ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 24–6–1967

50 ವರ್ಷಗಳ ಹಿಂದೆ
Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

* ಮಹಾಜನ್ ಆಯೋಗವೇ ಅನವಶ್ಯಕ ಎಂದು ನಂಬೂದಿರಿಪಾಡ್
ತಿರುವನಂತಪುರ, ಜೂ. 23–
1956ರ ರಾಜ್ಯಗಳ ಪುನರ್‌ವಿಂಗಡನೆ ಕಾನೂನನ್ನು ಬಿಟ್ಟರೆ ಬೇರಿನ್ಯಾವ ಆಧಾರವೂ ಇಲ್ಲದ ಕಾರಣ ಮಹಾಜನ್ ಆಯೋಗದ ರಚನೆಯೇ ತತ್ವರಹಿತವಾಗಿದೆಯೆಂದು ಕೇರಳ ಸರ್ಕಾರವು ಭಾರತ ಸರ್ಕಾರ ಹಾಗೂ ಮಹಾಜನ್ ಆಯೋಗಕ್ಕೆ ತಿಳಿಸಿದೆಯೆಂದು ಮುಖ್ಯಮಂತ್ರಿ ಶ್ರೀ ನಂಬೂದಿರಿಪಾಡ್ ಇಂದು ರಾಜ್ಯ ವಿಧಾನಸಭೆಗೆ ತಿಳಿಸಿದರು.

ಕೇರಳ ಸರ್ಕಾರವು ಮಹಾಜನ್ ಆಯೋಗಕ್ಕೆ ಸಹಕಾರ ನೀಡಿಲ್ಲವೆಂದು ಹೇಳುವುದು ಸರಿಯಲ್ಲವೆಂದೂ ಅವರು ಸದಸ್ಯರೊಬ್ಬರ ಪ್ರಶ್ನೆಗುತ್ತರವಾಗಿ ಹೇಳಿದರು.

***

* ಕಾಂಗ್ರೆಸ್ಸೇತರ ಸರ್ಕಾರಗಳಿಂದ ಪ್ರಾಂತೀಯ ಭಾವನೆಯ ಪ್ರಚೋದನೆ: ರಾಷ್ಟ್ರೈಕ್ಯತೆಗೆ ಧಕ್ಕೆ ಎಂದು ಕಾಮರಾಜ್
ನವದೆಹಲಿ, ಜೂ. 23–
‘ಕಾಂಗ್ರೆಸ್ಸೇತರ ಸರ್ಕಾರಗಳು ಪ್ರಾದೇಶಿಕ ಹಾಗೂ ಪ್ರಾಂತೀಯ ಭಾವನೆಗಳನ್ನು ಉದ್ರೇಕಿಸುತ್ತಿವೆ; ಇದರ ಪರಿಣಾಮವಾಗಿ ಚುನಾವಣಾ ನಂತರದ ಭಾರತದಲ್ಲಿ ರಾಷ್ಟ್ರೀಯ ಭಾವನೆ ಛಿದ್ರಗೊಳ್ಳುವ ಅಪಾಯವಿದೆ. ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜ್ ಅವರು ಇಂದು ಎ.ಐ.ಸಿ.ಸಿ. ಅಧಿವೇಶನದಲ್ಲಿ ನೀಡಿದ ಎಚ್ಚರಿಕೆ. ತಮ್ಮ ತಪ್ಪುಗಳಿಗೆ ಹಾಗೂ ಕೊರತೆಗಳಿಗೆ ಕೇಂದ್ರ ಸರ್ಕಾರವನ್ನು ದೂಷಿಸುವ ಕಾಂಗ್ರೆಸ್ಸೇತರ ಸರ್ಕಾರಗಳ ಪ್ರಯತ್ನದಿಂದ ರಾಷ್ಟ್ರದ ಐಕ್ಯತೆಗೆ ಭಂಗ  ಬರುವುದೆಂದೂ ಜನರಲ್ಲಿ ಸಂಕುಚಿತವಾದ ಪ್ರಾಂತೀಯ ಭಾವನೆಗಳನ್ನು ಕೆರಳಿಸುವುದೆಂದೂ ಅವರು ಎಚ್ಚರಿಕೆ ನೀಡಿದರು.

***

* ಒಂದೂವರೆ ಸೆಕೆಂಡಿಗೆ ಒಂದು ಮಗು ಜನನ
ನವದೆಹಲಿ, ಜೂ. 23–
ಭಾರತದಲ್ಲಿ ಈಗ ಒಂದೂವರೆ ಸೆಕೆಂಡಿಗೆ ಒಂದು ಮಗುವು ಜನಿಸುತ್ತದೆ. ಪ್ರತಿದಿನ 55,000 ಮಕ್ಕಳು ಮತ್ತು ವರ್ಷದಲ್ಲಿ 21 ದಶಲಕ್ಷ ಮಕ್ಕಳು ಜನಿಸುತ್ತಿವೆ.

ಈಗ, ವಿಶ್ವದ ಪ್ರತಿ ಏಳು ಜನರಲ್ಲಿ ಒಬ್ಬರು ಭಾರತೀಯರು. ನಮ್ಮ ದೇಶದ ಜನಸಂಖ್ಯೆ 550 ದಶಲಕ್ಷದ ಗೆರೆಯನ್ನು ದಾಟುತ್ತದೆ. ಜನಸಂಖ್ಯೆ ಇದೇ ರೀತಿ ಹೆಚ್ಚುತ್ತ ನಡೆದರೆ, 28 ವರ್ಷಗಳಲ್ಲಿ ಈಗಿನ ಎರಡರಷ್ಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT