ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನಲ್ಲಿ ಮಿಂದ ರಾಜ್ಯ

Last Updated 19 ಜುಲೈ 2017, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಕಡೆ ಬುಧವಾರ ಧಾರಾಕಾರ ಮಳೆ ಸುರಿದಿದೆ. ನದಿ, ಹಳ್ಳ, ಕೊಳ್ಳಗಳು ಮೈತುಂಬಿ ಹರಿಯುತ್ತಿದ್ದು, ಕೆಲವು ನದಿಗಳಲ್ಲಿ ಪ್ರವಾಹ ಬಂದಿದೆ. ಜಲಾಶಯಗಳ ನೀರಿನ ಮಟ್ಟ ಏಕಾಏಕಿ ಹೆಚ್ಚಿದೆ.  

ಕೆಲವೆಡೆ ಭಾರಿ ಗಾಳಿ ಮತ್ತು ಮಳೆಗೆ ಮಣ್ಣು ಕುಸಿದಿದ್ದು, ದೊಡ್ಡ ಮರಗಳು ಉರುಳಿ ಬಿದ್ದಿವೆ. ಇದರಿಂದ ವಿದ್ಯುತ್‌ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದ್ದು ಜನಜೀವನ ಅಸ್ತವ್ಯವಸ್ತಗೊಂಡಿದೆ. ಕೆಲವು  ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಾಸನದ ಘಟ್ಟ ಪ್ರದೇಶದ ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್‌ನಲ್ಲಿ  ಬೆಳಿಗ್ಗೆ ಕಾರಿನ ಮೇಲೆ ಮರ ಹಾಗೂ ಮಣ್ಣು ಕುಸಿದುಬಿದ್ದು  ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಮೈದುಂಬಿದ ಕಾವೇರಿ: ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಮಡಿಕೇರಿ– ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತಲಕಾವೇರಿಗೆ ಪ್ರವೇಶ ನಿಷೇಧಿಸಲಾಗಿದೆ.

ಎಲ್ಲ ಶಾಲಾ– ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಿದೆ. ಬುಧವಾರ ಸಹ ಭಾಗಮಂಡಲ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಭಾಗಮಂಡಲ– ಅಯ್ಯಂಗೇರಿ ರಸ್ತೆ  ದಾಟಲು ಜನರಿಗೆ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿದೆ.  ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ನೀರು ಭತ್ತದ ಗದ್ದೆಗಳಿಗೂ ನುಗ್ಗಿದ್ದು ನೂರಾರು ಎಕರೆ ಜಲಾವೃತವಾಗಿದೆ.ಪ್ರವಾಹದ ಆತಂಕ ಎದುರಾಗಿದೆ. ಗಾಳಿಗೆ ಮರಗಳು ಉರುಳಿದ್ದು ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.  

ಹಾರಂಗಿಗೆ 4 ಅಡಿ ನೀರು:  ಹಾರಂಗಿ ಜಲಾಶಯಕ್ಕೆ ಒಂದೇ ದಿನದಲ್ಲಿ 4 ಅಡಿ ನೀರು ಹರಿದುಬಂದಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು ಬುಧವಾರ 2,844.45 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು 5,081 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಕರಾವಳಿ ಭಾಗದ ಘಟ್ಟದಲ್ಲಿ ವ್ಯಾಪಕ ಮಳೆಗೆ  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯ ಹಳೆ ಸೇತುವೆ, ಸ್ನಾನ ಘಟ್ಟಗಳು ಮುಳುಗಡೆಯಾಗಿವೆ. 
ಸಮೀಪದ ದರ್ಪಣ ತೀರ್ಥವೂ ತುಂಬಿ ಹರಿದುದರಿಂದ ಸುಬ್ರಹ್ಮಣ್ಯ–ಪಂಜ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಾಳುಗೋಡು ವ್ಯಾಪ್ತಿಯ ಪದಕ ಬಳಿಯ ಸೇತುವೆ ಮುಳುಗಡೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ  ಉತ್ತಮ ಮಳೆಯಾಗಿದ್ದು, ಕಾರ್ಕಳದ ಜಾರ್ಕಳ ಗ್ರಾಮದಲ್ಲಿ ಸಿಡಿಲು ಬಡಿದು  ಹಸು ಮೃತಪಟ್ಟಿದೆ.  ಕಚ್ಚೂರು ಗ್ರಾಮದಲ್ಲಿ ಮಳೆ– ಗಾಳಿಯಿಂದಾಗಿ 12 ಮನೆಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ, ಯಗಚಿ ನದಿಗಳು ಮೈದುಂಬಿಕೊಳ್ಳುತ್ತಿವೆ. ಶೃಂಗೇರಿಯಲ್ಲಿ ಮರ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಕೊಪ್ಪದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.  ಲಿಂಗನಮಕ್ಕಿ ಜಲಾಶಯಕ್ಕೆ 30,063 ಕ್ಯುಸೆಕ್ ನೀರು ಹರಿದು ಬಂದಿದೆ. 

ಜಿಲ್ಲೆಯ ಪ್ರಮುಖ ನದಿಗಳಾದ ಶರಾವತಿ, ತುಂಗಾ, ಭದ್ರಾ, ಕುಮದ್ವತಿ, ದಂಡಾವತಿ ನದಿಗಳು ಮೈದುಂಬಿ ಹರಿಯಲಾರಂಬಿಸಿವೆ. ಭದ್ರಾ ಜಲಾಶಯದ ಒಳಹರಿವು 7,685 ಕ್ಯುಸೆಕ್ ಏರಿಕೆಯಾಗಿದೆ. ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 210 ಮಿ.ಮೀ ಮಳೆಯಾಗಿದೆ. ತುಂಗಾ ಜಲಾಶಯ ಭರ್ತಿಯಾಗಿದೆ. 8 ಕ್ರೆಸ್ಟ್‌ಗೇಟ್‌ಗಳ ನೀರು ಹೊರ ಬಿಟ್ಟಿರುವ ಕಾರಣ ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿದೆ.

ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಮುಳುಗುವ ಹಂತ ತಲುಪಿದೆ. ಶಿವಮೊಗ್ಗ – ಸಾಗರ ನಡುವಿನ ತುಪ್ಪೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರ ತೆರವುಗೊಳಿಸಿದರು.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಅಲ್ಲಿನ ರಾಜಾಪುರ ಬ್ಯಾರೇಜ್‌ನಿಂದ 62,000 ಕ್ಯುಸೆಕ್‌ ನೀರು ಹರಿ ಬಿಡಲಾಗಿದೆ. ಇದರಿಂದ ಕೃಷ್ಣಾ ನದಿ ಒಳಹರಿವು ಹೆಚ್ಚಿದ್ದು, ಕಲ್ಲೋಳ–ಯಡೂರ ಹಾಗೂ ಕಾರದಗಾ–ಭೋಜ ಗ್ರಾಮಗಳ ಮಧ್ಯದ ಕೆಳಮಟ್ಟದ ಸೇತುವೆಗಳು ಮುಳುಗಡೆಯಾಗಿವೆ. ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ನೀರಿನ ಹರಿವಿನಲ್ಲಿಯೂ ಹೆಚ್ಚಳ ಕಂಡು ಬಂದಿದೆ.

ವೇದಗಂಗಾ ನದಿಗೆ ನಿರ್ಮಿಸಿರುವ ಭೋಜವಾಡಿ–ಕುನ್ನೂರ ಮತ್ತು ಬಾರವಾಡ–ಕುನ್ನೂರ ಗ್ರಾಮಗಳ ಮಧ್ಯೆದಲ್ಲಿರುವ ಸೇತುವೆಗಳೂ ಮುಳುಗಡೆಯ ಅಂಚಿನಲ್ಲಿವೆ.

ಮುಳುಗಡೆಯಾಗಿರುವ ಸೇತುವೆ ಮೇಲಿನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಕೆಳಮಟ್ಟದ ಸೇತುವೆಗಳ ಬಳಿಯೂ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿದೆ.

ಸಂಭಾವ್ಯ ನೆರೆ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು,  ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗೀತಾ ಕೌಲಗಿ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಪಾಂಡ್ರಿ ನದಿ ಉಕ್ಕಿ ಹರಿಯುತ್ತಿದ್ದು, ನದಿಯಂಚಿನ ಚಾಂದೆವಾಡಿ ಗ್ರಾಮದ ಸೇತುವೆ ನೀರಿನಲ್ಲಿ ಮುಳುಗಿದೆ. 

ಶಾಲಾ ಮಕ್ಕಳು ನದಿ ದಾಟುವುದು ಕಷ್ಟವಾಗಿದ್ದರಿಂದ ದಾಂಡೇಲಿಯಿಂದ ರ್‍್ಯಾಫ್ಟ್‌  ವ್ಯವಸ್ಥೆ   ಮಾಡಿ ಮಕ್ಕಳಿಗೆ ಶಾಲೆಗೆ ಹೋಗಲು ಅನುವು ಮಾಡಲಾಯಿತು.

ಕುಮಟಾ ತಾಲ್ಲೂಕಿನ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.  ಶಿರಸಿಯಲ್ಲಿ ವರದಾ ನದಿ ಮತ್ತು ಸಿದ್ದಾಪುರ ತಾಲ್ಲೂಕಿನಲ್ಲಿ ಮಾಣಿ ಹೊಳೆ ತುಂಬಿಹರಿಯುತ್ತಿವೆ.

ಗಂಗಾವಳಿ ನದಿಯ ಹರಿವು ಹೆಚ್ಚಿದ್ದರಿಂದ ಅಂಕೋಲಾ ಮತ್ತು ಕುಮಟಾ ತಾಲ್ಲೂಕಿನ ಗೋಕರ್ಣ ನಡುವಣ ಸಂಪರ್ಕ ಕೊಂಡಿಯಾಗಿರುವ ಬಾರ್ಜ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಜೊಯಿಡಾ ಚಾಪೋಲಿ ಬಳಿಯ ರಾಮನಗರ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿದ್ದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ಯಲ್ಲಾಪುರ ತಾಲ್ಲೂಕಿನ ಸಾವಗದ್ದೆ ಸಮೀಪದ ಶೇಡಿಗಾಳಿ ಬಳಿ ಕೈಗಾ ಗ್ರಿಡ್‌ ಲೈನ್‌ ತಂತಿ ಕಡಿದು ಬಿದ್ದಿತು.  ದಾವಣಗೆರೆಗೆ ವಿದ್ಯುತ್‌ ಪೂರೈಸುವ ಲೈನ್‌ ಇದಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಕಲಬುರ್ಗಿ ಹಾಗೂ ಕೋಲಾರ ಜಿಲ್ಲೆಗಳಲ್ಲೂ ಮಳೆ ಆಗಿದೆ.

ಇನ್ನೂ 3 ದಿನ ಮಳೆ
ರಾಜ್ಯದಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಇನ್ನೂ ಮೂರು ದಿನ ಮಳೆಯು ಹೀಗೇ ಮುಂದು ವರಿಯುವ ಸಾಧ್ಯತೆ ಇದೆ.

‘ನೈರುತ್ಯ ಮುಂಗಾರು ಪ್ರಬಲವಾಗಿರುವುದರಿಂದ ಇನ್ನೂ ಮೂರು ದಿನ ಮಳೆ ಇರಲಿದೆ.  ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಕೆಲವೆಡೆ ಭಾರೀ ಹಾಗೂ ಹಲವೆಡೆ ಚದುರಿದ ಮಳೆ ಆಗಲಿದೆ’ ಎಂದು  ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಬಿರುಗಾಳಿ: ಬಂಗಾರಪೇಟೆ ರೈತ ಬಲಿ
ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಬುಧವಾರ ಸಂಜೆ ಸುಂಟರಗಾಳಿಗೆ ಸಿಲುಕಿ ಪದ್ಮನಾಭ್ (50) ಎಂಬ ರೈತ ಮೃತಪಟ್ಟಿದ್ದಾರೆ.

ಪದ್ಮನಾಭ್ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬೀಸಿದ ಬಿರುಗಾಳಿ ಅವರನ್ನು ಸ್ವಲ್ಪ ದೂರ ಹೊತ್ತೊಯ್ದು ಎಸೆಯಿತು. ಗಾಯಗೊಂಡಿದ್ದ ಅವರನ್ನು ಕೆಜಿಎಫ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

ಯುವಕ ಸಾವು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ಮನೆ ಕುಸಿದು ಮಹಾಂತೇಶ ಮಸ್ಕಿ (30) ಎಂಬ ಯುವಕ ಮೃತಪಟ್ಟಿದ್ದಾರೆ.   ಚಿಕ್ಕೋಡಿ ತಾಲ್ಲೂಕಿನ ಕೆಳಮಟ್ಟದ ಎರಡು ಸೇತುವೆಗಳು ಕೃಷ್ಣಾ ನದಿ ನೀರಿನಲ್ಲಿ  ಮುಳುಗಡೆಯಾಗಿವೆ. ರಾಯಬಾಗ ತಾಲ್ಲೂಕಿನಲ್ಲಿ 43 ಮನೆ ಹಾನಿಗೀಡಾಗಿವೆ.

ಕಣಕುಂಬಿಯ ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ. ಕಣಕುಂಬಿ– ಚಿಗಳೆ, ಕಣಕುಂಬಿ– -ಹಂದಿಗೊಪ್ಪ ನಡುವೆ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT