ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರ ಪ್ರದರ್ಶನ ಏಕಿಲ್ಲ?

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ಈಚೆಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಭಾರತ ಸೋತಾಗ ಕ್ರೀಡಾಭಿಮಾನಿಗಳಿಗೆ ಸಾಂತ್ವನ ನೀಡಿದ್ದು ಹಾಕಿ ತಂಡ. ಲಂಡನ್‌ನಲ್ಲೇ ಆ ಸಮಯದಲ್ಲಿ ನಡೆಯುತ್ತಿದ್ದ ವಿಶ್ವ ಹಾಕಿ ಸೆಮಿಫೈನಲ್‌ ಲೀಗ್ ಟೂರ್ನಿಯ ಪಂದ್ಯದಲ್ಲಿ ಪಾಕ್‌ ತಂಡವನ್ನು ಬಗ್ಗು ಬಡಿದ ಭಾರತ ಹಾಕಿ ತಂಡದವರು ವಿಶೇಷ ಸಂಭ್ರಮಕ್ಕೆ ಕಾರಣರಾದರು. ಅದು ದೊಡ್ಡ ಸುದ್ದಿಯೂ ಆಯಿತು.

ಆ ಸಂತೋಷ ಅಷ್ಟಕ್ಕೇ ಸೀಮಿತವಾಗಿ ಬಿಟ್ಟಿತು. ಏಕೆಂದರೆ, ಈ ತಂಡದವರು ಕ್ವಾರ್ಟರ್‌ ಫೈನಲ್‌ನಲ್ಲಿ ದುರ್ಬಲ ಮಲೇಷ್ಯಾ ಎದುರು ಸೋತು ಹೊರಬಿದ್ದಿದ್ದಾರೆ.

ಹಿಂದೊಮ್ಮೆ ಚೀನಾ ದೇಶದ ಎದುರೇ ಸೋತು ಬಂದಿದ್ದರು. ಈಗ ಮಲೇಷ್ಯಾ ಎದುರು ಆಘಾತ ಅನುಭವಿಸಿದ್ದಾರೆ. ವಿಶ್ವ ಹಾಕಿಯಲ್ಲಿ ಈ ತಂಡ ಯಾವುದೇ ರೀತಿಯಲ್ಲಿ ಭಾರತಕ್ಕೆ ಸರಿಸಮ ಅಲ್ಲ. ಭಾರತದ ಆಟಗಾರರ ತರಬೇತಿ ವೈಖರಿ, ಇಲ್ಲಿರುವ ಸೌಲಭ್ಯಕ್ಕೆ ಹೋಲಿಸಿದರೆ ಮಲೇಷ್ಯಾ ತಂಡ ಏನೇನೂ ಅಲ್ಲ. ವಿಶ್ವ ಹಾಕಿಯಲ್ಲಿ ಮಲೇಷ್ಯಾ 14ನೇ ಸ್ಥಾನದಲ್ಲಿದ್ದರೆ, ಭಾರತ 6ನೇ ಸ್ಥಾನ ಹೊಂದಿದೆ.

‘ದುರ್ಬಲ ತಂಡದ ಎದುರು ಸೋತಿದ್ದು ಖಂಡಿತವಾಗಿಯೂ ಬೇಸರ ತರಿಸುವಂಥದ್ದು. ಸುಲಭ ಅವಕಾಶವನ್ನು ಕೈಚೆಲ್ಲಿದರು. ಭಾರತದ ಆಟಗಾರರ ಹಾವಭಾವದಲ್ಲೇನೋ ಕೊರತೆ ಇದೆ. ಯಾವುದೇ ತಂಡವನ್ನು ಕಡೆಗಣಿಸಬಾರದು. ಇದೊಂದು ದೊಡ್ಡ ಪಾಠ. ಬಲಿಷ್ಠ ತಂಡಗಳ ಎದುರು ಆಡಲು ಸಜ್ಜಾಗುವಂತೆ ತಯಾರಿ ನಡೆಸಬೇಕು’ ಎನ್ನುತ್ತಾರೆ ಒಲಿಂಪಿಯನ್‌ ಹಾಕಿ ಆಟಗಾರ ಎ.ಬಿ.ಸುಬ್ಬಯ್ಯ.

ಮಲೇಷ್ಯಾ ಎದುರಿನ ಈ ಪಂದ್ಯದಲ್ಲಿ ಗೆದ್ದಿದ್ದರೆ ಮುಂದಿನ ವರ್ಷ ಸ್ವದೇಶದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಗೆ ನೇರ ಅರ್ಹತೆ ಲಭಿಸುತಿತ್ತು. ಆದರೆ, ಸ್ವದೇಶದಲ್ಲಿ ವಿಶ್ವಕಪ್‌ ನಡೆಯುತ್ತಿರುವುದರಿಂದ ತಾಂತ್ರಿಕವಾಗಿ ಭಾರತಕ್ಕೆ ಆಡಲು ಅವಕಾಶ ಸಿಗಲಿದೆಯಷ್ಟೇ. ಅದೊಂಥರ ಹಿಂಬಾಗಿಲಿನಿಂದ ಪ್ರವೇಶ ಪಡೆದಂತೆ. ಅಷ್ಟಕ್ಕೂ ಈ ತಂಡದ ಮೇಲೆ ಭರವಸೆ ಇಡುವುದಾದರೂ ಹೇಗೆ?

ಉತ್ತಮ ಸೌಲಭ್ಯವಿದ್ದರೂ ಹಾಕಿ ತಂಡದವರು ಪದೇಪದೇ ಎಡವಿ ಬೀಳುತ್ತಲೇ ಇದ್ದಾರೆ. ಕೆಲವೊಮ್ಮೆ ದುರ್ಬಲ ತಂಡಗಳ ಎದುರೇ ಸೋತು ಬರುತ್ತಾರೆ. ಹಾಕಿ ಇಂಡಿಯಾ ಲೀಗ್‌ ಆರಂಭದ ಬಳಿಕ ಭಾರತ ಹಾಕಿಯಲ್ಲಿ ಸುಧಾರಣೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆಟಗಾರರಿಗೂ ಹಿಂದಿನಂತೆ ಹಣಕಾಸಿನ ಕೊರತೆ ಇಲ್ಲ. ಹಿಂದಿನಷ್ಟು ವಿವಾದಗಳೂ ಇಲ್ಲ. ಈಗಿನ ಆಡಳಿತವು ಹಾಕಿ ಸುಧಾರಣೆಗೆ ಹಲವು ಯೋಜನೆ ರೂಪಿಸಿದೆ. ಆದರೆ, ಪ್ರದರ್ಶನ ಮಟ್ಟದಲ್ಲಿ ಮಾತ್ರ ಹೇಳಿಕೊಳ್ಳುವಂತ ಸುಧಾರಣೆ ಕಾಣುತ್ತಿಲ್ಲ.

ಮಹಿಳಾ ತಂಡದ್ದೂ ಇದೇ ಕಥೆ. ಕರ್ನಾಟಕವನ್ನೇ ಉದಾಹರಣೆಯಾಗಿ ನೋಡಿ. ರಾಷ್ಟ್ರೀಯ ಪುರುಷರ ಹಾಕಿ ತಂಡದಲ್ಲಿ ರಾಜ್ಯದ ನಾಲ್ಕೈದು ಆಟಗಾರರು ಇದ್ದಾರೆ. ಆದರೆ, ರಾಷ್ಟ್ರೀಯ ಮಹಿಳಾ ತಂಡದಲ್ಲಿ ರಾಜ್ಯದ ಪ್ರಾತಿನಿಧ್ಯ ಇಲ್ಲವೇ ಇಲ್ಲ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಕ್ರೀಡಾ ಹಾಸ್ಟೆಲ್‌, ಮಡಿಕೇರಿಯ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಉತ್ತಮ ಸೌಕರ್ಯಗಳಿವೆ. ಮೈಸೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ 30ಕ್ಕೂ ಅಧಿಕ ಆಟಗಾರ್ತಿಯರು ತರಬೇತಿ ಪಡೆಯುತ್ತಿದ್ದಾರೆ. ಅತ್ಯುತ್ತಮ ಎನಿಸುವ ಆಸ್ಟ್ರೊ ಟರ್ಫ್‌ ಕ್ರೀಡಾಂಗಣ ಕೂಡ ಇದೆ. ಇಷ್ಟಿದ್ದರೂ ಏಳಿಗೆ ಕಾಣುತ್ತಿಲ್ಲ.

‘ಶೂ ಖರೀದಿಸಲೂ ಕಷ್ಟವಿದ್ದ ಕಾಲವದು. ಯಾವುದೇ ಸೌಕರ್ಯವಿರಲಿಲ್ಲ. ಆದರೂ ಅದ್ಭುತ ಪ್ರದರ್ಶನದ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದೆವು. ಈಗ ಎಲ್ಲಾ ಸೌಲಭ್ಯಗಳಿವೆ. ಆದರೆ, ಆಟಗಾರರಲ್ಲಿ ಬದ್ಧತೆ, ತ್ಯಾಗ ಮನೋಭಾವವೇ ಇಲ್ಲ. ಗೆಲುವಿನ ದಾಹವೂ ಇಲ್ಲ. ಬೇಗನೇ ವಿಶ್ವಾಸ ಕಳೆದುಕೊಂಡು ಬಿಡುತ್ತಾರೆ’ ಎಂಬುದು ಮಾಜಿ ಆಟಗಾರರ ಬೇಸರದ ಮಾತು.

ಈಚೆಗೆ ಭಾರತ ಜೂನಿಯರ್‌ ಆಟಗಾರರು ತುಸು ಸದ್ದು ಮಾಡುತ್ತಿದ್ದಾರೆ. ಬ್ಯಾಂಕಾಕ್‌ನಲ್ಲಿ ಕಳೆದ ವರ್ಷ ನಡೆದ 18 ವರ್ಷದೊಳಗಿನವರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಯುವತಿಯರು ಕಂಚಿನ ಪದಕ ಗೆದ್ದಿದ್ದರು. 2015ರಲ್ಲಿ ಯುವಕರು ಏಷ್ಯಾಕಪ್‌ನಲ್ಲಿ ಚಾಂಪಿಯನ್‌ ಆಗಿದ್ದರು.
ಸ್ಥಿರ ಪ್ರದರ್ಶನ ನೀಡುವುದು ಭಾರತ ಹಾಕಿ ತಂಡದ ಮುಂದಿರುವ ಪ್ರಮುಖ ಸವಾಲು. ಅದಕ್ಕೆ ಸಿದ್ಧತೆ ತಳಮಟ್ಟದಲ್ಲೇ ಆರಂಭವಾಗಬೇಕು. ತಂತ್ರಗಾರಿಕೆ ಪಂದ್ಯಕ್ಕೆ ತಕ್ಕಂತೆ ಬದಲಾಗಬೇಕು.

ಇದರ ನಡುವೆ ಹಾಕಿ ಕ್ರೀಡೆ ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಿರುವುದು ದುರಂತದ ಮುನ್ಸೂಚನೆ. ಪಂಜಾಬ್‌, ಹರಿಯಾಣ, ಒಡಿಶಾವಷ್ಟೇ ಭಾರತವಲ್ಲ. ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಹಾಕಿ ಕ್ರೀಡೆ ಕೇವಲ ಬೆಂಗಳೂರು, ಮೈಸೂರು ಹಾಗೂ ಕೊಡಗಿಗೆ ಸೀಮಿತವಾದಂತಿದೆ. ತರಬೇತಿ, ಪರಿಣತ ಕೋಚ್‌ಗಳು, ಉತ್ತಮ ಸೌಲಭ್ಯ ಎಲ್ಲವೂ ಈ ಭಾಗದ ಮಕ್ಕಳಿಗೆ ಲಭಿಸುತ್ತಿದೆ. ಉಳಿದ ಜಿಲ್ಲೆಗಳ ಉತ್ಸಾಹಿ ಆಟಗಾರರ ಗತಿಯೇನು?

***

ತಂಡದ ತಂತ್ರ ಬದಲಾಗುತ್ತಿಲ್ಲ: ಭಾಸ್ಕರನ್‌
‘ನಾನು ಆಟಗಾರನಾಗಿದ್ದಾಗ, ಕೋಚ್‌ ಆಗಿದ್ದಾಗ ಭಾರತ ಯಾವತ್ತೂ ಮಲೇಷ್ಯಾ ಎದುರು ಸೋತಿರಲಿಲ್ಲ. ಈಚಿನ ವರ್ಷಗಳಲ್ಲಿ ತಂಡದ ಯೋಜನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಮಲೇಷ್ಯಾ ಎದುರು ಇರಬಹುದು, ಹಾಲೆಂಡ್‌, ಜರ್ಮನಿ ವಿರುದ್ಧ ಇರಬಹುದು. ಭಾರತದ ಆಟಗಾರರ ತಂತ್ರ ಬದಲಾಗುತ್ತಿಲ್ಲ’

–ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಒಲಿಂಪಿಯನ್‌ ಹಾಕಿ ಆಟಗಾರ ವಿ.ಭಾಸ್ಕರನ್‌. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ನಾಯಕ ಕೂಡ. ಬಳಿಕ ಅವರು ರಾಷ್ಟ್ರೀಯ ತಂಮಡದ ಕೋಚ್‌ ಆಗಿಯೂ ಕಾರ್ಯ ನಿರ್ವಹಿಸಿದರು.

‘ಆರಂಭದಿಂದಲೇ ಆಕ್ರಮಣಕಾರಿ ಆಡುವುದು ತುಂಬಾ ಮುಖ್ಯ. ನಾನು ಕೋಚ್‌ ಆಗಿದ್ದಾಗ ದುರ್ಬಲ ತಂಡಗಳು ಎದುರು ಆಕ್ರಮಣಕಾರಿ ಆಟದ ತಂತ್ರ ರೂಪಿಸುತ್ತಿದ್ದೆ. ಪ್ರತಿ ಪಂದ್ಯಕ್ಕೂ ಆ ತಂತ್ರ ಬದಲಾಗುತಿತ್ತು. ಅದನ್ನು ಬಿಟ್ಟು ಏಳೆಂಟು ತಿಂಗಳ ಶಿಬಿರ ನಡೆಸಿ ಏನೂ ಪ್ರಯೋಜನವಿಲ್ಲ. ವಿದೇಶಿ ಕೋಚ್‌ ರೋಲೆಂಟ್‌ ಒಲ್ಟಮನ್ಸ್‌ ಅವರ ತಂತ್ರಗಳೇ ನನಗೆ ಅರ್ಥವಾಗುತ್ತಿಲ್ಲ. ಉತ್ತಮ ಆಟಗಾರರನ್ನು ಇಟ್ಟುಕೊಂಡು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲವೆಂದರೆ ಏನು ಅರ್ಥ? ಮಲೇಷ್ಯಾ ಎದುರು ರಕ್ಷಣಾತ್ಮಕ ಆಟದ ಅಗತ್ಯವಿತ್ತೇ? ಈ ತಂಡದ ಎದುರು ಸೋಲಲು ಅವರು ಲಂಡನ್‌ಗೆ ಹೋಗಬೇಕಿತ್ತೇ’ ಎಂದು ಪ್ರಶ್ನಿಸುತ್ತಾರೆ.

ಜರ್ಮನಿ, ಆಸ್ಟ್ರೇಲಿಯಾ ತಂಡಗಳ ತಂತ್ರಗಾರಿಕೆ ನೋಡಿ. ಮಾನಸಿಕ ಸ್ಥೈರ್ಯ, ಮನೋವಿಜ್ಞಾನ, ದೈಹಿಕ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇಲ್ಲ. ತಂತ್ರಗಾರಿಕೆಯೇ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಅವರ ಅಭಿಪ್ರಾಯ.

‘ನಾನು ಯಾರನ್ನೂ ಟೀಕೆ ಮಾಡುತ್ತಿಲ್ಲ. ನಾನು ಕೋಚ್‌ ಆಗಿದ್ದರೆ ಖಂಡಿತ ಮಲೇಷ್ಯಾ ಎದುರು ಸೋಲುತ್ತಿರಲಿಲ್ಲ. ಇದು ಗರ್ವದ ಮಾತಲ್ಲಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT