ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ಬೆಳೆಸಿದರೆ ಪ್ರೋತ್ಸಾಹ ಧನ

Last Updated 12 ಜುಲೈ 2017, 9:10 IST
ಅಕ್ಷರ ಗಾತ್ರ

ಗುಡಿಬಂಡೆ: ಅರಣ್ಯ ಇಲಾಖೆ ಕೃಷಿ– ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ಬೆಳೆಸುವ ಸಸಿಗಳಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ರೈತರು ತಮ್ಮ ಹೊಲಗಳ ಬದು, ಬರುಡು ಭೂಮಿಯಲ್ಲಿ ಸ್ಥಳ ಗುರುತಿಸಬೇಕು. ಇಲಾಖೆ ಪ್ರತಿ ಫಲಾನುಭವಿಗೆ ಪ್ರತಿ ಎಕರೆಗೆ 150 ಸಸಿ ನೀಡುತ್ತದೆ.

ಬದುಕುಳಿದ ಪ್ರತಿ ಸಸ್ಯಗಳಿಗೆ ಮೊದಲನೇ ಮತ್ತು ಎರಡನೇ ವರ್ಷ ತಲಾ ₹ 30, 3ನೇ ವರ್ಷ ₹ 40 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಮೊದಲು ಒಂದು ಸಸಿಗೆ ಮೂರು ವರ್ಷದಿಂದ ₹ 45 ನೀಡಲಾಗುತ್ತಿತ್ತು. ನೇರಳೆ, ಬೇವು, ಆಲ, ಹೊಂಗೆ, ಹುಣಸೆ, ಬಿದಿರು, ಮಹಾಗನಿ, ಸಿಲ್ವರ್ ಓಕ್ ಸಸಿಗಳನ್ನು ನೀಡಲಾಗುತ್ತದೆ.

ರೈತರು ಸಸಿ ಪಡೆಯಲು ಪಹಣಿ, ಆಧಾರ್‌ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಸಂಖ್ಯೆಯನ್ನು ಹತ್ತಿರದ ವಲಯ ಅರಣ್ಯಾಧಿಕಾರಿ ಕಚೇರಿಗೆ ನೀಡಬೇಕು.  ಮಳೆ ಬಂದಾಗ ಹೊಲದ ಬದು ನಾಶವಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಮರಗಳು ಇಲ್ಲದ ಕಾರಣ ಮಳೆ ಸಹ ಬೀಳುತ್ತಿಲ್ಲ. ಇದನ್ನು ಅರಿತ ಅರಣ್ಯ ಇಲಾಖೆ ರೈತರಿಗೆ ಸಸಿಗಳನ್ನು ನೀಡಿ ಬೆಳೆಸಲು ಪ್ರೋತ್ಸಾಹಿಸುತ್ತಿದೆ.

ಯೋಜನೆ ಜಾರಿ ಕಷ್ಟ: ಭೂಮಿ ಹೊಂದಿರುವ ರೈತರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಆದರೆ ಕೆಲ ರೈತರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಕಾರ್ಯದರ್ಶಿ ಎಚ್.ಪಿ.ಲಕ್ಷ್ಮಿನಾರಾಯಣ ತಿಳಿಸಿದರು.

‘ರೈತರಿಗೆ ಜಮೀನು ಇರುವುದೇ ಕಡಿಮೆ. ಜಮೀನುಗಳಲ್ಲಿ ಮರಗಳು ಬೆಳೆದರೆ ನೆರಳಿನಲ್ಲಿ ಬೆಳೆ ಬೆಳೆಯುವುದಿಲ್ಲ ಎಂದು ಗಿಡಗಳನ್ನು ನೆಡುತ್ತಿಲ್ಲ. ಅರಣ್ಯ ಇಲಾಖೆಯವರು ಪ್ರತಿ ವರ್ಷ ಹೆಚ್ಚು ಗಿಡಗಳನ್ನು ನೆಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಎಲ್ಲ ಗಿಡಗಳು ಏನಾಗಿವೆ, ಎಲ್ಲಿ ಬೆಳೆದಿವೆ. ಜಮೀನಿನಲ್ಲಿ ಗಿಡ ಬೆಳೆಸಿ ಎಂದು ಹಣಕ್ಕೆ ಸಸಿ ಮಾರಾಟ ಮಾಡುತ್ತಿದ್ದಾರೆ. ನಮ್ಮ ಕಡೆ ಯೋಜನೆ ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದರು.

* * 

ಸಂತೆ ನಡೆಯುವ ಸ್ಥಳಗಳಲ್ಲಿ ‘ಸಸ್ಯ ಸಂತೆ’ ಹಮ್ಮಿಕೊಳ್ಳಲಾಗುತ್ತಿದೆ. ರೈತರು ರಿಯಾಯಿತಿಯಲ್ಲಿ ಸಸಿಗಳನ್ನು ಕೊಳ್ಳಬಹುದು. ಹೊಲದಲ್ಲಿ ಸಸಿ ಬೆಳೆಸಿ ಮಣ್ಣಿನ ಸವಕಳಿ ತಪ್ಪಿಸಬೇಕು.
ಜಾವೀದ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT