ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಫ್ತಾರ್‌ ಕೂಟ’ ಎಂಬ ಪ್ರಹಸನ

Last Updated 29 ಜೂನ್ 2017, 20:25 IST
ಅಕ್ಷರ ಗಾತ್ರ

ಅರೇಬಿಕ್ ಭಾಷೆಯಲ್ಲಿ ‘ಇಫ್ತಾರ್‌’ ಎಂದರೆ (ಬ್ರೇಕ್‌ಫಾಸ್ಟ್‌) ಉಪವಾಸವನ್ನು ಮುರಿಯುವುದು ಎಂದರ್ಥ. ನಿತ್ಯ ಮುಂಜಾನೆ ಉಪಾಹಾರ ತೆಗೆದುಕೊಳ್ಳುವುದಕ್ಕೂ ‘ಇಫ್ತಾರ್‌’ ಎನ್ನಬಹುದು. ಆದರೆ, ರಂಜಾನ್ ತಿಂಗಳ ಸಂದರ್ಭದಲ್ಲಿ ಇಫ್ತಾರ್‌ ಎಂದರೆ ಇಡೀ ದಿನ ವಿಧಿಬದ್ಧವಾಗಿ ಅನುಸರಿಸಿದ ಕಠಿಣ ಉಪವಾಸವನ್ನು ಅಷ್ಟೇ ವಿಧಿಬದ್ಧವಾಗಿ ಮುಕ್ತಾಯಗೊಳಿಸಿ ಲಘು ಉಪಾಹಾರವನ್ನು ಸೇವಿಸುವ ಕ್ರಿಯೆ.

ಇದನ್ನು ಮಗ್ರಿಬ್ (ಸೂರ್ಯಾಸ್ತದ ನಂತರದ) ನಮಾಜಿಗಿಂತ ಸ್ವಲ್ಪ ಮುಂಚೆ, ನಮಾಜಿಗೆ ಹೋಗುವ ಶುದ್ಧತೆಯ ಸಿದ್ಧತೆಯೊಂದಿಗೆ ಮಾಡಲಾಗುತ್ತದೆ. ಸಮುದಾಯದವರು ಸಂಜೆ ಹೊತ್ತು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿನಿಸು, ಹಣ್ಣುಹಂಪಲ, ದ್ರಾಕ್ಷಿ ಇತ್ಯಾದಿಗಳನ್ನು ಇಫ್ತಾರ್‌ಗಾಗಿ ಮಸೀದಿಗೆ ಕಳಿಸಿಕೊಡುತ್ತಾರೆ. ಅಲ್ಲಿ ರೋಜ್‌ದಾರರು (ರೋಜಾ ಇರುವವರು) ಇದನ್ನು ಸೇವಿಸಿ ಇಫ್ತಾರ್‌ ಮುಗಿಸುತ್ತಾರೆ.

ನಾವು ಚಿಕ್ಕವರಿದ್ದಾಗ ಕೆಲವರು ರಂಜಾನ್ ತಿಂಗಳಲ್ಲಿ ರೋಜ್‌ದಾರರನ್ನು ಊಟಕ್ಕೆ ಕರೆಯುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ಮಸೀದಿಗೆ ಹೋಗಿ ಅಲ್ಲಿ ಇರುವವರಿಗೆಲ್ಲ (ಎಲ್ಲರೂ ಸಾಮಾನ್ಯವಾಗಿ ರೋಜಾ ಇದ್ದವರು) ಊಟಕ್ಕೆ ಬರುವಂತೆ ಔತಣ ನೀಡುತ್ತಿದ್ದರು. ಕರೆದವರ ಮನೆಗೇ ಹೋಗಿ ರೋಜ್‌ದಾರರು ಊಟ ಸೇವನೆ ಮಾಡುತ್ತಿದ್ದರು.

ಮನೆ ಚಿಕ್ಕದೋ ದೊಡ್ಡದೋ ಅಲ್ಲಿಯೇ ಮಾಡಿದ ಅಡುಗೆಯನ್ನು ಇದ್ದಷ್ಟು ಜಾಗದಲ್ಲಿ ವಿವಿಧ ಪಂಕ್ತಿಗಳಲ್ಲಿ ಕುಳಿತು ಊಟ ಮಾಡಿ ಮನೆಯವರನ್ನು ಹರಸುವುದು ಒಂದು ಬಗೆಯ ಸಂಭ್ರಮದ ಸಂಗತಿಯಾಗಿತ್ತು. ಇದನ್ನು ‘ಇಫ್ತಾರ್‌ ಔತಣಕೂಟ’ ಎಂದು ಕರೆಯಬಹುದು. ಇದು ಮೂಲಭೂತವಾಗಿ ಧಾರ್ಮಿಕ ಆಚರಣೆ.

ಈಗ, ಮಸೀದಿಯ ಬಳಿಯಲ್ಲಿಯೇ ಅಡುಗೆ, ಊಟದ ವ್ಯವಸ್ಥೆ ಮಾಡುತ್ತಿದ್ದು, ಅಪೇಕ್ಷೆ ಇರುವವರು ಹಣ ಕೊಟ್ಟರೆ ಸಾಕು ಎಲ್ಲವೂ ‘ವ್ಯವಸ್ಥೆ’ ಮಾಡಲಾಗುತ್ತದೆ. ಇದರಿಂದ ಮೊದಲಿದ್ದ ಭ್ರಾತೃತ್ವ ಕಡಿಮೆಯಾಗಿ ಇದೊಂದು ‘ಇವೆಂಟ್’ ಆಗಿ ಪರಿಣಮಿಸಿದೆ.

ಬರಬರುತ್ತಾ ಇಫ್ತಾರ್‌ ಕೂಟ ಎನ್ನುವುದು ಹೆಚ್ಚು ಸಾರ್ವತ್ರಿಕ ಇವೆಂಟ್ ಆಗುತ್ತಿರುವುದನ್ನು ನಾವು ಕಾಣುತ್ತೇವೆ. ಮುಸ್ಲಿಮ್ ರಾಜಕೀಯ ನಾಯಕರು ತಮ್ಮ ಪಕ್ಷಬಾಂಧವರನ್ನು ಆಹ್ವಾನಿಸಿ ‘ಇಫ್ತಾರ್‌ ಕೂಟ’ದ ಹೆಸರಿನಲ್ಲಿ ಔತಣ ಕೂಟಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಬರುವ ಅನ್ಯ ಮತಸ್ಥರು ತಲೆಗೊಂದು ಟೋಪಿ, ಹೆಗಲ ಮೇಲೆ ಸ್ಕಾರ್ಫ್‌ ಹಾಕಿಕೊಳ್ಳುತ್ತಾರೆ. ಇವರು ಮುಸ್ಲಿಮರಾಗಬೇಕಾಗಿಲ್ಲ. ರೋಜ್‌ದಾರ್ ಕೂಡ ಆಗಿರಬೇಕಾಗಿಲ್ಲ. ಆದರೂ ಇದು ‘ಇಫ್ತಾರ್‌ ಕೂಟ’!

ಮುಸ್ಲಿಮ್ ನಾಯಕರೊಬ್ಬರು ತನ್ನ ಪ್ರತಿಷ್ಠೆಗಾಗಿ ರಂಜಾನ್ ತಿಂಗಳ ಸಂದರ್ಭವನ್ನು ಬಳಸಿಕೊಳ್ಳುತ್ತಿರಬಹುದು. ಆದರೆ ಜಾತ್ಯತೀತ ಸರ್ಕಾರದ ಪ್ರತಿನಿಧಿಗಳಾದ  ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಷ್ಟ್ರಪತಿಯೂ ಅಧಿಕೃತವಾಗಿ ‘ಇಫ್ತಾರ್‌ ಕೂಟ’ಗಳನ್ನು ನಡೆಸುವುದು ನನಗೆ ಅರ್ಥವಾಗುವ ಸಂಗತಿಯಲ್ಲ!

ನನಗೆ ಇನ್ನೂ ಆಶ್ಚರ್ಯವಾಗುವ ಸಂಗತಿಯೆಂದರೆ, ಈದ್ ದಿನ ಈದ್ಗಾ ಮೈದಾನದಲ್ಲಿ ಮುಸ್ಲಿಮ್ ಸಮುದಾಯದ ಪುರುಷರು ಸಾಮೂಹಿಕ ನಮಾಜ್ ಮಾಡುವಾಗಲೂ ಮುಸ್ಲಿಮೇತರ ನಾಯಕರು ಟೋಪಿ ಹಾಕಿಕೊಂಡು ಅವರೊಂದಿಗೆ ನಮಾಜ್ ಮಾಡುವುದು! ನಮಾಜ್ ಮಾಡುವಾಗ ಆರಂಭದಲ್ಲಿಯೇ ಉಚ್ಚರಿಸಲಾಗುವ ಶ್ಲೋಕಗಳಲ್ಲಿ ಒಂದು ಪ್ರಮುಖವಾದ ಅರೇಬಿಕ್ ಶ್ಲೋಕದ ಅರ್ಥ, ‘ಅಲ್ಲಾಹ್‌ನ ಹೊರತು ಅನ್ಯ ಆರಾಧ್ಯರಿಲ್ಲ, ಹಜರತ್‌ ಮುಹಮ್ಮದರು ಅಲ್ಲಾಹನ ಪ್ರವಾದಿಗಳು’ ಎಂಬುದು. ಮೂರ್ತಿ ಪೂಜೆ ಮಾಡುವ ಇವರು ಇಸ್ಲಾಮ್ ಧರ್ಮದ ಈ ಮೂಲ ತತ್ವವನ್ನು ಒಪ್ಪಿಕೊಳ್ಳುವರೇ? ಇಲ್ಲವಾದರೆ ಇವರ ‘ನಮಾಜ್’ ಹೇಗೆ ಸಿಂಧುವಾಗುತ್ತದೆ? ಇಂಥ ನಂಬಿಕೆ ಇಲ್ಲದವರೊಂದಿಗೆ ಮಾಡುವ ಇತರರ ನಮಾಜೂ ಕೂಡ ಸಿಂಧುವಾಗುವುದೇ? ಎಲ್ಲವೂ ರಾಜಕೀಯ.

ಇತ್ತೀಚೆಗೆ, ಮೊದಲ ಬಾರಿಗೆ, ಉಡುಪಿಯ ಮಠದ ಶ್ರೀಗಳು ಮುಸಲ್ಮಾನರನ್ನು ‘ಇಫ್ತಾರ್‌ ಕೂಟ’ಕ್ಕೆ ಕರೆದರು. ತಾವೇ ಸ್ವತಃ ಫಲಾಹಾರವನ್ನು ಬಡಿಸಿದರು. ಅಲ್ಲಿ ಆಹ್ವಾನಿತರಾದವರು ತಮ್ಮ ಧರ್ಮದ ಒಂದು ಕ್ರಮವಾಗಿ ಅಲ್ಲಿದ್ದ ಒಂದು ಖಾಲಿ ಜಾಗದಲ್ಲಿ ನಮಾಜೂ ಮಾಡಿದ್ದಾರೆ. ಇದೆಲ್ಲವೂ ಹಲವು ಬಗೆಯ ಪರ–ವಿರೋಧ ವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಅದೇ ರೀತಿಯಲ್ಲಿ ರಾಜಕೀಯ ನಾಯಕರು ಗ್ರಾಮ ಸಂದರ್ಶನಕ್ಕೆ ಹೋಗಿ ದಲಿತರ ಮನೆಯಲ್ಲಿ ಉಪಾಹಾರವನ್ನು ಸೇವಿಸುವುದನ್ನೂ ದೊಡ್ಡ ಸಾಧನೆ, ದೊಡ್ಡ ಆದರ್ಶ ಎಂಬಂತೆ ಬಿಂಬಿಸಲು ಹೋಗಿ ವಿವಾದಕ್ಕೆ, ಅಪಹಾಸ್ಯಕ್ಕೆ ಒಳಗಾಗಿದ್ದಾರೆ.

ಇವು ಯಾವುವೂ ಭ್ರಾತೃತ್ವದ, ಕೋಮುಸೌಹಾರ್ದದ ನಡೆಗಳಲ್ಲ. ಎಲ್ಲವೂ ಕ್ಷುಲ್ಲಕ ರಾಜಕಾರಣ. ನಮ್ಮ ದೇಶದಲ್ಲಿ ಅನೇಕ ಜಾತಿ, ಮತ ಮತ್ತು ಧರ್ಮಗಳಿವೆ. ಒಂದೈವತ್ತು ವರ್ಷಗಳ ಹಿಂದೆ, (ಈಗಲೂ ಕೆಲವು ಕಡೆ ಅಪರೂಪಕ್ಕೆ) ಹಿಂದೂಗಳು ಮುಸ್ಲಿಮರೊಂದಿಗೆ ಮೊಹರಂಅನ್ನು, ಉರುಸುಗಳನ್ನು ಆಚರಿಸಿದರೆ, ಮುಸಲ್ಮಾನರು ಊರಮ್ಮನ ಹಬ್ಬ, ಗಣೇಶನ ಹಬ್ಬದ ಆಚರಣೆಯಲ್ಲಿ ಸೇರಿಕೊಳ್ಳುತ್ತಿದ್ದರು. ಈಗ ಕೋಮು ರಾಜಕೀಯ ಗೆದ್ದಲಿನಂತೆ ಸಮಾಜದಲ್ಲಿ ಹೊಕ್ಕು ಜಾತ್ಯತೀತ ಕಟ್ಟಡವನ್ನು ಒಳಗೊಳಗೇ ಸರ್ವನಾಶ ಮಾಡಿದೆ.

ಮುಸ್ಲಿಮರಲ್ಲೂ ಪುರೋಹಿತಶಾಹಿ ಪ್ರಬಲವಾಗಿ ಬೆಳೆದಿದೆ. ಧರ್ಮವನ್ನು ತಮಗೆ ಸರಿ ತೋರಿದ ರೀತಿಯಲ್ಲಿ ಅರ್ಥೈಸುತ್ತಾ, ಅದರ ಕುರಿತು ಪ್ರಾಥಮಿಕ ಅರಿವೂ ಇಲ್ಲದ ದುಡಿಯುವ, ಸಾಮಾನ್ಯ ಜನರ ತಲೆ ಕೆಡಿಸಿ, ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಪುರೋಹಿತಶಾಹಿ ಇದನ್ನು ಧರ್ಮದ ಹೆಸರಿನಲ್ಲಿ ಮಾಡಿದರೆ ರಾಜಕೀಯ ನಾಯಕರು ಮತಗಳಿಕೆಯ ಸಾಧನವಾಗಿ ಸಮಾಜವನ್ನು ಹೆಚ್ಚು ಹೆಚ್ಚು ಜಾತಿ, ಉಪಜಾತಿಗಳಾಗಿ ವಿಂಗಡಿಸಿ, ನೀವು ಉಳಿದವರಿಗಿಂತ ಬೇರೆ ಎನ್ನುವ ವಿಷಬೀಜವನ್ನು ಜನರಲ್ಲಿ ಬಿತ್ತುತ್ತಿದ್ದಾರೆ.  ಇಷ್ಟೆಲ್ಲಾ ಮಾಡಿ ಆಗೀಗ ‘ಕೋಮುಸೌಹಾರ್ದ’ದ ಪ್ರಹಸನಗಳನ್ನು ನಡೆಸಿದರೆ ಏನೂ ಪ್ರಯೋಜನವಿಲ್ಲ.

ನಿಜವೆಂದರೆ, ಸಂವಿಧಾನದಲ್ಲಿರುವ ‘ಜಾತ್ಯತೀತ’ ಎಂಬ ಪದವನ್ನು ‘ಸರ್ವಧರ್ಮ ಸಮಭಾವದ’ ಎಂದು ಅರ್ಥ ಮಾಡಿಕೊಳ್ಳುವ ಬದಲಿಗೆ ‘ಧರ್ಮನಿರಪೇಕ್ಷ’ ಎಂದು ಅರ್ಥ ಮಾಡಿಕೊಂಡು ಅನುಸರಿಸಬೇಕಾಗಿತ್ತು. ಎಂದರೆ ಸರ್ಕಾರಕ್ಕೂ ಯಾವುದೇ ಧರ್ಮ ಅಥವಾ ಧಾರ್ಮಿಕ ಆಚರಣೆಗೂ ಸಂಬಂಧವಿಲ್ಲ.

ಸರ್ಕಾರ ಎಲ್ಲರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭ್ಯುದಯವನ್ನಷ್ಟೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತದೆ. ಧಾರ್ಮಿಕ, ಪಾರಮಾರ್ಥಿಕ ಗುರಿಗಳು ಆಯಾ ವ್ಯಕ್ತಿ ಮತ್ತು ಸಮುದಾಯಗಳಿಗೆ ಸೇರಿದ್ದು. ಇನ್ನೊಂದು ವ್ಯಕ್ತಿ ಮತ್ತು ಸಮುದಾಯದ ಸ್ವಂತ ಹಕ್ಕುಗಳಿಗೆ ಧಕ್ಕೆ ಬಾರದ ಹಾಗೆ ಅವರು ಅದನ್ನು ಅನುಸರಿಸುವ ಅವಕಾಶ ಹೇಗೂ ಸಂವಿಧಾನದಲ್ಲಿದೆ.

ನಿಮಗೆ ಭಾರತದಲ್ಲಿ ಕೋಮು ಸೌಹಾರ್ದ ಬೇಕೇ? ಹಾಗಾದರೆ ದಯವಿಟ್ಟು ಅದಕ್ಕಾಗಿ ಏನೂ ಮಾಡಲು ಹೋಗಬೇಡಿ. ಊಟಕ್ಕೆ ಕರೆಯಿರಿ, ಆದರೆ ಹಬ್ಬಗಳನ್ನು ಬಿಟ್ಟು ಕರೆಯಿರಿ. ಅವರಿಗೆ ಬೇಕಾದ ಹಬ್ಬವನ್ನು ಆಚರಿಸಲು, ಅವರಿಗೆ ಬೇಕಾದ ಆಹಾರವನ್ನು ಸೇವಿಸಲು ಬಿಟ್ಟು ಬಿಡಿ. ಒಂದು ದಶಕದ ಕಾಲ ಇದನ್ನು ಸಂವಿಧಾನದ ಮೇಲೆ ಆಣೆಯಿಟ್ಟು ಎಲ್ಲರೂ ಮಾಡಿ. ನೋಡಿ, ಅದರ ನಂತರ ನಮ್ಮ ಸಮಾಜದ ಮುಖವೇ ಬದಲಾಗಿರುತ್ತದೆ. ನಮ್ಮದು ನಿಜವಾದ ಜಾತ್ಯತೀತ ರಾಷ್ಟ್ರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT