ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಲ್ಲಿ ಕಾಡು ಬೆಳೆಸಿ...

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

* ಕವಲಕೋಡು ಕೆ. ವೆಂಕಟೇಶ

ರಾಜ್ಯದ ಇತರ ಭಾಗಗಳಂತೆ ಮಲೆನಾಡಿನಲ್ಲೂ ಸದ್ಯ ಕೃಷಿ ಕಾರ್ಮಿಕರ ಅಭಾವ ಬಹುವಾಗಿ ಕಾಡುತ್ತಿದೆ. ಮನೆ-ಜಮೀನುಗಳ ಜವಾಬ್ದಾರಿಗಾಗಿ ಊರುಗಳಲ್ಲಿಯೇ ಉಳಿದುಕೊಂಡ ಯುವಕರಿಗೆ ಮದುವೆ, ಹಬ್ಬಗಳಿಲ್ಲ. ಹಾಯ್‌ ಎನಿಸುವಂತಹ ಬಿಡುವಿಲ್ಲ. ಇಂತಹ ಗ್ರಾಮೀಣ ಬದುಕು ಯಾರಿಗೆ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಸಾಗರ ತಾಲ್ಲೂಕಿನ ಮಂಚಾಲೆಯ ಎಂ.ವಿ.ಪ್ರಕಾಶ ಕೃಷಿಯಲ್ಲಿ ಖುಷಿಯಿಂದ ಹಲವು ಪ್ರಯೋಗ ನಡೆಸಿದ್ದಾರೆ. ಅದರಲ್ಲಿ ಗಳಿಸಿರುವ ಯಶಸ್ಸಿನಿಂದ ದೇಶ ಮಾತ್ರವಲ್ಲದೆ ವಿದೇಶಿ ಕೃಷಿತಜ್ಞರ ಗಮನವನ್ನೂ ಸೆಳೆದಿದ್ದಾರೆ. ಅಕ್ಕಪಕ್ಕದ ಊರುಗಳ ರೈತರಿಗೂ ಸ್ಫೂರ್ತಿ ಚಿಲುಮೆ ಎನಿಸಿದ್ದಾರೆ.

ಏಕಪದ್ಧತಿ ಕೃಷಿಯನ್ನು ಬದಿಗಿರಿಸಿ ಬಹುಬೆಳೆಯ ಕುರಿತು ಚಿಂತನೆ ನಡೆಸಿದ ಅವರು, ಕಾಡು ಮರಗಳನ್ನು ರಕ್ಷಿಸಿಕೊಂಡು ಅದರಲ್ಲಿಯೇ ಕಾಳು ಮೆಣಸು, ಮಿಡಿಮಾವು, ಕಾಫಿಗಳಂತಹ ಬಹುಬೆಳೆ ಬೆಳೆಯುತ್ತಿದ್ದಾರೆ. ನೀರು ಬೇಡದ ಕೃಷಿ ಕಡೆಗೆ ಅವರು ಒಲವು ತೋರಿದ್ದರಿಂದ ಅವರ ಜಮೀನಿನಲ್ಲಿ ಬೆಳೆದ ಗಿಡಗಳಿಗೆ ನೀರುಣಿಸುವ ಅವಶ್ಯಕತೆ ಇಲ್ಲ. ಗ್ಲಿರಿಸಿಡಿಯಾ ಬೆಳೆಸಿ ಅದಕ್ಕೆ ಕಾಳು ಮೆಣಸು ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಆರೋಗ್ಯಪೂರ್ಣವಾಗಿ ಬೆಳೆದ ಈ ಬಳ್ಳಿಗಳಿಂದ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.

ಮಿಡಿಮಾವಿನ ಬೀಜದ ಗಿಡಗಳನ್ನು ಅವರು ಬೆಳೆಸಿದ್ದಾರೆ. ಎರಡೆರಡು ಜಾತಿಯ ಗಿಡಗಳನ್ನು ಕಸಿ ಮಾಡಿ ಹೊಸ ಜಾತಿಯ ಗಿಡಗಳನ್ನು ಸೃಷ್ಟಿಸಲಾಗಿದೆ. ಉಳಿದ ಜಾಗಗಳಲ್ಲಿ ದಾಲ್ಚಿನ್ನಿ, ದೇವದಾರು, ನಾಗದಂತಿ, ದೊಡ್ಲಿ, ಗಂಧ, ಪ್ರಸಾರಣಿ ಬಳ್ಳಿ ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ. ಹೊರಸುಳಿಯನ್ನು ಅವಲಂಬಿಸದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ನೆರಳು ಪರದೆ ಬಳಸಿ ಅದರಲ್ಲಿ ಒಂದೆಲಗ, ಬೃಂಗರಾಜ, ನೆಲನೆಲ್ಲಿಯಂತಹ ಔಷಧೀಯ ಸಸ್ಯಗಳನ್ನು ಬೆಳೆಸಿ ಆದಾಯದ ಮೂಲ ಮಾಡಿಕೊಂಡಿದ್ದಾರೆ. ಎಲ್ಲ ಬೆಳೆಗಳನ್ನು ಒಂದಕ್ಕೊಂದು ಪೂರಕವಾಗಿರುವಂತೆ ಸಂಯೋಜಿಸಿ ಬೆಳೆಸಲಾಗಿದೆ.

ಪ್ರಕಾಶ ಅವರ ಕೃಷಿ ವಿಧಾನವನ್ನು ನೋಡಲು ಬರುವ ಅನೇಕ ರೈತರು, ಕೃಷಿ ಪಂಡಿತರಿಗೆ ತಮ್ಮ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಪ್ರೇರೇಪಿಸುತ್ತಿದ್ದಾರೆ. ಸ್ಥಳೀಯ ವಾತಾವರಣಕ್ಕೆ ತಕ್ಕ ಪ್ರಯೋಗಗಳಿಂದ ಅತಿ ಸಣ್ಣ ಬೆಳೆಗಾರರೂ ತಮ್ಮ ಅಲ್ಪ ಜಮೀನಿನಲ್ಲಿ ಬಹುಬೆಳೆ ಕೃಷಿಮಾಡಿ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಜತೆಗೆ ಆರ್ಥಿಕ ಸ್ವಾವಲಂಬನೆ ಪಡೆಯಲು ಸಾಧ್ಯ ಎಂದು ತಿಳಿಸುತ್ತಾರೆ. ಅನೇಕ ರೈತರಿಗೆ ಮಾರ್ಗದರ್ಶನ ಮಾಡಿ ಅವರ ಜೀವನೋಪಾಯಕ್ಕೆ ದಾರಿಯನ್ನೂ ತೋರಿಸಿದ್ದಾರೆ.

ಪ್ರಕಾಶ ಅವರ ತೋಟ ಮತ್ತು ಪ್ರಾತ್ಯಕ್ಷಿಕೆಗಳ ಜಾಗಕ್ಕೆ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು, ವಿದ್ಯಾರ್ಥಿಗಳು, ಪರಿಸರ ಬರಹಗಾರರು, ರೈತರು ನಿರಂತರವಾಗಿ ಭೇಟಿ ನೀಡುತ್ತಾರೆ. ವಿವಿಧ ದೇಶಗಳ ವ್ಯಾಪಾರಸ್ಥರು ತಮಗೆ ಬೇಕಾದ ಸಸ್ಯಗಳನ್ನು ಬೆಳೆದುಕೊಡಿ ಎಂದು ಇವರಿಗೆ ದುಂಬಾಲು ಬೀಳುತ್ತಾರೆ.

‘ನನ್ನ ಕೃಷಿ ಕೇವಲ ಹಣ ಗಳಿಕೆಯಾಗಿರದೇ ಪ್ರಕೃತಿಗೆ ಪೂರಕವೂ ಆಗಿದೆ’ ಎಂದೆನ್ನುವ ಅವರು, ಶ್ರೀಲಂಕಾದ ‘ಅನಲಾಗ್ ಫಾರೆಸ್ಟ್ರಿ’ ಮಾದರಿಯಂತೆ ಕೃಷಿ ವಿಧಾನ ಅನುಸರಿಸುತ್ತಾರೆ. ಅನಲಾಗ್‌ ಫಾರೆಸ್ಟ್ರಿ ಎಂದರೆ ‘ಅರಣ್ಯ ಮಾದರಿ ಪ್ರದೇಶ’ ಎಂದು ಸರಳವಾಗಿ ಅರ್ಥೈಸಬಹುದು. ಅರಣ್ಯದ ವಾತಾವರಣವನ್ನು ಹಾಗೇ ಉಳಿಸಿಕೊಂಡು, ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗದಂತೆ ನಡೆಸುವ ಕೃಷಿ ವಿಧಾನ ಇದಾಗಿದೆ.

ಮರ–ಗಿಡಗಳನ್ನೆಲ್ಲ ತೆಗೆದು, ಇನ್ನಷ್ಟು–ಮತ್ತಷ್ಟು ಕೃಷಿಭೂಮಿಯನ್ನು ಸೃಷ್ಟಿಸಿಕೊಳ್ಳಬೇಕು ಎನ್ನುವ ದಾಹ ಇಲ್ಲಿಲ್ಲ. ಮರಗಿಡಗಳನ್ನು ಕೃಷಿಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಮತ್ತು ಪರಿಸರಕ್ಕೆ ಪೂರಕವಾಗಿ ಹೇಗೆ ಬೆಳೆ ತೆಗೆಯಬೇಕು ಎನ್ನುವ ಚಿಂತನೆಯೇ ಇಲ್ಲಿ ಕೆಲಸ ಮಾಡಿದೆ. ಆದ್ದರಿಂದಲೇ ಪ್ರಕಾಶ ಅವರ ಜಮೀನು ಒಂದು ಅರಣ್ಯದಂತೆ ಕಂಗೊಳಿಸುತ್ತದೆ.

ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿರುವ ಇವರು ಕೃಷಿಯ ಜತೆ ಕಾಡು, ಪ್ರಾಣಿ, ಪಶು, ಪಕ್ಷಿ ಹಾಗೂ ಗ್ರಾಮೀಣಾಭಿವೃದ್ಧಿ ಬಗೆಗೂ ಕಾಳಜಿ ಹೊಂದಿದ್ದು, ಸದಾ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದಾರೆ. ತಮ್ಮ ಜಮೀನಿಗೆ ಬಂದವರಿಗೆ ಕೃಷಿಪಾಠ ಮಾಡುತ್ತಾರೆ.

ಶಿರಸಿ ಅರಣ್ಯ ಕಾಲೇಜಿನಲ್ಲಿ ಹಲವು ಬೆಳೆಗಳ ಬಗೆಗೆ ಮಾಹಿತಿ ನೀಡುತ್ತಿದ್ದಾರೆ. ಸೋಂದಾ ಸ್ವರ್ಣವಲ್ಲಿ ಸಂಸ್ಥಾನವು ಇವರು ‘ಬೆಟ್ಟದ ರಕ್ಷಣೆ’ ಬಗ್ಗೆ ಮಾಡಿದ ಸೇವೆಯನ್ನು ಗುರುತಿಸಿ ಗೌರವಿಸಿದೆ. ವಿವಿಧ ಔಷಧೀಯ ಗಿಡಗಳ ಸಂರಕ್ಷಣೆ ಮಾಡುವುದಲ್ಲದೆ, ಹೊಸ ತಂತ್ರಜ್ಞಾನದ ಪರಿಚಯ ಮತ್ತು ನೀರಿನ ಮರುಪೂರಣದಂತಹ ಕ್ಷೇತ್ರಗಳಲ್ಲೂ ಅವರು ಕೊಡುಗೆ ನೀಡಿದ್ದಾರೆ.
ಸಂಪರ್ಕಕ್ಕೆ: 94819 35132
ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT