್ಥಿತಿಗೆ ಕಾರಣ. ಆದರೆ, ಸರ್ಕಾರದ ಕಡೆಯಿಂದಲೇ ಎಲ್ಲವನ್ನೂ ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಮತ್ತು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ ಜಾರಿಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಆಪಾದಿಸಿದರು.

‘ಯಾವ ಗುಂಪಿಗೂ ಸೇರದ, ಜಿಲ್ಲೆಯ ಹಿತಕ್ಕಾಗಿ ದುಡಿಯುವ ಜನರು ಈ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲವಾದರೆ ಕಲ್ಲಡ್ಕಕ್ಕೆ ಭವಿಷ್ಯವೇ ಇರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

**

ಅಪರಾಧಿಗಳಿಗೆ ಶಿಕ್ಷೆಯೇ ಆಗಿಲ್ಲ!
‘1971ರಿಂದ ಇಲ್ಲಿಯವರೆಗೆ ಕಲ್ಲಡ್ಕದಲ್ಲಿ ನಡೆದಿರುವ ಕೋಮು ಗಲಭೆಗಳಿಗೆ ನಿಜವಾಗಿ ಕಾರಣರಾದವರಿಗೆ ಶಿಕ್ಷೆಯೇ ಆಗಿಲ್ಲ. ಪ್ರತಿ ಬಾರಿಯೂ ಎರಡೂ ಧರ್ಮದವರಲ್ಲಿ ಅಮಾಯಕರನ್ನು ಬಂಧಿಸಲಾಗುತ್ತದೆ. ಗಲಭೆಗೆ ಕಾರಣವಾದವರು ತಪ್ಪಿಸಿಕೊಳ್ಳುತ್ತಾರೆ. ಪೊಲೀಸರ ಈ ಲೋಪವೇ ಪದೇ ಪದೇ ಗಲಭೆ ನಡೆಯಲು ಕಾರಣ’ ಎಂದು ಹಿಂದೂ ಮತ್ತು ಮುಸ್ಲಿಂ ಧರ್ಮದ ಮುಖಂಡರು ಬೆರಳು ತೋರಿಸುತ್ತಾರೆ.

(ಜಿ.ಮೊಹಮ್ಮದ್ ಹನೀಫ್‌)

**

ಮಂಗಳೂರು ನಗರದಲ್ಲೂ ನಿಷೇಧಾಜ್ಞೆ
ಮಂಗಳೂರು:
ಜಿಲ್ಲೆಯ ಕೆಲವೆಡೆ ಪದೇ ಪದೇ ಅಹಿತಕರ ಘಟನೆಗಳು ನಡೆಯುತ್ತಿರುವ ಕಾರಣದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಜೂನ್‌ 27ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಗುರುವಾರ ಆದೇಶ ಹೊರಡಿಸಿದ್ದಾರೆ.

ಮೇ 26ರಂದು ಕಲ್ಲಡ್ಕ ಪಟ್ಟಣದಲ್ಲಿ ಮೊದಲ ಚೂರಿ ಇರಿತ ಪ್ರಕರಣ ನಡೆದಿತ್ತು. ಅದೇ ದಿನ ಬಂಟ್ವಾಳ ತಾಲ್ಲೂಕಿಗೆ ಸೀಮಿತವಾಗಿ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಜೂನ್‌ 13ರಂದು ಪುನಃ ಚೂರಿ ಇರಿತ ಮತ್ತು ಗಲಭೆ ಪ್ರಕರಣಗಳು ನಡೆದ ಕಾರಣದಿಂದ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಂದು ದಿನದಮಟ್ಟಿಗೆ ನಿಷೇಧಾಜ್ಞೆ ಹೇರಲಾಗಿತ್ತು. ಅದನ್ನು ಬುಧವಾರದವರೆಗೆ (ಜೂನ್‌ 21) ವಿಸ್ತರಿಸಲಾಗಿತ್ತು. ಈಗ ಜೂನ್‌ 27ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

**

ಕಲ್ಲಡ್ಕ ಪಟ್ಟಣ ಶಾಂತ: ಡಿಜಿಪಿ ದತ್ತಾ
ಹುಬ್ಬಳ್ಳಿ: ‘
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ, ಬಂಟ್ವಾಳ ತಾಲ್ಲೂಕಿನ ಅಮ್ಮಂಜೆ ಮತ್ತು ಕಳ್ಳಿಗೆ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ಶಾಂತವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್.ಕೆ. ದತ್ತಾ ಗುರುವಾರ ಇಲ್ಲಿ ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಲ್ಲಡ್ಕ ಗಲಭೆಗೆ ಕಾರಣರಾದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT