ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರನ್ನು ಹಿಂಸಿಸಿದರೆ ಧರಣಿ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಎಚ್ಚರಿಕೆ

Last Updated 21 ಜುಲೈ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಚಾಮರಾಜಪೇಟೆಯಲ್ಲಿ ಪಕ್ಷದ ಸಂಘಟನೆಯನ್ನು ತಡೆಯುವ ಹುನ್ನಾರ ನಡೆಯುತ್ತಿದೆ. ಕಾರ್ಯಕರ್ತರಿಗೆ ಪೊಲೀಸರ ಮೂಲಕ ಹಿಂಸೆ ನೀಡಲಾಗುತ್ತಿದೆ. ಇದು ಮುಂದುವರಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಎದುರು ಧರಣಿ ನಡೆಸುತ್ತೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾರ್ಯಕರ್ತರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಈ ಕ್ಷೇತ್ರದಲ್ಲಿ ಸಮಾವೇಶ ನಡೆಸಿದರೆ ಪೊಲೀಸರು ಕೇಸು ಹಾಕಿ ಹಿಂಸೆ ನೀಡುತ್ತಾರೆ. ಚುನಾವಣೆ ಒಂದು ತಿಂಗಳು ಇದ್ದಾಗ ಸಮಾವೇಶ ಮಾಡೋಣ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದರು. ಆದರೆ, ಪರೀಕ್ಷೆ ನನ್ನಿಂದಲೇ ಶುರುವಾಗುತ್ತಿದೆ, ನೋಡೋಣ ಎಂದು ಇಲ್ಲಿಗೆ ಬಂದೆ. ಕಾರ್ಯಕರ್ತರಿಗೆ ಪೊಲೀಸರು ಧಮ್ಕಿ ಹಾಕಿದರೆ ಸುಮ್ಮನೆ ಇರುವುದಿಲ್ಲ. ಇಲ್ಲಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದರೆ ಏನು. ಇದೇನು ಪಾಕಿಸ್ತಾನವೇ’ ಎಂದು ಪ್ರಶ್ನಿಸಿದರು.

‘ನೀವು (ಪೊಲೀಸರು) ಎಲ್ಲಿ ಬೇಕಾದರೂ ವಸೂಲಿ ಮಾಡಿಕೊಳ್ಳಿ. ಅದನ್ನು ಈಗ ನಾನು ಬೇಡ ಎನ್ನುವುದಿಲ್ಲ. ನೀವು 10 ತಿಂಗಳು ಮಾತ್ರ ವಸೂಲಿ ಮಾಡುತ್ತೀರಿ. ಆಮೇಲೆ ನಾನು ಬರುತ್ತೇನೆ. ಸರ್ಕಾರದ ಒತ್ತಡಕ್ಕೆ ಮಣಿದು ಪಕ್ಷದ ಕಾರ್ಯಕರ್ತರಿಗೆ ಮಾನಸಿಕ ವೇದನೆ ಕೊಡಬೇಡಿ’ ಎಂದು ಮನವಿ ಮಾಡಿದರು.

‘ಪಕ್ಷದ ಕಾರ್ಯಕರ್ತ (ಜಮೀರ್‌ ಅಹಮದ್‌ ಖಾನ್‌) 2004ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಅವರ ತಾಯಿ ಊಟ ಮಾಡದೆ ಮನೆಯಲ್ಲಿ ಅಳುತ್ತಾ ಕುಳಿತಿದ್ದರು. ನಾನು ಹೋಗಿ ಸಮಾಧಾನ ಮಾಡಿದ್ದೆ. ನಿಮ್ಮ ಮಗ ಗೆಲ್ಲುವ ಕಾಲ ಬರುತ್ತದೆ ಎಂದು ಧೈರ್ಯ ತುಂಬಿದ್ದೆ. ಬಳಿಕ ನಡೆದ ಉಪಚುನಾವಣೆಯಲ್ಲಿ ಅವರನ್ನು ನಿಲ್ಲಿಸಿ ಕ್ಷೇತ್ರದ ಗಲ್ಲಿ, ಕೊಳೆಗೇರಿಗಳಲ್ಲಿ ತಿರುಗಾಡಿ ಗೆಲ್ಲಿಸಿದ್ದೆ’ ಎಂದು ಹೇಳಿದರು.

‘ಈ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಇನ್ನು  ಮುಂದೆ ಕೂರುವುದಿಲ್ಲ. ಕ್ಷೇತ್ರದ ಕೊಳೆಗೇರಿ ಸೇರಿದಂತೆ ಮನೆ ಮನೆಗೆ ಹೋಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ’ ಎಂದು ಅವರು ನುಡಿದರು.

ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ‘ನೀವು (ಜಮೀರ್‌ ಖಾನ್‌) ಜೆಡಿಎಸ್‌ನಿಂದ ನಿಂತು ಗೆದ್ದು, ಪಕ್ಷದ ಸಿದ್ಧಾಂತಗಳಿಗೆ ಮಸಿ ಬಳಿದಿದ್ದೀರಿ. ನಿಮಗೆ ಪಕ್ಷ ಏನು ಮಾಡಿತ್ತು? ನಿಮಗೆ ಬುದ್ಧಿ ಕಲಿಸುವ ಕಾಲ ಬಂದಿದೆ’ ಎಂದರು.

ಜೆಡಿಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ‘ಕಾಂಗ್ರೆಸ್‌ ಪಕ್ಷಕ್ಕೆ ನಾಯಕರನ್ನು ಹುಟ್ಟು ಹಾಕುವ ಶಕ್ತಿ ಇಲ್ಲ. ಹೊಸ ನಾಯಕರನ್ನು ರೂಪಿಸಲು ಜೆಡಿಎಸ್‌ ಕಾರ್ಖಾನೆ ಇದೆ. ಅಲ್ಲಿನ ನಾಯಕರನ್ನು ಹೈಜಾಕ್‌ ಮಾಡುತ್ತಿದೆ. ಅಂತಹ ಬಲಿಪಶು ಆದವರಲ್ಲಿ ಈ ಕ್ಷೇತ್ರದ ಶಾಸಕ ಸೇರಿದ್ದಾರೆ’ ಎಂದು ದೂರಿದರು.

ತಮಟೆ ಸದ್ದು ನಿಲ್ಲಲಿಲ್ಲ...
ಕಾರ್ಯಕ್ರಮ ಆರಂಭವಾಗಿ ಜಫ್ರುಲ್ಲಾ ಖಾನ್‌ ಅವರು ಮಾತನಾಡುತ್ತಿದ್ದರು. ಈ ವೇಳೆ ಮೈದಾನದ ಬಳಿ ತಮಟೆ ಸದ್ದು ಕೇಳಿ ಬಂತು. ಇದನ್ನು ಕೇಳಿಸಿಕೊಂಡ ಪಕ್ಷದ ಕಾರ್ಯಕರ್ತರು ತಮಟೆ ಬಾರಿಸುವುದನ್ನು ನಿಲ್ಲಿಸಲು ಪ್ರಯತ್ನಿಸಿದರು. ಆಗ ದೇವೇಗೌಡರು, ‘ಬಾರಿಸಿಕೊಳ್ಳಲಿ ಬಿಡಿ’ ಎಂದು ಸಂಜ್ಞೆ ಮೂಲಕ ಹೇಳಿದರು. ಬಳಿಕ ದೇವೇಗೌಡರು ಮಾತನಾಡುವ ವೇಳೆಗೆ ಮೈದಾನದ ಇನ್ನೊಂದು ಬದಿಯಲ್ಲಿ ತಮಟೆ ಸದ್ದು ಕೇಳಲಾರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT