ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಸಚಿವರ ವಿರುದ್ಧ ಕೋನರಡ್ಡಿ ಆಕ್ರೋಶ

ಮಹದಾಯಿ ಧರಣಿ 754ನೇ ದಿನಕ್ಕೆ: ನಾಲ್ಕನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ; ಬಿಜೆಪಿ, ಕಾಂಗ್ರೆಸ್ ವಿರುದ್ಧ ಟೀಕೆ
Last Updated 20 ಜುಲೈ 2017, 11:22 IST
ಅಕ್ಷರ ಗಾತ್ರ

ನರಗುಂದ: ಪಟ್ಟಣದಲ್ಲಿ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ  ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಉಪವಾಸ ಕೈ ಬಿಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋನರಡ್ಡಿ, ಮಹದಾಯಿ ಯೋಜನೆ ಅನುಷ್ಠಾನವಾಗಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜೆಡಿಎಸ್ ನಿರಂತರ ಧ್ವನಿ ಎತ್ತುತ್ತಿದೆ. ಆದರೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುತ್ತಾ ಯೋಜನೆಗೆ ಹಿನ್ನೆಡೆ ಉಂಟು ಮಾಡುತ್ತಿವೆ.

ಜೀವಂತ ಇದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಸಾಧ್ಯ. ಆದ್ದರಿಂದ ಆಮರಣಾಂತ ಉಪವಾಸವನ್ನು ಕೈಬಿಡಬೇಕು. ನಂತರ ಮುಂದಿನ ಹೋರಾಟ ಹೇಗಿರಬೇಕು ಎಂಬುದನ್ನು ಸುದೀರ್ಘವಾಗಿ ಚರ್ಚಿಸೋಣ ಎಂದು ಸೊಬರದಮಠ ಅವರಿಗೆ ಮನವಿ ಮಾಡಿದರು.

ಗೋವಾ ವಿರುದ್ಧ ಕಿಡಿ: ಗೋವಾದ ನೀರಾವರಿ ಸಚಿವ ಪಾಲ್ಯೇಕರ ಕರ್ನಾ ಟಕದ ಬಗ್ಗೆ ಹಗುರವಾಗಿ ಮಾತನಾಡಿ ದ್ದಾರೆ. ಇದು ಸಲ್ಲದು. ಇದಕ್ಕೆ ನಮ್ಮ ಮುಖ್ಯಮಂತ್ರಿ ಸರಿಯಾದ ಪ್ರತಿಕ್ರಿಯೆ ನೀಡಬೇಕು. ಗೋವಾ ರಾಜ್ಯವೇ ನೀಚ ತಂತ್ರ  ಅನುಸರಿಸುತ್ತಿದೆ ಎಂದರು.

ನ್ಯಾಯಮಂಡಳಿ ಮೂರು ರಾಜ್ಯಗಳೂ ಸೌಹಾರ್ದದಿಂದ ಸಮಸ್ಯೆ ಪರಿ ಹರಿಸಿಕೊಳ್ಳಬೇಕು ಎಂದು ಹೇಳಿದೆ. ಹೀಗಿರುವಾಗ ಗೋವಾದ ನೀರಾವರಿ ಮಂತ್ರಿ ತಿಳಿವಳಿಕೆ ಇಲ್ಲದವರ ರೀತಿಯಲ್ಲಿ ಹೇಳಿಕೆ ನೀಡಿ ನ್ಯಾಯ ಮಂಡಳಿಯಲ್ಲಿ ಇದನ್ನು ಇತ್ಯರ್ಥಗೊಳಿಸಬೇಕೆಂಬ ಹೇಳಿಕೆ ಎಷ್ಟರ ಮಟ್ಟಿಗೆ ಸರಿ? ಈ ಕುರಿತು ಗೋವಾ ಮುಖ್ಯಂಂತ್ರಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಗೋವಾ ಮೊಂಡು ವಾದ ಬಿಡಬೇಕು.

ಹದಾಯಿ ಯೋಜನೆ ಅನುಷ್ಠಾನಕ್ಕೆ ಸೂಕ್ತ ಸಹಕಾರ ನೀಡಬೇಕು. ಇಲ್ಲದಿದ್ದರೆ ಪರಿಣಾಮವನ್ನು ಗೋವಾ ಎದುರಿಸಬೇಕಾದೀತು ಎಂದು ಕೋನರಡ್ಡಿ ಕಿಡಿ ಕಾರಿದರು.
ವೀರೇಶ  ಸೊಬರದಮಠ ಮಾತನಾಡಿ ‘ಉಪವಾಸ ಸತ್ಯಾಗ್ರಹದ ನಿರ್ಧಾರದಲ್ಲಿ ಬದಲಾಣೆ ಇಲ್ಲ. ನಾನು ಉಪವಾಸ ಮುಂದುವರಿಸುವೆ’ ಎಂದು ಹೇಳಿದರು.

ಮಹದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ ಮಾತನಾಡಿ, ಉಪವಾಸ ಸತ್ಯಾಗ್ರಹ ಕೈಗೊಂಡ ಸೊಬರದಮಠ ಅವರಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ರೈತ ಸಂಘದ ಮುಖಂಡ ಗಂಗಾಧರ ಪಾಟೀಲ, ಜೆಡಿಎಸ್‌ನ ವೀರಣ್ಣ ನೀರಲಗಿ, ಬಿ.ಬಿ. ಗಂಗಾಧರಮಠ, ವಿಕಾಸ ಸೊಪ್ಪಿನ, ಶ್ರೀಪಾದ ಆನೇಗುಂದಿ, ಎಚ್‌.ಎಸ್‌. ಹಳ ಕಟ್ಟಿ, ಮುತ್ತು ಕುರಿ, ಶಂಕ್ರಣ್ಣ ಅಂಬಲಿ, ವೀರಬಸಪ್ಪ ಹೂಗಾರ, ಕಂಬಳಿ, ಮಲ್ಲು ಪಾಟೀಲ, ಮಹದಾಯಿ ಹೋರಾಟ ಸಮನ್ವಯ ಸಮಿತಿ ಸದಸ್ಯರು ಇದ್ದರು.

ಆರೋಗ್ಯದಲ್ಲಿ ಏರುಪೇರು:  ಉಪವಾಸ ನಿರತ ವೀರೇಶ ಸೊಬರದಮಠ ಅವರ ಆರೋಗ್ಯ ಬುಧವಾರ ರಾತ್ರಿ ಏರುಪೇರಾಯಿತು ರಕ್ತದೊತ್ತಡ ಕಡಿಮೆಯಾಗಿತ್ತು. ವೇದಿಕೆಯಲ್ಲಿಯೇ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT