ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಗೆ ಮನಸೋತಿದ್ದ ಕೋವಿಂದ್‌

Last Updated 21 ಜುಲೈ 2017, 8:27 IST
ಅಕ್ಷರ ಗಾತ್ರ

ಹೊಸಪೇಟೆ: ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್‌ ಕೋವಿಂದ್‌ ಅವರಿಗೆ ವಿಶ್ವ ಪಾರಂಪರಿಕ ತಾಣ ಹಂಪಿಯೊಂದಿಗೆ ವಿಶೇಷ ನಂಟಿದೆ.
ಶ್ರೀಮಂತ ಶಿಲ್ಪಕಲಾ ವೈಭವಕ್ಕೆ ಮನಸೋತಿದ್ದ ಅವರು, ಎರಡು ಬಾರಿ ಹಂಪಿಗೆ ಭೇಟಿ ನೀಡಿ ಸ್ಮಾರಕಗಳನ್ನು ಕಣ್ತುಂಬಿಕೊಂಡಿದ್ದರು.

ಮೊದಲ ಬಾರಿಗೆ 2011ರಲ್ಲಿ ಹಂಪಿಗೆ ಭೇಟಿ ನೀಡಿದ್ದ ಅವರು, ಆಗ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ತಮ್ಮ ಪಕ್ಷದ ಸ್ಥಳೀಯ ಮುಖಂಡರಿಗೂ ವಿಷಯ ತಿಳಿಸದೇ ನೇರವಾಗಿ ಹಂಪಿ ವೀಕ್ಷಿಸಿ ಹೋಗಿದ್ದರು.

2012ರ ಜನವರಿಯಲ್ಲಿ ಎರಡನೇ ಬಾರಿಗೆ ಬಂದಾಗ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. ವೈಯಕ್ತಿಕ ಭೇಟಿಯಾಗಿದ್ದ ಕಾರಣ ಆಗಲೂ ಪಕ್ಷದ ಯಾರೊಬ್ಬರಿಗೂ ವಿಷಯ ತಿಳಿಸಿರಲಿಲ್ಲ. ಆದರೆ, ಅವರು ಬರುವ ವಿಷಯ ತಿಳಿದ ನಗರಸಭೆಯ ಹಾಲಿ  ಸದಸ್ಯ ಚಂದ್ರಕಾಂತ ಕಾಮತ್‌ ಹಂಪಿಗೆ ದೌಡಾಯಿಸಿ ಅವರನ್ನು ಬರಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಮೂರು ದಿನಗಳವರೆಗೆ ಅವರೊಂದಿಗೆ ಹಂಪಿಯಲ್ಲಿರುವ ಸ್ಮಾರಕಗಳ ವೀಕ್ಷಣೆ ಮಾಡಿದ್ದರು.

‘ರಾಮನಾಥ್‌ ಕೋವಿಂದ್‌ ಅವರು ಮೊದಲ ಸಲ ಹಂಪಿಗೆ ಭೇಟಿ ನೀಡಿದಾಗ ಇಲ್ಲಿನ ಸ್ಮಾರಕಗಳನ್ನು ಸರಿಯಾಗಿ ನೋಡಲು ಆಗಿರಲಿಲ್ಲ. ಹೀಗಾಗಿ ಅವರು ಮರುವರ್ಷ ಮತ್ತೆ ಭೇಟಿ ಕೊಟ್ಟಿದ್ದರು. ಆಗ ಮೂರು ದಿನ ಅವರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಚಂದ್ರಕಾಂತ ಕಾಮತ್‌.

‘ಲೋಕ ಕಲ್ಯಾಣಕ್ಕಾಗಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ರಥ, ಮಹಾನವಮಿ ದಿಬ್ಬ, ಕೃಷ್ಣ ದೇಗುಲ, ಬಡವಿಲಿಂಗ, ಆನೆಸಾಲು ಮಂಟಪ, ಕೃಷ್ಣ ಬಜಾರ್‌, ಉಗ್ರ ನರಸಿಂಹ ಸ್ಮಾರಕಗಳನ್ನು ವೀಕ್ಷಿಸಿದ್ದರು. ಪ್ರತಿಯೊಂದು ಸ್ಮಾರಕದಲ್ಲಿ ದೀರ್ಘ ಸಮಯ ಕಳೆಯುತ್ತಿದ್ದ ಅವರು, ಗೈಡ್‌ನಿಂದ ವಿವರವಾಗಿ ಮಾಹಿತಿ ಪಡೆಯುತ್ತಿದ್ದರು’ ಎಂದರು.

‘ದೇಶದ ಹಲವು ಭಾಗಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಇಷ್ಟು ಶ್ರೀಮಂತವಾಗಿರುವ ಸ್ಥಳ ಎಲ್ಲೂ ನೋಡಿರಲಿಲ್ಲ. ಮುಂದಿನ ಪೀಳಿಗೆಗೆ ಈ ಸ್ಥಳವನ್ನು ಸಂರಕ್ಷಿಸುವ ಕೆಲಸ ಆಗಬೇಕು ಎಂದು ನನ್ನೆದುರು ಹೇಳಿದ್ದರು’ ಎಂದು ಸ್ಮರಿಸಿದರು.

‘ಅನ್ನದ ಮಹತ್ವ ತಿಳಿಸಿದ್ದ ಕೋವಿಂದ್’
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲವು ಸ್ಮಾರಕಗಳಿಗೆ ಭೇಟಿ ನೀಡಿದ ನಂತರ ಹಂಪಿ ಸಮೀಪವೇ ಇರುವ ಮಲಪನಗುಡಿಯಲ್ಲಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದೆವು. ರಾಮನಾಥ್‌ ಅವರು ಒಂದು ಅಗುಳೂ ಬಿಡದಂತೆ ಊಟ ಮಾಡಿದ್ದರು. ನನ್ನ ತಟ್ಟೆಯಲ್ಲಿ ಸ್ವಲ್ಪ ಅನ್ನ ಉಳಿದುಕೊಂಡಿತ್ತು. ಹೊಟ್ಟೆ ತುಂಬಿದ್ದರಿಂದ ಕೈತೊಳೆದುಕೊಳ್ಳಲು ಮುಂದಾಗಿದ್ದೆ. ಇದನ್ನು ನೋಡಿ ಅವರು ನನ್ನನ್ನು ತಡೆದರು.

ತಟ್ಟೆಯಲ್ಲಿ ಇರುವುದನ್ನೆಲ್ಲ ಖಾಲಿ ಮಾಡಿದ ನಂತರವೇ ಕೈತೊಳೆದುಕೊಳ್ಳಬೇಕು. ನಾವು ತಿನ್ನುವ ಪ್ರತಿಯೊಂದು ಅಗುಳಿನ ಹಿಂದೆ ಅನೇಕ ಜನರ ಶ್ರಮ ಇರುತ್ತದೆ. ನಮಗೆಷ್ಟು ಬೇಕೋ ಅಷ್ಟೇ ಕೇಳಿ ತಿನ್ನಬೇಕು. ಯಾವುದೇ ಕಾರಣಕ್ಕೂ ಅನ್ನ ವ್ಯರ್ಥ ಮಾಡಬಾರದು ಎಂದು ನನಗೆ ತಿಳಿ ಹೇಳಿದ್ದರು. ಇಂತಹ ಒಳ್ಳೆಯ ವಿಚಾರ ಹೊಂದಿರುವ ವ್ಯಕ್ತಿ ದೇಶದ ರಾಷ್ಟ್ರಪತಿ ಆಗಿದ್ದು, ದೇಶಕ್ಕೆ ಒಳ್ಳೆಯ ದಾಗಲಿದೆ. ಅವರೊಂದಿಗೆ ಕೆಲ ದಿನಗಳನ್ನು ಕಳೆದಿದ್ದೇನೆ ಎಂಬುದು ನನಗೆ ಹೆಮ್ಮೆಯ ಸಂಗತಿ’ ಎಂದು ನೆನಪಿಸಿಕೊಂಡರು ಚಂದ್ರಕಾಂತ ಕಾಮತ್‌.

* * 

ರಾಮನಾಥ್‌ ಕೋವಿಂದ್‌  ಸರಳ, ಮೃದು ಮಾತಿನ ವ್ಯಕ್ತಿ; ಪ್ರಚಾರದ ಹುಚ್ಚಿಲ್ಲ. ಅವರು ಈ ದೇಶದ ರಾಷ್ಟ್ರಪತಿ ಆಗಿದ್ದು ಸಂತಸ ತಂದಿದೆ
ಚಂದ್ರಕಾಂತ ಕಾಮತ್
ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT