ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಅಪ್ಪಣ್ಣಗೆ ಪುರಸ್ಕಾರ: ಅಸಮಾಧಾನ

Last Updated 25 ಜೂನ್ 2017, 6:10 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಕುರಿತು  ಕನ್ನಡ ಯುವ ಬರಹಗಾರರ ವಲಯದಲ್ಲಿ ಅಸಮಾಧಾನಗಳು ಕೇಳಿ ಬಂದಿವೆ.

ಪುರಸ್ಕಾರಕ್ಕೆ ಪಾತ್ರರಾಗಿರುವ ಶಾಂತಿ ಕೆ.ಅಪ್ಪಣ್ಣ ಅವರ ಹೆಸರು ತಮಗೆ ಕಳಿಸಿದ್ದ ಪಟ್ಟಿಯಲ್ಲಿ ಇರಲೇ ಇಲ್ಲ. ಪಟ್ಟಿಯಲ್ಲಿ ಇಲ್ಲದ ಕೃತಿ ಮತ್ತು ಕರ್ತೃವಿಗೆ ಪ್ರಶಸ್ತಿ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನು ಆಯ್ಕೆ ಪ್ರಕ್ರಿಯೆಯ ಮೊದಲ ಎರಡು ಸುತ್ತುಗಳಲ್ಲಿ ಪಾಲ್ಗೊಂಡಿದ್ದ ಲೇಖಕ ಕೆ.ಎಂ.ದೊಡ್ಮನಿ ಎತ್ತಿದ್ದರು. ಅವರ ಈ ಪ್ರಶ್ನೆಯನ್ನು ಹಲವಾರು ಯುವ ಬರಹಗಾರರು ಅನುಮೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿದ್ದರು.

ಶಾಂತಿ ಅಪ್ಪಣ್ಣ ಅವರಿಗಿಂತ ಉತ್ತಮ ಬರೆಹಗಾರರು ಪಟ್ಟಿಯಲ್ಲಿದ್ದರೂ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ ಎಂಬ ಅಸಮಾಧಾನವೂ ಕೇಳಿ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಇಂತಹ ದೂರುಗಳು ಕೇಳಿ ಬಂದಿರುವುದು ಇದು ಎರಡನೆಯ ಬಾರಿ. ಆದರೆ ಹೆಸರು ಸೇರಿಸಲು ಅವಕಾಶವಿದೆ ಎಂಬ ಅಕಾಡೆಮಿಯ ಸ್ಪಷ್ಟೀಕರಣದಿಂದಾಗಿ ಮೊದಲನೆಯ ದೂರು ಬಿದ್ದು ಹೋಗಿದೆ.

ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯ ಮೊದಲ ಎರಡು ಹಂತಗಳಲ್ಲಿ ತಾನು ಕಳಿಸಿದ ಮೂಲಪಟ್ಟಿಯಿಂದ ಯಾವುದೇ ಹೆಸರನ್ನು ಕೈ ಬಿಡುವ ಇಲ್ಲವೇ ಸೇರಿಸುವ ಅವಕಾಶ ಇದೆ. ಅಂತಿಮ ತೀರ್ಪುಗಾರರ ಮೂರನೆಯ ಹಂತದಲ್ಲಿ ಹೆಸರು ಸೇರ್ಪಡೆ ಅಥವಾ ಕೈಬಿಡುವ ಅವಕಾಶ ಇಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಶನಿವಾರ ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯು ಪತ್ರಿಕಾ ಜಾಹೀರಾತು ನೀಡಿ ನೇರವಾಗಿ ಲೇಖಕರು ಮತ್ತು ಪ್ರಕಾಶಕರಿಂದಲೇ ಕೃತಿಗಳನ್ನು ಆಹ್ವಾನಿಸುವ ಏಕೈಕ ಪ್ರಶಸ್ತಿಯಿದು.
ಹೀಗೆ ಬಂದ ಕೃತಿಗಳ ಪಟ್ಟಿಯನ್ನು ಅಕಾಡೆಮಿ ರಚಿತ ಕನ್ನಡ ಭಾಷಾ ಸಲಹಾ ಸಮಿತಿಗೆ ಕಳಿಸಲಾಗುತ್ತದೆ. ಸಮಿತಿಯ ಹತ್ತು ಮಂದಿ ಸದಸ್ಯರು ಈ ಪಟ್ಟಿಯಿಂದ ತಮ್ಮ ಆಯ್ಕೆಯ ಎರಡು ಹೆಸರುಗಳನ್ನು ಕಳಿಸಿಕೊಡುತ್ತಾರೆ. ಪಟ್ಟಿಯ ಹೊರಗಿನ ಹೆಸರುಗಳನ್ನು ಕೂಡ ಈ ಸದಸ್ಯರು ಶಿಫಾರಸು ಮಾಡಬಹುದು. ಹೀಗೆ ಶಿಫಾರಸು ಮಾಡಿದ ಹೆಸರುಗಳನ್ನು  ಹತ್ತು ಮಂದಿ ಸದಸ್ಯರ ಮತ್ತೊಂದು ಪೂರ್ವಭಾವಿ ಸಮಿತಿಯೊಂದಕ್ಕೆ ಕಳಿಸಲಾಗುತ್ತದೆ. ಈ ಸಮಿತಿಯ ಸದಸ್ಯರು ಯಾರೆಂಬುದನ್ನು ಗೋಪ್ಯವಾಗಿರಿಸಲಾಗಿರುತ್ತದೆ. ಈ ಸದಸ್ಯರು ತಮಗೆ ಕಳಿಸಲಾಗಿರುವ ಪಟ್ಟಿಯಿಂದ ತಮ್ಮ ಆಯ್ಕೆಯ ತಲಾ ಎರಡು ಹೆಸರುಗಳನ್ನು ಸೂಚಿಸುತ್ತಾರೆ. ಪಟ್ಟಿಯ ಹೊರಗಿನ ಹೆಸರುಗಳನ್ನು ಕೂಡ ಸೇರಿಸಲು ಸಮಿತಿಗೆ ಸ್ವಾತಂತ್ರ್ಯ ಉಂಟು.

ಹೀಗೆ ಸೂಚಿಸಲಾದ ಹೆಸರುಗಳ ಪಟ್ಟಿಯನ್ನು ಮೂವರು ಸದಸ್ಯರ ಅಂತಿಮ ತೀರ್ಪುಗಾರರ ಸಮಿತಿಗೆ ರವಾನಿಸಲಾಗುವುದು. ಈ ಪಟ್ಟಿಯಿಂದ ಯಾವುದೇ ಹೆಸರನ್ನೇ ಕೈ ಬಿಡುವ ಅಥವಾ ಹೊಸದಾಗಿ ಸೇರಿಸುವ ಅಧಿಕಾರ ತೀರ್ಪುಗಾರರ ಸಮಿತಿಗೆ ಇರುವುದಿಲ್ಲ. ತನಗೆ ಕಳಿಸಲಾದ ಪಟ್ಟಿಯಿಂದಲೇ ಪುರಸ್ಕೃತರೊಬ್ಬರ ಹೆಸರನ್ನು ತೀರ್ಪುಗಾರರು ಆರಿಸಬೇಕು ಮತ್ತು ಈ  ಆಯ್ಕೆಯೇ ಅಂತಿಮ ಎಂದು ಅಕಾಡೆಮಿಯ ರಾವ್ ವಿವರಿಸಿದರು.

ಈ ಸಲದ ತೀರ್ಪುಗಾರರ ಸಮಿತಿಯಲ್ಲಿ ಡಾ.ಕೆ.ಮರುಳಸಿದ್ದಪ್ಪ, ಡಾ.ಕೆ.ಕೇಶವಶರ್ಮ ಹಾಗೂ ಲಲಿತಾ ಸಿದ್ದಬಸವಯ್ಯ ಅವರು ಇದ್ದರು. ಸಮಿತಿಯ ಸಂಚಾಲಕರು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ. ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗವಹಿಸಿದರೂ ಸಂಚಾಲಕರಿಗೆ ಮತ ನೀಡುವ ಅಧಿಕಾರ ಇರುವುದಿಲ್ಲ.

ಇಂತಹ ಪ್ರಶಸ್ತಿಗಳು ಸಾಮಾನ್ಯವಾಗಿ ಅಕಾಡಮಿಕ್ ವಲಯಕ್ಕೆ ಸೇರಿದವರಿಗೆ ಮತ್ತು ಹೆಚ್ಚಾಗಿ ಪುರುಷರಿಗೆ ದೊರೆಯುತ್ತವೆ. ಪುರಸ್ಕಾರಕ್ಕೆ ಪಾತ್ರರಾದ ಶಾಂತಿ ಕೆ.ಅಪ್ಪಣ್ಣ ಮಹಿಳೆಯಾಗಿದ್ದು, ಅಕಾಡಮಿಕ್ ವಲಯಕ್ಕೆ ಹೊರಗಿನವರು. ವೃತ್ತಿಯಿಂದ ನರ್ಸ್ ಆಗಿರುವವರು ಎಂಬ ಅಂಶಗಳು ಅವರ ಪರವಾಗಿ ಕೆಲಸ ಮಾಡಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಟಿ.ಎಸ್.ಗೊರವರ, ಪ್ರಜ್ಞಾ ಮಾರ್ಪಳ್ಳಿ ಹಾಗೂ ಸತ್ಯಮಂಗಲ ಮಹದೇವ ಅವರ ಕೃತಿಗಳನ್ನೂ ಪುರಸ್ಕಾರಕ್ಕೆ ಪರಿಗಣಿಸಿ ತೀರ್ಪುಗಾರರ ಸಮಿತಿಯ ಸಭೆ ಚರ್ಚೆ ನಡೆಸಿದೆ. ಪ್ರಶಸ್ತಿಯನ್ನು ಇಬ್ಬರಿಗೆ ಹಂಚುವ ಅವಕಾಶ ಇದ್ದಿದ್ದರೆ ಈ ಮೂವರ ಪೈಕಿ ಒಬ್ಬರು ಶಾಂತಿ ಕೆ.ಅಪ್ಪಣ್ಣ ಅವರೊಂದಿಗೆ ಪ್ರಶಸ್ತಿ ಹಂಚಿಕೊಳ್ಳುವ ಅವಕಾಶ ದಟ್ಟವಾಗಿತ್ತು. ಆದರೆ ಅಕಾಡೆಮಿಯ ನಿಯಮಗಳಲ್ಲಿ ಪ್ರಶಸ್ತಿಯನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಹಂಚಲು ಅವಕಾಶ ಇಲ್ಲ.

ಪ್ರತಿಸಲವೂ ಅತಿ ಶ್ರೇಷ್ಠ ಕೃತಿಯೇ ಆಯ್ಕೆ ಆಗಲಾರದು. ಸಾಮಾಜಿಕ ಮತ್ತು ಲಿಂಗಸಮಾನತೆಯ ಸದುದ್ದೇಶದ ಇತರೆ ಕಾರಣಗಳೂ ಕೆಲಸ ಮಾಡುವುದುಂಟು ಎಂದು ಹಿರಿಯ ಸಾಹಿತಿಯೊಬ್ಬರು ಹೇಳಿದರು.

ಹೀಗಾಗಿ ಈ ಬಾರಿಯ ಯುವಪುರಸ್ಕಾರವನ್ನು ಶಾಂತಿ ಅಪ್ಪಣ್ಣ ಅವರಿಗೆ ನೀಡಬೇಕೆಂಬ ಲಲಿತಾ ಸಿದ್ದಬಸವಯ್ಯ ಮತ್ತು ಕೇಶವಶರ್ಮ ಅವರ ಬಹುಮತದ ತೀರ್ಮಾನ ಜನತಾಂತ್ರಿಕ. ಬಹುಮತದ ತೀರ್ಮಾನವನ್ನು ಒಮ್ಮತದ ತೀರ್ಮಾನ ಆಗಿಸುವುದು ಸೂಕ್ತವೆಂಬ ಭಾವನೆಯಿಂದ ಡಾ.ಮರುಳಸಿದ್ದಪ್ಪ ಅವರೂ ಉಳಿದ ಇಬ್ಬರು ತೀರ್ಪುಗಾರರೊಂದಿಗೆ ದನಿಗೂಡಿಸಿದರು ಎಂದು ವಿಶ್ವಾಸಾರ್ಹ ಮೂಲಗಳಿಂದ ಗೊತ್ತಾಗಿದೆ.

ಟಿ.ಎಸ್.ಗೊರವರ, ರಾಜೇಂದ್ರಪ್ರಸಾದ, ರಾಜಶೇಖರ ಬಂಡೆ, ಪ್ರವರ ಕೊಟ್ಟೂರು, ಜಸ್ಟ್ ಶಾಫಿ, ಮಹದೇವ ಸತ್ಯಮಂಗಲ, ಸಿದ್ದು ಸತ್ಯಣ್ಣವರ, ಮಂಜುಳಾ ಹುಲಿಕುಂಟೆ, ಸ್ಮಿತಾ ಮಾಕಳ್ಳಿ, ಗುರು ಸುಳ್ಯ, ವಿನಿಶಾ ರಿನಿ ರಾಡ್ರಿಗ್ಸ್, ಕಾಜೂರು ಸತೀಶ್, ರಾಜಶೇಖರ ಚನ್ನೇಗೌಡ, ಶರತ್ ಚಕ್ರವರ್ತಿ, ಸಂಜ್ಯೋತಿ ವಿ.ಕೆ., ಗೋರವಿ ಆಲ್ದೂರು ಹಾಗೂ ಇನ್ನೂ ಹಲವು ಯುವಬರಹಗಾರರ ಹೆಸರುಗಳು ಪರಿಗಣನೆಯಲ್ಲಿದ್ದವು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT