ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಹಳಿ ನಿರ್ಮಾಣವೇ ಪರಿಹಾರ

ಯಶವಂತಪುರ– ಹೊಸೂರು ರೈಲು ಪದೇ ಪದೇ ವಿಳಂಬ
Last Updated 19 ಜುಲೈ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ– ಹೊಸೂರು  ರೈಲು ಪದೇ ಪದೇ ವಿಳಂಬವಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಈ ಮಾರ್ಗದಲ್ಲಿ ಆದಷ್ಟು ಶೀಘ್ರ ಜೋಡಿ ಹಳಿ ನಿರ್ಮಿಸಬೇಕು. ಈ ಮಾರ್ಗವನ್ನು ವಿದ್ಯುದೀಕರಣಗೊಳಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.

ಯಶವಂತಪುರ ಜಂಕ್ಷನ್‌ನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ರೈಲು ಹೊಸೂರನ್ನು 8 ಗಂಟೆಗೆ ತಲುಪಬೇಕು. ಈ ರೈಲು ಕೊನೆಯ ನಿಲ್ದಾಣ ತಲುಪುವಾಗ ನಿತ್ಯವೂ ಸುಮಾರು ಒಂದು ಗಂಟೆ ತಡವಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಒಂದೇ ವಾರದಲ್ಲಿ ಎರಡು ಬಾರಿ ರೈಲನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಬರುವ ರೈಲು ಕೂಡ ವಿಳಂಬವಾಗುತ್ತಿದೆ ಎಂಬುದು ಪ್ರಯಾಣಿಕರ ದೂರು.

‘ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ ರಸ್ತೆ, ಮಹದೇವಪುರ, ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ  ಕೈಗಾರಿಕೆಗಳೂ ಸೇರಿದಂತೆ ಅನೇಕ ಕೈಗಾರಿಕೆಗಳಿವೆ. ಯಶವಂತಪುರ, ಪೀಣ್ಯ ಪ್ರದೇಶದಲ್ಲೂ ಅನೇಕ ಕೈಗಾರಿಕೆಗಳಿವೆ. ಇಲ್ಲಿನ ಉದ್ಯೋಗಿಗಳು ಈ ರೈಲನ್ನು ಬಳಸುತ್ತಿದ್ದಾರೆ. ಈ ರೈಲಿನಲ್ಲಿ ನಿತ್ಯ ಸರಾಸರಿ 9,000 ಮಂದಿ ಪ್ರಯಾಣಿಸುತ್ತಾರೆ. ರೈಲು ವಿಳಂಬವಾದರೆ ಅವರೆಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ.

‘ವಿಳಂಬಕ್ಕೆ ಪ್ರಮುಖ ಕಾರಣ ರೈಲುಗಳ ಕ್ರಾಸಿಂಗ್‌.  ಬೆಳಿಗ್ಗೆ ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿಗೆ ದಾರಿ ಬಿಟ್ಟುಕೊಡುವ ಕಾರಣಕ್ಕೆ ಯಶವಂತಪುರ– ಹೊಸೂರು ರೈಲು ವಿಳಂಬವಾಗುತ್ತದೆ. ಈ ರೈಲು ಸಂಜೆ ಹೊಸೂರಿನಿಂದ ಯಶವಂತಪುರಕ್ಕೆ ಸಂಚರಿಸುವಾಗ ನಾಗರಕೋಯಿಲ್‌ ಎಕ್ಸ್‌ಪ್ರೆಸ್‌ಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ. ಆ ರೈಲು ಕಾರೈಕಲ್‌ ಎಕ್ಸ್‌ಪ್ರೆಸ್‌ ಹಾದುಹೋಗುವವರೆಗೂ ಕಾಯಬೇಕು. ರೈಲುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ  ಪ್ರಯಾಣಿಕರಿಗೆ ಆಗುವ ಅನನುಕೂಲವನ್ನು ತಪ್ಪಿಸಬಹುದು’ ಎನ್ನುತ್ತಾರೆ ಅವರು.

‘ಸಬ್‌ಅರ್ಬನ್‌ ರೈಲು ವ್ಯವಸ್ಥೆ ಇರುವ ಮಹಾನಗರಗಳಲ್ಲಿ ಕ್ರಾಸಿಂಗ್‌ ವೇಳೆ ಎಕ್ಸ್‌ಪ್ರೆಸ್‌ ರೈಲುಗಳಿಗಿಂತ ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡಲಾಗುತ್ತದೆ. ರೈಲ್ವೆ ಮಂಡಳಿಯ ನಿಯಮಗಳೂ ಇದನ್ನೇ ಹೇಳುತ್ತವೆ. ನಿತ್ಯ ಕಚೇರಿಗೆ ಹೋಗಲು ರೈಲು ಬಳಸುವವರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಆದರೆ, ನಮ್ಮಲ್ಲಿ ಸ್ಥಳೀಯ ರೈಲನ್ನು ನಿಲ್ಲಿಸಿ ಹೊರಗಿನಿಂದ ಬರುವ ಎಕ್ಸ್‌ಪ್ರೆಸ್‌ ರೈಲುಗಳು ಹಾದುಹೋಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದು ನಿಜಕ್ಕೂ ದುರದೃಷ್ಟಕರ ಎನ್ನುತ್ತಾರೆ’ ಪ್ರಜಾರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

‘ಸಿಗ್ನಲಿಂಗ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಅಳವಡಿಸುವ ಮೂಲಕವೂ ವಿಳಂಬ ತಪ್ಪಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

‘ಸಬ್‌ಅರ್ಬನ್‌ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದಾದರೆ ಈ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಒಳಗಿನ ಸಂಚಾರ ದಟ್ಟಣೆಯ ಮೇಲಿನ ಹೊರೆ ಬಹಳಷ್ಟು ತಗ್ಗಲಿದೆ’ ಎನ್ನುತ್ತಾರೆ ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.ಪಿ.ಲೋಕೇಶ್‌.

‘ಯಶವಂತಪುರ– ಸೇಲಂ ಮಾರ್ಗದಲ್ಲೇ ಹೊಸೂರು ಕೂಡಾ ಬರುತ್ತದೆ. ಈ ಮಾರ್ಗದಲ್ಲಿ ಜೋಡಿಹಳಿ ನಿರ್ಮಿಸುವ ಪ್ರಸ್ತಾವ ರೈಲ್ವೆ ಇಲಾಖೆ ಮುಂದಿದೆ. ಆದರೆ, ಅದಕ್ಕಿನ್ನೂ ಮಂಜೂರಾತಿ ಸಿಕ್ಕಿಲ್ಲ. ಜೋಡಿ ಮಾರ್ಗ ನಿರ್ಮಾಣವಾದರೆ ಈ ಮಾರ್ಗದ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಮಾರ್ಗ 10 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇತ್ತೀಚೆಗೆ ನಗರದಲ್ಲಿ ರೈಲುಗಳ ದಟ್ಟಣೆ ಹೆಚ್ಚಿದೆ. ಹಾಗಾಗಿ ಕ್ರಾಸಿಂಗ್‌  ಸಮಸ್ಯೆ ಉಂಟಾಗುವುದು ಸಹಜ. ಆದರೂ ನಮ್ಮ ಇತಿಮಿತಿಯೊಳಗೆ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ’ ಎಂದರು.

‘ರೈಲು ನಿಲ್ಲಿಸುವ ಸ್ಥಳ ಬದಲಾಗಲಿ’
‘ಬೈಯಪ್ಪನಹಳ್ಳಿ ನಿಲ್ದಾಣದಿಂದ  ಬೆಳ್ಳಂದೂರು ಕಡೆಗೆ ಹೋಗುವ  ಮಾರ್ಗದ ತಿರುವಿನಲ್ಲಿ ರೈಲನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ರೈಲನ್ನು ಈಗ ನಿಲ್ಲಿಸುತ್ತಿರುವ ಜಾಗಕ್ಕಿಂತ 300 ಮೀಟರ್‌ನಷ್ಟು ಮುಂದಕ್ಕೆ (ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗೆ) ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಈ ರೈಲಿನ ಬೋಗಿಗಳು ಬೆಳ್ಳಂದೂರು ಕಡೆಯ ಟ್ರ್ಯಾಕ್‌ನಲ್ಲಿ ಉಳಿಯುವುದನ್ನು ತಡೆಯಬಹುದು. ಆಗ ಬೆಳ್ಳಂದೂರು–  ಬಾಣಸವಾಡಿ ಮಾರ್ಗ ಇತರ ರೈಲುಗಳ ಸಂಚಾರಕ್ಕೆ ಮುಕ್ತವಾಗುತ್ತದೆ’ ಎಂದು ಸುಹಾಸ್‌ ಸಲಹೆ ನೀಡಿದರು.

ಸಬ್‌ಅರ್ಬನ್‌ಗೆ ಪ್ರತ್ಯೇಕ ಹಳಿ ಇರಲಿ
‘ಮುಂಬೈನಲ್ಲಿ ಸಬ್ಅರ್ಬನ್‌ ರೈಲುಗಳಿಗೆ ಆರು ಪ್ರತ್ಯೇಕ ಮಾರ್ಗಗಳಿವೆ. ಚೆನ್ನೈನಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳಿವೆ. ಹಾಗಾಗಿ ಅಲ್ಲಿ ದೂರ ಪ್ರಯಾಣದ ರೈಲುಗಳಿಂದ ಸಬ್ಅರ್ಬನ್‌ ರೈಲುಗಳಿಗೆ ಅಡ್ಡಿ ಉಂಟಾಗುವುದಿಲ್ಲ. ನಮ್ಮಲ್ಲೂ ಸಬ್‌ಅರ್ಬನ್‌ ರೈಲುಗಳಿಗೆ ಪ್ರತ್ಯೇಕ ಹಳಿ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT