ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ಸಂಸ್ಕೃತಿಗೂ ಬರ

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕೆ ಬೇಡವೆಂದು ನಾಡಿನ ಪ್ರಜ್ಞಾವಂತರು ನ್ಯಾಯಯುತವಾಗಿಯೇ ತಮ್ಮ ನಿಲುವನ್ನು ಪ್ರತಿಪಾದಿಸಿದ್ದಾರೆ (ಪ್ರ.ವಾ., ಸಂಗತ, ಜುಲೈ 21). ಇದನ್ನು ಕನ್ನಡ ಜನರು ಸ್ವಾಗತಿಸುವರೆಂದು ನಾನು ನಂಬಿರುವೆ.

ಆ ಬರಹದಲ್ಲಿ ಅವರೆಲ್ಲರೂ ವ್ಯಕ್ತಪಡಿಸಿರುವ ಭಾಷೆ, ಸಂಸ್ಕೃತಿಯ ಬಗೆಗಿನ ಕಾಳಜಿ ಪ್ರಾಮಾಣಿಕವಾದುದು. ಕನ್ನಡ ಭಾಷೆ, ಸಂಸ್ಕೃತಿ ಅವನತಿಯ ಸ್ಥಿತಿ ತಲುಪಿರುವ ಈ ಹಂತದಲ್ಲಿ ಅಗತ್ಯವಾಗಿ ಯಾವ ಕ್ರಮದಲ್ಲಿ ಸರ್ಕಾರದ ನಡೆ ಇರಬೇಕು ಎಂಬುದಕ್ಕೂ ಈ ಬರಹ ದಿಕ್ಸೂಚಿಯಂತಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ  ವಿಂಗಡಿಸಿದ ನಂತರ ಅವುಗಳ ಆಂತರಿಕ ಅಭ್ಯುದಯಕ್ಕೆ ಬೇಕಾದ ಕ್ರಮವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿದ್ದೇ ಇಂದಿನ ದುರವಸ್ಥೆಗೆ ಕಾರಣ ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ.

ನಮ್ಮ ರಾಜಕಾರಣ ಹೊರಗನ್ನು ಕಟ್ಟುವುದಕ್ಕೆ (ಅದೂ ಸಂದೇಹಾಸ್ಪದವಾದದ್ದೇ) ಕೊಟ್ಟ ಪ್ರಾಶಸ್ತ್ಯವನ್ನು ಒಳಗನ್ನು ಕಟ್ಟುವುದಕ್ಕೆ ನೀಡದಿರುವುದೇ ಈ ಅನಾಹುತಕ್ಕೆ ಕಾರಣ. ಒಂದು ನಾಡಿನ ಅಂತರಂಗವೆಂದರೆ ಅದರ ಭೌಗೋಳಿಕ ನೆಲೆಯಲ್ಲಿ ವಾಸಿಸುವ ಜನ ಬದುಕುವ ಸಂಸ್ಕೃತಿ, ಅದನ್ನು ಅಭಿವ್ಯಕ್ತಿಸುವ ಭಾಷೆ, ಆ ಪರಿಸರದ ಶೈಕ್ಷಣಿಕ ಪ್ರಗತಿ. ಇವು ಅಂತರಂಗವನ್ನು ಬೆಳಗಿಸುವ ಹಣತೆಗಳು. ಇಂದು ಈ ಬೆಳಕೇ ಮಂಕಾಗಿರುವಾಗ ಹೊರಗೆ ತೋರಿಸುವ ಆಡಂಬರಕ್ಕೆ ಏನೇನೂ ಅರ್ಥವಿರದು.

ವಿಶ್ವ ಕನ್ನಡ ಸಮ್ಮೇಳನ ಮಾಡುವುದೇ ಬೇಡವೆಂದು ಯಾರೂ ಹೇಳಲಾರರು. ಆದರೆ ಒಳಗೆ ಗಬ್ಬು ನಾರುತ್ತಾ, ಹೊರಗೆ ಸುವಾಸನಾ ದ್ರವ್ಯವನ್ನು ಸಿಂಪಡಿಸಿಕೊಂಡಂತೆ ಆಗಬಾರದಲ್ಲವೇ?

ಸಮ್ಮೇಳನದ ನೆಪದಲ್ಲಿ ಖರ್ಚು ಮಾಡುವ ಕೋಟಿಗಟ್ಟಲೆ ದುಡ್ಡಿಗೆ ಇನ್ನಷ್ಟು ಸೇರಿಸಿ  ಜೀರ್ಣಾವಸ್ಥೆ ತಲುಪಿರುವ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡ ಕಟ್ಟಿಸುವುದಕ್ಕೆ, ಶೈಕ್ಷಣಿಕ ವ್ಯವಸ್ಥೆಯನ್ನು ಒಳಗಿನಿಂದಲೇ ಶ್ರೀಮಂತಗೊಳಿಸುವುದಕ್ಕೆ, ಕನ್ನಡ ಭಾಷೆ ನಮ್ಮ ಶಿಕ್ಷಣದ ಮಾಧ್ಯಮವಾಗಲೇಬೇಕು ಎಂಬ ದೃಢ ಸಂಕಲ್ಪಕ್ಕೆ ಬೇಕಾದ ಪರಿಣಾಮಕಾರಿ ಕಾನೂನು ನೆರವಿಗಾಗಿ, ನಮ್ಮ ಶಿಕ್ಷಕರನ್ನು ಮತ್ತಷ್ಟು ಸೃಜನಶೀಲರನ್ನಾಗಿಸುವ ಕಾರ್ಯಕ್ರಮಗಳಿಗೆ, ಬತ್ತಿ ಸತ್ತೇ ಹೋಗಿರುವ ನಾಡಿನ ಕೆರೆಗಳನ್ನು ಜೀವಂತಗೊಳಿಸುವುದಕ್ಕೆ, ಸಾಯುವ ರೈತರನ್ನು ಬದುಕಿಸುವುದಕ್ಕೆ, ಸುವ್ಯವಸ್ಥಿತ ರಸ್ತೆ ನಿರ್ಮಾಣಕ್ಕೆ, ಅನಾರೋಗ್ಯದಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಖರ್ಚು ಮಾಡುವಂತಾದರೆ ಎಷ್ಟು ಚೆನ್ನ ಅಲ್ಲವೇ?

ಹದಿನಾರು ಜಿಲ್ಲೆಗಳಲ್ಲಿ ಶಾಶ್ವತ ಬರ ಎಂಬ ವರದಿ ಶುಕ್ರವಾರದ ಪತ್ರಿಕೆಯಲ್ಲಿದೆ. ಇದು ಹೊರಗಿನ ಆತಂಕ. ಒಳಗಿನ ಆತಂಕ ಇದಕ್ಕೂ ಭೀಕರವಾದುದು. ಅದು ಭಾಷೆ ಸಂಸ್ಕೃತಿಗೆ ಬಂದಿರುವ ಬರ. ಒಳಗೆ, ಹೊರಗೆ ಎಲ್ಲವೂ ಸಮೃದ್ಧವಾಗಿದ್ದಾಗಲೇ ದೊಡ್ಡ ಹಬ್ಬ, ಜಾತ್ರೆಗಳಾದರೆ ಉಲ್ಲಾಸ ಇಮ್ಮಡಿ. ಇಲ್ಲದೇ ಹೋದರೆ ಬಸವಣ್ಣ ಹೇಳುವಂತೆ ಅದು ಶವದ ಶೃಂಗಾರ.
-ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT