ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿಗೆ ಹೊಸ ದಿಕ್ಕು ತೋರಿದ ದಿಕ್ಸೂಚಿ-2

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಚೀನ ಕಾಲದ ಗ್ರೀಕರಿಗೆ ಭೂಮಿಯ ಕಾಂತೀಯ ಗುಣದ ಬಗ್ಗೆ ಅರಿವಿತ್ತು. ಆದರೆ, ಕಾಂತೀಯ ಗುಣ ಆಧಾರವಾಗಿಟ್ಟುಕೊಂಡು ದಿಕ್ಸೂಚಿಯನ್ನು ತಯಾರು ಮಾಡಬಹುದು ಎಂಬುದು ಅವರಿಗೆ ಹೊಳೆದಿರಲಿಲ್ಲ. ಅದಕ್ಕೆ ಕ್ರಿ.ಪೂ 2ನೇ ಶತಮಾನದವರೆಗೆ ಕಾಯಬೇಕಾಯಿತು. ಚೀನೀಯನ್ನರು ಪಥದರ್ಶಕ ಸಾಧನವನ್ನು ಆವಿಷ್ಕರಿಸಿ ಚರಿತ್ರೆಯನ್ನೇ ನಿರ್ಮಿಸಿದರು.

ಮೊತ್ತ ಮೊದಲ ದಿಕ್ಸೂಚಿ ತಯಾರಾಗಿದ್ದು ನೈಸರ್ಗಿಕವಾಗಿ ಲಭ್ಯವಿದ್ದ ಅಯಸ್ಕಾಂತ ಗುಣಹೊಂದಿರುವ ಅದಿರು (ಆಡು ಮಾತಿನಲ್ಲಿ ಇದಕ್ಕೆ ಕಬ್ಬಿಣದ ಕಲ್ಲು/ಕಾಂತಗಲ್ಲು ಎಂದು ಹೇಳುವ ಪರಿಪಾಠವಿದೆ. ರಾಸಾಯನಿಕವಾಗಿ ಕಬ್ಬಿಣದ ಆಕ್ಸೈಡ್‌ ಎಂದು ಕರೆಯಲಾಗುತ್ತದೆ) ಮತ್ತು ತಾಮ್ರದ ಫಲಕದಿಂದ. ಈ ದಿಕ್ಸೂಚಿಯು ಯಾವತ್ತೂ ದಕ್ಷಿಣದ ದಿಕ್ಕನ್ನೇ ತೋರಿಸುತ್ತಿತ್ತು. ಹಾಗಾಗಿ ಇದಕ್ಕೆ ‘ದಕ್ಷಿಣ ಸೂಚಿ’ (ಸೌತ್‌ ಪಾಯಿಂಟರ್‌) ಎಂದೇ ಕರೆಯುತ್ತಿದ್ದರಂತೆ (ಆದರೆ, ಈಗಿನ ದಿಕ್ಸೂಚಿಗಳು ಉತ್ತರ ದಿಕ್ಕನ್ನು ಸೂಚಿಸುತ್ತವೆ)

ಚಮಚದ ಆಕಾರದಲ್ಲಿ ಕೆತ್ತಿದ ಕಾಂತಗಲ್ಲನ್ನು ತಾಮ್ರದ ಫಲಕದ ಮೇಲೆ ಇಡಲಾಗುತ್ತಿತ್ತು. ನಂತರ ಫಲಕವನ್ನು ಅಲುಗಾಡಿಸಿದಾಗ ಅದರಲ್ಲಿದ್ದ ಚಮಚ ಆಕಾರದ ಕಾಂತಗಲ್ಲು ತಿರುಗುತ್ತಾ, ಭೂಮಿಯ ಕಾಂತ ಕ್ಷೇತ್ರಕ್ಕೆ ಅನುಗುಣವಾಗಿ ಉತ್ತರ -ದಕ್ಷಿಣಕ್ಕೆ ಮುಖ ಮಾಡಿ ನಿಲ್ಲುತ್ತಿತ್ತು. ಚಮಚೆಯ ಹಿಡಿ ಯಾವತ್ತೂ ದಕ್ಷಿಣದತ್ತ ಮುಖಮಾಡಿರುತ್ತಿತ್ತು. ಪ್ರಾಚೀನ ಚೀನಾದಲ್ಲಿ ಮಹತ್ವ ಪಡೆದಿದ್ದ ರಾಶಿ –ನಕ್ಷತ್ರಗಳು, ನಾಲ್ಕು ದಿಕ್ಕುಗಳ ಗುರುತುಗಳು ಮತ್ತು ಇತರ ಚಿಹ್ನೆಗಳು ತಾಮ್ರದ ಫಲಕದಲ್ಲಿ ಇರುತ್ತಿದ್ದವು.

ಇನ್ನೊಂದು ರೀತಿಯ ದಿಕ್ಸೂಚಿಯೂ ಅಲ್ಲಿ ಬಳಕೆಯಲ್ಲಿತ್ತು. ಕಬ್ಬಿಣದ ಸೂಜಿಯನ್ನು ಕಾಂತಗಲ್ಲಿಗೆ ಉಜ್ಜಿ ಅದನ್ನು ಮರದ ತುಂಡಿನ ಮೇಲೆ ಇಟ್ಟು ಪಾತ್ರೆಯಲ್ಲಿ ತುಂಬಿಟ್ಟ ನೀರಿನಲ್ಲಿ ತೇಲಿಬಿಡಲಾಗುತ್ತಿತ್ತು. ಸೂಜಿಯನ್ನು ಹೊಂದಿದ್ದ ಮರದ ತುಂಡು ನೀರಿನಲ್ಲಿ ತಿರುಗುತ್ತಿತ್ತು. ಅಂತಿಮವಾಗಿ ಸೂಜಿಯ ತುದಿ ದಕ್ಷಿಣಕ್ಕೆ ಮುಖ ಮಾಡಿ ನಿಲ್ಲುತ್ತಿತ್ತು.

ಆರಂಭದ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ದಿಕ್ಸೂಚಿಗಳನ್ನು ಪಥದರ್ಶನದ ಉದ್ದೇಶಕ್ಕೆ ಬಳಸುತ್ತಿರಲಿಲ್ಲ. ಈ ಸಾಧನಗಳನ್ನೇ ಇನ್ನಷ್ಟು ಸುಧಾರಿಸಿದರೆ, ನೌಕಾಯಾನದ ಸಂದರ್ಭದಲ್ಲಿ ದಿಕ್ಕುಗಳನ್ನು ಕಂಡು ಹಿಡಿಯಲು ಬಳಸಬಹುದು ಎಂಬ ಯೋಚನೆಯೂ ಚೀನೀಯರಲ್ಲಿ ಹುಟ್ಟಿತು.

11ನೇ ಅಥವಾ 12ನೇ ಶತಮಾನದ ಹೊತ್ತಿಗೆ ಚೀನಾ ವಿಜ್ಞಾನಿಗಳು ಪಥದರ್ಶನ ಉದ್ದೇಶದ ದಿಕ್ಸೂಚಿಗಳನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ ಎಂಬುದು ಇತಿಹಾಸಕಾರರ ಬಲವಾದ ವಾದ. 12ನೇ ಶತಮಾನದ ಅಂತ್ಯದ ವೇಳೆಗೆ ಇದರ ಬಳಕೆ ಯುರೋಪ್‌ಗೂ ಹರಡಿತು. ಹೊಸ ಹೊಸ ಭೂ ಭಾಗಗಳ ಹುಡುಕಾಟಕ್ಕಾಗಿ ಸಾಗರದಲ್ಲಿ ಪರ್ಯಟನೆ ನಡೆಸಲು ಮುಂದಾದ ನಾವಿಕರೆಲ್ಲ ದಿಕ್ಸೂಚಿಗಳನ್ನು ಬಳಸಲು ಆರಂಭಿಸಿದರು.

ದಿಕ್ಸೂಚಿಗಳು ಚಾಲ್ತಿಯಲ್ಲಿದ್ದರೂ ಅಂದಿನ ನಾವಿಕರು ಅದನ್ನು ಯಾವಾಗಲೂ ಬಳಸುತ್ತಿರಲಿಲ್ಲ. ಸೂರ್ಯ, ನಕ್ಷತ್ರಗಳ ಸ್ಥಾನವನ್ನು ಗಮನಿಸಿಯೇ ಅವರು ಮುನ್ನಡೆಯುತ್ತಿದ್ದರು. ಆದರೆ, ಯಾವಾಗ ಅವುಗಳು ಕಾಣುತ್ತಿರಲಿಲ್ಲವೋ ಆಗ ದಿಕ್ಸೂಚಿಗಳ ಮೊರೆ ಹೋಗುತ್ತಿದ್ದರು. ಈ ಉಪಕರಣದಿಂದ ಆಗುವ ಪ್ರಯೋಜನಗಳ ಅರಿವು ಅವರಲ್ಲಿ ಮೂಡಿದ ದಿನದಿಂದ ಇದು ಪ್ರಮುಖ ಪಥದರ್ಶಕ ಸಾಧನವಾಗಿ ಬದಲಾಯಿತು.

ವರ್ಷಗಳು ಉರುಳಿದಂತೆ ದಿಕ್ಸೂಚಿಗಳ ತಯಾರಿಕೆಯಲ್ಲಿ ಸಾಕಷ್ಟು ಸುಧಾರಣೆಗಳಾದವು. ಥರಾವರಿ ದಿಕ್ಸೂಚಿಗಳ ಅಭಿವೃದ್ಧಿ ಆಯಿತು. ಡ್ರೈ ದಿಕ್ಸೂಚಿ, ಬೇರಿಂಗ್‌ ದಿಕ್ಸೂಚಿ, ಲಿಕ್ವಿಡ್‌ (ದ್ರಾವಣ) ದಿಕ್ಸೂಚಿ, ಜೈರೊ ದಿಕ್ಸೂಚಿ, ಸೌರ ದಿಕ್ಸೂಚಿ... ಹೀಗೆ ಹಲವು ಉದಾಹರಣೆಗಳನ್ನು ಕೊಡಬಹುದು. ಇವುಗಳೆಲ್ಲ ಬೇರೆ ಬೇರೆ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಈಗ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ದಿಕ್ಸೂಚಿಗಳ ಜಾಗವನ್ನು ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌) ತುಂಬಿದೆ. ಭೂಮಿಯನ್ನು ಸುತ್ತುಹಾಕುತ್ತಿರುವ ಉಪಗ್ರಹಗಳು ಭೂನಕ್ಷೆಯ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ರವಾನಿಸುತ್ತವೆ. ಇದನ್ನು ಸ್ವೀಕರಿಸುವ ಜಿಪಿಎಸ್‌ ರಿಸೀವರ್‌ಗಳು ಬಳಕೆದಾರನಿಗೆ ದಿಕ್ಕಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒದಗಿಸುತ್ತವೆ. ಜಿಪಿಎಸ್‌ ಜನಪ್ರಿಯವಾಗಿದ್ದರೂ, ದಿಕ್ಸೂಚಿಗಳ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಹಡಗುಗಳಲ್ಲಿ ಮತ್ತು ವಿಮಾನಗಳಲ್ಲಿ ಅತ್ಯಾಧುನಿಕ ದಿಕ್ಸೂಚಿಗಳನ್ನು ಈಗಲೂ ಪಥದರ್ಶಕಗಳಾಗಿ ಬಳಸಲಾಗುತ್ತಿದೆ.

***

ಭಾರತದಲ್ಲಿ...

ನಮ್ಮ ದೇಶದಲ್ಲಿ ಕ್ರಿ.ಶ 4ನೇ ಶತಮಾನದಲ್ಲಿ ದಿಕ್ಸೂಚಿಗಳ ಬಳಕೆ ಇತ್ತು ಎನ್ನುವುದಕ್ಕೆ ತಮಿಳು ಸಾಹಿತ್ಯದಲ್ಲಿ ಪುರಾವೆಗಳಿವೆ. ಅದನ್ನು `ಮತ್ಸ್ಯಯಂತ್ರ’ ಎಂದು ಕರೆಯಲಾಗುತ್ತಿತ್ತು. ಈ ದಿಕ್ಸೂಚಿಗೆ ಪ್ರೇರಣೆ ಚೀನಾದಲ್ಲಿ ತಯಾರದ ದಿಕ್ಸೂಚಿಯೇ. ಭಾರತದಲ್ಲಿ ಬಳಕೆಯಲ್ಲಿದ್ದ ದಿಕ್ಸೂಚಿಯ ಆವೃತ್ತಿ ಸ್ವಲ್ಪ ಭಿನ್ನವಾಗಿತ್ತು. ಮೀನಿನ ಆಕಾರದ ಅಯಸ್ಕಾಂತವನ್ನು ಹೊಂದಿದ್ದ ದಿಕ್ಸೂಚಿಯನ್ನು ತೈಲ ತುಂಬಿದ್ದ ಪಾತ್ರೆಯಲ್ಲಿ ತೇಲಿ ಬಿಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT