ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯಕ್ಕೆ ದಾಖಲೆ ಸಂಖ್ಯೆಯ ಭಕ್ತರ ಭೇಟಿ

Last Updated 27 ಜೂನ್ 2017, 8:57 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಅದರೊಂದಿಗೆ ಸರಣಿ ರಜಾ ಇದ್ದು, ಮಳೆಯನ್ನು ಲೆಕ್ಕಿ ಸದ ಸಹಸ್ರಾರು ಭಕ್ತರು ಕುಕ್ಕೆ ಕ್ಷೇತ್ರ ದರ್ಶನಕ್ಕೆ ಭೇಟಿ ನೀಡುತ್ತಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಶ್ರೀದೇವರ ದರ್ಶನ ಮಾಡಿ, ಸೇವೆಗಳನ್ನು ನೆರವೇರಿಸಿದರು. ಕ್ಷೇತ್ರದಲ್ಲಿ ಸೋಮವಾರ ಜಾತ್ರೆಗೂ ಮೀರಿದಂತೆ ಜನಸಾಗರ ನೆರೆದಿತ್ತು. ಮಳೆಗಾಲದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಇದು ಕ್ಷೇತ್ರದ ಜಾತ್ರಾ ಸಮಯ ಹೊರತು ಪಡಿಸಿ, ಮಳೆಗಾಲದಲ್ಲಿ ಭೇಟಿ ನೀಡಿದ ಭಕ್ತರ ಐತಿಹಾಸಿಕ ದಾಖಲೆಯಾಗಿದೆ.

ಶನಿವಾರ, ಭಾನುವಾರ ಹಾಗೂ ಸೋಮವಾರ ರಜೆ ಇದ್ದುದರಿಂದ ಮೂರು ದಿನ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಮಂಗಳವಾರ ಆಶ್ಲೇಷಾ ನಕ್ಷತ್ರವಾದುದರಿಂದ ಅಂದೂ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆ ಇದೆ.

ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ದೇವರ ದರ್ಶನಕ್ಕಾಗಿ ಭಕ್ತರ ಸರದಿ ಸಾಲು ತುಂಬಿತ್ತು. ಹೊರಾಂಗಣದಲ್ಲಿ ಹಲವು ಸುತ್ತುಗಳ ಸಾಲು ಕಂಡುಬಂತು. ದೇವಳದಲ್ಲಿ ಭಕ್ತರ ದಟ್ಟಣೆ ಅಧಿಕವಾದಾಗ, ಸ್ವಲ್ಪ ಸಮಯ ಹೋರಾಂಗಣದ ಪ್ರವೇಶ ದ್ವಾರವನ್ನು ಮುಚ್ಚಲಾಯಿತು.

ಆಶ್ಲೇಷಾ ಬಲಿ, ಶೇಷಸೇವೆ, ನಾಗಪ್ರತಿಷ್ಠೆ, ಮಹಾ ಪೂಜೆ ಮತ್ತು ಪಂಚಾಮೃತ ಮಹಾಭಿ ಷೇಕಗಳನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ಆದಿ ಸುಬ್ರಹ್ಮಣ್ಯ ಮತ್ತು ಕುಮಾರಧಾರಾ ಸ್ನಾನಘಟ್ಟದಲ್ಲಿ ಅಧಿಕ ಭಕ್ತಸಂದಣಿ ಕಂಡು ಬಂದಿತ್ತು.

ಶುಕ್ರವಾರ ಸಂಜೆಯಿಂದಲೇ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ದೇವಳದ ಹಾಗೂ ಖಾಸಗಿ ವಸತಿಗೃಹಗಳು ರಾತ್ರಿ ವೇಳೆ ಸಂಪೂರ್ಣ ಭರ್ತಿಯಾಗಿದ್ದವು. ಉಳಿದ ಜನರು, ದೇವಳದ ಧರ್ಮಸಮ್ಮೇಳನ ಮಂಟಪದ ಸಭಾಂಗಣ ಹಾಗೂ ರಥ ಬೀದಿಯ ಛತ್ರದಲ್ಲಿ ರಾತ್ರಿ ಕಳೆಯುವಂತಾಯಿತು.

ವಾಹನ ದಟ್ಟಣೆ
ಕುಮಾರಧಾರಾ ಮುಖ್ಯದ್ವಾರದಿಂದ ದೇವಳದ ರಥಬೀದಿವರೆಗೆ 3ಕಿ.ಮೀ. ದೂರ ವಾಹನಗಳು ನಿಂತಿದ್ದವು. ರಥ ಬೀದಿಯ ಮುಂಭಾಗದ ಸವಾರಿ ಮಂಟಪ, ಕಾಶಿಕಟ್ಟೆ ಬಳಿಯ ಶಾಲಾ ಮೈದಾನಗಳೂ ವಾಹನಗಳಿಂದ ಭರ್ತಿಯಾಗಿದ್ದವು. ವಾಹನ ನಿಲುಗಡೆಗೆ ಜಾಗವಿಲ್ಲದ ಕಾರಣ ಕೆಲವೆಡೆ ರಸ್ತೆ ಬದಿಯೇ ಪಾರ್ಕಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ವಾಹನ ದಟ್ಟಣೆಯಿಂದ ಟ್ರಾಫಿಕ್‌ ಸಮಸ್ಯೆ ಉದ್ಭವಿಸಿತ್ತು.

ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಸಂಖ್ಯೆ ತೀರಾ ಕಡಿಮೆ ಇರುವುದರಿಂದ, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು. ಹರಸಾಹಸ ಮಾಡಬೇಕಾಯಿತು.ರಜಾದಿನಗಳಲ್ಲಿ ಇದೇ ಸ್ಥಿತಿ ಸಾಮಾನ್ಯವಾಗಿದ್ದು, ಕ್ಷೇತ್ರದ ಭದ್ರತೆ ದೃಷ್ಟಿಯಿಂದ ಶೀಘ್ರವೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂಬುದು ಭಕ್ತರ ಆಗ್ರಹ.

* * 

ಮುಜರಾಯಿ ಇಲಾಖೆಯ ಹೆಚ್ಚು ಆದಾಯ ತರುವ ದೇವಳ ಇದಾಗಿದೆ. ಇಲ್ಲಿ ಭಕ್ತರಿಗೆ ವ್ಯವಸ್ಥೆಯ ಕೊರತೆ ಇದ್ದು, ಕೊಠಡಿಗಳ ಸಮಸ್ಯೆ ಹೆಚ್ಚಾಗಿದೆ.              
ಹನುಮಂತಪ್ಪ ರಾಮನಗರ
ಕ್ಷೇತ್ರಕ್ಕೆ ಬಂದಿದ್ದ ಭಕ್ತ

* *

ಕ್ಷೇತ್ರದಲ್ಲಿ ಭಕ್ತರ ಅನುಕೂಲತೆಗೆ ಇನ್ನಷ್ಟು ವ್ಯವಸ್ಥೆ ಮಾಡಬೇಕು. ದೇವರ ದರ್ಶನ, ಸೇವೆ ನೆರವೇರಿಸಲು ವ್ಯವಸ್ಥೆ ಬೇಕು. ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಅಗತ್ಯವಾಗಿದೆ.
ಚಿನ್ಮಯ್ ಕೃಷ್ಣ ದಾವಣಗೆರೆ, ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT