ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಿಂದ ಪುನಶ್ಚೇತನ ಕಾರ್ಯಾಗಾರ

Last Updated 14 ಜುಲೈ 2017, 5:54 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬದಲಾಗುತ್ತಿರುವ ಸಂದರ್ಭದಲ್ಲಿ ಧಾರ್ಮಿಕರೂ ಬದಲಾಗುತ್ತಾ, ಬೇರೆಯವರಿಗೆ ಉತ್ತಮ ಬದುಕು ಕಟ್ಟಿಕೊಡಬೇಕು. ಈ ಹಿನ್ನೆಲೆಯಲ್ಲಿ ಪರಮಾರ್ಥ ಸಾಧಕರಿಗಾಗಿ ಶ್ರೀರಂಗಪಟ್ಟಣದಲ್ಲಿ ಇದೇ 16ರಿಂದ 18ರವರೆಗೆ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗುತ್ತಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ತಿಳಿಸಿದರು.

ಮುರುಘಾಮಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿವರ್ತನಪರ ಧರ್ಮ ಸಂಸತ್, ಮುರುಘಾಮಠ ಸಹಯೋಗದಲ್ಲಿ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಸುಮಾರು 200 ಸ್ವಾಮೀಜಿಗಳು ಪಾಲ್ಗೊಳ್ಳುತ್ತಿದ್ದಾರೆ’ ಎಂದರು.

‘ಧಾರ್ಮಿಕ ಮುಖಂಡರಿಗೂ ನೋವುಗಳಿರುತ್ತವೆ. ಇಂಥವುಗಳನ್ನು ಪರಿಗಣಿಸಿ ಕಾಲಕಾಲಕ್ಕೆ ಮಾರ್ಗದರ್ಶನ ನೀಡುವುದು ಪರಿವರ್ತನ ಧರ್ಮ ಸಂಸತ್ತಿನ ಉದ್ದೇಶ. ಆ ಜವಾಬ್ದಾರಿ ನಮ್ಮಂಥವರ ಮೇಲಿದೆ. ನಮ್ಮೊಡನಿರುವವರು ದೊಡ್ಡದಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿಯೇ ಈ ಕಾರ್ಯಾಗಾರ ಆಯೋಜಿಸುತ್ತಿದ್ದೇವೆ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಭೆ  ಪೀಡಿತ ಪ್ರದೇಶಗಳಲ್ಲಿ ಸಾಮರಸ್ಯ  ಮೂಡಿಸುವ  ಕುರಿತು ಧರ್ಮ  ಸಂಸತ್‌ನಲ್ಲಿ ಚರ್ಚೆ ಮಾಡುತ್ತೇವೆ.  ಮಂಗಳೂರು  ವ್ಯಾಪ್ತಿಯಲ್ಲಿರುವ ಸ್ವಾಮೀಜಿಗಳು, ಸಂತರು, ಎಲ್ಲ ಧರ್ಮದ ಮುಖಂಡರೊಂದಿಗೆ ಮಾತನಾಡುತ್ತೇವೆ. ಸಾಮರಸ್ಯ ಮೂಡಿಸುವ ಕೆಲಸ ರಾಜಕೀಯವಾಗಬಾರದು ಎಂಬುದು ನಮ್ಮ ಆಶಯ. ಇಂಥ ಹಲವು ವಿಚಾರಗಳನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಪುನಃ ಈ ವರ್ಷ ಬರಗಾಲ. ದೇಶದ ಏಳು ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಬರಗಾಲ ಎದುರಿಸಲು ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ಸರ್ಕಾರಕ್ಕೆ ಧರ್ಮಸಂಸತ್ತಿನ ಕಡೆಯಿಂದ ಮನವಿ ಸಲ್ಲಿಸುವ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಬರವನ್ನು ಶಾಶ್ವತವಾಗಿ ನಿವಾರಿಸಬೇಕು ಎಂದರೆ, ನದಿ ಜೋಡಣೆ ಯೋಜನೆ ಜಾರಿಗೆ ಬರಬೇಕು. ಉತ್ತರ ಭಾರತದಲ್ಲಿ ನದಿಗಳು ಪ್ರವಾಹವಾಗಿ, ಮಳೆ ನೀರು ಸಮುದ್ರಕ್ಕೆ ಸೇರುತ್ತದೆ. ನದಿ ಜೋಡಣೆಯಾದರೆ, ವ್ಯರ್ಥವಾಗುವ ನೀರು ಬಳಕೆಯಾಗುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯಾದವ ಗುರುಪೀಠದ ಬಸವ ಯಾದವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT