ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ-ಲಿಂಗಾಯತ ಒಂದೇ, ಹಿಂದೂವೂ ಹೌದು

ಸಾಮಾಜಿಕ ಕಾಳಜಿಪರ ವಚನಗಳಷ್ಟೇ ಒಂದು ಧರ್ಮ ಎಂದು ಹೇಳಲಾಗುವುದಿಲ್ಲ
Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

–ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿ

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಚೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ‘ಈ ಸಮಾಜದ ಬಹುದಿನಗಳ ಬೇಡಿಕೆಯಾದ ವೀರಶೈವ-ಲಿಂಗಾಯತವನ್ನು ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರ ಶಿಫಾರಸು ಮಾಡಲಿದೆ’ ಎಂದು ಘೋಷಿಸಿದರು. ನಂತರ ದಾವಣಗೆರೆಯಲ್ಲಿ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು, ‘ವೀರಶೈವ- ಲಿಂಗಾಯತ ಎಂದು ಎರಡು ರೀತಿಯಾಗಿ ವ್ಯವಹರಿಸುತ್ತಿರುವುದರಿಂದ ಯಾವ ಪದವನ್ನು (ವೀರಶೈವ ಅಥವಾ ಲಿಂಗಾಯತ) ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬುದನ್ನು ತಿಳಿಸಿ’ ಎಂದು ಆಯೋಜಕರಿಗೆ ಹೇಳಿದರು.

ಮುಖ್ಯಮಂತ್ರಿಗಳ ಈ ಅಭಿಪ್ರಾಯ ಹೊರಹೊಮ್ಮುತ್ತಲೇ ವೀರಶೈವ-ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಮೇಲೆ ಹಲವು ಮಠಾಧಿಪತಿಗಳು, ಸಮಾಜದ ಮುಖಂಡರು ‘ಇದು ಲಿಂಗಾಯತ ಧರ್ಮ, ವೀರಶೈವ ಧರ್ಮವಲ್ಲ’. ಹೇಗೆಂದರೆ ವೀರಶೈವವು ವೇದ, ಆಗಮ, ಉಪನಿಷತ್ತುಗಳನ್ನು ಆಧರಿಸಿದ್ದರೆ, ಲಿಂಗಾಯತವು ವೇದವಿರೋಧಿಯಾದ ಸ್ವತಂತ್ರಧರ್ಮ. ಆದ್ದರಿಂದ ಇದಕ್ಕೆ ‘ಲಿಂಗಾಯತ ಧರ್ಮ’ ಎಂಬುದಾಗಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೆಂದು ಒತ್ತಡವನ್ನು ತರುತ್ತಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಸ್ಪಷ್ಟೀಕರಿಸಲು ಬಯಸುತ್ತೇವೆ.

ವೀರಶೈವ-ಲಿಂಗಾಯತವು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ವೇದ, ಆಗಮ, ಉಪನಿಷತ್, ಪುರಾಣಗಳಲ್ಲಿ ಈ ಮತದ ತತ್ವಗಳಿದ್ದು ಅವುಗಳನ್ನು ಅಳವಡಿಸಿಕೊಂಡು ದಷ್ಟಪುಷ್ಟವಾಗಿ ಸ್ವತಂತ್ರ ಧರ್ಮ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ.  ವೀರಶೈವ- ಲಿಂಗಾಯತರಿಗೆ ವೇದ, ಆಗಮ, ಉಪನಿಷತ್, ಪುರಾಣಗಳು ಆಧಾರವೆಂಬುದನ್ನು ಶಿವಶರಣರೇ ನೇರವಾಗಿ ಹೇಳಿದ್ದಾರೆ.

ವೇದ–ಆಗಮಗಳನ್ನು ನಾಲ್ಕಾರು ವಚನಗಳಲ್ಲಿ ಖಂಡಿಸಿರುವುದು ನಿಜ. ವೇದ ಮತ್ತು ಆಗಮಗಳ ಅಲ್ಪಜ್ಞಾನವನ್ನೇ ಬಂಡವಾಳವಾಗಿಸಿಕೊಂಡು  ಜನಸಾಮಾನ್ಯರನ್ನು ವಂಚಿಸುತ್ತಿದ್ದವರ ಬಗ್ಗೆ ಎಚ್ಚರಿಸಲು ಹಾಗೂ ವೇದಗಳಲ್ಲಿ ಪ್ರತಿಪಾದಿತವಾದ ಚಾತುರ್ವರ್ಣ ವ್ಯವಸ್ಥೆ ಮತ್ತು ಪ್ರಾಣಿವಧೆಯನ್ನು ವಿರೋಧಿಸುವುದಕ್ಕೋಸ್ಕರ ಸಂದರ್ಭಾನುಸಾರ ವೇದ ಆಗಮ ಶಾಸ್ತ್ರ ವಿರೋಧಿಸುವ ನಾಲ್ಕಾರು ವಚನಗಳನ್ನು ರಚಿಸಿದ್ದಾರೆಯೇ ವಿನಾ ಬಸವಾದಿ ಶರಣರು ಸಂಪೂರ್ಣ ವೇದಾಗಮ ವಿರೋಧಿಗಳಲ್ಲ, ಬದಲಾಗಿ ತಮ್ಮ ತಮ್ಮ ವಚನಗಳಲ್ಲಿ ವೇದಾಗಮಗಳ ಉಕ್ತಿಗಳನ್ನು ಹೇರಳವಾಗಿ ಉಪಯೋಗಿಸಿಕೊಂಡಿದ್ದಾರೆ. ಕೆಲವರು ವೇದಾಗಮ ವಿರೋಧಿ ವಚನಗಳನ್ನಷ್ಟೇ ಮಾನ್ಯ ಮಾಡಿ ತಮ್ಮ ಸ್ವಾಭಿಪ್ರಾಯಕ್ಕೆ ಸರಿಹೊಂದದ ಎಲ್ಲಾ ವಚನಗಳು ಪ್ರಕ್ಷಿಪ್ತ ಎಂದು ವಾದಿಸುವುದು ಯೋಗ್ಯವಲ್ಲ.

ಬಸವೇಶ್ವರರು ತಮ್ಮದೊಂದು ವಚನದಲ್ಲಿ ವೇದಾಗಮಗಳ ಪ್ರಾಮಾಣ್ಯ ಕುರಿತು ಈ ರೀತಿಯಾಗಿ ಹೇಳಿದ್ದಾರೆ: ವೇದಾಗಮಂಗಳು ಹೇಳಿದ ಹಾಗೆ ನಡೆವುದು, ಹೇಳಿದಂತೆ ನುಡಿವುದು,
ಮೀರಿ ನಡೆಯಲಾಗದು, ಮೀರಿ ನುಡಿಯಲಾಗದು,
ಮುಕ್ತಿಪದವೈದುವಾತ.
ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ
ಕೂಡಲಸಂಗಮನೀಗಲೆ ಒಲಿವ.

ವೀರಶೈವರಿಗೆ ವೇದ-ಶಾಸ್ತ್ರ-ಪುರಾಣ-ಆಗಮಗಳೇ ಪ್ರಮಾಣವೆಂದು ಚೆನ್ನಬಸವಣ್ಣನವರೂ ಹೇಳಿದ್ದಾರೆ:
ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು.
ವೇದ ಶಾಸ್ತ್ರ ಪುರಾಣಾಗಮಂಗಳನರಿದ ಸಂಬಂಧಿಗಲ್ಲದೆ
ವೀರಶೈವ ಅಳವಡದು, ಅದೇನು ಕಾರಣ?

ವೀರಶೈವರಿಗೆ ಶೈವಾಗಮಗಳೇ ಪ್ರಮಾಣ ಎಂಬ ಮಾತನ್ನು ತೋಂಟದ ಸಿದ್ಧಲಿಂಗೇಶ್ವರರೂ ಹೇಳಿದ್ದಾರೆ. ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದವರೂ  ತಮ್ಮ ವಚನಗಳಲ್ಲಿ ಹೇರಳವಾಗಿ ವೇದ, ಉಪನಿಷತ್, ಆಗಮ, ಪುರಾಣಗಳ ವಾಕ್ಯಗಳನ್ನು ಉಲ್ಲೇಖಿಸುವ ಮೂಲಕ ವೇದ, ಉಪನಿಷತ್, ಆಗಮಗಳು ವೀರಶೈವ- ಲಿಂಗಾಯತರಿಗೆ ಮಾನ್ಯ ಎಂಬುದನ್ನು ಒತ್ತಿಹೇಳಿದ್ದಾರೆ.

ಕ್ರಿ.ಶ. 1904ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಪ್ರಥಮ ಠರಾವು ಹೀಗಿದೆ: ‘...ವೀರಶೈವ ಮತವು ನಿಗಮಾಗಮೋಪನಿಷದ್ಭಾಷ್ಯ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವೆಂತಲೂ, ಬಸವೇಶ್ವರದೇವರು ಈ ಮತವನ್ನು ಪ್ರಚಾರಪಡಿಸಿದರೇ ಹೊರತು ಸ್ಥಾಪಕರಲ್ಲವೆಂಬುವದು ಶಿಲಾಲೇಖಾದಿ ಪ್ರಮಾಣಗಳಿಂದ ಸಿದ್ಧವಾಗುತ್ತದೆಂತಲೂ ಈ ಮಹಾಸಭೆಯವರು ಅಭಿಪ್ರಾಯಪಡುತ್ತಾರೆ’.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪರಳಿಯ ವೈದ್ಯನಾಥೇಶ್ವರಲಿಂಗಕ್ಕೆ 1924ರ  ಜೂನ್ ತಿಂಗಳಿನಲ್ಲಿ ಲಿಂಗಂಪಲ್ಲಿಯ ಶಿವಕೋಟಿ ವೀರಭದ್ರಸ್ವಾಮಿಗಳವರು ವೇದೋಕ್ತ ಮಹಾರುದ್ರಾಭಿಷೇಕವನ್ನು ಭಕ್ತರ ಸಹಾಯ-ಸಹಕಾರಗಳಿಂದ ಮಾಡಲು ತೀರ್ಮಾನಿಸಿದರು.  ಇದರಿಂದ ಕ್ರುದ್ಧರಾದ ಬ್ರಾಹ್ಮಣರು ‘ವೀರಶೈವ-ಲಿಂಗಾಯತರಿಗೆ ವೇದಾಧಿಕಾರವಿಲ್ಲ.  ಇವರು ವೈದ್ಯನಾಥೇಶ್ವರನಿಗೆ ವೇದೋಕ್ತ ರುದ್ರಾಭಿಷೇಕ ಮಾಡಕೂಡದು’ ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸಿ ನಿಜಾಂ ಸರ್ಕಾರಕ್ಕೆ ತಕರಾರು ಅರ್ಜಿಗಳನ್ನು ಸಲ್ಲಿಸಿದರು.  ನಿಜಾಮರು ವೇದೋಕ್ತ ರುದ್ರಾಭಿಷೇಕವನ್ನು ಮಾಡಲು ವೀರಶೈವ-ಲಿಂಗಾಯತರು ಅರ್ಹರೇ ಎಂಬುದನ್ನು ಧರ್ಮಶಾಸ್ತ್ರಾಧಾರದಿಂದ ಸಿದ್ಧಾಂತಪಡಿಸುವ ಬಗೆಗೆ ಒಂದು ಆಯೋಗ ನೇಮಿಸಿದರು. ನಾಲ್ಕು ವರ್ಷ ಪರ-ವಿರೋಧಿ ವಾದಗಳನ್ನು ಆಲಿಸಿದ ಆಯೋಗವು ‘ವೀರಶೈವ-ಲಿಂಗಾಯತರೂ  ಹಿಂದೂಗಳೇ ಆಗಿದ್ದು, ವೈದ್ಯನಾಥೇಶ್ವರನ ಅಭಿಷೇಕಾದಿಗಳನ್ನು ನಿರ್ವಹಿಸಲು ಅರ್ಹರು’ ಎಂಬಂಥ ಶಿಫಾರಸಿನ  ವರದಿಯನ್ನು ನಿಜಾಂ ಸರ್ಕಾರಕ್ಕೆ ಸಲ್ಲಿಸಿತು. 

ದೇಶದ ಎಲ್ಲ ವೀರಶೈವ-ಲಿಂಗಾಯತ ಮಠಗಳು ಸಾವಿರಾರು ವರ್ಷಗಳಿಂದಲೂ ವೇದ ಪಾಠಶಾಲೆಗಳನ್ನು ನಡೆಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ವೀರಶೈವ-ಲಿಂಗಾಯತ ವಿದ್ಯಾರ್ಥಿಗಳು ಸಸ್ವರ ವೇದಘೋಷದ ತರಬೇತಿ ಅಲ್ಲಿ ಪಡೆಯುತ್ತಿದ್ದಾರೆ. ಇದಲ್ಲದೆ ವೀರಶೈವದ ಅಷ್ಟಾವರಣಗಳಲ್ಲಿ ಶಿವಪಂಚಾಕ್ಷರ ಮಂತ್ರವೂ ಒಂದು.  ಪೂಜಾ ಸಾಮಗ್ರಿ ರೂಪವಾದ ಈ ಆವರಣಕ್ಕೆ ಯಜುರ್ವೇದದ ಶ್ರೀ ರುದ್ರಸೂಕ್ತವೇ ಆಧಾರ ಮತ್ತು ಇಂದಿಗೂ ವೀರಶೈವದ ಗುರುವರ್ಗ ಮತ್ತು ವಿರಕ್ತವರ್ಗದ ಶೇ 95ರಷ್ಟು ಮಠಾಧಿಪತಿಗಳು ಇಷ್ಟಲಿಂಗದ ಪೂಜಾಕಾಲದಲ್ಲಿ ಬಳಸುವುದು ವೇದೋಕ್ತ ಮಂತ್ರಗಳನ್ನೇ. ಇದು ವೀರಶೈವ- ಲಿಂಗಾಯತ ಮಠಗಳು ವೇದ, ಆಗಮ, ಉಪನಿಷತ್ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವುದರ ಸಂಕೇತ.  
ವೇದಗಳ ಕಾಲದಿಂದಲೂ ಬಹುದೇವೋಪಾಸನೆಯ ಪದ್ಧತಿ ಎಲ್ಲೆಡೆ ಕಂಡುಬರುತ್ತಿದೆ.  ಹಿಂದೂ ಧರ್ಮೀಯರು ಬಹುದೇವೋಪಾಸಕರಾದರೂ ಯಾವುದಾದರೂ ಒಂದು ದೈವವನ್ನು ತಮ್ಮ ಕುಲದೈವವೆಂದು ವಿಶೇಷವಾಗಿ ಪೂಜಿಸುತ್ತಿದ್ದಾರೆ. ವೀರಶೈವ- ಲಿಂಗಾಯತರು ತಮ್ಮ ಅಂಗದ ಮೇಲೆ ಧರಿಸಿರುವ ಇಷ್ಟಲಿಂಗದ ಪೂಜೆಯ ಜೊತೆಗೆ ದೇವಾಲಯಗಳಲ್ಲಿರುವ ತಮ್ಮ ಕುಲದೇವರನ್ನೂ ವಿಶೇಷವಾಗಿ ಪೂಜಿಸುತ್ತಾ ಬಂದಿದ್ದಾರೆ.  ವಚನಕಾರರೆಲ್ಲರೂ ತಮ್ಮ ವಚನಗಳಲ್ಲಿ ತಮ್ಮ ಆರಾಧ್ಯದೈವವನ್ನು ವಚನಾಂಕಿತಗಳನ್ನಾಗಿ ಬಳಸುವ ಮೂಲಕ ಬಹುದೇವೋಪಾಸನೆಯನ್ನು ಅಂಗೀಕರಿಸಿರುವುದು ಸ್ಪಷ್ಟವಾಗಿದೆ.

ವೀರಶೈವರನ್ನು ಲಿಂಗಾಯತ, ಲಿಂಗವಂತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿದೆ.  ಈ ಪದಗಳಲ್ಲಿ ವೀರಶೈವ ಎಂಬುದು ಮತ ವಾಚಕವಾದರೆ, ಲಿಂಗಾಯತ ಎಂಬುದು ಸಂಸ್ಕಾರ ವಿಶೇಷ. ತ್ರಿವಿಧ ದೀಕ್ಷೆಗಳಲ್ಲೊಂದಾದ ಕ್ರಿಯಾದೀಕ್ಷಾಂತರ್ಗತವಾದ ಸಪ್ತವಿಧ ದೀಕ್ಷೆಗಳಲ್ಲಿ ಆಯತ್ತದೀಕ್ಷೆಯೂ ಒಂದು.  ಪಂಚಸೂತ್ರ ಘಟಿತವಾದ, ಮಂತ್ರನ್ಯಾಸದಿಂದ ಶೋಭಿಸುವ ಇಷ್ಟಲಿಂಗವನ್ನು ಶಿಷ್ಯನ ವಾಮಕರ ಪೀಠದಲ್ಲಿ ಸ್ಥಾಪಿಸಿ ಪೂಜಿಸಿದ ಮೇಲೆ ಶ್ರೀಗುರುವು ‘ಎಲೈ ಸೌಮ್ಯನೆ! ಈ ಇಷ್ಟಲಿಂಗವನ್ನು ನೋಡು’ ಎಂದು ಹೇಳಿ ಅದನ್ನು ಅವನಿಗೆ ತೋರಿಸಬೇಕು.  ಈ ರೀತಿಯಾಗಿ ಶ್ರೀಗುರುವು ಇಷ್ಟಲಿಂಗವನ್ನು ಶಿಷ್ಯನಿಗೆ ತೋರಿಸುವ ಸಂಸ್ಕಾರವೇ ಆಯತ್ತದೀಕ್ಷೆ.  ಆಯತ್ತ ಎಂದರೆ ಅಧೀನ.  ಈ ಸಂಸ್ಕಾರದಿಂದ ಇಷ್ಟಲಿಂಗವು ಶಿಷ್ಯನ ದೃಷ್ಟಿಗೆ ಅಧೀನವಾಗುತ್ತದೆ.  ‘ಅಂಗದ ಮೇಲೆ ಆಯತವಾದುದೇ ಇಷ್ಟಲಿಂಗ’ ಎಂದು ಚೆನ್ನಬಸವಣ್ಣನವರೂ ಸ್ಪಷ್ಟಪಡಿಸಿದ್ದಾರೆ.  ಈ ರೀತಿಯಾಗಿ ಆಯತ್ತ ಎಂಬ ದೀಕ್ಷಾ ಸಂಸ್ಕಾರದಿಂದ ಲಿಂಗವು ಶಿಷ್ಯನ ಅಧೀನವಾಗುವುದು ಶಾಸ್ತ್ರದೃಷ್ಟಿಯಲ್ಲಿ ‘ಲಿಂಗಾಯತ್ತ’ ಎಂದಾಗುತ್ತದೆ.  ಆದರೆ ರೂಢಿಯಲ್ಲಿ ‘ಲಿಂಗಾಯತ್ತವು’ ಲಿಂಗಾಯತವಾಯಿತು.
ಹೀಗೆ ಆಯತ್ತ ಸಂಸ್ಕಾರದ ಮೂಲಕ ಲಿಂಗವನ್ನು ಪಡೆದುಕೊಂಡು ಷಟ್‌ಸ್ಥಲ ಸಾಧನಾ ಪಥದಲ್ಲಿ ಕ್ರಮಿಸಿ ಲಿಂಗಾಂಗ ಸಾಮರಸ್ಯವನ್ನು ಪಡೆಯುವವರು ವೀರಶೈವರು. ಅಂದರೆ ವೀರಶೈವ ಎಂಬುದು ಶಾಸ್ತ್ರಸಿದ್ಧವಾದ ಮತವಾಚಕ ಶಬ್ದವಾದರೆ,  ಲಿಂಗಾಯತ ಎಂಬುದು ಸಂಸ್ಕಾರ ವಾಚಕವಾದುದು.  ಬಸವಾದಿ ಶಿವಶರಣರೂ  ತಮ್ಮ ವಚನಗಳಲ್ಲಿ ‘ವೀರಶೈವ’ ಎಂಬ ಪದವನ್ನು ಹೆಚ್ಚಾಗಿ ಬಳಸಿದ್ದರೆ, ‘ಲಿಂಗಾಯತ’ ಪದವನ್ನು ಬಹಳ ಕಡಿಮೆಯಾಗಿ ಅದೇ ಅರ್ಥಗಳಲ್ಲಿಯೇ ಬಳಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ವೀರಶೈವ- ಲಿಂಗಾಯತ ಶಬ್ದಗಳು ಪರ್ಯಾಯ ಪದಗಳಾಗಿರುವುದು ಸ್ಪಷ್ಟವಾಗುತ್ತದೆ.  ಈ ಅಭಿಪ್ರಾಯಕ್ಕೆ ಪುಷ್ಟಿಯನ್ನು ಒದಗಿಸುವ ಅಂಶಗಳಿವು:

ಬಸವಾದಿ ಶಿವಶರಣರಲ್ಲಿ 40 ಜನ ಶರಣರು ತಮ್ಮ ಒಟ್ಟು 143 ವಚನಗಳಲ್ಲಿ ‘ವೀರಶೈವ’ ಶಬ್ದವನ್ನು ಬಳಸಿದರೆ, ಕೇವಲ 8 ಜನ ಶರಣರು  13 ವಚನಗಳಲ್ಲಿ ಮಾತ್ರ ‘ಲಿಂಗಾಯತ’ ಶಬ್ದ ಬಳಸಿದ್ದಾರೆ. ಶಿವಶರಣರಲ್ಲಿ ಪ್ರಮುಖರಾದ ಬಸವಣ್ಣನವರು ತಮ್ಮ 3 ವಚನಗಳಲ್ಲಿ, ಅಲ್ಲಮಪ್ರಭುದೇವರು  6 ವಚನಗಳಲ್ಲಿ, ಚೆನ್ನಬಸವಣ್ಣನವರು  23, ಸಿದ್ಧರಾಮೇಶ್ವರರು 7, ಅಕ್ಕಮಹಾದೇವಿಯವರು 2 ಮತ್ತು  ಆದಯ್ಯನವರು ತಮ್ಮ 4 ವಚನಗಳಲ್ಲಿ ವೀರಶೈವ ಪದ ಪ್ರಯೋಗಿಸಿದರೆ, ಈ ಮೇಲಿನ ಪ್ರಮುಖ ವಚನಕಾರರಲ್ಲಿ ಚೆನ್ನಬಸವಣ್ಣನವರು ಮಾತ್ರ ಎರಡೇ ವಚನಗಳಲ್ಲಿ  ಲಿಂಗಾಯತ ಪದ ಬಳಿಸಿದ್ದಾರೆ. ಅಲ್ಲಮಪ್ರಭು, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಆದಯ್ಯ ಮತ್ತು ಸ್ವತಃ  ಬಸವಣ್ಣನವರೂ  ತಮ್ಮ ಯಾವುದೇ ವಚನಗಳಲ್ಲಿ ಲಿಂಗಾಯತ ಶಬ್ದವನ್ನೇ ಬಳಸಿಲ್ಲ.  

ವೀರಶೈವ ಬೇರೆ ಮತ್ತು ಲಿಂಗಾಯತ ಬೇರೆ ಎಂದು ಯಾರೋ ತಮಗೆ ತಿಳಿದ ಹಾಗೆ ಪಟ್ಟಿ ಮಾಡಿದರೆ ಅದು ಸಿದ್ಧವಾಗುವುದಿಲ್ಲ. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ  ತತ್ವಗಳೇ ಈ ಧರ್ಮದ ಪ್ರತಿಪಾದ್ಯ ವಿಷಯಗಳಾಗಿವೆ. ಈ ತತ್ವಗಳನ್ನು ಹೊರತುಪಡಿಸಿ ಲಿಂಗಾಯತವನ್ನು ಕಲ್ಪಿಸಲು ಆಗುವುದಿಲ್ಲ. ಸಾಮಾಜಿಕ ಕಾಳಜಿಪರ ವಚನಗಳಷ್ಟೇ ಒಂದು ಧರ್ಮ ಎಂದು ಹೇಳಲಾಗುವುದಿಲ್ಲ. ಅಲ್ಲಿ ಆಧ್ಯಾತ್ಮಿಕ ಸಾಧನಪಥವಿರಬೇಕು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಧರ್ಮಾಚರಣೆಗಳಿರಬೇಕು. ಶರಣರು ಈ ಎಲ್ಲಾ ತತ್ವಗಳನ್ನೊಳಗೊಂಡ ಅನುಭಾವದ ವಚನಗಳನ್ನು ನೀಡಿದ್ದಾರೆ.

ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ರಾಜ್ಯ ಸರ್ಕಾರದಿಂದ ಪ್ರಕಟವಾದ ಸಮಗ್ರ ವಚನ ಸಂಪುಟಗಳ ಪ್ರಸ್ತಾವನೆಯಲ್ಲಿ ‘ವೀರಶೈವ’ ಎಂಬ ಪದ ಬಳಸಲಾಗಿದೆ.  ಇದಲ್ಲದೆ ಕಲಬುರ್ಗಿ ಅವರು ತಮ್ಮ ಲೇಖನ ಸಂಗ್ರಹವಾದ ‘ಮಾರ್ಗ-1’ ರಲ್ಲಿ ಗ್ರಂಥದುದ್ದಕ್ಕೂ  335 ಕಡೆ ‘ವೀರಶೈವ’ ಪದ ಬಳಸಿದ್ದರೆ,  ಕೇವಲ 10  ಕಡೆ ‘ಲಿಂಗಾಯತ’ ಪದ ಬಳಸಿದ್ದಾರೆ.

ಮಾತೆ ಮಹಾದೇವಿ ಅವರು  1966ರ ಏಪ್ರಿಲ್ 5ರಂದು  ಲಿಂಗಾನಂದ ಸ್ವಾಮಿಗಳವರಿಂದ ಜಂಗಮ ದೀಕ್ಷೆಯನ್ನು ಪಡೆದ ಸಂದರ್ಭದಲ್ಲಿ ‘ಆದರ್ಶ ಸಾಧನೆಗೆ ವೀರಶೈವ ಧರ್ಮ ಪ್ರಚಾರಕ್ಕೆ ಸದಾ ಹೋರಾಡುತ್ತೇನೆ’ ಎಂದಿದ್ದರು. ‘ಶರಣ ಧರ್ಮ ಪ್ರಚಾರ ಮಾಡಲು ಪರದೇಶಕ್ಕೆ ಹೋಗುವೆ.  ಇನ್ನೂ ಹೆಚ್ಚಿನ ಶಕ್ತಿಯನ್ನು ಗಳಿಸುವೆ.  ನಂತರ ವೀರಶೈವ ಮಿಷನರಿಯಾಗಿ ಹೋಗುವೆ’  ಎಂದು ಪ್ರತಿಜ್ಞೆ ಮಾಡಿರುತ್ತಾರೆ. ದುರ್ದೈವ ಎಂದರೆ ಲಿಂಗಧಾರಿಗಳ ಮತವನ್ನು ವೀರಶೈವ ಮತ ಎಂದು ಒಪ್ಪಿ, ಪ್ರೀತಿಸುತ್ತಿದ್ದ ಇವರೆಲ್ಲರೂ ವೀರಶೈವವು ಬಸವಪೂರ್ವದಲ್ಲಿದ್ದ ಧರ್ಮ, ಲಿಂಗಾಯತವು ಬಸವಣ್ಣನವರ ಉತ್ತರಕಾಲದ್ದು ಎಂದು ಪ್ರತಿಪಾದಿಸುತ್ತಿದ್ದಾರೆ. 

ಈ ಎಲ್ಲ ಅಂಶಗಳನ್ನು  ಗಮನಿಸಿದಾಗ ವೀರಶೈವ-ಲಿಂಗಾಯತವು ಹಿಂದೂ ಧರ್ಮದ ಅವಿಭಾಜ್ಯ ಅಂಗ.   ಆದ್ದರಿಂದ  ಇದನ್ನು ಸ್ವತಂತ್ರಧರ್ಮ ಅದರಲ್ಲೂ (ವೀರಶೈವ ಪದವಿಲ್ಲದ) ‘ಲಿಂಗಾಯತಧರ್ಮ’ ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುತ್ತಿರುವುದು ಸೂಕ್ತವಲ್ಲ.  ಅಲ್ಪಸಂಖ್ಯಾತರಿಗೆ ಭಾರತೀಯ ಸಂವಿಧಾನದ ಅಡಿಯಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಈಗ ಅನುಸರಿಸುತ್ತಿರುವ ಮಾರ್ಗ ಮತ್ತು ವಾದಗಳು ಕಾರ್ಯಸಾಧಿಸಲು ಅಸಮರ್ಥನೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT