ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ರಿಂದ ಸಾಮಾಜಿಕ ನ್ಯಾಯಕ್ಕೆ ಪ್ರಾಮುಖ್ಯ

Last Updated 21 ಜುಲೈ 2017, 5:42 IST
ಅಕ್ಷರ ಗಾತ್ರ

ಬೀದರ್‌: ‘ಬಾಬಾಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಪ್ರಾಮುಖ್ಯ ನೀಡಿದ್ದಾರೆ. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದರಿಂದಲೇ ಇಂದು ಬಡವರು, ದಲಿತರು, ಹಿಂದುಳಿದವರು ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯವಾಗಿದೆ’ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಹೇಳಿದರು.

ನಗರದ ಅಂಬೇಡ್ಕರ್‌ ವೃತ್ತದ ಬಳಿ ಜಿಲ್ಲಾಡಳಿತದ ಆಶ್ರಯದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜಯಂತಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಹಿಳೆಯರಿಗೂ ಸಂವಿಧಾನದಲ್ಲಿ ಸಮಾನತೆ ಕಲ್ಪಿಸಲಾಗಿದೆ. ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಒತ್ತು ಕೊಡಲಾಗಿದೆ’  ಎಂದು ತಿಳಿಸಿದರು.

ಚಿಟಗುಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜಯದೇವಿ ಗಾಯಕವಾಡ್‌ ಮಾತನಾಡಿ, ‘ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರು ದಲಿತರ ಮನೆಯಲ್ಲಿ ಊಟ, ಉಪಾಹಾರ ಮಾಡುತ್ತಿದ್ದಾರೆ. ಕೇವಲ ಊಟ, ಉಪಾಹಾರದಿಂದ ಅಸ್ಪೃಶ್ಯತೆಯನ್ನು ನಿವಾರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಅಂತರಜಾತಿ ವಿವಾಹ ನೆರವೇರಿಸಿ ಸಾಮಾಜಿಕ ಸಮಾನತೆಗೆ ಪ್ರಯತ್ನಿಸಿದರು. ಪ್ರಸ್ತುತ ಅಂತರಜಾತಿ ವಿವಾಹಗಳನ್ನು ಮಾಡುವ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಅಂತ್ಯಗೊಳಿಸಲು ಪ್ರಯತ್ನಿಸಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಅಸೃಶ್ಯತೆ ಆಚರಣೆಯಲ್ಲಿ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಕಷ್ಟಪಟ್ಟು ಶಿಕ್ಷಣ ಪಡೆದು ಸಮಾಜದ ಉದ್ಧಾರಕ್ಕೆ ಹೋರಾಡಿದ್ದರು. ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು’ ಎಂದು ಹೇಳಿದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ಚರ್ಮವಾದ್ಯ ಬಾರಿಸಿದರು. ಕಲಾವಿದರಾದ ಶಿವರಾಜ ತಡಪಳ್ಳಿ, ದೇವಿದಾಸ ಚಿಮಕೋಡ, ಬಕ್ಕಪ್ಪ ದಂಡಿನ್‌, ಯೇಸುದಾಸ ಅಲಿಯಂಬರ್, ರಾಜು ಸಾಗರ, ಶಿವಾಜಿ ಮಾನಕಾರೆ,  ವೀಣಾ ದೇವಿದಾಸ ಚಿಮಕೋಡೆ, ಅರುಣ ಪಾಟೀಲ, ಸುಂದರ ಕೊಳಾರ, ರಾಹುಲ್ ಪಾತರಪಳ್ಳಿ ಅವರು  ಕ್ರಾಂತಿ ಗೀತೆಗಳನ್ನು  ಹಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್‌, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಫ್ರೋಜ್ ಖಾನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟೇಶ ಉಗಿಬಂಡಿ, ಕನ್ನಡಾಂಬೆ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮಾರುತಿ ಬೌದ್ದೆ,  ಕಲಾವಿದರಾದ ಶಂಭುಲಿಂಗ ವಾಲದೊಡ್ಡಿ, ವಿಜಯಕುಮಾರ ಸೋನಾರೆ ಉಪಸ್ಥಿತರಿದ್ದರು. ಚನ್ನಬಸವ ಹೆಡೆ ನಿರೂಪಿಸಿದರು.

* * 

ಅಂತರ್ಜಾತಿ ವಿವಾಹ ನೆರವೇರಿಸುವ ಮೂಲಕ ಜಾತಿಯ ತಡೆಗೋಡೆಯನ್ನು ತೆರವುಗೊಳಿಸಬಹುದು. ಈ ದಿಸೆಯಲ್ಲಿ ಸಮಾಜದ ಮುಖಂಡರು ಕಾರ್ಯಪ್ರವೃತ್ತರಾಗಬೇಕು.
ಜಗದೇವಿ ಗಾಯಕವಾಡ್‌, ಉಪನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT